ಚಾಟ್ ಜಿಪಿಟಿ ಎಂಬ ಸಾಫ್ಟ್ ವೇರ್ ನ ಸಂಶೋಧನೆ ಮತ್ತು ಬಳಕೆ ವಿಶ್ವಾದ್ಯಂತ ಸಂಚಲನ ಸೃಷ್ಟಿಸಿದೆ. ಇದು ಮನುಷ್ಯರು ಮಾಡುವ ಎಲ್ಲ ಸೃಜನಶೀಲ ಕೆಲಸ ಮಾಡುತ್ತದೆ, ಲಕ್ಷಾಂತರ ಮಂದಿಯ ಉದ್ಯೋಗ ಕಸಿಯುತ್ತದೆ ಎಂಬ ಬಗ್ಗೆ ಹಾಹಾಕಾರ ಎದ್ದಿದೆ. ಇದಕ್ಕೆ ಪೈಪೋಟಿಯಾಗಿ ಗೂಗಲ್ ಇತ್ಯಾದಿ ದೈತ್ಯ ಕಂಪನಿಗಳೂ ಇಂಥದ್ದೇ ಸಾಫ್ಟ್ ವೇರ್ ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಬದಲಾವಣೆ ಜಗದ ನಿಯಮ. ಹೊಸ ಸವಾಲನ್ನು ಎದುರಿಸಿ, ಅದಕ್ಕೆ ಹೊಂದಿಕೊಳ್ಳಬೇಕೇ ಹೊರತು ಧೃತಿಗೆಡಬೇಕಿಲ್ಲ.
ಕಳೆದ ನವೆಂಬರ್‌ನಲ್ಲಿ ಬಿಡುಗಡೆಯಾದ ಎಐ(ಕೃತಕ ಬುದ್ಧಿಮತ್ತೆ) ಆಧಾರಿತ ‘ಚಾಟ್‌ಜಿಪಿಟಿ’ ಚಾಟ್‌ಬಾಟ್ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿರುವ ಹೊತ್ತಿನಲ್ಲೇ, ಮುಂದಿನ ವಾರದಲ್ಲಿ ಹೊಸ ಆವೃತ್ತಿ ಬಿಡುಗಡೆಯಾಗುತ್ತಿದೆ. ಸದ್ಯ ಚಾಟ್‌ಜಿಪಿಟಿ ಬಳಕೆದಾರರು ಟೆಕ್ಸ್ಟ್(ಪಠ್ಯ) ಮೂಲಕ ಕೇಳುವ ಪ್ರಶ್ನೆಗಳಿಗೆ ಟೆಕ್ಸ್ಟ್ ಮೂಲಕವೇ ನಿರ್ದಿಷ್ಟ ಉತ್ತರ ದೊರೆಯುತ್ತಿದೆ. ಹೊಸ ತಲೆಮಾರಿನ ‘ಚಾಟ್‌ಜಿಪಿಟಿ-4’ ಚಾಟ್‌ಬಾಟ್‌ಗೆ ಟೆಕ್ಟ್ಸ್ ಮೂಲಕ ಕೇಳಲಾದ ಪ್ರಶ್ನೆಗಳಿಗೆ ವಿಡಿಯೋ ಮತ್ತು ಆಡಿಯೋ ಮೂಲಕವೂ ಉತ್ತರ ನೀಡಲಿದೆ. ವೆಬ್ ಬೇಸ್ಡ್ ಈ ಚಾಟ್‌ಜಿಪಿಟಿ ಶೀಘ್ರವೇ ಅಪ್ಲಿಕೇಷನ್(ಆ್ಯಪ್) ರೂಪದಲ್ಲೂ ದೊರೆಯಲಿದೆ. ಹಾಗಾಗಿ, ಈ ಚಾಟ್‌ಜಿಪಿಟಿ ಬಳಕೆಯ ಸಾಧ್ಯಾಸಾಧ್ಯತೆಗಳು ಇನ್ನಷ್ಟು ಹೆಚ್ಚಾಗಲಿವೆ. ಜತೆಗೆ ಆತಂಕಗಳು ಕೂಡ ಹೆಚ್ಚಾಗಿವೆ.
ಚಾಟ್‌ಜಿಪಿಟಿ ಎನ್ನುವುದು ಯಂತ್ರ ಕಲಿಕೆ ಆಧರಿಸಿ ತಯಾರಿಸಲಾದ ಭಾಷಾ ಮಾದರಿ. ಇನ್ನೂ ಸರಳವಾಗಿ ಹೇಳಬೇಕೆಂದರೆ ಇದೊಂದು ಉತ್ತರಿಸುವ ರೋಬಾಟ್. ಈ ಚಾಟ್‌ಬಾಟ್‌ಗೆ ಅರ್ಥವಾಗುವ ಕಂಪ್ಯೂಟರ್ ಭಾಷೆ ಜಿಪಿಟಿ 3.5(ಮುಂದಿನ ವಾರ ಹೊಸ ಆವೃತ್ತಿ ಬಿಡುಗಡೆಯಾಗಲಿದೆ). ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸುತ್ತದೆ. ಹಾಗೆ ನೋಡಿದರೆ, ಈ ಚಾಟ್‌ಬಾಟ್‌ಗಳು ಹೊಸತಲ್ಲ. ಈ ಹಿಂದೆಯೂ ಬಳಕೆಯಲ್ಲಿದ್ದವು. ಆದರೆ, ಈಗ ಬಳಕೆಯಾಗುತ್ತಿರುವ ಚಾಟ್‌ಜಿಪಿಟಿ ಹೆಚ್ಚು ಸುಧಾರಿತ ಹಾಗೂ ಹೆಚ್ಚು ನಿಖರ, ಬಹು ಬಳಕೆಯ ಸಾಧ್ಯತೆಗಳನ್ನು ಹೊಂದಿದೆ. ಹಾಗಾಗಿ, ಈ ಚಾಟ್‌ಜಿಪಿಟಿಗೆ ಮಹತ್ವ ಬಂದಿದೆ. ಮೈಕ್ರೋಸಾಫ್ಟ್ ಎದುರಾಳಿ ತಂತ್ರಜ್ಞಾನ ಕಂಪನಿ ಗೂಗಲ್ ಕೂಡ ಇಂಥದ್ದೇ ಚಾಟ್‌ಬಾಟ್ ಬಾರ್ಡ್ ಬೀಟಾ ವರ್ಷನ್‌ನಲ್ಲಿ ಲಾಂಚ್ ಮಾಡಿದೆ. ಫೇಸ್‌ಬುಕ್, ಟ್ವಿಟರ್ ಸೇರಿ ಇನ್ನೂ ಹಲವು ಕಂಪನಿಗಳಲ್ಲಿ ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದು, ಇದು ಭವಿಷ್ಯದ ತಂತ್ರಜ್ಞಾನವಾಗಿದೆ.
ಚಾಟ್‌ಜಿಟಿಪಿ ಲಾಂಚ್ ಆದಾಗಿನಿಂದಲೂ ಚಾಟ್‌ಜಿಪಿಟಿ ವರ್ಸಸ್ ಮಾನವ ಎಂಬ ಚರ್ಚೆಗಳು ಅಡೆತಡೆ ಇಲ್ಲದೇ ನಡೆಯುತ್ತಿವೆ. ಚಾಟ್‌ಜಿಪಿಟಿ ಹುಟ್ಟಿಸಿರುವ ಭೀತಿ ಮತ್ತು ಅದು ಯಾವುದೆಲ್ಲ ರಂಗದಲ್ಲಿ, ಹೇಗೆಲ್ಲ ಬಳಕೆಯಾಗಲಿದೆ ಎಂಬುದಕ್ಕೆ ಸಿಗುತ್ತಿರುವ ಸಾಕ್ಷ್ಯಗಳೇ ಇದಕ್ಕೆ ಕಾರಣ. ಇತ್ತೀಚೆಗೆ ಅಮೆರಿಕದಲ್ಲಿ ಕೈಗೊಂಡ ಸಮೀಕ್ಷೆಯೊಂದರಲ್ಲಿ ಕೋಡಿಂಗ್ ಬರೆಯುವ ಕೆಲಸಗಳನ್ನು ಈ ಚಾಟ್‌ಜಿಪಿಟಿ ನುಂಗಿ ಹಾಕುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಕಂಟೆಂಟ್ ರೈಟಿಂಗ್ ಕೆಲಸಗಳನ್ನು ಈ ಚಾಟ್‌ಜಿಪಿಟಿ ಕಬಳಿಸುತ್ತಿರುವುದು ಸ್ಪಷ್ಟ. ಹಾಗಾಗಿಯೇ ಚಾಟ್‌ಜಿಪಿಟಿ ಸುಧಾರಿತ ಆವೃತ್ತಿಗಳು ಬಿಡುಗಡೆಯಾದಂತೆಲ್ಲ ಉದ್ಯೋಗ ನಷ್ಟ ಎಂಬ ಆತಂಕ ಹೆಚ್ಚಾಗುತ್ತಲೇ ಇರುತ್ತದೆ.
ಆದರೆ, ಚಾಟ್‌ಜಿಪಿಟಿಯನ್ನು ಸೃಷ್ಟಿಸಿದ್ದು ಮನುಷ್ಯನೇ ಅಲ್ಲವೇ? ಹಾಗಾಗಿ, ಮನುಷ್ಯನ ಯೋಚನಾ ಲಹರಿಗೆ ಅದು ಎಂದು ಸವಾಲು ಒಡ್ಡಲಾರದು. ಇದೇ ಮಾತನ್ನು ಇನ್ಫೋಸಿಸ್ ನಾರಾಯಣಮೂರ್ತಿ ಅವರೂ ಹೇಳಿದ್ದಾರೆ. ”ಮಾನವನ ಮನಸ್ಸು ಅತ್ಯಂತ ಹೊಂದಾಣಿಕೆಯ ಸಾಧನವಾಗಿದೆ. ಚಾಟ್‌ಜಿಪಿಟಿ ಎಂದಿಗೂ ಮಾನವರ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. 1977-78ರಲ್ಲಿ ಪ್ರೋಗ್ರಾಮರ್ ಜನರೇಟರ್ ಚಾಲ್ತಿಗೆ ಬಂದವು. ಎಲ್ಲರೂ ಉದ್ಯೋಗ ನಷ್ಟವಾಗುತ್ತವೆ ಎಂದು ಭಾವಿಸಿದ್ದರು. ಆದರೆ ಹಾಗೇನೂ ಆಗಲಿಲ್ಲ. ಮಾನವನ ಸೃಜನಶೀಲತೆ ಮತ್ತು ತಂತ್ರಜ್ಞಾನದೊಂದಿಗಿನ ದೊಡ್ಡ ಸಮಸ್ಯೆಗಳಿಗೆ ಸಹಾಯ ಮಾಡಲು ಇದನ್ನು ಬಳಸಲಾಯಿತು. ಚಾಟ್‌ಜಿಪಿಟಿಯೇ ಇರಲಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವೇ ಇರಲಿ. ಅವು ಎಂದಿಗೂ ಮಾನವರ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ” ಎಂಬುದು ನಾರಾಯಣಮೂರ್ತಿ ಅವರ ಅಭಿಪ್ರಾಯ.
ಇದನ್ನೂ ಓದಿ: ChatGPT v/s Humans: ಚಾಟ್‌ಜಿಪಿಟಿ ಮಾನವರ ಸ್ಥಾನ ಪಡೆಯಲಿದೆಯಾ? ಇನ್ಫಿ ನಾರಾಯಣಮೂರ್ತಿ ಹೇಳುವುದೇನು?
ನಾರಾಯಣಮೂರ್ತಿ ಅವರು ಹೇಳಿದ್ದು ಸೂಕ್ತವಾಗಿದೆ. ನಾವು ಒಂದು ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಹೊಸ ತಂತ್ರಜ್ಞಾನವನ್ನು ತಡೆಯುವುದು ಅಸಾಧ್ಯ. ಆದರೆ, ಅದರಿಂದ ಎಲ್ಲ ಕೆಲಸಗಳು ಹೊರಟು ಹೋಗುತ್ತವೆ ಎಂದು ಹೇಳುವುದು ಅರ್ಧ ಸತ್ಯ. ಹಳೆಯ ಸ್ವರೂಪದ ಕೆಲಸಗಳ ಬದಲಾಗಿ ಹೊಸ ಸ್ವರೂಪದ ಕೆಲಸಗಳು ಸೃಜನೆಯಾಗುತ್ತವೆ. ಅದಕ್ಕೆ ಬೇಕಾದ ಕೌಶಲವನ್ನು ನಾವು ಬೆಳೆಸಿಕೊಳ್ಳಬೇಕು, ಅಗತ್ಯ ಬಿದ್ದರೆ ಮರುಕೌಶಲ (ರಿಸ್ಕಿಲ್ಲಿಂಗ್) ಮಾಡಿಕೊಳ್ಳಬೇಕು. ಜತೆಗೆ, ಪರ್ಯಾಯ ಹಾಗೂ ಪರೋಕ್ಷವಾಗಿ ಹೊಸ ಮಾದರಿಯ ಉದ್ಯೋಗ ಸೃಷ್ಟಿಯಾಗುತ್ತವೆ ಎಂಬುದೂ ಅಷ್ಟೇ ಸತ್ಯ.
ಈ ಹಿಂದೆ ಕಂಪ್ಯೂಟರ್ ಬಳಕೆಗೆ ಬಂದಾಗ ಎಲ್ಲರ ಉದ್ಯೋಗಗಳನ್ನು ಈ ಕಂಪ್ಯೂಟರ್‌ಗಳು ಕಿತ್ತುಕೊಂಡು ಬಿಡುತ್ತವೆ ಎಂದೇ ಭಾವಿಸಲಾಗಿತ್ತು. ಟಿವಿ ಪ್ರವರ್ಧಮಾನಕ್ಕೆ ಬಂದಾಗ ರೆಡಿಯೋವನ್ನು ಯಾರೂ ಕೇಳುವುದಿಲ್ಲ ಎಂಬ ಚರ್ಚೆಗಳು ಜೋರಾಗಿದ್ದವು. ಟ್ರ್ಯಾಕ್ಟರ್ ಕೃಷಿ ಕೆಲಸಕ್ಕೆ ಬಳಕೆಯಾಗ ತೊಡಗಿದಾಗ ಕೃಷಿ ಕಾರ್ಮಿಕರು ಬೀದಿಗೆ ಬೀಳುತ್ತಾರೆಂಬ ಮಾತುಗಳಿದ್ದವು. ಕಂಪ್ಯೂಟರ್ ಎಂಬ ಸಾಧನ ಎಷ್ಟೊಂದು ಉದ್ಯೋಗ ಸೃಷ್ಟಿಸಿದೆ. ರೆಡಿಯೋ ಹೊಸ ರೂಪದಲ್ಲಿ ನಮ್ಮ ಮುಂದಿದೆ. ಟ್ರಾಕ್ಟರ್ ಬಳಕೆ ಇದ್ದೂ ಇಂದು ಕಾರ್ಮಿಕರು ಕೆಲಸಕ್ಕೆ ಸಿಗುತ್ತಿಲ್ಲ ಎಂದರೆ ಅವರಾರೂ ನಿರುದ್ಯೋಗಳಾಗಿಲ್ಲ ಎಂದರ್ಥವಲ್ಲವೇ? ಹಾಗಾಗಿ, ಈ ಎಲ್ಲ ಸಾಧನಗಳು ಮತ್ತಷ್ಟು ಸುಧಾರಿತ ಮಾದರಿಗಳೊಂದಿಗೆ ಬಳಕೆಯಲ್ಲಿವೆ, ಹಳೆಯ ಉದ್ಯೋಗಗಳ ಜಾಗದಲ್ಲಿ ಹೊಸ ಉದ್ಯೋಗಳು ಸೃಷ್ಟಿಯಾಗಿವೆ. ಹಾಗೆಯೇ ಚಾಟ್‌ಜಿಪಿಟಿಯಿಂದ ಉದ್ಯೋಗ ನಷ್ಟ ಎಂಬುದು ಕೂಡ ಆ ಕ್ಷಣಕ್ಕೆ ಸೃಷ್ಟಿಯಾಗುವ ಆತಂಕ. ಈ ಬಗ್ಗೆ ಚರ್ಚೆಗಳು, ಸಂವಾದಗಳು ನಡೆಯಲಿ. ಆದರೆ, ಎಲ್ಲವೂ ಮುಗಿದೇ ಹೋಯಿತು ಎಂಬಂಥ ಆತಂಕಪಡಬೇಕಿಲ್ಲ.