ಪ್ರಮುಖ ಸುದ್ದಿ
ವಿಸ್ತಾರ ಸಂಪಾದಕೀಯ: ಚಾಟ್ ಜಿಪಿಟಿಯ ಆತಂಕ ಬೇಡ, ಹೊಸತನಕ್ಕೆ ಹೊಂದಿಕೊಳ್ಳೋಣ
ಮೈಕ್ರೋಸಾಫ್ಟ್ ಬೆಂಬಲಿತ ಚಾಟ್ ಜಿಪಿಟಿ ಪ್ರಪಂಚದಾದ್ಯಂತ ಸಂಚಲನ ಸೃಷ್ಟಿಸಿದೆ. ಭಾರಿ ಉದ್ಯೋಗ ನಷ್ಟದ ಭೀತಿ ಆವರಿಸಿದೆ. ಆದರೆ, ಹೊಸತನ ಜಗದ ನಿಯಮವೇ ಅಲ್ಲವೆ? ಹಾಗಾಗಿ ಆತಂಕಿತರಾಗಬೇಕಿಲ್ಲ.
ಚಾಟ್ ಜಿಪಿಟಿ ಎಂಬ ಸಾಫ್ಟ್ ವೇರ್ ನ ಸಂಶೋಧನೆ ಮತ್ತು ಬಳಕೆ ವಿಶ್ವಾದ್ಯಂತ ಸಂಚಲನ ಸೃಷ್ಟಿಸಿದೆ. ಇದು ಮನುಷ್ಯರು ಮಾಡುವ ಎಲ್ಲ ಸೃಜನಶೀಲ ಕೆಲಸ ಮಾಡುತ್ತದೆ, ಲಕ್ಷಾಂತರ ಮಂದಿಯ ಉದ್ಯೋಗ ಕಸಿಯುತ್ತದೆ ಎಂಬ ಬಗ್ಗೆ ಹಾಹಾಕಾರ ಎದ್ದಿದೆ. ಇದಕ್ಕೆ ಪೈಪೋಟಿಯಾಗಿ ಗೂಗಲ್ ಇತ್ಯಾದಿ ದೈತ್ಯ ಕಂಪನಿಗಳೂ ಇಂಥದ್ದೇ ಸಾಫ್ಟ್ ವೇರ್ ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಬದಲಾವಣೆ ಜಗದ ನಿಯಮ. ಹೊಸ ಸವಾಲನ್ನು ಎದುರಿಸಿ, ಅದಕ್ಕೆ ಹೊಂದಿಕೊಳ್ಳಬೇಕೇ ಹೊರತು ಧೃತಿಗೆಡಬೇಕಿಲ್ಲ.
ಕಳೆದ ನವೆಂಬರ್‌ನಲ್ಲಿ ಬಿಡುಗಡೆಯಾದ ಎಐ(ಕೃತಕ ಬುದ್ಧಿಮತ್ತೆ) ಆಧಾರಿತ ‘ಚಾಟ್‌ಜಿಪಿಟಿ’ ಚಾಟ್‌ಬಾಟ್ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿರುವ ಹೊತ್ತಿನಲ್ಲೇ, ಮುಂದಿನ ವಾರದಲ್ಲಿ ಹೊಸ ಆವೃತ್ತಿ ಬಿಡುಗಡೆಯಾಗುತ್ತಿದೆ. ಸದ್ಯ ಚಾಟ್‌ಜಿಪಿಟಿ ಬಳಕೆದಾರರು ಟೆಕ್ಸ್ಟ್(ಪಠ್ಯ) ಮೂಲಕ ಕೇಳುವ ಪ್ರಶ್ನೆಗಳಿಗೆ ಟೆಕ್ಸ್ಟ್ ಮೂಲಕವೇ ನಿರ್ದಿಷ್ಟ ಉತ್ತರ ದೊರೆಯುತ್ತಿದೆ. ಹೊಸ ತಲೆಮಾರಿನ ‘ಚಾಟ್‌ಜಿಪಿಟಿ-4’ ಚಾಟ್‌ಬಾಟ್‌ಗೆ ಟೆಕ್ಟ್ಸ್ ಮೂಲಕ ಕೇಳಲಾದ ಪ್ರಶ್ನೆಗಳಿಗೆ ವಿಡಿಯೋ ಮತ್ತು ಆಡಿಯೋ ಮೂಲಕವೂ ಉತ್ತರ ನೀಡಲಿದೆ. ವೆಬ್ ಬೇಸ್ಡ್ ಈ ಚಾಟ್‌ಜಿಪಿಟಿ ಶೀಘ್ರವೇ ಅಪ್ಲಿಕೇಷನ್(ಆ್ಯಪ್) ರೂಪದಲ್ಲೂ ದೊರೆಯಲಿದೆ. ಹಾಗಾಗಿ, ಈ ಚಾಟ್‌ಜಿಪಿಟಿ ಬಳಕೆಯ ಸಾಧ್ಯಾಸಾಧ್ಯತೆಗಳು ಇನ್ನಷ್ಟು ಹೆಚ್ಚಾಗಲಿವೆ. ಜತೆಗೆ ಆತಂಕಗಳು ಕೂಡ ಹೆಚ್ಚಾಗಿವೆ.
ಚಾಟ್‌ಜಿಪಿಟಿ ಎನ್ನುವುದು ಯಂತ್ರ ಕಲಿಕೆ ಆಧರಿಸಿ ತಯಾರಿಸಲಾದ ಭಾಷಾ ಮಾದರಿ. ಇನ್ನೂ ಸರಳವಾಗಿ ಹೇಳಬೇಕೆಂದರೆ ಇದೊಂದು ಉತ್ತರಿಸುವ ರೋಬಾಟ್. ಈ ಚಾಟ್‌ಬಾಟ್‌ಗೆ ಅರ್ಥವಾಗುವ ಕಂಪ್ಯೂಟರ್ ಭಾಷೆ ಜಿಪಿಟಿ 3.5(ಮುಂದಿನ ವಾರ ಹೊಸ ಆವೃತ್ತಿ ಬಿಡುಗಡೆಯಾಗಲಿದೆ). ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸುತ್ತದೆ. ಹಾಗೆ ನೋಡಿದರೆ, ಈ ಚಾಟ್‌ಬಾಟ್‌ಗಳು ಹೊಸತಲ್ಲ. ಈ ಹಿಂದೆಯೂ ಬಳಕೆಯಲ್ಲಿದ್ದವು. ಆದರೆ, ಈಗ ಬಳಕೆಯಾಗುತ್ತಿರುವ ಚಾಟ್‌ಜಿಪಿಟಿ ಹೆಚ್ಚು ಸುಧಾರಿತ ಹಾಗೂ ಹೆಚ್ಚು ನಿಖರ, ಬಹು ಬಳಕೆಯ ಸಾಧ್ಯತೆಗಳನ್ನು ಹೊಂದಿದೆ. ಹಾಗಾಗಿ, ಈ ಚಾಟ್‌ಜಿಪಿಟಿಗೆ ಮಹತ್ವ ಬಂದಿದೆ. ಮೈಕ್ರೋಸಾಫ್ಟ್ ಎದುರಾಳಿ ತಂತ್ರಜ್ಞಾನ ಕಂಪನಿ ಗೂಗಲ್ ಕೂಡ ಇಂಥದ್ದೇ ಚಾಟ್‌ಬಾಟ್ ಬಾರ್ಡ್ ಬೀಟಾ ವರ್ಷನ್‌ನಲ್ಲಿ ಲಾಂಚ್ ಮಾಡಿದೆ. ಫೇಸ್‌ಬುಕ್, ಟ್ವಿಟರ್ ಸೇರಿ ಇನ್ನೂ ಹಲವು ಕಂಪನಿಗಳಲ್ಲಿ ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದು, ಇದು ಭವಿಷ್ಯದ ತಂತ್ರಜ್ಞಾನವಾಗಿದೆ.
ಚಾಟ್‌ಜಿಟಿಪಿ ಲಾಂಚ್ ಆದಾಗಿನಿಂದಲೂ ಚಾಟ್‌ಜಿಪಿಟಿ ವರ್ಸಸ್ ಮಾನವ ಎಂಬ ಚರ್ಚೆಗಳು ಅಡೆತಡೆ ಇಲ್ಲದೇ ನಡೆಯುತ್ತಿವೆ. ಚಾಟ್‌ಜಿಪಿಟಿ ಹುಟ್ಟಿಸಿರುವ ಭೀತಿ ಮತ್ತು ಅದು ಯಾವುದೆಲ್ಲ ರಂಗದಲ್ಲಿ, ಹೇಗೆಲ್ಲ ಬಳಕೆಯಾಗಲಿದೆ ಎಂಬುದಕ್ಕೆ ಸಿಗುತ್ತಿರುವ ಸಾಕ್ಷ್ಯಗಳೇ ಇದಕ್ಕೆ ಕಾರಣ. ಇತ್ತೀಚೆಗೆ ಅಮೆರಿಕದಲ್ಲಿ ಕೈಗೊಂಡ ಸಮೀಕ್ಷೆಯೊಂದರಲ್ಲಿ ಕೋಡಿಂಗ್ ಬರೆಯುವ ಕೆಲಸಗಳನ್ನು ಈ ಚಾಟ್‌ಜಿಪಿಟಿ ನುಂಗಿ ಹಾಕುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಕಂಟೆಂಟ್ ರೈಟಿಂಗ್ ಕೆಲಸಗಳನ್ನು ಈ ಚಾಟ್‌ಜಿಪಿಟಿ ಕಬಳಿಸುತ್ತಿರುವುದು ಸ್ಪಷ್ಟ. ಹಾಗಾಗಿಯೇ ಚಾಟ್‌ಜಿಪಿಟಿ ಸುಧಾರಿತ ಆವೃತ್ತಿಗಳು ಬಿಡುಗಡೆಯಾದಂತೆಲ್ಲ ಉದ್ಯೋಗ ನಷ್ಟ ಎಂಬ ಆತಂಕ ಹೆಚ್ಚಾಗುತ್ತಲೇ ಇರುತ್ತದೆ.
ಆದರೆ, ಚಾಟ್‌ಜಿಪಿಟಿಯನ್ನು ಸೃಷ್ಟಿಸಿದ್ದು ಮನುಷ್ಯನೇ ಅಲ್ಲವೇ? ಹಾಗಾಗಿ, ಮನುಷ್ಯನ ಯೋಚನಾ ಲಹರಿಗೆ ಅದು ಎಂದು ಸವಾಲು ಒಡ್ಡಲಾರದು. ಇದೇ ಮಾತನ್ನು ಇನ್ಫೋಸಿಸ್ ನಾರಾಯಣಮೂರ್ತಿ ಅವರೂ ಹೇಳಿದ್ದಾರೆ. ”ಮಾನವನ ಮನಸ್ಸು ಅತ್ಯಂತ ಹೊಂದಾಣಿಕೆಯ ಸಾಧನವಾಗಿದೆ. ಚಾಟ್‌ಜಿಪಿಟಿ ಎಂದಿಗೂ ಮಾನವರ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. 1977-78ರಲ್ಲಿ ಪ್ರೋಗ್ರಾಮರ್ ಜನರೇಟರ್ ಚಾಲ್ತಿಗೆ ಬಂದವು. ಎಲ್ಲರೂ ಉದ್ಯೋಗ ನಷ್ಟವಾಗುತ್ತವೆ ಎಂದು ಭಾವಿಸಿದ್ದರು. ಆದರೆ ಹಾಗೇನೂ ಆಗಲಿಲ್ಲ. ಮಾನವನ ಸೃಜನಶೀಲತೆ ಮತ್ತು ತಂತ್ರಜ್ಞಾನದೊಂದಿಗಿನ ದೊಡ್ಡ ಸಮಸ್ಯೆಗಳಿಗೆ ಸಹಾಯ ಮಾಡಲು ಇದನ್ನು ಬಳಸಲಾಯಿತು. ಚಾಟ್‌ಜಿಪಿಟಿಯೇ ಇರಲಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವೇ ಇರಲಿ. ಅವು ಎಂದಿಗೂ ಮಾನವರ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ” ಎಂಬುದು ನಾರಾಯಣಮೂರ್ತಿ ಅವರ ಅಭಿಪ್ರಾಯ.
ಇದನ್ನೂ ಓದಿ: ChatGPT v/s Humans: ಚಾಟ್‌ಜಿಪಿಟಿ ಮಾನವರ ಸ್ಥಾನ ಪಡೆಯಲಿದೆಯಾ? ಇನ್ಫಿ ನಾರಾಯಣಮೂರ್ತಿ ಹೇಳುವುದೇನು?
ನಾರಾಯಣಮೂರ್ತಿ ಅವರು ಹೇಳಿದ್ದು ಸೂಕ್ತವಾಗಿದೆ. ನಾವು ಒಂದು ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಹೊಸ ತಂತ್ರಜ್ಞಾನವನ್ನು ತಡೆಯುವುದು ಅಸಾಧ್ಯ. ಆದರೆ, ಅದರಿಂದ ಎಲ್ಲ ಕೆಲಸಗಳು ಹೊರಟು ಹೋಗುತ್ತವೆ ಎಂದು ಹೇಳುವುದು ಅರ್ಧ ಸತ್ಯ. ಹಳೆಯ ಸ್ವರೂಪದ ಕೆಲಸಗಳ ಬದಲಾಗಿ ಹೊಸ ಸ್ವರೂಪದ ಕೆಲಸಗಳು ಸೃಜನೆಯಾಗುತ್ತವೆ. ಅದಕ್ಕೆ ಬೇಕಾದ ಕೌಶಲವನ್ನು ನಾವು ಬೆಳೆಸಿಕೊಳ್ಳಬೇಕು, ಅಗತ್ಯ ಬಿದ್ದರೆ ಮರುಕೌಶಲ (ರಿಸ್ಕಿಲ್ಲಿಂಗ್) ಮಾಡಿಕೊಳ್ಳಬೇಕು. ಜತೆಗೆ, ಪರ್ಯಾಯ ಹಾಗೂ ಪರೋಕ್ಷವಾಗಿ ಹೊಸ ಮಾದರಿಯ ಉದ್ಯೋಗ ಸೃಷ್ಟಿಯಾಗುತ್ತವೆ ಎಂಬುದೂ ಅಷ್ಟೇ ಸತ್ಯ.
ಈ ಹಿಂದೆ ಕಂಪ್ಯೂಟರ್ ಬಳಕೆಗೆ ಬಂದಾಗ ಎಲ್ಲರ ಉದ್ಯೋಗಗಳನ್ನು ಈ ಕಂಪ್ಯೂಟರ್‌ಗಳು ಕಿತ್ತುಕೊಂಡು ಬಿಡುತ್ತವೆ ಎಂದೇ ಭಾವಿಸಲಾಗಿತ್ತು. ಟಿವಿ ಪ್ರವರ್ಧಮಾನಕ್ಕೆ ಬಂದಾಗ ರೆಡಿಯೋವನ್ನು ಯಾರೂ ಕೇಳುವುದಿಲ್ಲ ಎಂಬ ಚರ್ಚೆಗಳು ಜೋರಾಗಿದ್ದವು. ಟ್ರ್ಯಾಕ್ಟರ್ ಕೃಷಿ ಕೆಲಸಕ್ಕೆ ಬಳಕೆಯಾಗ ತೊಡಗಿದಾಗ ಕೃಷಿ ಕಾರ್ಮಿಕರು ಬೀದಿಗೆ ಬೀಳುತ್ತಾರೆಂಬ ಮಾತುಗಳಿದ್ದವು. ಕಂಪ್ಯೂಟರ್ ಎಂಬ ಸಾಧನ ಎಷ್ಟೊಂದು ಉದ್ಯೋಗ ಸೃಷ್ಟಿಸಿದೆ. ರೆಡಿಯೋ ಹೊಸ ರೂಪದಲ್ಲಿ ನಮ್ಮ ಮುಂದಿದೆ. ಟ್ರಾಕ್ಟರ್ ಬಳಕೆ ಇದ್ದೂ ಇಂದು ಕಾರ್ಮಿಕರು ಕೆಲಸಕ್ಕೆ ಸಿಗುತ್ತಿಲ್ಲ ಎಂದರೆ ಅವರಾರೂ ನಿರುದ್ಯೋಗಳಾಗಿಲ್ಲ ಎಂದರ್ಥವಲ್ಲವೇ? ಹಾಗಾಗಿ, ಈ ಎಲ್ಲ ಸಾಧನಗಳು ಮತ್ತಷ್ಟು ಸುಧಾರಿತ ಮಾದರಿಗಳೊಂದಿಗೆ ಬಳಕೆಯಲ್ಲಿವೆ, ಹಳೆಯ ಉದ್ಯೋಗಗಳ ಜಾಗದಲ್ಲಿ ಹೊಸ ಉದ್ಯೋಗಳು ಸೃಷ್ಟಿಯಾಗಿವೆ. ಹಾಗೆಯೇ ಚಾಟ್‌ಜಿಪಿಟಿಯಿಂದ ಉದ್ಯೋಗ ನಷ್ಟ ಎಂಬುದು ಕೂಡ ಆ ಕ್ಷಣಕ್ಕೆ ಸೃಷ್ಟಿಯಾಗುವ ಆತಂಕ. ಈ ಬಗ್ಗೆ ಚರ್ಚೆಗಳು, ಸಂವಾದಗಳು ನಡೆಯಲಿ. ಆದರೆ, ಎಲ್ಲವೂ ಮುಗಿದೇ ಹೋಯಿತು ಎಂಬಂಥ ಆತಂಕಪಡಬೇಕಿಲ್ಲ.
ಕರ್ನಾಟಕ
Reservation: ಒಬಿಸಿ ಮೀಸಲಾತಿ ಪುನರ್ ವರ್ಗೀಕರಿಸಿ ರಾಜ್ಯ ಸರ್ಕಾರ ಆದೇಶ; 2ಸಿ ಪ್ರವರ್ಗಕ್ಕೆ ಶೇ.6, 2ಡಿ ಪ್ರವರ್ಗಕ್ಕೆ ಶೇ.7 ಮೀಸಲಾತಿ
Reservation: ಒಕ್ಕಲಿಗರು ಮತ್ತು ಇತರ ಜಾತಿಗಳಿರುವ ಪ್ರವರ್ಗ 2ಸಿಗೆ ಶೇ.6 ಮತ್ತು ಲಿಂಗಾಯತರು, ವೀರಶೈವ ಪಂಚಮಸಾಲಿ ಹಾಗೂ ಇತರೆ ಜಾತಿಗಳಿರುವ ಪ್ರವರ್ಗ 2ಡಿಗೆ ಶೇ.7ರಷ್ಟು ಮೀಸಲಾತಿ ನಿಗದಿ ಮಾಡಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಒಕ್ಕಲಿಗ ಮತ್ತು ವೀರಶೈವ ಪಂಚಮಸಾಲಿ ಮೀಸಲಾತಿ ಪ್ರಮಾಣವನ್ನು ತಲಾ ಶೇ.2ರಷ್ಟು ಹೆಚ್ಚಿಸಲು ಸಚಿವ ಸಂಪುಟ ನಿರ್ಧಾರ ಕೈಗೊಂಡ ಬೆನ್ನಲ್ಲೇ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು (Reservation) ಪುನರ್ ವರ್ಗೀಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅತ್ಯಂತ ಹಿಂದುಳಿದ ಒಬಿಸಿ ಪ್ರವರ್ಗ-1ಕ್ಕೆ ಶೇ.4, ಪ್ರವರ್ಗ-2ಎ ಶೇ.15, ಪ್ರವರ್ಗ 2ಬಿ ಶೇ.0, ಅತೀ ಹಿಂದುಳಿದ ಪ್ರವರ್ಗ 2ಸಿಗೆ ಶೇ.6 ಹಾಗೂ ಪ್ರವರ್ಗ 2ಡಿಗೆ ಶೇ.7 ಮೀಸಲಾತಿ ಸೇರಿ ಒಟ್ಟು ಶೇ. 32ರಷ್ಟು ಮೀಸಲಾತಿ ನೀಡಿ ಆದೇಶ ಹೊರಡಿಸಲಾಗಿದೆ. ರಾಜ್ಯದ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ದೃಷ್ಟಿಯಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಪುನರ್ ವರ್ಗೀಕರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ತಿಳಿಸಿದೆ.
ಈ ಹಿಂದೆ ಒಕ್ಕಲಿಗರು ಮತ್ತು ಪಂಚಮಸಾಲಿಗಳಿಗೆ 2ಸಿ ಮತ್ತು 2 ಡಿ ಎಂಬ ಎರಡು ಹೊಸ ಪ್ರವರ್ಗಗಳನ್ನು ಸೃಷ್ಟಿಸಲಾಗಿತ್ತು. ಇವರಿಗೆ ಕೇಂದ್ರ ಸರ್ಕಾರ ಮೇಲ್ವರ್ಗದ ಬಡವರಿಗೆ ನಿಗದಿಪಡಿಸಿದ ಇಡಬ್ಲ್ಯುಎಸ್ ಶೇ. 10 ಮೀಸಲಾತಿಯಲ್ಲಿ ಅವಕಾಶ ನೀಡಲು ನಿರ್ಧರಿಸಲಾಗಿತ್ತು. ಆದರೆ, ಮಾ.24ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಕ್ಕಲಿಗರಿಗೆ ಮತ್ತು ವೀರಶೈವ ಪಂಚಮಸಾಲಿಗಳಿಗೆ ಮೀಸಲಾತಿಯನ್ನು ತಲಾ ಶೇ.2ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿತ್ತು. ಜತೆಗೆ ಇತರ ಹಿಂದುಳಿದ ವರ್ಗದಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಮೀಸಲಾತಿ ನೀಡುತ್ತಿದ್ದ 2ಬಿ ಪ್ರವರ್ಗ ರದ್ದು ಮಾಡಲಾಗಿತ್ತು.
ಹೊಸ ಮಾದರಿಯಲ್ಲಿ ಒಬಿಸಿಯಲ್ಲಿ 4 ಪ್ರವರ್ಗಗಳನ್ನು ಮಾಡಲಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರಿಗೆ ಇದ್ದ ಮೀಸಲಾತಿಯನ್ನು ರದ್ದು ಮಾಡಿ ಅವರಿಗಿದ್ದ ಶೇ.4ರಷ್ಟು ಮೀಸಲಾತಿಯನ್ನು ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಲಾಗಿದೆ. ಹೀಗಾಗಿ ಧಾರ್ಮಿಕ ಅಲ್ಪಸಂಖ್ಯಾತರು ಇನ್ನು ಮುಂದೆ ಮೇಲ್ವರ್ಗದ ಬಡವರಿಗೆ ಮೀಸಲಿಟ್ಟ ʼಆರ್ಥಿಕವಾಗಿ ಹಿಂದುಳಿದ ವರ್ಗʼಗಳ (ಇಡಬ್ಲ್ಯುಎಸ್) ಶೇ.10 ಮೀಸಲಾತಿಯಲ್ಲಿ ಅವಕಾಶಗಳನ್ನು ಪಡೆಯಬೇಕಾಗಿದೆ.
ಸಂತಸ ವ್ಯಕ್ತಪಡಿಸಿದ ವಚನಾನಂದ ಸ್ವಾಮೀಜಿ
ಮೂರು ದಶಕಗಳ ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ಮತ್ತೊಂದು ಸ್ಪಷ್ಟತೆ ದೊರೆತಿದೆ. 2ಡಿ ಪ್ರವರ್ಗಕ್ಕೆ ಶೇ. 7 ರಷ್ಟು ಮೀಸಲಾತಿಯನ್ನು ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದು ಒಂದು ಹಂತವಾದರೆ, ಮೀಸಲಾತಿಯನ್ನು ಪುನರ್ ವರ್ಗೀಕರಿಸಿ ಮೀಸಲಾತಿ ಪ್ರಮಾಣದ ಬಗ್ಗೆ ಅಧಿಕೃತ ಆದೇಶವನ್ನು ಸರ್ಕಾರ ಹೊರಡಿಸಿದೆ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ನೇತೃತ್ವದ ಹೋರಾಟಕ್ಕೆ ಮತ್ತೊಂದು ಯಶಸ್ಸು ದೊರೆತಿರುವುದು ಸಂತಸದ ವಿಷಯ. ಹರಿಹರ ಪೀಠ ಇದನ್ನು ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಹಾಗೆಯೇ, ಕೇಂದ್ರ ಓಬಿಸಿ ಪಟ್ಟಿಯಲ್ಲಿ ಸ್ಥಾನ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಧಾರ್ಮಿಕ
Ram Navami 2023: ಶ್ರೀರಾಮನ ಪರಿಪೂರ್ಣತೆ ನಮ್ಮಲ್ಲಿ ತುಂಬಿಕೊಳ್ಳೋದು ಹೇಗೆ?
Ram Navami 2023: ಭಗವಾನ್ ಶ್ರೀರಾಮ ಎಂದರೆ ನಂಬಿಕೆ, ವಿಶ್ವಾಸ, ಭರವಸೆ ಹಾಗೂ ಪರಿಪೂರ್ಣತೆ. ಅಂತಹ ಪರಿಪೂರ್ಣತೆಯನ್ನು ಸಾಧಿಸಲು ಏನೆಲ್ಲ ಮಾಡಬೇಕು? ಇಲ್ಲಿದೆ ಮಾಹಿತಿ.
ಪ್ರಮುಖ ಸುದ್ದಿ
ವಿಸ್ತಾರ ಸಂಪಾದಕೀಯ: ಮತ ಪ್ರಮಾಣ ಹೆಚ್ಚಿಸುವ ಆಯೋಗದ ಕ್ರಮವನ್ನು ಬೆಂಬಲಿಸೋಣ
ಪ್ರತೀ ಪ್ರಜೆಗೂ ಮತದಾನ ಎಂಬುದು ಮೂಲಭೂತ ಹಕ್ಕು. ಚುನಾವಣೆ ಆಯೋಗದ ಸುಧಾರಣಾವಾದಿ ಕ್ರಮಗಳನ್ನು ಬೆಂಬಲಿಸುವುದು ತಮ್ಮ ಕರ್ತವ್ಯ ಎಂದು ನಾಗರಿಕರು ಪರಿಗಣಿಸಿದರೆ ಮಾತ್ರ ಮತ ಪ್ರಮಾಣ ಹೆಚ್ಚಲು ಸಾಧ್ಯ.
ಕೇಂದ್ರ ಚುನಾವಣೆ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆಯ ದಿನವನ್ನು ಘೋಷಿಸಿದೆ. ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದು, ಮೇ 13ರಂದು ಮತ ಎಣಿಕೆಯಾಗಿ ಫಲಿತಾಂಶ ಕೂಡ ಬರಲಿದೆ. ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವುದರ ಜತೆಗೆ, ಮತದಾನ ಪ್ರಮಾಣವನ್ನೂ ಹೆಚ್ಚಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಆಯೋಗ ಘೋಷಿಸಿದೆ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಿದೆ. ವಿದ್ಯಾವಂತರೇ ಮತದಾನ ಮಾಡುತ್ತಿಲ್ಲ ಎಂಬುದು ನಮ್ಮ ಪ್ರಜಾಪ್ರಭುತ್ವಕ್ಕೆ ಸವಾಲಾಗಿರುವ ಕೊರಗುಗಳಲ್ಲಿ ಒಂದು. ಹೀಗಾಗಿ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಆಯೋಗ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇವುಗಳಿಗೆ ಪೂರಕವಾಗಿ ಎಲ್ಲರೂ ಸ್ಪಂದಿಸಬೇಕಿದೆ.
ಸಾಮಾನ್ಯವಾಗಿ ವಾರಾಂತ್ಯ ಅಥವಾ ವಾರದ ಆರಂಭದಲ್ಲಿ ಮತದಾನ ದಿನ ನಿಗದಿಪಡಿಸಿದರೆ ಒಂದಿಷ್ಟು ಸಂಖ್ಯೆಯ ಮತದಾರರು ಪ್ರವಾಸಕ್ಕೆ ಹೊರಡುವ ಪ್ರವೃತ್ತಿಯನ್ನು ನಾವು ಈ ಹಿಂದಿನ ಚುನಾವಣೆಗಳಲ್ಲಿ ಗಮನಿಸಿದ್ದೇವೆ. ಅದನ್ನು ತಪ್ಪಿಸಲು ಈ ಬಾರಿ ಆಯೋಗವು ವಾರದ ನಡುವೆ ಮತದಾನದ ದಿನ ನಿಗದಿಪಡಿಸಿದ್ದು ಕೂಡ ಯೋಜಿತ ಮತ್ತು ಪರಿಣಾಮಕಾರಿ ನಿರ್ಧಾರ ಎನ್ನಬಹುದಾಗಿದೆ. ಹಾಗೆಯೇ ಎಲ್ಲರೂ ಮತದಾನ ಮಾಡಲು ಅವಕಾಶ ದೊರೆಯಬೇಕು ಎನ್ನುವ ಉದ್ದೇಶದಿಂದ ಮೊದಲ ಬಾರಿಗೆ ಮತದಾನ ಕೇಂದ್ರಕ್ಕೆ ಬರಲು ಆಗದ 80 ವರ್ಷಕ್ಕೂ ಮೇಲ್ಪಟ್ಟವರು, ಗಂಭೀರ ಅನಾರೋಗ್ಯ ಬಾಧಿತರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಜತೆಗೆ ಮತದಾನ ಕೇಂದ್ರದಲ್ಲೂ ಇವರಿಗೆ ವಿಶೇಷ ಸೌಲಭ್ಯ ಮಾಡಲಾಗಿದೆ. ಆದರೆ ಮೊದಲೇ ಈ ಬಗ್ಗೆ ನೋಂದಾಯಿಸಿಕೊಳ್ಳಬೇಕು. ಅಂಥ ಒಂದು ಮತದ ಸಂಗ್ರಹಕ್ಕೆ ಮೂರ್ನಾಲ್ಕು ಮಂದಿಯನ್ನು ನಿಯೋಜಿಸಲಾಗುತ್ತದೆ ಎಂದರೆ, ಒಂದೊಂದು ಮತವನ್ನೂ ಆಯೋಗ ಎಷ್ಟು ಗಂಭಿರವಾಗಿ ಪರಿಗಣಿಸಿದೆ ಎಂಬುದನ್ನು ಗಮನಿಸಬಹುದು. ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿಯಾಗುತ್ತಿರುವ ಇದೊಂದು ಕ್ರಾಂತಿಕಾರಿ ಉಪಕ್ರಮವೇ ಸರಿ. ಅಗತ್ಯವಿದ್ದವರು ಇದರ ಸದ್ಬಳಕೆ ಮಾಡಿಕೊಳ್ಳಬೇಕಿದೆ.
ಯುವ ಮತದಾರರಿಗೆ, ಮೊದಲ ಬಾರಿಗೆ ಮತ ಹಾಕುತ್ತಿರುವವರಿಗೆ ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಕರ್ನಾಟಕದಲ್ಲಿ 5, 21, 73, 573 ಮತದಾರರಿದ್ದು, ಇದರಲ್ಲಿ ಮೊದಲ ಬಾರಿಯ ಮತದಾರರ ಸಂಖ್ಯೆ 9.17 ಲಕ್ಷದಷ್ಟು ಹೆಚ್ಚಳವಾಗಿದೆ. ಇವರನ್ನು ಮತಗಟ್ಟೆಗಳತ್ತ ತರಲು ಉತ್ಸಾಹ ತುಂಬಲು, ಪ್ರಜಾಪ್ರಭುತ್ವದಲ್ಲಿ ಅವರ ಹೊಣೆಯ ಕುರಿತು ಆಡುವ ನಾಲ್ಕು ಪ್ರೋತ್ಸಾಹದ ಮಾತುಗಳೂ ಸಾಕಾಗುತ್ತವೆ. ಇವರನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಜೇನು ಕುರುಬ ಹಾಗೂ ಕೊರಗ ಸಮುದಾಯಗಳನ್ನು ಬುಡಕಟ್ಟು ಸಮುದಾಯಗಳು ಎಂದು ಪರಿಗಣಿಸಲಾಗಿದ್ದು, ಈ ಸಮುದಾಯದವರ ಮತದಾನಕ್ಕೆ 40 ಮತಗಟ್ಟೆ ಮಾಡಲಾಗಿದೆ. ಮತಗಟ್ಟೆಗಳ ಸಂಖ್ಯೆ ಹೆಚ್ಚಿಸಲಾಗಿರುವುದರಿಂದ ಒತ್ತಡ ಕಡಿಮೆಯಾಗಲಿದೆ. ಬೆಂಗಳೂರು ನಗರದಲ್ಲಿ ಯುವಮತದಾರರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಐಐಎಸ್‌ಸಿ, ಐಐಟಿ ಹಾಗೂ ಸ್ಟಾರ್ಟಪ್‌ಗಳ ಸಹಯೋಗದೊಂದಿಗೆ ಎಲೆಕ್ಥಾನ್ ಹಾಗೂ ಇನ್ನಿತರ ಕ್ರಮಗಳನ್ನು ಆಯೋಗ ಕೈಗೊಳ್ಳುತ್ತಿದೆ. ಮತ ಪ್ರಮಾಣ ಹೆಚ್ಚಿಸುವ ಸಲಹೆ ನೀಡುವವರಿಗೆ ಬಹುಮಾನ ಇತ್ಯಾದಿ ಹಲವು ಕ್ರಮಗಳನ್ನು ಕೈಗೊಂಡಿರುವುದು ಕ್ರಾಂತಿಕಾರಕವಾಗಿದೆ.
ಪ್ರತಿ ಮತವೂ ಅಮೂಲ್ಯ ಎಂದು ನಾವು ಹೇಳುತ್ತೇವೆ. ಆದರೆ, ಮುಖ್ಯವಾಗಿ ನಗರ ಪ್ರದೇಶಗಳಲ್ಲೇ ಮತದಾನ ಪ್ರಮಾಣ ಶೇ.60ನ್ನು ದಾಟುವುದಿಲ್ಲ. ನಗರ ಪ್ರದೇಶದ ಮತದಾರರ ಆಲಸ್ಯ ಹಾಗೂ ಹಣದ ಪ್ರಾಬಲ್ಯವು ಕರ್ನಾಟಕದಲ್ಲಿ ಪ್ರಮುಖ ಸವಾಲಾಗಿದೆ ಎಂದು ಆಯೋಗವೇ ಹೇಳಿದೆ. ಸುಶಿಕ್ಷಿತರು ಮತದಾನ ಮಾಡುವುದು ತಮ್ಮ ಕರ್ತವ್ಯ ಎಂದು ಭಾವಿಸಿದಾಗ ಮಾತ್ರ ಇದಕ್ಕೆ ಪರಿಹಾರ. ಪ್ರಜಾಪ್ರಭುತ್ವವೆಂಬುದು ಸುಮ್ಮನೇ ಯಾರೋ ನಮಗೆ ತಟ್ಟೆಯಲ್ಲಿಟ್ಟು ಕೊಟ್ಟ ಉಡುಗೊರೆಯಲ್ಲ. ಪ್ರತಿ ಪ್ರಜೆಯೂ ಪ್ರತಿ ಕಾಲದಲ್ಲೂ ತಮ್ಮ ಪ್ರಜಾಪ್ರಭುತ್ವವನ್ನು ಉತ್ತಮಗೊಳಿಸಿಕೊಳ್ಳಲು ಸದಾ ಶ್ರಮಿಸುತ್ತಿರಬೇಕು. ಸಂವಿಧಾನದ ಪ್ರಕಾರ ಪ್ರತೀ ಪ್ರಜೆಗೂ ಮತದಾನ ಎಂಬುದು ಮೂಲಭೂತ ಹಕ್ಕು. ಮತದಾನದ ಒಂದು ದಿನದಂದು ಮಾತ್ರವೇ ಪ್ರಜೆ ಪ್ರಭುವಾಗಿರುತ್ತಾನೆ. ಅಂದು ಸರಿಯಾಗಿ ತಮ್ಮ ಅಧಿಕಾರ ಚಲಾಯಿಸದೇ ಹೋದರೆ ಮುಂದಿನ ಐದು ವರ್ಷ ತಮಗಿಷ್ಟವಿಲ್ಲದ ವ್ಯಕ್ತಿಗಳ ಗುಲಾಮರಾಗಿರಬೇಕಾಗುತ್ತದೆ. ಚುನಾವಣೆ ಆಯೋಗದ ಸುಧಾರಣಾವಾದಿ ಕ್ರಮಗಳನ್ನು ಬೆಂಬಲಿಸುವುದು ತಮ್ಮ ಕರ್ತವ್ಯ ಎಂದು ನಾಗರಿಕರು ಪರಿಗಣಿಸಬೇಕು. ಆಗ ಮಾತ್ರ ಮತದಾನ ಪ್ರಮಾಣ ಹೆಚ್ಚಲು ಸಾಧ್ಯವಾಗುತ್ತದೆ.
ದೇಶ
ಬಾಲಕಿಯ ಪ್ರಾಣ ಉಳಿಸಲು 7 ಲಕ್ಷ ರೂ. ಜಿಎಸ್‌ಟಿ ಬಿಟ್ಟ ಕೇಂದ್ರ, ಮಾನವೀಯತೆ ಮೆರೆದ ಶಶಿ ತರೂರ್
ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕಿಯ ನೆರವಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಂಸದ ಶಶಿ ತರೂರ್ ಅವರು ಧಾವಿಸಿದ್ದು, ಇದರಿಂದ ಬಾಲಕಿಯು ಚಿಕಿತ್ಸೆ ಪಡೆಯಲು ಸಾಧ್ಯವಾಗಿದೆ. ಮಾನವೀಯ ನೆಲೆಯ ನಡೆಯ ಬಗ್ಗೆ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ನವದೆಹಲಿ/ತಿರುವನಂತಪುರಂ: ಜನರಿಂದ ಆಯ್ಕೆಯಾದ ಜನಪ್ರತಿನಿಧಿಗೆ ಮಾನವೀಯತೆ ಇದ್ದರೆ, ಆಳುವ ಸರ್ಕಾರಕ್ಕೆ ಜನರ ಮೇಲೆ ಕಾಳಜಿ ಇದ್ದರೆ ಏನೆಲ್ಲ ಆಗುತ್ತದೆ ಎಂಬುದಕ್ಕೆ ನಿದರ್ಶನ ಸಿಕ್ಕಿದೆ. ಹೌದು, ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕಿಯೊಬ್ಬಳ ಪ್ರಾಣ ಉಳಿಸಲು ಕೇಂದ್ರ ಸರ್ಕಾರವು 7 ಲಕ್ಷ ರೂಪಾಯಿ ಜಿಎಸ್‌ಟಿಗೆ ವಿನಾಯಿತಿ ನೀಡಿದರೆ, ಬಾಲಕಿಗೆ ಅಗತ್ಯ ನೆರವಿನ ವ್ಯವಸ್ಥೆ ಮಾಡಿಸುವ ಮೂಲಕ ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಮಾನವೀಯತೆ ಮೆರೆದಿದ್ದಾರೆ.
ನಿಹಾರಿಕಾ ಎಂಬ ಬಾಲಕಿಯು ನ್ಯೂರೋಬ್ಲಾಸ್ಟೋಮಾ (Neuroblastoma) ಎಂಬ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಕ್ಯಾನ್ಸರ್ ಈಕೆಗೆ ನಾಲ್ಕನೇ ಸ್ಟೇಜ್‌ನಲ್ಲಿದೆ. ಬಾಲಕಿಯ ಪ್ರಾಣ ಉಳಿಸಲು ಡಿನುಟುಕ್ಸಿಮ್ಯಾಬ್ ಬೆಟಾ (Dinutuximab Beta) ಅಥವಾ ಕರ್ಜಿಬಾ (Qarziba) ಎಂಬ ಇಂಜೆಕ್ಷನ್ ನೀಡಬೇಕು. ಈ ಇಂಜೆಕ್ಷನ್‌ನ ಒಂದು ಬಾಟಲಿಗೆ 10 ಲಕ್ಷ ರೂಪಾಯಿ ಇದ್ದು, ಇದನ್ನು ವಿದೇಶದಿಂದ ತರಿಸಬೇಕು. ಹೀಗೆ, ತರಿಸಿದ ಇಂಜೆಕ್ಷನ್ ಬೆಲೆ ಒಟ್ಟು 63 ಲಕ್ಷ ರೂಪಾಯಿ ಆಗಿದೆ. ಇದಕ್ಕೆ 7 ಲಕ್ಷ ರೂಪಾಯಿ ಜಿಎಸ್‌ಟಿ ಕಟ್ಟಬೇಕಿರುತ್ತದೆ. ಆದರೆ, ನಿಹಾರಿಕಾಳ ಕುಟುಂಬ ಸಂಕಷ್ಟದಲ್ಲಿರುವ ಕಾರಣ ಇಷ್ಟೊಂದು ಮೊತ್ತ ಭರಿಸಲು ಆಗುತ್ತಿರಲಿಲ್ಲ.
ಶಶಿ ತರೂರ್ ಪತ್ರ
ನೆರವಿಗೆ ಧಾವಿಸಿದ ಶಶಿ ತರೂರ್
ನಿಹಾರಿಕಾ ಕುಟುಂಬದ ಸಂಕಷ್ಟ ಅರಿತ ಶಶಿ ತರೂರ್ ಅವರು ನೆರವಿಗೆ ಧಾವಿಸಿದ್ದಾರೆ. ಮಾನವೀಯತೆ ಆಧಾರದ ಮೇಲೆ 7 ಲಕ್ಷ ರೂಪಾಯಿ ಜಿಎಸ್‌ಟಿ ಮನ್ನಾ ಮಾಡಬೇಕು ಎಂಬುದಾಗಿ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆಯುತ್ತಾರೆ. ಆದರೆ, ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಮತ್ತೊಂದೆಡೆ, ಔಷಧವು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು, ತೆರಿಗೆ ಕಟ್ಟದಿದ್ದರೆ ಅದನ್ನು ನೀಡುವುದಿಲ್ಲ ಎಂಬುದಾಗಿ ಕಸ್ಟಮ್ಸ್ ಅಧಿಕಾರಿಗಳು ಹೇಳುತ್ತಾರೆ. ಆದರೂ ಪ್ರಯತ್ನ ಬಿಡದ ಶಶಿ ತರೂರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನೇರವಾಗಿ ಕರೆ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಜಿಎಸ್‌ಟಿ ವಿನಾಯಿತಿ ನೀಡಲು ಒಪ್ಪಿ, ಕೊನೆಗೆ ಮಾರ್ಚ್ 28ರಂದು ಔಷಧಿಯು ನಿಹಾರಿಕಾ ಕುಟುಂಬಸ್ಥರ ಕೈ ಸೇರುತ್ತದೆ.
ಇದನ್ನೂ ಓದಿ: Karwar News: ನಿತ್ರಾಣಗೊಂಡಿದ್ದ ಭಿಕ್ಷುಕನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಾರಿಗೆ ಸಿಬ್ಬಂದಿ
ಸೀತಾರಾಮನ್‌ಗೆ ತರೂರ್ ಧನ್ಯವಾದ
ಇಡೀ ಘಟನೆಯನ್ನು ಶಶಿ ತರೂರ್ ಅವರು ಪತ್ರದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. “ಪುಟ್ಟ ಬಾಲಕಿಗೆ ಈಗ ಇಂಜೆಕ್ಷನ್ ಸಿಗಲಿದೆ. ಆಕೆ ಬದುಕುಳಿಯಲಿದ್ದಾಳೆ. ಕೇಂದ್ರ ಸರ್ಕಾರವು ಏಳು ಲಕ್ಷ ರೂಪಾಯಿ ಆದಾಯವನ್ನು ಬಿಟ್ಟಿದೆ. ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳು. ರಾಜಕೀಯದ ಹೊರತಾಗಿಯೂ ನೀವು ಮಾನವೀಯತೆ ಮೆರೆದಿದ್ದೀರಿ. ಸರ್ಕಾರದ ಮೇಲೆ ನಾನು ಇಟ್ಟಿರುವ ನಂಬಿಕೆಯನ್ನು ಹೆಚ್ಚಿಸಿದ್ದೀರಿ” ಎಂಬುದಾಗಿ ಭಾವುಕರಾಗಿ ಸಚಿವೆಗೆ ಧನ್ಯವಾದ ತಿಳಿಸಿದ್ದಾರೆ. ಶಶಿ ತರೂರ್ ಪೋಸ್ಟಿಗೆ ಸಾವಿರಾರು ಜನ ಪ್ರತಿಕ್ರಿಯಿಸಿದ್ದು, ಸಂಸದ ಹಾಗೂ ನಿರ್ಮಲಾ ಸೀತಾರಾಮನ್ ಅವರಿಗೆ ಮೆಚ್ಚುಗೆ ಸೂಚಿಸಿದ್ದಾರೆ.
-
ಕರ್ನಾಟಕ14 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ15 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ18 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ13 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ9 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್10 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ12 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ16 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?