Site icon Vistara News

ವಿಸ್ತಾರ ಸಂಪಾದಕೀಯ: ಕಾಂಗ್ರೆಸ್‌ನ ಉಚಿತ ಕೊಡುಗೆಗಳು ಜನರಿಗೆ ನಿರಾಸೆ ಮಾಡದಿರಲಿ

congresss-freebies

#image_title

ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್‌ ಪಕ್ಷ, ತಾನು ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರಜೆಗಳಿಗೆ 5 ಗ್ಯಾರಂಟಿ ಕೊಡುಗೆಗಳನ್ನು ನೀಡುವುದಾಗಿ ಪ್ರಕಟಿಸಿತ್ತು. ಪ್ರತೀ ಕುಟುಂಬಕ್ಕೂ 200 ಯುನಿಟ್‌ ಉಚಿತ ವಿದ್ಯುತ್, ರಾಜ್ಯದ ಹೆಣ್ಣು ಮಕ್ಕಳಿಗೆ ಸರ್ಕಾರಿ ಬಸ್ ಪ್ರಯಾಣ ಉಚಿತ, ನಿರುದ್ಯೋಗ ಭತ್ಯೆ, ಪ್ರತಿ ಕುಟುಂಬದ ಮಹಿಳೆಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆ- ಮುಂತಾದವು ಈ ಭರವಸೆಗಳ ಪಟ್ಟಿಯಲ್ಲಿದ್ದವು. ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಸಂಪುಟ ಸಭೆಯಲ್ಲೇ ಈ ಯೋಜನೆಗಳಿಗೆ ಅನುಮೋದನೆ ನೀಡುವುದಾಗಿ ಪಕ್ಷ ಘೋಷಿಸಿತ್ತು. ಇದೀಗ ಚುನಾವಣೆಯಲ್ಲಿ ಬಹುಮತ ಸಾಧಿಸಿರುವ ಕಾಂಗ್ರೆಸ್ ಪಕ್ಷದ ಸರ್ಕಾರ ಮೊದಲ ಸಂಪುಟ ಸಭೆ ನಡೆಸಿ, 5 ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಅನುಮೋದನೆಯನ್ನಷ್ಟೇ ನೀಡಿದೆ. ಈ ಯೋಜನೆಗಳನ್ನು ಯಾರಿಗೆ ನೀಡಬೇಕು, ಯಾರಿಗೆ ನೀಡಬಾರದು ಎಂಬ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಯೋಜನೆಯ ಫಲಾನುಭವಿಗಳಿಗೆ ಹಲವು ಷರತ್ತುಗಳನ್ನು ಹಾಕುವ ಸಾಧ್ಯತೆ ಕಾಣುತ್ತಿದೆ.

ಸದ್ಯ ಕಾಂಗ್ರೆಸ್‌ನ 5 ಗ್ಯಾರಂಟಿಗಳತ್ತ ಜನ ಆಶಾಭಾವನೆಯಿಂದ ನೋಡುತ್ತಿದ್ದಾರೆ. ಹಲವೆಡೆ, ಈ ಭರವಸೆಗಳು ಜಾರಿಯಾಗಬೇಕಾದರೆ ಆದೇಶವಾಗಿ ಬರಬೇಕಿದೆ ಎಂಬುದನ್ನು ಅರಿಯದ ಮುಗ್ಧ ಜನ ಈಗಾಗಲೇ, ನಾವು ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎಂದು ಹಠ ಮಾಡಿದ್ದಾರೆ. ನಿರೀಕ್ಷೆಯಲ್ಲಿರುವ ಜನರಿಗೆ ನಿರಾಸೆ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕಾಂಗ್ರೆಸ್ ಸರ್ಕಾರದ್ದಾಗಿದೆ. ಕಾಂಗ್ರೆಸ್‌ ಮತದಾರರಿಗೆ ನೀಡಿರುವ 5 ಪ್ರಮುಖ ಆಶ್ವಾಸನೆಗಳ ಪ್ರಕಾರ, ಹಣಕಾಸಿನ ಬಾಧ್ಯತೆ ಏನಿದೆ ನೋಡೋಣ. ಸರ್ಕಾರ ಪ್ರತೀ ಕುಟುಂಬದ ಮಹಿಳಾ ಪ್ರಮುಖರಿಗೆ ಪ್ರತಿ ತಿಂಗಳು 2,000 ರೂ., ಪ್ರತಿ ಡಿಪ್ಲೊಮಾ ನಿರುದ್ಯೋಗಿಗೆ 2 ವರ್ಷ ತನಕ ಮಾಸಿಕ 1,500 ರೂ., ಪದವೀಧರ ನಿರುದ್ಯೋಗಿಗೆ 2 ವರ್ಷ ತನಕ ಮಾಸಿಕ 3,000 ರೂ., ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಆಹಾರ ಧಾನ್ಯ, ಪ್ರತಿ ಕುಟುಂಬಕ್ಕೆ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡಬೇಕು.

ರಾಜ್ಯದ ವಿತ್ತೀಯ ಶಿಸ್ತನ್ನು ಸರಿದೂಗಿಸಲು ʼಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯಿದೆ- 2002 (ಕೆಎಫ್‌ಆರ್‌ಎ) ನಿರ್ಣಾಯಕ. ವಿತ್ತೀಯ ಕೊರತೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) 3%ಕ್ಕಿಂತ ಹೆಚ್ಚಿರಬಾರದು ಎಂಬುದು ಈ ಕಾಯಿದೆಯ ನಿಯಮ. 2023-24ರ ಬಜೆಟ್‌ ಪ್ರಕಾರ ಕರ್ನಾಟಕ ಜಿಎಸ್‌ಡಿಪಿ ₹ 23.33 ಲಕ್ಷ ಕೋಟಿ; ಈಗಾಗಲೇ ಇರುವ ವಿತ್ತೀಯ ಕೊರತೆಯ ಪ್ರಮಾಣವೇ ₹ 60,531 ಕೋಟಿ. ಇದು 3%ದ ಸನಿಹ ಇದೆ. ಕಾಂಗ್ರೆಸ್‌ ಘೋಷಿಸುತ್ತಿರುವ ಉಚಿತಗಳ ಒಟ್ಟಾರೆ ಲೆಕ್ಕ ತೆಗೆದರೆ ಅದು ವಿತ್ತೀಯ ಕೊರತೆಯ ಶೇ.5ನ್ನು ಮೀರಲಿದೆ. ತಜ್ಞರು ತಿಳಿಸುವಂತೆ ನಗದು ಪಾವತಿಗಳು ಮತ್ತು ವಿದ್ಯುತ್‌ ಸಬ್ಸಿಡಿಗೇ ವಾರ್ಷಿಕ 62,000 ಕೋಟಿ ರೂ. ವೆಚ್ಚವಾಗಲಿದೆ. ಅಂದರೆ ರಾಜ್ಯ ಬಜೆಟ್‌ನ 20% ಪಾಲು ಇಂಥ ಯೋಜನೆಗಳಿಗೆ ವೆಚ್ಚವಾಗಲಿದೆ. ಹಾಗಿದ್ದರೆ ವಿತ್ತೀಯ ಶಿಸ್ತು ಕಾಪಾಡಿಕೊಳ್ಳುವುದು, ಈ ಉಚಿತಗಳು ರಾಜ್ಯದ ಮೇಲೆ ಮತ್ತಷ್ಟು ಸಾಲದ ಹೊರೆಯನ್ನು ಉಂಟುಮಾಡದಂತೆ ನೋಡಿಕೊಳ್ಳುವುದು ಹೇಗೆ? ಇದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗದಂತೆ ನೋಡಿಕೊಳ್ಳುವುದು ಹೇಗೆ? ಇದನ್ನು ನೂತನ ಸರ್ಕಾರ ಯೋಚಿಸಬೇಕಿದೆ.

ಇದನ್ನೂ ಓದಿ : Karnataka CM live: ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ; ಐದು ಗ್ಯಾರಂಟಿ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ

ಇಂಥ ಉಚಿತ ಯೋಜನೆಗಳನ್ನು ಜಾರಿ ಮಾಡುವಾಗ ರಾಜ್ಯದ ಖಜಾನೆ ಬರಿದು ಮಾಡಿ ಜನಸಾಮಾನ್ಯರ ಮೇಲೆ ಪರೋಕ್ಷವಾಗಿ ಇದರ ಹೊಡೆತ ಬೀಳದಂತೆ ನೋಡಿಕೊಳ್ಳಬೇಕಾದ ಹೊಣೆ ಹೊಸ ಸರ್ಕಾರದ್ದೇ ಆಗಿದೆ. ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ”ಇದೆಲ್ಲ ಯೋಜನೆಗಳ ಜಾರಿಗೆ ಸರಿಸುಮಾರು 50 ಸಾವಿರ ಕೋಟಿ ರೂ. ವೆಚ್ಚವಾಗಬಹುದು. ತೆರಿಗೆ ಸಂಗ್ರಹ ಗುರಿಯನ್ನು ಹೆಚ್ಚಿಸಿಕೊಂಡರೆ ಸುಮಾರು 15 ಸಾವಿರ ಕೋಟಿ ರೂ. ಸಿಗುತ್ತದೆ. ಇನ್ನು ಅನಗತ್ಯ ವೆಚ್ಚ ಕಡಿತ ಮಾಡುವುದು ಸೇರಿ ವಿವಿಧೆಡೆಯಿಂದ ಉಳಿದ ಹಣವನ್ನು ಹೊಂದಿಸುತ್ತೇವೆ” ಎಂದಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ದೊಡ್ಡ ಮೊತ್ತದ ಜಿಎಸ್‌ಟಿ ಮಧ್ಯಂತರ ಬಾಕಿಯನ್ನೂ ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್‌ ನುಡಿದಂತೆ ನಡೆಯಲಿ, ರಾಜ್ಯದ ಅರ್ಹ ಜನತೆ ಈ ಸೌಲಭ್ಯಗಳ ಭಾಗ್ಯವನ್ನು ಪಡೆಯಲಿ. ಆದರೆ ಹೀಗೆ ಮಾಡುವಾಗ ರಾಜ್ಯವನ್ನು ದಿವಾಳಿಯ ಅಂಚಿಗೆ ತಳ್ಳದಿರಲಿ ಎಂದು ಆಶಿಸೋಣ.

Exit mobile version