Site icon Vistara News

DK Shivakumar: ಬಿಜೆಪಿಯವರ ಮಾತು ಕೇಳಿ 15 ಬಿಲ್ ವಾಪಸ್ ಕಳುಹಿಸಿದ ರಾಜ್ಯಪಾಲರು: ಕಿಡಿಕಾರಿದ ಡಿಕೆಶಿ

DK Shivakumar

ಬೆಂಗಳೂರು: ಬಿಜೆಪಿಯ (BJP) ಶಾಸಕರುಗಳ ಮಾತು ಕೇಳಿ ರಾಜ್ಯ ಸರ್ಕಾರ ಕಳಿಸಿದ 15 ವಿಧೇಯಕಗಳನ್ನು (Bills) ರಾಜ್ಯಪಾಲರು (Governor Thawar Chand gehlot) ವಾಪಸ್ ಕಳುಹಿಸಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರು ಕಿಡಿ ಕಾರಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು “ಬಿಜೆಪಿಯವರ ಮಾತನ್ನೇ ಕೇಳುವುದಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಏಕಿರಬೇಕು? ಏನಾದರೂ ಸ್ಪಷ್ಟನೆ ಕೇಳಿದರೆ ನೀಡೋಣ. ಅದನ್ನು ತಪ್ಪು ಎಂದು ಹೇಳಲಾಗುವುದಿಲ್ಲ. ರಾಜ್ಯಪಾಲರಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ” ಎಂದರು.

ಸರ್ಕಾರ ಬೀಳಿಸುವ ಪ್ರಯತ್ನ ನಡೆಯುತ್ತಿದೆಯೇ ಎಂದು ಕೇಳಿದಾಗ “ಸರ್ಕಾರ ಬೀಳಿಸಲು ಯಾವ ಪ್ರಯತ್ನ ಮಾಡಿದರೂ ಏನು ಆಗುವುದಿಲ್ಲ. ನಾವೂ ಸಹ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವು ನಮ್ಮ ಕೆಲಸ ಮಾಡುತ್ತೇವೆ” ಎಂದು ಉತ್ತರಿಸಿದರು.

ಜಿಂದಾಲ್‌ಗೆ ಭೂಮಿ ಮಾರಾಟ ಮಾಡಿದ್ದನ್ನು ಈ ಹಿಂದೆ ವಿರೋಧಿಸಿದ್ದ ಕಾಂಗ್ರೆಸ್ ಅದೇ ಜಿಂದಾಲ್‌ಗೆ ಭೂಮಿ ಮಾರಾಟ ಮಾಡಿದೆ ಎಂದು ಕೇಳಿದಾಗ, “ಉದ್ಯೋಗ ಸೃಷ್ಟಿಯಾಗಬೇಕು. ರಾಜ್ಯಕ್ಕೆ ಕೈಗಾರಿಕೆಗಳು ಬರಬೇಕು. ಕರ್ನಾಟಕದಲ್ಲಿ ಇರುವ ಕೈಗಾರಿಕಾ ಕಾನೂನಿಗೆ ತಕ್ಕಂತೆ ಅವರಿಗೆ ಭೂಮಿ ನೀಡಿದ್ದೇವೆ. ನಾವು ಅವರಿಗೆ ಹೊಸದಾಗಿ ಭೂಮಿ ಕೊಟ್ಟಿಲ್ಲ. ಈ ಹಿಂದೆ ಕೊಟ್ಟಿದ್ದನ್ನೇ ಪರಿಶೀಲಿಸಿ ಸೇಲ್ ಡೀಡ್ ಮಾಡಿಕೊಟ್ಟಿದ್ದೇವೆ. ಸಾವಿರಾರು ಲಕ್ಷಾಂತರ ಜನ ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಟ್ಟಂತೆ ಇಲ್ಲಿಯೂ ಅದನ್ನೇ ಮಾಡಲಾಗಿದೆ. ಬಿಜೆಪಿಯವರು ಮಾಡಿದ್ದನ್ನು ನಾವು ಸರಿ ಮಾಡಿಕೊಟ್ಟಿದ್ದೇವೆ” ಎಂದು ತಿಳಿಸಿದರು.

ಪರಮೇಶ್ವರ್ ಅವರು ಸಹ ದೆಹಲಿಗೆ ಭೇಟಿ ನೀಡುತ್ತಿರುವ ಬಗ್ಗೆ ಕೇಳಿದಾಗ “ಬರುವವರನ್ನು ಬೇಡ ಎನ್ನಲು ಆಗುತ್ತದೆಯೇ? ಅವರದೇ ಇಲಾಖೆ ಕೆಲಸ, ಪಕ್ಷದ ಕೆಲಸ ಇರುತ್ತದೆ. ನಮಗೂ ಸಹ ಎರಡೂ ಕೆಲಸಗಳಿದ್ದು, ಎಲ್ಲರೂ ಒಟ್ಟಿಗೆ ಹೋಗುತ್ತಿದ್ದೇವೆ” ಎಂದು ಹೇಳಿದರು.

ರಾಜ್ಯಪಾಲರ ಜೊತೆ ಸಂಘರ್ಷ: ಸತೀಶ್ ಜಾರಕಿಹೊಳಿ‌

ಹಲವು ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಸರ್ಕಾರ ನಡುವೆ ಸಂಘರ್ಷ ನಡೆದಿವೆ.‌ ತಮಿಳುನಾಡು, ಪಶ್ಚಿಮ ಬಂಗಾಳ ಸೇರಿ ನಮ್ಮ ರಾಜ್ಯದಲ್ಲೂ ನಡೀತಿದೆ. ರಾಜ್ಯಪಾಲರು ಕೆಲ ಬಿಲ್‌ಗಳನ್ನು ವಾಪಸ್ ಕಳಿಸಿದ್ದಾರೆ. ಅವರಿಗೆ ಬಿಲ್ ಕುರಿತು ಸ್ಪಷ್ಟನೆ ಕೇಳೋಕೆ ಹಕ್ಕಿದೆ. ಅದಕ್ಕೆ ಸರ್ಕಾರ ಕೂಡ ಉತ್ತರ ಕೊಡುತ್ತದೆ ಎಂದು ಸತೀಶ್‌ ಜಾರಕಿಹೊಳಿ (Satish Jarakiholi) ಹೇಳಿದ್ದಾರೆ.

ಸರ್ಕಾರ ಅಸ್ಥಿರ‌ಗೊಳಿಸುವ ಕುರಿತು ವಿಪಕ್ಷಗಳ ಹೇಳಿಕೆ ವಿಚಾರದಲ್ಲಿ, ಸರ್ಕಾರ ಅಸ್ಥಿರಗೊಳಿಸುವ‌ ಹೇಳಿಕೆ ಹಳೆಯದ್ದು. ಹಿಂದೆಯಿಂದಲೂ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಆದರೆ ಯಾವುದೇ ಬದಲಾವಣೆ ಆಗಲ್ಲ. ಮುಂದಿನ ನಾಲ್ಕು ವರ್ಷಗಳ ಕಾಲ ನಮ್ಮದೇ ಸರ್ಕಾರ ಎಂದವರು ಸ್ಪಷ್ಟಪಡಿಸಿದರು.

ಸಿಎಂ, ಡಿಸಿಎಂ ದೆಹಲಿ ಭೇಟಿ ವಿಚಾರದಲ್ಲಿ, ಈ ವಿಚಾರ ನನಗೇನೂ ಗೊತ್ತಿಲ್ಲ. ಸಾಮಾನ್ಯವಾಗಿ ಇಲ್ಲಿ ನಡೀತಿರುವ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರುವ ಕೆಲಸ ಆಗ್ತಿದೆ. ಅದೇ ಕಾರಣಕ್ಕೆ ದೆಹಲಿಗೆ ಹೋಗಿದ್ದಾರೆ. ಪ್ರಾಸಿಕ್ಯೂಶನ್ ಅನುಮತಿ ನಂತರ ಹೈಕಮಾಂಡ್ ತೀರ್ಮಾನ ಏನು ಎಂಬ ವಿಚಾರದಲ್ಲಿ ಯಾವುದೇ ಕ್ಲಾರಿಫಿಕೇಷನ್ ಬಂದಿಲ್ಲ. ಕೋರ್ಟ್‌ನಲ್ಲಿ ಆದೇಶ ಬಂದ ಮೇಲೆ ಮುಂದಿನ ತೀರ್ಮಾನ. ಇಂಡಿಯಾ ಒಕ್ಕೂಟ ‌ಏನು ತೀರ್ಮಾನ ಕೈಗೊಳ್ಳುತ್ತದೆ ನೋಡಬಹುದು ಎಂದು ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ: Water Price Hike: ಬೆಂಗಳೂರಿನಲ್ಲಿ ನೀರಿನ ದರ ಏರಿಕೆಗೆ ವೇಗ; ನಿಮಗೆ ಎಷ್ಟಾಗುತ್ತೆ ಚೆಕ್‌ ಮಾಡಿ

Exit mobile version