Site icon Vistara News

Dog Meat Controversy: ಅಬ್ದುಲ್‌ ರಜಾಕ್‌ ತಂದಿರೋದು ಕುರಿ ಮಾಂಸ, ‌ಖಚಿತಪಡಿಸಿದ ಲ್ಯಾಬ್‌ ವರದಿ: ಆಹಾರ ಇಲಾಖೆ ಆಯುಕ್ತ

dog meat controversy food department commissioner

ಬೆಂಗಳೂರು: ಬೆಂಗಳೂರಿನ ಮೆಜೆಸ್ಟಿಕ್‌ ರೈಲು ನಿಲ್ದಾಣದಲ್ಲಿ (Majestic Railway Station) ಪತ್ತೆಯಾಗಿರುವುದು ಕುರಿ ಮಾಂಸವೇ (mutton) ಎಂದು ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್‌ ಹೇಳಿದ್ದಾರೆ. ಲ್ಯಾಬ್ ರಿಪೋರ್ಟ್‌ನಲ್ಲಿ (Lab Report) ಇದು ಕುರಿ ಮಾಂಸ ಎಂದು ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ. ಆ ಮೂಲಕ ʼನಾಯಿ ಮಾಂಸ ವಿವಾದʼ (Dog Meat Controversy) ಎತ್ತಿರುವ ಪುನೀತ್‌ ಕೆರೆಹಳ್ಳಿ (Puneeth Kerehalli) ಬಳಗಕ್ಕೆ ಹಿನ್ನಡೆಯಾಗಿದೆ.

ಜುಲೈ 26ರಂದು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 86 ಬಾಕ್ಸ್‌ಗಳಷ್ಟು ರಾಜಸ್ಥಾನದಿಂದ ತರಿಸಿದ ಮಾಂಸದ ಬಾಕ್ಸ್‌ಗಳು ಪತ್ತೆಯಾಗಿದ್ದವು. ಇವುಗಳನ್ನು ಹೈದರಾಬಾದ್‌ನ ICAR ನ್ಯಾಷನಲ್ ಮೀಟ್ ರಿಸರ್ಚ್ ಇನ್ಸ್ಟಿಟ್ಯೂಟ್‌ನಲ್ಲಿ ಪರೀಕ್ಷೆ ಮಾಡಿಸಲಾಗಿದೆ. ಅದರಲ್ಲಿ S Ovis Aries ಎಂದು ಲ್ಯಾಬ್ ವರದಿಯಲ್ಲಿ ಬಂದಿದೆ. ಹಾಗೆಂದರೆ ಅದು ಕುರಿಯ ವೈಜ್ಞಾನಿಕ ಹೆಸರು. ಹೀಗಾಗಿ ಇದು ಕುರಿ ಮಾಂಸ ಎಂದು ಇಲಾಖೆ ಆಯುಕ್ತ ಶ್ರೀನಿವಾಸ್ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.

ಈಗ ಡಿಎನ್‌ಎ ಪರೀಕ್ಷೆ ಮಾತ್ರ ಮಾಡಲಾಗಿದೆ. ಇದರ ಶುಚಿತ್ವದ ಬಗ್ಗೆ ಇನ್ನೊಂದು ಲ್ಯಾಬ್‌ನಲ್ಲಿ ಪರೀಕ್ಷೆ ನಡೆಯುತ್ತಿದೆ. ಈ ಶುಕ್ರವಾರ ಅದರ ವರದಿ ಕೂಡ ಬರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

ಈ ಮಾಂಸವನ್ನು ನಾಯಿ ಮಾಂಸ ಎಂದು ಆರೋಪಿಸಿದವರ ಮೇಲೆ ಕ್ರಮ ನಾವು ತೆಗೆದುಕೊಳ್ಳುವುದಿಲ್ಲ. ನಾವು ಈಗ ಬಂದಿರುವ ವರದಿಯನ್ನು ಪೊಲೀಸರಿಗೆ ನೀಡುತ್ತೇವೆ. ಪೊಲೀಸರು ವರದಿ ಪಡೆದುಕೊಂಡು ಹೊಸ ದೂರು ದಾಖಲಿಸಿ ಕ್ರಮ‌ ತೆಗೆದುಕೊಳ್ಳಬಹುದು. ಅವರು ಮುಂದಿನ ಕಾನೂನಾತ್ಮಕ ಕ್ರಮ ಜರುಗಿಸುತ್ತಾರೆ. ಆಮದು ಮಾಡಿಕೊಂಡವರ ಬಳಿ ಎಲ್ಲಾ ಪರವಾನಗಿ ಇದೆ, ಅವರು ನಮಗೆ ದಾಖಲೆ ಕೊಟ್ಟಿದ್ದಾರೆ ಎಂದು ಶ್ರೀನಿವಾಸ್‌ ಹೇಳಿದ್ದಾರೆ.

FSSAI ಗೈಡ್‌ಲೈನ್ಸ್ ಪ್ರಕಾರ ಉದ್ಯಮಿ ರಜಾಕ್ ಕೊಟ್ಟ ದಾಖಲೆ ಎಲ್ಲವೂ ಸರಿಯಾಗಿಯೇ ಇದೆ. ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ ಸೇರಿದಂತೆ ಹಲವು ಕಡೆಯಿಂದ ನಗರಕ್ಕೆ ಮಾಂಸ ಆಮದಾಗುತ್ತಿದೆ. ಮೀನು, ಕುರಿ ಸೇರಿದಂತೆ ವಿವಿಧ ರೀತಿಯ ಮಾಂಸ ಆಮದಾಗುತ್ತಿದೆ. ಎಲ್ಲವನ್ನೂ ಆಹಾರ ಗುಣಮಟ್ಟ ಇಲಾಖೆ ಪರೀಕ್ಷೆ ಮಾಡಿದೆ. ಮುಂದೆಯೂ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪೊಲೀಸರ ದೌರ್ಜನ್ಯ ಖಂಡಿಸಿ ಪ್ರತಿಭಟನೆ; ಪುನೀತ್‌ ಕೆರೆಹಳ್ಳಿ ಮತ್ತೆ ವಶಕ್ಕೆ, ಪ್ರತಾಪ್‌ ಸಿಂಹ ವಿರುದ್ಧ ದೂರು

ಬೆಂಗಳೂರು: ಪುನೀತ್‌ ಕೆರೆಹಳ್ಳಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ಪ್ರತಾಪ್‌ ಸಿಂಹ, ಶಾಸಕ ಹರೀಶ್‌ ಪೂಂಜಾ ನೇತೃತ್ವದಲ್ಲಿ ಬಿಜೆಪಿ ಹಾಗೂ ಹಿಂದು ಕಾರ್ಯಕರ್ತರು, ಬಸವೇಶ್ವರ ನಗರದ ಪೊಲೀಸ್‌ ಠಾಣೆ ಎದುರು ಬುಧವಾರ ಪ್ರತಿಭಟನೆ (BJP Protest) ನಡೆಸಿದರು. ಮಾಂಸ ಸಾಗಾಟಕ್ಕೆ ತಡೆ ಪ್ರಕರಣದಲ್ಲಿ ಬಂಧನವಾಗಿದ್ದ ಪುನೀತ್‌ ಕೆರೆಹಳ್ಳಿಗೆ ಲಾಕಪ್‌ನಲ್ಲಿ ಬಟ್ಟೆ ಬಿಚ್ಚಿಸಿ, ಹಿಂಸೆ ನೀಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧನವಾಗಿದ್ದ ಪುನೀತ್ ಕೆರೆಹಳ್ಳಿ, ಜಾಮೀನು ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮತ್ತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಠಾಣೆಯಲ್ಲಿ ಬೆತ್ತಲುಗೊಳಿಸಿ ಹಿಂಸೆ ಕೊಟ್ಟಿದ್ದಾರೆ ಎಂದು ಎಸಿಪಿ ಚಂದನ್ ವಿರುದ್ಧ ಪ್ರತಾಪ್‌ ಸಿಂಹ ಕಿಡಿಕಾರಿದ್ದಾರೆ. ಹೀಗಾಗಿ ಪ್ರತಿಭಟನೆ ನಿಯಂತ್ರಿಸಲು ಪುನೀತ್‌ ಕೆರೆಹಳ್ಳಿಯನ್ನು ಬಸವೇಶ್ವರನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Dog Meat Controversy: ಬೆಂಗಳೂರಿನಲ್ಲಿ ಸಿಕ್ಕಿರೋದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ: ಗೃಹ ಸಚಿವ ಪರಮೇಶ್ವರ್‌

Exit mobile version