Site icon Vistara News

DV Sadananda Gowda: ಬಿಜೆಪಿ ರಾಜ್ಯ ನಾಯಕರ ಮೇಲೆ ಸಿಡಿದೆದ್ದ ಸದಾನಂದ ಗೌಡ; ಪಕ್ಷವಿರೋಧಿಗಳಿಗೆ ಮಣೆ ಹಾಕಿದ್ದಕ್ಕೆ ಕಿಡಿ

Lok sabha Election 2024 DV Sadananda Gowda

ಬೆಂಗಳೂರು: ಮಾಜಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ (BJP Leader) ಸದಾನಂದ ಗೌಡ (DV Sadananda Gowda) ಸಿಡಿದೆದ್ದಿದ್ದಾರೆ. ಪಕ್ಷವಿರೋಧಿಗಳ ಮೇಲೆ ಕ್ರಮ ಕೈಗೊಳ್ಳದಿದ್ದುದಕ್ಕೆ ಪಕ್ಷದ ರಾಜ್ಯ ನಾಯಕತ್ವವನ್ನು ಟೀಕಿಸಿದ್ದಾರೆ. ‌ʼಆರ್.ಅಶೋಕ್‌ (R Ashok) ಅವರಿಗೆ ಆಡಳಿತ ಪಕ್ಷದಲ್ಲಿದ್ದು ಗೊತ್ತೇ ಹೊರತು ವಿಪಕ್ಷ ನಾಯಕನಾಗಿ (Opposition Leader) ಅನುಭವವಿಲ್ಲʼ ಎಂದಿದ್ದಾರೆ.

“ನಮ್ಮ ಪಕ್ಷ ಇಷ್ಟು ಇಷ್ಟು ಹಾಳಾಗಲು ಕಾರಣ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳದಿರುವುದು. ಮಾತಾಡುವವರಿಗೆ ಮಣೆ ಹಾಕ್ತಾರೆ. ಹಾಗೆ ಮಾತಾಡುವವರನ್ನು ಹಾಗೆ ಮಾಡಬೇಡ ಅಂತ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವೇ ಅವರನ್ನು ಪಕ್ಷದಿಂದ ದೂರ ಇಡಬೇಕು. ನಾನು ಪಕ್ಷದ ಅಧ್ಯಕ್ಷ ಆಗಿದ್ದಾಗ ಜನಾರ್ದನ ರೆಡ್ಡಿ, ರೇಣುಕಾಚಾರ್ಯ, ಯತ್ನಾಳ್ ಅವರನ್ನ ಸಸ್ಪೆಂಡ್ ಮಾಡಿದ್ದೇನೆ. ಎಷ್ಟೇ ದೊಡ್ಡವರಾಗಿದ್ರೂ ಪಕ್ಷ ವಿರೋಧಿ ಆದವರನ್ನು ಬಿಡುತ್ತಿರಲಿಲ್ಲ” ಎಂದು ಸದಾನಂದ ಗೌಡ ಹೇಳಿದ್ದಾರೆ.

“ನಾನು ಮೊನ್ನೆ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಅವರ ಜೊತೆ ಇದೇ ವಿಚಾರ ಚರ್ಚೆ ಮಾಡಿದ್ದೇನೆ. ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದರಿಂದ ಪಕ್ಷದ ಸಂಘಟನೆಗೆ ಆಕ್ಸಿಲರೇಟರ್ ಕೊಟ್ಟಂತೆ ಆಗ್ತಿತ್ತು. ನಾನು ಅಧ್ಯಕ್ಷ ಆಗಿದ್ದಾಗ ಯಡಿಯೂರಪ್ಪ ಅವರದ್ದು ಒಂದು ಗುಂಪು, ಅನಂತ್ ಕುಮಾರ್ ಅವರದ್ದು ಒಂದು ಗುಂಪು ಇತ್ತು. ನಾನು ಯಾವ ಗುಂಪನ್ನೂ ಸೇರದೆ ಕೆಲಸ ಮಾಡಿದೆ. ಇದರಿಂದಾಗಿ ನನ್ನನ್ನು ದೂರ ಮಾಡಿದರು. ಮೊನ್ನೆ ಕಾಂಗ್ರೆಸ್ ಪಕ್ಷದ ನಾಯಕ ನನ್ನನ್ನು ಅವರ ಪಕ್ಷಕ್ಕೆ ಆಹ್ವಾನಿಸಿದರು. ನಾಲ್ಕು ಶರ್ಟು, ಪ್ಯಾಂಟ್ ತನ್ನಿ ಅಂತ ಅಂದರು. ನಾನು ಮತ್ತೊಬ್ಬ ಜಗದೀಶ್ ಶೆಟ್ಟರ್ ಆಗಲು ಇಷ್ಟ ಇಲ್ಲ ಎಂದೆ” ಎಂದು ಗೌಡ ಹೇಳಿದರು.

“ನನ್ನನ್ನು ಭ್ರಷ್ಟಾಚಾರ ಹೆಸರಲ್ಲಿ ಮುಖ್ಯಮಂತ್ರಿ ಮಾಡಲಾಯಿತು. ಆದರೆ ನಾನು ಭ್ರಷ್ಟಾಚಾರ ರಹಿತ ಆಡಳಿತ ಮಾಡಿದೆ. ಸಕಾಲವನ್ನು ಜಾರಿಗೆ ತಂದು ಕೆಲಸ ಮಾಡಿದೆ. ಜನರಿಗೆ ಸಕಾಲದಲ್ಲಿ ಸೇವೆ ಸಿಗುವ ಕೆಲಸ ಮಾಡಿದೆ. ಆದರೆ ನಂತರ ಬಂದ ಬಿಜೆಪಿಯವರು, ಕಾಂಗ್ರೆಸ್ ಅವರು ಅದನ್ನು ಮಾಡಿದ್ರಾ? ಇವರೇ ಭ್ರಷ್ಟಾಚಾರ ಆಡಳಿತ ಶುರು ಮಾಡಿದರು” ಎಂದು ಅವರು ಕಿಡಿ ಕಾರಿದರು.

ವಿಪಕ್ಷ ನಾಯಕ ಆರ್. ಅಶೋಕ್ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ, “ಸಂಘಟನೆಯಲ್ಲಿ ಬಲಿಷ್ಠತೆ ಇಲ್ಲದಾಗ ಆರೋಪ ಬರುತ್ತದೆ. ಸಂಘಟನೆ ಬಲಿಷ್ಠ ಆಗಬೇಕು. ಆಡಳಿತ ಪಕ್ಷದವರ ಮನಸ್ಸಿಗೂ ಇವರ ಸಂಘಟನೆ ಬಲಿಷ್ಠ ಇಲ್ಲ ಎನಿಸಿರಬೇಕು. ಹಾಗಾಗಿ ಅವರು ಅಶೋಕ್ ಬಗ್ಗೆ ಹೇಳಿರಬಹುದು. ಅಶೋಕ್ ಅವರು ಹಿಂದಿನಿಂದಲೂ ಪ್ರತೀ ಬಾರಿ ಆಡಳಿತ ಪಕ್ಷದಲ್ಲಿ ಇದ್ದರು. ಹಾಗಾಗಿ ಆಡಳಿತದ ಕಡೆ ಅವರ ಮನಸ್ಸಿದೆ. ವಿಪಕ್ಷ ನಾಯಕನಾಗಿ ಇರುವವರು ಅಧ್ಯಯನ ಮಾಡಬೇಕು. ಜನರ ವಿಶ್ವಾಸ ಗಳಿಸಬೇಕು. ನಾನೂ ಪರಿಷತ್ ವಿಪಕ್ಷ ನಾಯಕ‌ನಾಗಿದ್ದೆ. ನನ್ನ ಇಡೀ ಅವಧಿಯಲ್ಲಿ ಸಮರ್ಥ ವಿಪಕ್ಷ ನಾಯಕನಾಗಿದ್ದಾಗ, ಸಿದ್ದರಾಮಯ್ಯ ಅವರೇ ಕ್ಷಮೆ‌ ಕೇಳಿದ್ದರು. ವಿಪಕ್ಷ ನಾಯಕನಾದವನಿಗೆ ತಾಳ್ಮೆ ಇರಬೇಕು” ಎಂದು ಉತ್ತರಿಸಿದರು.

“ಪಕ್ಷ ಸಂಘಟನೆ ತಳಮಟ್ಟದಿಂದ ಆಗಬೇಕು. ಕೇವಲ ಸ್ಥಾನದಲ್ಲಿ ಕೂರಿಸಿದ್ರೆ ಆಗಲ್ಲ. ತಳಮಟ್ಟದಲ್ಲಿ ಕೆಲಸ ಮಾಡುವ ಟೀಮ್ ಕೊರತೆ ಇದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಮೇಲೆ ನಾನು ಆರೋಪ ಮಾಡಲ್ಲ. ಅವರು ಈಗಷ್ಟೇ ಬಂದಿದ್ದಾರೆ, ಬಂದ ತಕ್ಷಣ ಚುನಾವಣೆ ಬಂದಿದೆ. ಕರ್ನಾಟಕದಲ್ಲಿ ಬಿಜೆಪಿ ಕೇಡರ್ ಬೇಸ್ ಪಾರ್ಟಿ. ಕಾರ್ಯಕರ್ತರನ್ನು ಕಳೆದುಕೊಳ್ತಿದ್ದೇವೆ‌. ಇದು ನಮಗೆ ಎಚ್ಚರಿಕೆಯ ಗಂಟೆ. ನಮಲ್ಲಿ ಶಕ್ತಿ ಇದೆ, ಕಮಿಟೆಡ್ ಕಾರ್ಯಕರ್ತರಿದ್ದಾರೆ. ಆದರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಫೇಲ್ಯೂರ್ ಆಗಿದ್ದಾರೆ” ಎಂದು ನುಡಿದರು.

“ಚುನಾವಣೆಯಲ್ಲಿ ನಮ್ಮ ನಿರೀಕ್ಷೆಯ ಫಲಿತಾಂಶ ಸಿಕ್ಕಲಿಲ್ಲ. ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಕಾಂಗ್ರೆಸ್ ಅಭೂತಪೂರ್ವ ಗೆಲುವಿನ ಬಳಿಕ, ಪಕ್ಷದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಮೋದಿ ಇಮೇಜ್ ಮೇಲೆ ಚುನಾವಣೆ ನಡೆದುಬಿಡುತ್ತೆ ಅಂತ ಓವರ್ ಕಾನ್ಪಿಡೆನ್ಸ್‌ನಿಂದಾಗಿ ನಮ್ಮ 9 ಸ್ಥಾನ ಕಳೆದುಕೊಳ್ಳಬೇಕಾಯ್ತು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು” ಎಂದು ಗೌಡ ವಿಶ್ಲೇಷಿಸಿದರು.

“ಕಾಂಗ್ರೆಸ್ ಇದ್ದಾಗಲೂ ಅನೇಕ ಬಾರಿ ಬಿಜೆಪಿ ಗೆದ್ದಿದೆ. ಆದರೆ ಈ ಬಾರಿ ಸಾಕಷ್ಟು ವಿಫಲವಾಗಿದೆ. ಇದಕ್ಕೆ ನನ್ನನ್ನೂ ಸೇರಿದಂತೆ ಎಲ್ಲರ ತಪ್ಪಿದೆ. ಕೋಹ್ಲಿ 76 ರನ್ ಹೊಡೆದ್ರೂ, ಕಪ್ ತಗೊಂಡಿದ್ದು ರೋಹಿತ್ ಶರ್ಮ. ಹಾಗೆ ಎಲ್ಲರ ತಪ್ಪು ಪಕ್ಷಕ್ಕೆ ಹಿನ್ನಡೆಯಾಗಿದೆ. ನಮಗೆ ಹಳೆ ಮೈಸೂರಿನಲ್ಲಿ ಜೆಡಿಎಸ್‌ ಇತ್ತು. ಅವರ ಜೊತೆ ಸೇರಿದ್ದಕ್ಕೆ ಬಿಜೆಪಿ ಗೆದ್ದಿತು ಅಂತ ಜನ ಮಾತಾಡ್ತಿದ್ದಾರೆ. ತುಮಕೂರು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಎಲ್ಲೆಡೆ ಕಷ್ಟ ಆಗಿತ್ತು. ಜೆಡಿಎಸ್‌ ಜೊತೆ ಸೇರಿದ್ರೂ ಕೂಡ ನಮ್ಮ ಗೆಲುವಿನ ಮಾರ್ಜಿನ್ ಕಡಿಮೆ ಆಗಿದೆ. 4ರಂದು ರಾಜ್ಯ ಕಾರ್ಯಕಾರಿಣಿ ಸಭೆ ಇದೆ. ಎಲ್ಲಾ ಮಾಹಿತಿ ಪಡೆದು ಚರ್ಚೆ ಮಾಡಬೇಕಿದೆ” ಎಂದು ಗೌಡ ತಿಳಿಸಿದರು.

ಇದನ್ನೂ ಓದಿ: DV Sadananda Gowda : ಕಾಂಗ್ರೆಸ್‌ ಸೇರಲ್ಲ ಎಂದ ಡಿ.ವಿ ಸದಾನಂದ ಗೌಡ; ಇನ್ನು ಬಿಜೆಪಿ ಶುದ್ಧೀಕರಣ ಮಾಡ್ತಾರಂತೆ!

Exit mobile version