Site icon Vistara News

DK Shivakumar: ಸಿಎಂ- ಡಿಸಿಎಂ ದಂಗಲ್‌ ವಿಷಯ ಎತ್ತುವ ಶಾಸಕರಿಗೆ ನೊಟೀಸ್: ಡಿಕೆ ಶಿವಕುಮಾರ್

DK ShivaKumar

ಬೆಂಗಳೂರು: ಸಿಎಂ- ಡಿಸಿಎಂ ಬದಲಾವಣೆ ಕುರಿತು ಮಾತನಾಡುವ ಪಕ್ಷದ ಶಾಸಕರಿಗೆ ಇಷ್ಟರಲ್ಲೇ ನೋಟೀಸ್‌ (Notice) ನೀಡುತ್ತೇವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಜೊತೆಗೂ ಮಾತನಾಡಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಹೇಳಿದ್ದಾರೆ.

ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಸಿಎಂ- ಡಿಸಿಎಂ ದಂಗಲ್ ವಿಚಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೊಬ್ಬರಿಂದ ಪ್ರಸ್ತಾಪವಾಯಿತು. ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಮಾತನಾಡುವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಒತ್ತಾಯ ಮಾಡಿದರು. ಪದಾಧಿಕಾರಿಗಳ ಪ್ರಸ್ತಾಪಕ್ಕೆ ಡಿಕೆ ಶಿವಕುಮಾರ್ ಖಡಕ್ ಉತ್ತರ ನೀಡಿದರು.

ʼಕೆಲವರಿಗೆ ಮೈಕ್ ಕಂಡ ತಕ್ಷಣ ಮಾತಾಡುವ ದೊಡ್ಡ ಚಟವಿದೆ. ಆದರೆ ಇದನ್ನು ಎಐಸಿಸಿ ಗಮನಿಸುತ್ತಿದೆ. ಗೊಂದಲ ಮೂಡಿಸುತ್ತಿರುವವರ ಬಗ್ಗೆ ಅರಿವಿದೆ. ಸಭೆಯಲ್ಲಿ ಶಾಸಕರಿಗೆ ನೋಟೀಸ್ ನೀಡಲಾಗುವುದು. ನಾನು ಮತ್ತು ಸಿಎಂ ಈ ಬಗ್ಗೆ ಮಾತಾಡಿದ್ದೇವೆ. ಸಿಎಂ ಜೊತೆಗೆ ಕೆಲವರ ಬಗ್ಗೆ ಮಾತಾಡಿದ್ದೇನೆ. ಶೀಘ್ರದಲ್ಲೇ ಕೆಲವು ಶಾಸಕರಿಗೆ ನೊಟೀಸ್ ನೀಡುತ್ತೇವೆʼ ಎಂದು ಡಿಕೆಶಿ ನುಡಿದರು.

ಇದೇ ಸಂದರ್ಭದಲ್ಲಿ ಪಕ್ಷಾಧ್ಯಕ್ಷನಾಗಿ ತಮ್ಮ ಶ್ರಮದ ಬಗ್ಗೆ ಪದಾಧಿಕಾರಿಗಳಿಗೆ ಡಿಕೆ ಶಿವಕುಮಾರ್ ಮನವರಿಕೆ ಮಾಡಿಕೊಟ್ಟರು. ʼನಾನು ಅಧ್ಯಕ್ಷನಾಗುವ ಮೊದಲು ಪಕ್ಷ ಹೇಗಿತ್ತು, ಈಗ ಹೇಗಿದೆ ನೋಡಿ. ಸೋನಿಯಾ ಗಾಂಧಿ ಪಕ್ಷ ಸಂಕಷ್ಟದಲ್ಲಿದ್ದಾಗ ನನ್ನ ಅಧ್ಯಕ್ಷನನ್ನಾಗಿ ಮಾಡಿದರು. ಈಗ ಪಕ್ಷ ಸದೃಢವಾಗಿದೆ, ಇನ್ನಷ್ಟು ಬಲಿಷ್ಠ ಮಾಡುವ ಹೊಣೆಗಾರಿಕೆ ನನ್ನ ಮೇಲಿದೆ. ಯಾರೋ ಒಂದಿಬ್ಬರು ನನ್ನನ್ನು ಬಗ್ಗಿಸಬಹುದು ಅಂತ ಭಾವಿಸಿದ್ದರೆ ಅದು ಆಗದ ಕೆಲಸʼ ಎಂದು ಶಿವಕುಮಾರ್‌ ಭರವಸೆ ನೀಡಿದರು.

ಪಕ್ಷ ಕಟ್ಟುವತ್ತ ಡಿಕೆ ಶಿವಕುಮಾರ್‌ ಚಿತ್ತ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ರಾಜ್ಯ ಕಾಂಗ್ರೆಸ್‌ ನಾಯಕರಿಂದಲೇ ಒತ್ತಾಯ ಕೇಳಿಬರುತ್ತಿದೆ. ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ (DCM Post) ಸ್ಥಾನವನ್ನು ಒಬ್ಬರಿಗೆ ನೀಡಿರುವುದಕ್ಕೆ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಆದರೆ, ಒನ್ ಮ್ಯಾನ್ ಒನ್ ಪೋಸ್ಟ್ ಕೂಗಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದು, ಕೇಡರ್ ಬೇಸ್ ಪಾರ್ಟಿ ಕಟ್ಟಲು ಅವರು ಪಣತೊಟ್ಟಿದ್ದಾರೆ. ಇದಕ್ಕಾಗಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಚುನಾವಣೆ ದೃಷ್ಟಿಯಿಂದ ಪ್ರತ್ಯೇಕ ಆ್ಯಕ್ಷನ್ ಪ್ಲ್ಯಾನ್ ಸಿದ್ಧಪಡಿಸಿ ಪದಾಧಿಕಾರಿಗಳ ಸಭೆಯಲ್ಲಿ ಮಂಡನೆ ಮಾಡಿದ್ದಾರೆ. ಇನ್ನು ಲೋಕಸಭೆ ಫಲಿತಾಂಶದ ಹಿನ್ನಡೆ ಹಿನ್ನೆಲೆಯಲ್ಲಿ ವಲಯವಾರು ಸತ್ಯ ಶೋಧನಾ ಸಮಿತಿ ರಚನೆಗೆ ನಿರ್ಧಾರ ಮಾಡಿದ್ದಾರೆ.

ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿದ ವಿಧಾನಸಭಾ ಕ್ಷೇತ್ರಗಳ ಪ್ರಗತಿ ಪರಿಶೀಲನೆ, ಕಾರಣಗಳನ್ನು ಪತ್ತೆ ಹಚ್ಚುವುದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ರೂಪುರೇಷೆ ಸಿದ್ಧಪಡಿಸಲು ವಲಯವಾರು ಸಮಿತಿ ರಚನೆ ಮಾಡಲು ಹಾಗೂ ಬಿಬಿಎಂಪಿ, ಜಿಪಂ, ತಾಪಂ ಚುನಾವಣೆಗೆ ಹಾಗೂ ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.

ಪ್ರತಿ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರವಾರು ಸಂಚಾಲನ ಸಮಿತಿ ರಚನೆಗೂ ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ಮಾಜಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್ ಸದಸ್ಯರ ಪ್ರತ್ಯೇಕ ಸಭೆಯನ್ನು ಡಿಕೆಶಿ ನಡೆಸಲಿದ್ದಾರೆ. ಕೆಳಹಂತದಲ್ಲಿ ಪಕ್ಷ ಬಲವರ್ಧನೆಗೆ ಸಲಹೆ ನೀಡಲು ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹಾಗೆಯೇ ಬೂತ್ ಮಟ್ಟದ ಸಮಸ್ಯೆ ಬಗೆಹರಿಸಲು ವಾರ್ಡ್ ಸಮಿತಿ/ ಪಂಚಾಯತ್ ಸಮಿತಿಗಳ ರಚನೆಗೆ ತೀರ್ಮಾನ ಮಾಡಿದ್ದು, ಗ್ಯಾರಂಟಿ ಫಲಾನುಭವಿಗಳ ದಾಖಲೆ ಹಾಗೂ ಮೊಬೈಲ್ ಸಂಖ್ಯೆ ಸಂಗ್ರಹಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಮಟ್ಟದಲ್ಲಿ ಅಪಾರ್ಟ್ಮೆಂಟ್ ಸೆಲ್ ಹಾಗೂ ರೆಸಿಡೆಂಟ್ ವೆಲ್ಫೆರ್ ಅಸೋಸಿಯೇಷನ್‌ಗೆ ಪುನಶ್ಚೇತನ ನೀಡಲು ಯೋಜಿಸಿದ್ದು, ಉಪ ಚುನಾವಣೆಗಳಿಗೆ ಸಚಿವರು, ಶಾಸಕರನ್ನು ಹೋಬಳಿ ಮಟ್ಟದಲ್ಲಿ ನಿಯೋಜನೆಗೆ ನಿರ್ಧಾರ ಮಾಡಿದ್ದಾರೆ. ಅಲ್ಲದೇ ಸ್ಥಳೀಯ ಶಾಸಕರು, ಹಿರಿಯ ನಾಯಕರ ನೇತೃತ್ವದಲ್ಲಿ ಎಲೆಕ್ಷನ್ ಕ್ಯಾಂಪ್ ಆಫೀಸ್, ವಾರ್ ರೂಂ ಸ್ಥಾಪನೆ ಮಾಡಲು ನಿರ್ಧರಿಸಿದ್ದಾರೆ.

ಪದಾಧಿಕಾರಿಗಳ ಸಭೆಯಲ್ಲಿ ಎರಡು‌ ರೀತಿಯ ಪ್ಲ್ಯಾನ್ ಆಫ್ ಆ್ಯಕ್ಷನ್ ಮಾಡಲು ಮುಂದಾಗಿದ್ದು, ಪಕ್ಷ ಸಂಘಟನೆ ಮತ್ತು ಮುಂಬರುವ ಚುನಾವಣೆ ಕುರಿತು ಕಾರ್ಯ ಯೋಜನೆ ಮಾಡಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ | Hosur Airport: ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಹೊಣೆ ಬಿಐಎಎಲ್‌ಗೆ! ಕರ್ನಾಟಕಕ್ಕೆ ಟಕ್ಕರ್‌ ಕೊಟ್ಟ ತಮಿಳುನಾಡು

Exit mobile version