ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ (Valmiki Development Corporation) ಬಹುಕೋಟಿ ಹಗರಣಕ್ಕೆ (Valmiki Corporation Scam) ಸಂಬಂಧಿಸಿ ನಿನ್ನೆ ಆರಂಭವಾಗಿದ್ದ ಜಾರಿ ನಿರ್ದೇಶನಾಲಯ (Enforcement directorate) ಅಧಿಕಾರಿಗಳ ಮೆಗಾ ರೇಡ್ (ED Raid) ಇಂದು ಕೂಡ ಮುಂದುವರಿದಿದೆ. ಮಾಜಿ ಸಚಿವ ಬಿ. ನಾಗೇಂದ್ರ (B Nagendra) ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ (Basavanagaowda Daaal) ಮನೆಗಳಲ್ಲಿ ನಿನ್ನೆ ಹಗಲು ಆರಂಭವಾದ ಇಡಿ ಪರಿಶೀಲನೆ ನಿನ್ನೆ ರಾತ್ರಿಯೂ ಮುಂದುವರಿದಿದ್ದಲ್ಲದೆ, ಇಂದು ಮುಂಜಾನೆಯಿಂದ ಮತ್ತೆ ಮುಂದುವರಿದಿದೆ.
ಸಚಿವ ನಾಗೇಂದ್ರ ನಿವಾಸದಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳಿಂದ ಇಡಿ ಪರಿಶೀಲನೆ ನಡೆಯುತ್ತಿದೆ. ಶಾಸಕ ದದ್ದಲ್ ಮನೆ, ನಿವಾಸ ಸೇರಿ ಉಳಿದ ಕಡೆಯೂ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ಒಟ್ಟು ಹದಿನೆಂಟು ಕಡೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ರಾತ್ರಿ ಹನ್ನೆರಡು ಗಂಟೆಗೆ ಅಧಿಕಾರಿಗಳು ದಾಳಿಗೆ ವಿರಾಮ ನೀಡಿದ್ದರು. ಆದರೆ ದಾಳಿ ಮಾಡಿದ್ದ ಸ್ಥಳದಲ್ಲೆ ಉಳಿದುಕೊಂಡಿದ್ದರು.
ಒಂದು ತಂಡ ನಾಗೇಂದ್ರ ನಿವಾಸದಲ್ಲಿ ಹಾಗೂ ಇನ್ನೊಂದು ತಂಡ ದದ್ದಲ್ ನಿವಾಸದಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ 6:30-7 ಗಂಟೆ ಬಳಿಕ ಮತ್ತೆ ಪರಿಶೀಲನೆ ಆರಂಭಿಸಿದ್ದಾರೆ. ಇಂದು ಸಹ ಪೂರ್ತಿ ದಿನ ವಿಚಾರಣೆ ನಡೆಯಲಿದೆ ಎಂದು ಊಹಿಸಲಾಗಿದೆ. ದಾಳಿ ಮಾಡಿರುವ ಎಲ್ಲಾ ಕಡೆ ಸಮಗ್ರ ತಪಾಸಣೆ ಮುಗಿಯುವವರೆಗೂ ಅಧಿಕಾರಿಗಳು ಸ್ಥಳ ಬಿಟ್ಟು ಕದಲುವುದಿಲ್ಲ.
ನಿನ್ನೆ ಒಂದೇ ಕಾಲಕ್ಕೆ ಹದಿನೆಂಟಕ್ಕೂ ಹೆಚ್ಚು ಸ್ಥಳದಲ್ಲಿ ತಪಾಸಣೆ ನಡೆಸಲಾಗಿತ್ತು. ಎಲ್ಲಾ ದಾಳಿ ಸ್ಥಳಗಳಲ್ಲಿ ಏನೆಲ್ಲಾ ದೊರೆತಿದೆ ಎಂದು ಪರಿಶೀಲನೆ ಮಾಡಿ, ನಂತರ ಇಂಟರ್ ಲಿಂಕ್ ಹೊಂದಿರುವ ಸ್ಥಳದಲ್ಲಿ ಮತ್ತೆ ದಾಖಲೆಗಳ ಪರಿಶೀಲನೆ ನಡೆಯುವುದಿದೆ.
ನಿನ್ನೆ ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್‌ನನ್ನು ಇಡಿ ವಶಕ್ಕೆ ಪಡೆದು ತನಿಖೆ ನಡೆಸಿತ್ತು. ಇಂದು ಅಗತ್ಯ ಬಿದ್ದಲ್ಲಿ ಶಾಸಕ ದದ್ದಲ್‌ರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಯಲಹಂಕ ಬಳಿ ಇರುವ ದದ್ದಲ್ ನಿವಾಸದಲ್ಲಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ಇನ್ನು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಎದುರಿಸುತ್ತಿರುವ ಮಾಜಿ ಸಚಿವ ನಾಗೇಂದ್ರ ಅವರ ಬಂಧನ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಿ. ನಾಗೇಂದ್ರ ಹಾಗೂ ಬಸವನಗೌಡ ದದ್ದಲ್ ನಿವಾಸಗಳ ಜತೆಗೆ ಮೂವರು ಯೂನಿಯನ್ ಬ್ಯಾಂಕ್ ಸಿಬ್ಬಂದಿ ಮನೆಯ ಮೇಲೂ ಇಡಿ ದಾಳಿ ನಡೆಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರವಾದ್ದರಿಂದ ವಸಂತನಗರದಲ್ಲಿರುವ ವಾಲ್ಮೀಕಿ ನಿಗಮದ ಕಚೇರಿಗೂ ಇಡಿ ರೇಡ್ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ.
ಆರೋಪಿ ಸತ್ಯನಾರಾಯಣ್‌ನಿಂದ ವಾಲ್ಮೀಕಿ ನಿಗಮದ ಎಂ.ಡಿ. ಪದ್ಮನಾಭ್ ಹಣ ತಂದಿದ್ದರು ಎನ್ನಲಾಗಿದೆ. ಆ ಹಣದಲ್ಲಿ ನಾಗೇಂದ್ರ ಪಿಎ ಹರೀಶ್ 25 ಲಕ್ಷ ಹಣ ಪಡೆದಿದ್ದ. ದದ್ದಲ್ ಪಿಎ ಪಂಪಣ್ಣ ಕೂಡ 55 ಲಕ್ಷ ಹಣ ಪಡೆದಿದ್ದ. ಈ ಬಗ್ಗೆ ಪರಿಶೀಲನೆ ವೇಳೆ ಹರೀಶ್ ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಆತನನ್ನು ಇಡಿ ವಶಕ್ಕೆ ಪಡೆದಿದೆ.
ಪ್ರಕರಣದಲ್ಲಿ ಸಚಿವ ನಾಗೇಂದ್ರ ಪರ 50 ರಿಂದ 60 ಕೋಟಿ ವ್ಯವಹಾರ ನಡೆದಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ ಹರೀಶ್‌ನ ವಶಕ್ಕೆ ಪಡೆದಿದ್ದು, ಹರೀಶ್ ಹೇಳಿಕೆ ಆಧರಿಸಿ ಮಾಜಿ ಸಚಿವ ನಾಗೇಂದ್ರ ಬಂಧನ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ | ED Raid: ಇಡಿ- ಸಿಬಿಐ ಮೆಗಾ ದಾಳಿ; 80 ಅಧಿಕಾರಿಗಳಿಂದ ರೇಡ್, ಬ್ಯಾಂಕ್ ಸಿಬ್ಬಂದಿ ಮನೆ ಸೀಜ್! ಬೆಳಗ್ಗೆಯಿಂದ ಏನೇನಾಯ್ತು?