ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದಕ್ಕೆ ಸರ್ಕಾರ ಯಾವುದೇ ಆಧಾರ ಒದಗಿಸಿಲ್ಲ. ದಾಳಿಯಲ್ಲಿ ಎಷ್ಟು ಜನ ಸತ್ತಿದ್ದಾರೆ ಎಂಬುದಕ್ಕೆ ದಾಖಲೆ ಇಲ್ಲ. 2016ರ ದಾಳಿಗಾಗಲೀ, 2019ರ ಪುಲ್ವಾಮಾ ಸ್ಫೋಟದ ನಂತರದ ದಾಳಿಗಾಗಲೀ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಸತ್ತಿನಲ್ಲಿ ಸರ್ಕಾರ ಮಂಡಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ. ಭಾರತ್ ಜೋಡೋ ಯಾತ್ರೆಯ ಹಿನ್ನೆಲೆಯಲ್ಲಿ ಜಮ್ಮು- ಕಾಶ್ಮೀರದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಅವರು ಇದನ್ನು ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿಯವರು ಈ ಹೇಳಿಕೆಯ ಬಗ್ಗೆ ತುಟಿ ಬಿಚ್ಚಿಲ್ಲ. ಆದರೆ ಕಾಂಗ್ರೆಸ್‌ನ ಇನ್ನೊಬ್ಬ ಮುಖಂಡ ಜೈರಾಮ್ ರಮೇಶ್ ಅವರು ʼಈ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ, ಸೈನ್ಯದ ಎಲ್ಲ ಕಾರ್ಯಾಚರಣೆಗಳನ್ನೂ ಕಾಂಗ್ರೆಸ್ ಗೌರವಿಸುತ್ತದೆʼ ಎಂದು ಹೇಳಿ ಪಕ್ಷದ ಮಾನ ಕಾಪಾಡುವ ಯತ್ನ ಮಾಡಿದ್ದಾರೆ. ಭಾರತ್ ಜೋಡೊ ಯಾತ್ರೆಯ ಸಂದರ್ಭದಲ್ಲಿ ಕಾಶ್ಮೀರದಲ್ಲೇ ದಿಗ್ವಿಜಯ ಸಿಂಗ್ ಈ ಪ್ರಶ್ನೆ ಕೇಳಿರುವುದು ಆಘಾತಕಾರಿ.
ಕುತೂಹಲಕಾರಿ ಮತ್ತು ವಿಪರ್ಯಾಸದ ವಿಚಾರ ಎಂದರೆ, ದಿಗ್ವಿಜಯ್ ಅವರು ಈ ಮಾತನ್ನು ಹೇಳಿರುವುದು ನೇತಾಜಿ ನೆನಪಿನ, ʼಪರಾಕ್ರಮ ದಿವಸ್ʼದಂದು. ಸೈನ್ಯದ, ಯೋಧರ ಪರಾಕ್ರಮ ಹಾಗೂ ತ್ಯಾಗವನ್ನು ಗೌರವಿಸಬೇಕಾದ ದಿನ ಅವರಿಂದ ಈ ಮಾತು ಹೊರಟಿದೆ. ಅವರ ಈ ಮಾತನ್ನು ಪ್ರಮಾದ ಎನ್ನೋಣವೇ? ಹಾಗೆನ್ನಲು ಸಾಧ್ಯವಿಲ್ಲ. ಯಾಕೆಂದರೆ ಈ ಮಾತನ್ನು ದಿಗ್ವಿಜಯ್ ಅವರು ಹೇಳುತ್ತಿರುವುದು ಇದೇ ಮೊದಲಲ್ಲ. ಹಿಂದೆಯೂ ಅವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ʼವಿಶ್ವಸಂಸ್ಥೆಯೂ ಈ ದಾಳಿ ನಡೆದ ಬಗ್ಗೆ ನಂಬಿಕೆ ಹೊಂದಿಲ್ಲʼ ಎಂದಿದ್ದರು. ಹಾಗೂ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕಾಂಗ್ರೆಸಿಗರಲ್ಲಿ ಇವರೇ ಮೊದಲಿಗರೂ ಅಲ್ಲ, ಕೊನೆಯವರೂ ಅಲ್ಲ. ಸಂಜಯ್ ನಿರುಪಮ್ ಅವರೂ ʼಇದು ರಾಜಕೀಯ ಲಾಭಕ್ಕಾಗಿ ನಡೆಸಿದ ಫೇಕ್ ದಾಳಿʼ ಎಂದಿದ್ದರು. ರಾಹುಲ್ ಗಾಂಧಿಯವರಂತೂ, ʼʼಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ಬಿಜೆಪಿಯು ಯೋಧರ ನೆತ್ತರಿನಲ್ಲಿ ಲಾಭ ಮಾಡಿಕೊಳ್ಳಲು ಹವಣಿಸುತ್ತಿದೆʼʼ ಎಂದಿದ್ದರು. 2019ರ ದಾಳಿಗಳ ಬಗ್ಗೆ ಸ್ಯಾಮ್ ಪಿತ್ರೋಡಾ ಅವರು ʼʼದಾಳಿಗಳ ಬಗ್ಗೆ ನೀಡಿರುವ ಸಾಕ್ಷ್ಯಗಳು ಸಾಲದುʼʼ ಎಂದಿದ್ದರು. ಸರ್ಜಿಕಲ್ ದಾಳಿಯ ಬಗ್ಗೆ ಮಾತ್ರವಲ್ಲ, ದಿಗ್ವಿಜಯ್ ಸಿಂಗ್ ಅವರು ಇಂಥ ಹಲವು ವಿವಾದಗಳನ್ನು ಸೃಷ್ಟಿಸಿದ್ದಾರೆ. ಬಾಟ್ಲಾ ಹೌಸ್ ಎನ್‌ಕೌಂಟರ್ ನಕಲಿ ಎಂದಿದ್ದರು. ಈ ಹೇಳಿಕೆಗಳಿಂದ ಅಂತರ ಕಾಪಾಡಿಕೊಂಡಿರುವಂತೆ ಕಾಂಗ್ರೆಸ್ ನಟಿಸಿದೆ. ಆದರೆ ಇವರ ಮೇಲೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ.
ʼಯುಪಿಎ ಆಡಳಿತದ ಕಾಲದಲ್ಲಿಯೂ ಇಂಥ ಸರ್ಜಿಕಲ್ ದಾಳಿ ನಡೆಸಿದ್ದೇವೆ, ಆದರೆ ಹೇಳಿಕೊಂಡಿಲ್ಲ ಅಷ್ಟೇʼ ಎಂದೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರೇ ಹೇಳಿಕೊಂಡಿದ್ದಾರೆ; ಇನ್ನೊಂದೆಡೆ 2019ರ ಸರ್ಜಿಕಲ್ ದಾಳಿ ನಿಜವಲ್ಲ ಎಂಬ ಟೀಕೆಯನ್ನೂ ಅವರ ಪಕ್ಷದವರೇ ಆಡುತ್ತಾರೆ! ತಮ್ಮ ನಿಲುವಿನಲ್ಲಿರುವ ವಿರೋಧಾಭಾಸ ಅವರಿಗೇ ಅರ್ಥವಾದಂತಿಲ್ಲ. ಯುಪಿಎ ಅವಧಿಯಲ್ಲಿ ದಾಳಿ ನಡೆಯಬಹುದಾದರೆ ಎನ್‌ಡಿಎ ಅವಧಿಯಲ್ಲಿ ಯಾಕೆ ಆಗಬಾರದು? ಈ ಮೂಲಕ ನಮ್ಮ ಮಿಲಿಟರಿ ಸುಳ್ಳು ಮಾಹಿತಿಯನ್ನು ನೀಡುತ್ತಿದೆ ಎಂದು ಪಕ್ಷ ಹೇಳಿದಂತಾಗುತ್ತದೆ. ಇಂಥ ಹೇಳಿಕೆಗಳಿಂದ ಏನಾಗುತ್ತದೆ? ಶತ್ರುಗಳ ವಿರುದ್ಧ ಪ್ರಾಣದ ಹಂಗು ತೊರೆದು ಉಗ್ರ ಶಿಬಿರ ನಾಶ ಮಾಡಿರುವ ಸೇನಾ ಯೋಧರ ನೈತಿಕ ಬಲ, ಮನೋಬಲ ಕುಸಿಯುತ್ತದೆ. ಈ ಮೂಲಕ ಸೇನೆಯ ನೈತಿಕ ಶಕ್ತಿ, ಯೋಧರ ಮನೋಬಲ ಕುಗ್ಗಿಸುವ ಕೆಲಸ ಆಗಲೇಬಾರದು. ಸರ್ಜಿಕಲ್ ದಾಳಿ ನಡೆದಿದೆ ಎಂಬುದನ್ನು ಸ್ವತಃ ಪಾಕಿಸ್ತಾನದ ಮಾಧ್ಯಮಗಳು ಒಪ್ಪಿಕೊಂಡಿವೆ. ದಾಳಿ ಸಂಭವಿಸಿದ ತಾಣದ ಸ್ಯಾಟ್‌ಲೈಟ್ ಚಿತ್ರಗಳು ವೈರಲ್ ಆಗಿವೆ. ಸೈನ್ಯದ ಕಾರ್ಯಾಚರಣೆಗೆ ಸಂಬಂಧಿಸಿದ ಗುಪ್ತ ವಿವರಗಳನ್ನು ಹೊರಗೆಡಹಬೇಕು ಎಂಬುದು ಅರ್ಥವಿಲ್ಲದ ಮಾತು. ಕಾಂಗ್ರೆಸ್ ಈಗ ಈ ಹೇಳಿಕೆಗೂ ತನಗೂ ಸಂಬಂಧ ಇಲ್ಲ ಎಂದು ಜಾರಿಕೊಂಡಿದೆ. ಸಂಬಂಧವಿಲ್ಲ ಎಂದು ಹೇಳಿದರೆ ಸಾಲದು, ಇಂಥ ಸಡಿಲ ಮಾತುಗಳಿಗೆ ಪಕ್ಷದಲ್ಲಿ ಜಾಗವಿಲ್ಲ ಎಂಬುದನ್ನು ತೋರಿಸಲೂ ಬೇಕು. ಅಂದರೆ ಇಂಥ ನಾಯಕರ ವಿರುದ್ಧ ಅದು ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ.
ಇದನ್ನೂ ಓದಿ | Surgical Strike: ನಿರ್ದಿಷ್ಟ ದಾಳಿ ಸಾಕ್ಷ್ಯ ಕೇಳಿದ ದಿಗ್ವಿಜಯ್ ಸಿಂಗ್, ಬಿಜೆಪಿ ಆಕ್ರೋಶ, ಅಂತರ ಕಾಯ್ದುಕೊಂಡ ಕಾಂಗ್ರೆಸ್