Site icon Vistara News

KS Eshwarappa: ವೈಯಕ್ತಿಕ ಸ್ವರೂಪ ಪಡೆದ ಗುಂಡೇಟಿನ ಜಗಳ; ಡಿಕೆಶಿ ಜೈಲಲ್ಲಿ ಸೆಟ್ಲಾಗ್ತಾರೆ ಎಂದ ಈಶ್ವರಪ್ಪ

ಬೆಂಗಳೂರು: ಗುಂಡೇಟಿನ ಜಗಳ ಇದೀಗ ವೈಯಕ್ತಿಕ ಸ್ವರೂಪ ಪಡೆದುಕೊಂಡಿದೆ. ದೇಶ ವಿಭಜನೆಯ ಹೇಳಿಕೆ ನೀಡಿದ ಡಿ.ಕೆ.ಸುರೇಶ್‌ ಅವರನ್ನು ಗುಂಡಿಟ್ಟು ಕೊಲ್ಲಬೇಕು ಎಂಬ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಮಾತನಾಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ನಮ್ಮ ಸುದ್ದಿಗೆ ಬಂದವರಿಗೆ ಸೆಟ್ಲ್‌ಮೆಂಟ್‌ ಆಗಿದೆ. ಈಗ ಈಶ್ವರಪ್ಪ ಎಲ್ಲಿದ್ದಾರೆ ಎಂದು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದರು. ಇದಕ್ಕೆ ಕೆಂಡಾಮಂಡಲರಾಗಿರುವ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ (KS Eshwarappa) ಅವರು, ಇಂತಹ ಗೊಡ್ಡು ಬೆದರಿಕೆಗಳಿಗೆ ನಾನು ಹೆದರಲ್ಲ. ಡಿಕೆಶಿಗೆ ಇ.ಡಿ. ಅರ್ಧ ಸೆಟ್ಲ್‌ಮೆಂಟ್‌ ಮಾಡಿದೆ, ಇನ್ನರ್ಧ ಶೀಘ್ರದಲ್ಲೇ ಆಗಲಿದೆ. ಅವರು ಮತ್ತೆ ಜೈಲಿಗೆ ಹೋಗುತ್ತಾರೆ, ಆಗ ಪೂರ್ಣ ಸೆಟ್ಲ್‌ಮೆಂಟ್‌ ಆಗುತ್ತದೆ ಎಂದು ಟಾಂಗ್‌ ನೀಡಿದ್ದಾರೆ.

ಈ ಹಿಂದೆ ನಮ್ಮ ಸುದ್ದಿಗೆ ಬಂದವರಿಗೆ ಒಂದೊಂದೇ ಹಂತದಲ್ಲಿ ಸೆಟ್ಲ್‌ಮೆಂಟ್‌ ಮಾಡಿದ್ದೇವೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ನನಗೆ ಸೆಟ್ಲ್‌ಮೆಂಟ್‌ ಮಾಡುತ್ತೇನೆ ಎಂದು ಹೇಳಿರುವ ಡಿ.ಕೆ.ಶಿವಕುಮಾರ್ ಒಬ್ಬ ಗೂಂಡಾ. ಅವರ ಸಹೋದರ ಡಿ.ಕೆ.ಸುರೇಶ್‌ ದುರಹಂಕಾರದಿಂದ ದೇಶ ವಿಭಜನೆ ಹೇಳಿಕೆ ನೀಡಿದ್ದರು. ಇದಕ್ಕಾಗಿ ಅವರನ್ನು ಕೂಡಲೇ ಬಂಧಿಸಬೇಕಿತ್ತು, ಆದರೆ, ನನಗೆ ನೋಟಿಸ್‌ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಅವರು ಗೂಂಡಾಗಳು ಬಳಸುವ ಪದ ಬಳಸಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರಿದ್ದರೆ ನಾನು ರಾಜಕಾರಣದಲ್ಲಿ ಇರುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಇಬ್ಬರೂ ಗೂಂಡಾಗಳು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ನನ್ನ ಮಾತಿಗೆ ಸಿನಿಮಾ ಸ್ಟೈಲ್‍ನಲ್ಲಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಡಿಕೆಶಿ ಅವರ ಅರ್ಧ ಜೀವನ ತಿಹಾರ್ ಜೈಲ್‌ನಲ್ಲಿ ಸೆಟ್ಲ್‌ಮೆಂಟ್ ಆಗಿದೆ. ಉಳಿದ ಇನ್ನೊಂದು ಪಾರ್ಟ್ ಕೂಡ ಜೈಲಿನಲ್ಲೇ ಸೆಟ್ಲ್‌ಮೆಂಟ್ ಆಗುತ್ತೆ. ನೋಡ್ತಾ ಇರಿ, ಇಷ್ಟರಲ್ಲೇ ಡಿ.ಕೆ. ಶಿವಕುಮಾರ್ ಮತ್ತೆ ತಿಹಾರ್ ಜೈಲು ಸೇರಲಿದ್ದಾರೆ ಎಂದು ಹೇಳಿದರು.

ನಾಡಪ್ರಭು ಕೆಂಪೇಗೌಡ ಅವರು ಡಿ.ಕೆ. ಶಿವಕುಮಾರ್‌ ಅವರ ಆಸ್ತಿಯಲ್ಲ. ತಮ್ಮನ್ನು ರಾಜ್ಯ ಕಟ್ಟಿದ ವ್ಯಕ್ತಿಯ ಜೊತೆ ಹೋಲಿಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದ ಈಶ್ವರಪ್ಪ, ರಾಷ್ಟ್ರದ್ರೋಹಿ ಹೇಳಿಕೆಗೆ ಡಿ.ಕೆ. ಸುರೇಶ್ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ. ಕ್ರಮ ಕೈಗೊಳ್ಳಿ ಎಂದರೆ ನನಗೆ ನೋಟಿಸ್ ಕಳುಹಿಸುತ್ತಾರೆ. ರಾಷ್ಟ್ರ ದ್ರೋಹಿಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ | KN Rajanna: ಯಾರಿಗೂ ಗುಲಾಮನಲ್ಲ, ನನಗೆ ನಾನೇ ಹೈಕಮಾಂಡ್ ಎಂದ ಸಚಿವ ಕೆ.ಎನ್‌.ರಾಜಣ್ಣ

ಕೆ.ಎಸ್.‌ ಈಶ್ವರಪ್ಪ ಏನು ಹೇಳಿದ್ದರು?

ದಾವಣಗೆರೆಯಲ್ಲಿ ಗುರುವಾರ ನಡೆದಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ್ದ ಕೆ.ಎಸ್. ಈಶ್ವರಪ್ಪ, “ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ವಿನಯ್ ಕುಲಕರ್ಣಿ ರಾಷ್ಟ್ರದ್ರೋಹಿಗಳು. ಇವರಂತೆ ದೇಶ ವಿಭಜನೆಯ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ” ಎಂದು ಹೇಳಿದ್ದರು. ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

Exit mobile version