Site icon Vistara News

ವಿಸ್ತಾರ ಸಂಪಾದಕೀಯ: ಭಾರತದ ಉತ್ಪನ್ನಗಳ ರಫ್ತಿಗೆ ಕುಖ್ಯಾತಿ ಅಂಟದಿರಲಿ

Vistara Editorial

ಭಾರತದಲ್ಲಿ ತಯಾರಾಗುವ ಒಟ್ಟು 527 ಆಹಾರ ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ (Ethylene oxide) ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಹೇಳಿದ್ದಾರೆ. 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ. ಎಂಡಿಎಚ್, ಎವರೆಸ್ಟ್ ಮಸಾಲೆ ಸೇರಿದಂತೆ ಜನಪ್ರಿಯ ಕಂಪನಿಗಳ ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಹೆಚ್ಚಿನ ಮಟ್ಟದಲ್ಲಿದೆಯಂತೆ. ಇದರ ಬೆನ್ನಲ್ಲೇ ಎರಡು ಕಂಪನಿಗಳ ಉತ್ಪನ್ನಗಳನ್ನು ಈಗಾಗಲೇ ಹಾಂಗ್ ಕಾಂಗ್ (Hong Kong) ಮತ್ತು ಸಿಂಗಾಪುರ (Singapore)ದಲ್ಲಿ ಸಂಪೂರ್ಣವಾಗಿ ಬ್ಯಾನ್‌ ಮಾಡಲಾಗಿದೆ. ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳಲ್ಲೂ ಅಪಾಯಕಾರಿ ಕೆಮಿಕಲ್‌ಗಳು ಕಂಡು ಬಂದಿವೆ. ಇದು ಭಾರತದ ರಫ್ತು ವಲಯದ ಮಟ್ಟಿಗೆ ಆತಂಕಕಾರಿ ಸಂಗತಿ.

ಹೀಗಾಗುತ್ತಿರುವುದು ಇದೇ ಮೊದಲ ಬಾರಿ ಅಲ್ಲ. ಕಳೆದ ಕೆಲವು ವರ್ಷಗಳಲ್ಲಿ ಭಾರತದಿಂದ ರಫ್ತಾಗುವ ಹಲವು ಸಾಮಗ್ರಿಗಳಲ್ಲಿ ಕೀಟನಾಶಕಗಳ ಅಂಶ ನಿಗದಿತ ಮಿತಿಯನ್ನು ಮೀರಿದೆ ಎಂದು ಕಾರಣ ನೀಡಿ ತಿರಸ್ಕರಿಸಲಾಗಿದೆ. ಅಮೆರಿಕದಲ್ಲಿ ನಮ್ಮ ಬಾಸ್ಮತಿ ಅಕ್ಕಿ, ಪಾಲಿಶ್ಡ್‌ ಅಕ್ಕಿ, ಬೆಂಡೆಕಾಯಿ ಹಾಗೂ ಕ್ಯಾಪ್ಸಿಕಂ, ಯುರೋಪಿನಲ್ಲಿ ಬಾಸ್ಮತಿ ಅಕ್ಕಿ, ಜಪಾನ್‌ನಲ್ಲಿ ಸಿಗಡಿ ಸೇರಿದಂತೆ ಹಲವು ಉತ್ಪನ್ನಗಳನ್ನು ಎತೋಕ್ಸಿಕ್ವಿನ್‌, ಆಕ್ಸಿಟೆಟ್ರಾಸೈಕ್ಲಿನ್‌, ಸಲ್ಫೈಟ್‌, ನೈಟ್ರೋಫರಾನ್‌, ಕ್ಲೋರಾಂಫೆನಿಕಾಲ್‌ ಮುಂತಾದ ಕೀಟನಾಶಕ ಅಂಶಗಳ ಕಾರಣದಿಂದ ತಿರಸ್ಕರಿಸಲಾಗಿತ್ತು. ಅಮೆರಿಕದಲ್ಲಿ ಭಾರತದ ಮಾವು, ಜರ್ಮನಿಯಲ್ಲಿ ಭಾರತದ ಡಾರ್ಜಲಿಂಗ್‌ ಟೀ, ಯುಎಇಯಲ್ಲಿ ನಮ್ಮ ಮಾವು ಹಾಗೂ ತರಕಾರಿ ತಿರಸ್ಕಾರಕ್ಕೊಳಗಾಗಿದ್ದವು. ಇದೀಗ ಮಸಾಲೆ ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಅತಿಯಾಗಿ ಕಂಡುಬಂದಿದೆ. ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಸ್ವಚ್ಛಗೊಳಿಸುವ ಕ್ರಿಮಿನಾಶಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕ ದೇಹಕ್ಕೆ ಸೇರಿದರೆ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರುವ ಸಾಧ್ಯತೆ ಹೆಚ್ಚಿದೆ. ಇದು ಈ ಹಿಂದೆ ಕೆಮ್ಮಿನ ಸಿರಪ್‌ಗಳಲ್ಲೂ ಪತ್ತೆಯಾಗಿತ್ತು. ಇದರಿಂದ ಆಫ್ರಿಕಾದ ಕೆಲವು ದೇಶಗಳಲ್ಲಿ ಸಾವಿಗೆ ಕಾರಣವಾಗಿತ್ತು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಗ್ರಾಮಾಂತರ ಜನರ ಮತೋತ್ಸಾಹ ನಗರದ ‘ಬುದ್ಧಿವಂತ’ ಮತದಾರರಲ್ಲಿ ಏಕಿಲ್ಲ?

ಇದಕ್ಕೆ ಕಾರಣ, ನಮ್ಮವರು ಬೆಳೆಯುವ ಬೆಳೆಗೆ ಬಳಸುವ ಕೀಟನಾಶಕ ಹಾಗೂ ರಸಗೊಬ್ಬರದ ಪ್ರಮಾಣದಲ್ಲಿ ಲಂಗುಲಗಾಮೇ ಇಲ್ಲದಿರುವುದು. ಕೀಟನಾಶಕಗಳು ಹಾಗೂ ರಸಗೊಬ್ಬರಗಳಿಗೆ ಅತಿ ಭಾರೀ ಪ್ರಮಾಣದಲ್ಲಿ ಸಬ್ಸಿಡಿಯನ್ನು ಕೊಡುವ ದೇಶವೂ ನಮ್ಮದೇ. ಹೀಗಾಗಿ ಇವು ಅತ್ಯಂತ ಅಗ್ಗವಾಗಿ ಸಿಗುತ್ತವೆ. ಅಮೆರಿಕ ಬಹಳಷ್ಟು ಸಾರಿ ನಮ್ಮಲ್ಲಿ ನೀಡಲಾಗುತ್ತಿರುವ ರಸಗೊಬ್ಬರ ಸಬ್ಸಿಡಿಯ ಬಗ್ಗೆ ತಗಾದೆ ಎತ್ತಿದೆ. ಇದರಲ್ಲಿ ಅಮೆರಿಕದ ಹಿತಾಸಕ್ತಿಯೂ ಇದೆ ಎನ್ನೋಣ. ಆದರೆ ಅಮೆರಿಕದ ಆಕ್ಷೇಪದಲ್ಲಿ ಸತ್ಯವೂ ಇದೆ. ಅಮೆರಿಕ, ಮುಂದುವರಿದ ಯುರೋಪ್ ದೇಶಗಳು, ಸಿಂಗಾಪುರ ಮುಂತಾದೆಡೆಗಳಲ್ಲಿ ಆಹಾರ ವಸ್ತುಗಳ ಗುಣಮಟ್ಟದ ಬಗ್ಗೆ ಕಟ್ಟುನಿಟ್ಟಾದ ನಿಯಮಗಳಿವೆ. ಈ ನಿಯಮ ಮೀರಿದ ಉತ್ಪನ್ನಗಳನ್ನು ಅವು ಸ್ವೀಕರಿಸುವುದಿಲ್ಲ. ಹೀಗಾಗಿ ರಫ್ತಿನ ಮಟ್ಟಿಗೆ ನಾವೂ ಕಠಿಣ ನಿಯಮಗಳನ್ನು ಪಾಲಿಸಬೇಕಾದುದು ಅತ್ಯವಶ್ಯಕ.

ದೇಶದಿಂದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತಿನ ಪ್ರಾಮುಖ್ಯತೆ ಹಾಗೂ ಅದರ ಗುಣಮಟ್ಟ ಕಾಪಾಡಿಕೊಳ್ಳಬೇಕಾದ ಅಗತ್ಯ ಅರಿತುಕೊಂಡ ಕೇಂದ್ರ ಸರ್ಕಾರ 1986ರಲ್ಲಿ ವಾಣಿಜ್ಯ ಸಚಿವಾಲಯದ ಅಡಿಯಲ್ಲಿ ಸಂಸತ್ತಿನ ಕಾಯಿದೆಯ ಮೂಲಕ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವನ್ನು (APEDA) ಸ್ಥಾಪಿಸಿತು. ರಫ್ತು ಮಾಡಬೇಕಾದ ಸರಕುಗಳ ಕಡ್ಡಾಯ ಗುಣಮಟ್ಟದ ನಿಯಂತ್ರಣ ಮತ್ತು ಪೂರ್ವ-ರವಾನೆ ತಪಾಸಣೆಯ ಉದ್ದೇಶಕ್ಕಾಗಿ ರಫ್ತು (ಗುಣಮಟ್ಟ ನಿಯಂತ್ರಣ ಮತ್ತು ತಪಾಸಣೆ) ಕಾಯಿದೆ, 1963ರ ಸೆಕ್ಷನ್ 3ರ ಅಡಿಯಲ್ಲಿ ಭಾರತ ಸರ್ಕಾರದಿಂದ ರಫ್ತು ಪರಿಶೀಲನಾ ಮಂಡಳಿ (EIC) ಅನ್ನು ಸ್ಥಾಪಿಸಲಾಯಿತು. ಇದು 1000ಕ್ಕೂ ಹೆಚ್ಚು ಸರಕುಗಳನ್ನು ತಪಾಸಿಸುತ್ತದೆ. ಆಹಾರ ಮತ್ತು ಕೃಷಿ, ಮೀನುಗಾರಿಕೆ, ಖನಿಜಗಳು, ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು, ರಬ್ಬರ್ ಉತ್ಪನ್ನಗಳು, ಸೆರಾಮಿಕ್ ಉತ್ಪನ್ನಗಳು, ಕೀಟನಾಶಕಗಳು, ಲಘು ಎಂಜಿನಿಯರಿಂಗ್, ಉಕ್ಕಿನ ಉತ್ಪನ್ನಗಳು, ಸೆಣಬು ಉತ್ಪನ್ನಗಳು, ತೆಂಗಿನಕಾಯಿ ಉತ್ಪನ್ನಗಳು, ಪಾದರಕ್ಷೆಗಳು ಇವನ್ನೆಲ್ಲ ಪರಿಶೀಲಿಸುತ್ತದೆ. ಇದಕ್ಕಾಗಿಯೇ ದೊಡ್ಡ ಸಂಖ್ಯೆಯ ಲ್ಯಾಬ್‌ಗಳಿವೆ. ಹೀಗಿದ್ದರೂ ಕಣ್ತಪ್ಪಿಸಿ ವಿಷಕಾರಕ ಅಂಶಗಳಿರುವ ಉತ್ಪನ್ನಗಳು ವಿದೇಶಕ್ಕೆ ಹೋಗುತ್ತವೆ ಎಂದರೇನರ್ಥ?

ಸದ್ಯ ಈ ತಪಾಸಣೆಯನ್ನು ಬಿಗಿ ಮಾಡಬೇಕಿದೆ. ವಿಷಕಾರಕ ಅಂಶಗಳನ್ನು ಹೊಂದಿರುವ ಉತ್ಪನ್ನಗಳನ್ನು ಹಿಂದೆಗೆದುಕೊಳ್ಳುವ, ಪರೀಕ್ಷಿಸುವ, ದೇಶಕ್ಕೆ ಕೆಟ್ಟ ಹೆಸರು ತರುವ ಉತ್ಪನ್ನಗಳ ನಿರ್ಬಂಧಕ್ಕೆ ಕಠಿಣ ಕ್ರಮ ಆಗಬೇಕಿದೆ. ಯಾಕೆಂದರೆ ಇದು ಭಾರತದ ಘನತೆಯನ್ನು ಜಾಗತಿಕವಾಗಿ ಉಳಿಸುವ ಅಥವಾ ನಾಶಮಾಡುವ ಸಂಗತಿಯಾಗಿದೆ.

Exit mobile version