ಹೊಸದಿಲ್ಲಿ: ವಿಶ್ವ ವ್ಯಾಪಾರ ನಿಯಮಾವಳಿಗಳಲ್ಲಿ ತಾರತಮ್ಯವಿದೆ. ಇದಕ್ಕೆ ಸರ್ವಸಮ್ಮತ ಪರಿಹಾರ ಕಂಡಕೊಳ್ಳಲು ವಿಶ್ವಸಂಸ್ಥೆ ವಿಫಲವಾಗಿದ್ದು, ವಿಶ್ವಸಂಸ್ಥೆಯಲ್ಲಿ (UN) ಸುಧಾರಣೆ ಅಗತ್ಯವಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಪ್ರತಿಪಾದಿಸಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆದ ರೈಸಿನಾ ಮಾತುಕತೆ- 2024 (Raisian Dialogue 2024) ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ವ್ಯಾಪಾರ ನಿಯಮಗಳಲ್ಲಿ ತಾರತಮ್ಯದಂಥ ಸಮಸ್ಯೆಗಳಿಗೆ ಬಹುಪಕ್ಷೀಯ, ಸರ್ವಸಮ್ಮತ ಪರಿಹಾರಗಳನ್ನು ಕಂಡುಕೊಳ್ಳಲು ವಿಶ್ವಸಂಸ್ಥೆ ವಿಫಲವಾಗಿದೆ. ವಿಶ್ವಸಂಸ್ಥೆಯನ್ನು ರೂಪಿಸಿದಾಗ ಅದು ಕೇವಲ 50 ಸದಸ್ಯರನ್ನು ಹೊಂದಿತ್ತು. ಇಂದು ಸಂಸ್ಥೆ ಅದರ ನಾಲ್ಕು ಪಟ್ಟು ಸದಸ್ಯರನ್ನು ಹೊಂದಿದೆ. ಮೂಲಕ್ಕಿಂತ ನಾಲ್ಕು ಪಟ್ಟು ಸದಸ್ಯರಿದ್ದಾಗ ನಾವು ಅಂದಿನದೇ ರೀತಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದು ಸಾಮಾನ್ಯ ಜ್ಞಾನ. ನೀವು ಕಳೆದ ಐದು ವರ್ಷಗಳನ್ನು ನೋಡಿದರೆ, ದೊಡ್ಡ ಸಮಸ್ಯೆಗಳಿಗೆ ನಾವು ಬಹುಪಕ್ಷೀಯ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಫಲಿತಾಂಶಗಳ ಕೊರತೆಯಿಂದ ಸುಧಾರಣೆಯ ಅಗತ್ಯ ಎದ್ದು ಕಾಣುತ್ತಿದೆ” ಎಂದು ಜೈಶಂಕರ್ ಹೇಳಿದರು.
“ಹಲವು ಸಂದರ್ಭಗಳಲ್ಲಿ ವ್ಯಾಪಾರ ನಿಯಮಗಳಲ್ಲಿ ತಾರತಮ್ಯದ ಆಟವಾಡಲಾಗಿದೆ. ನಾವು ಜಾಗತೀಕರಣದ ಬಗ್ಗೆ ಮಾತನಾಡುತ್ತೇವೆ. ವಾಸ್ತವವೆಂದರೆ ಕೆಲವು ದೇಶಗಳು ಜಾಗತೀಕರಣವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಕು ವಿಶ್ವ ವ್ಯಾಪಾರ ನಿಯಮಗಳನ್ನು ಬಳಸಿಕೊಂಡಿವೆ” ಎಂದು ಜೈಶಂಕರ್ ಹೇಳಿದರು.
ವಿವಿಧ ಸಂಕೀರ್ಣ ಭೌಗೋಳಿಕ ರಾಜಕೀಯ ಸವಾಲುಗಳು, ಅಮೆರಿಕ- ಇಸ್ರೇಲ್ ಸ್ನೇಹ, ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಭಾರತ- ರಷ್ಯಾ ನಡುವಿನ ಸಂಬಂಧ ಇತ್ಯಾದಿಗಳ ಕುರಿತ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು: “ಅನೇಕ ಸಂದರ್ಭಗಳಲ್ಲಿ ನಾವು ಮಧ್ಯಮ ಮಾರ್ಗವನ್ನು ಕಂಡುಕೊಳ್ಳಬೇಕಿರುತ್ತದೆ. ಹಳೆಯ ಸಮಸ್ಯೆಗಳ ಜೊತೆಗೆ ಹೊಸ ಸಮಸ್ಯೆಗಳೂ ಇವೆ. ಇಂದಿನ ದೊಡ್ಡ ಚರ್ಚೆಗಳು, ಸಂಪರ್ಕ, ಸಾಲ, ವ್ಯಾಪಾರ ಇತ್ಯಾದಿಗಳೆಲ್ಲವೂ
ಇಂದು ಪಶ್ಚಿಮದ ಹತೋಟಿಯಲ್ಲಿದೆ. ಎಲ್ಲವೂ ಪಶ್ಚಿಮದಿಂದ ಬರುವ ಅಗತ್ಯವಿಲ್ಲ. ಆದರೆ ಬಲಿಷ್ಠವಾಗಿರುವ ಪಾಶ್ಚಾತ್ಯ ಶಕ್ತಿಗಳೇ ಇಂದಿನ ಈ ಸ್ಥಿತಿಗೆ ಕಾರಣ” ಎಂದು ಜೈಶಂಕರ್ ಹೇಳಿದರು.
ಇದೇ ವೇಳೆ ಅವರು ವಿಶ್ವಸಂಸ್ಥೆ ಭದ್ರತಾ ಸಮಿತಿ ಸದಸ್ಯತ್ವಕ್ಕೆ ಭಾರತಕ್ಕೆ ಅಡ್ಡಗಾಲು ಹಾಕಿದ ಚೀನಾಕ್ಕೆ ಮುಸುಕಿನ ಗುದ್ದು ನೀಡಿದರು. “ನೀವು ವಿಶ್ವಸಂಸ್ಥೆ ಭದ್ರತಾ ಸಮಿತಿ ಸುಧಾರಣೆಯನ್ನು ತೆಗೆದುಕೊಂಡರೆ, ನಮಗೆ ದೊಡ್ಡ ವಿರೋಧಿಯಾಗಿರುವುದು ಪಾಶ್ಚಿಮಾತ್ಯ ದೇಶ ಅಲ್ಲ. ಆದ್ದರಿಂದ ಸಮಸ್ಯೆಯ ಸಂಪೂರ್ಣ ಅರಿವನ್ನು ಸರಿಯಾಗಿ ಪಡೆಯೋಣ. ಬದಲಾವಣೆಯನ್ನು ಬಯಸುವ ದೇಶಗಳು ಅವರವರಿಗೆ ಬೇಕಾದ ದೇಶಗಳ ಗುಂಪುಗಳನ್ನು ರಚಿಸಿಕೊಂಡು ವಿವಿಧ ಸಂಯೋಜನೆಗಳನ್ನು ರೂಪಿಸಿವೆ” ಎಂದು ಜೈಶಂಕರ್ ಹೇಳಿದರು.
ಕಳೆದ ವಾರ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ರಾಯಭಾರಿಯಾಗಿರುವ ರುಚಿರಾ ಕಾಂಬೋಜ್ ಅವರು, ಎಲ್ಲಾ ಐದು ಕ್ಲಸ್ಟರ್‌ಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ಅಗತ್ಯವನ್ನು ಎತ್ತಿ ತೋರಿಸಿದ್ದರು.
ರೈಸಿನಾ ಮಾತುಕತೆಯಲ್ಲಿ ಹಲವು ಜಾಗತಿಕ ವಿಚಾರಗಳು ಚರ್ಚೆಗೊಳಗಾಗಿವೆ. ಈ ಸಂವಾದದಲ್ಲಿ ನೆದರ್ಲ್ಯಾಂಡ್ಸ್ ವಿದೇಶಾಂಗ ವ್ಯವಹಾರಗಳ ಮಂತ್ರಿ ಹಾಂಕೆ ಬ್ರೂಯಿನ್ಸ್ ಸ್ಲಾಟ್, ತಾಂಜಾನಿಯಾದ ವಿದೇಶಾಂಗ ವ್ಯವಹಾರಗಳ ಮತ್ತು ಪೂರ್ವ ಆಫ್ರಿಕಾ ವ್ಯವಹಾರಗಳ ಸಚಿವ ಜನುವರಿ ಯೂಸುಫ್ ಮಕಾಂಬಾ, ಬೊಲಿವಿಯಾ ಮಾಜಿ ಅಧ್ಯಕ್ಷ ಜಾರ್ಜ್ ಕ್ವಿರೋಗಾ, ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಅನ್ವರ್ ಬಿನ್ ಮೊಹಮ್ಮದ್ ಗರ್ಗಾಶ್ ಭಾಗವಹಿಸಿದ್ದರು.
ಇದನ್ನೂ ಓದಿ: India Canada Row: ತನಿಖೆ ಓಕೆ, ಕೆನಡಾ ಮೊದಲು ಸಾಕ್ಷ್ಯ ಕೊಡಲಿ; ಜೈಶಂಕರ್ ತಿರುಗೇಟು