Site icon Vistara News

ಸಂಪಾದಕೀಯ| ಒಗ್ಗಟ್ಟಿನಿಂದ ವೈರಸ್ ಎದುರಿಸೋಣ, ಬೇಡ ಕೊರೊನಾ ಪಾಲಿಟಿಕ್ಸ್

coronavirus

ಚೀನಾ ಮುಂತಾದ ಕೆಲವು ದೇಶಗಳಲ್ಲಿ ಹರಡುತ್ತಿರುವ ಕೋವಿಡ್‌ ವೈರಸ್‌ನ ಹೊಸ ಅಲೆಯನ್ನು ಎದುರಿಸಲು ಆಯಾ ಸರ್ಕಾರಗಳು ಅಲರ್ಟ್‌ ಆಗುತ್ತಿವೆ. ಈಗಾಗಲೇ ಆರೋಗ್ಯ ಸುರಕ್ಷತೆಗಾಗಿ ಸಾಬೀತಾಗಿರುವ ಹಲವು ಉಪಕ್ರಮಗಳನ್ನು ಜಾರಿ ಮಾಡುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧಾರಣೆ ಅವುಗಳಲ್ಲಿ ಪ್ರಮುಖವಾದುದು. ಬಹುಸಂಖ್ಯೆಯಲ್ಲಿ ಜನ ಒಂದೆಡೆ ಸೇರದಿರುವುದು, ಹಾಗೆ ಸೇರುವ ಅಗತ್ಯ ಬಂದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಎರಡನೆಯದು. ಕೈಗಳ ಸ್ವಚ್ಛತೆ, ಆಗಾಗ ಕೈ ತೊಳೆದುಕೊಳ್ಳುವುದು ಕೂಡ ಮುಖ್ಯ. ಆದರೆ ಇನ್ನು ಕೆಲವೇ ತಿಂಗಳಲ್ಲಿ ಹಲವು ವಿಧಾನಸಭೆ ಚುನಾವಣೆಗಳು, ಮುಂದಿನ ವರ್ಷ ಲೋಕಸಭೆ ಚುನಾವಣೆ ಬರುತ್ತಿದೆ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳೂ ಚುರುಕಾಗಿ ರ್ಯಾಲಿಗಳನ್ನು, ಯಾತ್ರೆಗಳನ್ನು, ಸಾರ್ವಜನಿಕ ಸಭೆ ಸಮಾರಂಭಗಳನ್ನು ಏರ್ಪಡಿಸಿ ಜನರನ್ನು ತಮ್ಮತ್ತ ಸೆಳೆಯುತ್ತಿವೆ. ಇಂಥ ಹೊತ್ತಿನಲ್ಲಿ ಜನ ಸೇರದೇ, ಸಾರ್ವಜನಿಕ ಅಂತರ ಕಾಪಾಡಿಕೊಂಡು ಇಂಥ ಕಾರ್ಯಕ್ರಮಗಳನ್ನು ನಡೆಸುವುದಾದರೂ ಹೇಗೆ ಸಾಧ್ಯ? ಕೇಂದ್ರ ಸರ್ಕಾರ ನೀಡಿರುವ ಈ ಸೂಚನೆಯೀಗ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ.

ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕೋವಿಡ್ ನಿಯಮಾವಳಿ ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಬೇಕು, ಪ್ರೊಟೊಕಾಲ್‌ ಅನುಸರಿಸುತ್ತಿಲ್ಲವಾದರೆ ರಾಷ್ಟ್ರೀಯ ಹಿತಾಸಕ್ತಿಯ ಕಾರಣದಿಂದ ಯಾತ್ರೆಯನ್ನು ನಿಲ್ಲಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವೀಯ ರಾಹುಲ್‌ ಗಾಂಧಿಯವರಿಗೆ ಪತ್ರ ಬರೆದಿದ್ದಾರೆ. ಇದು ಯಾತ್ರೆ ನಿಲ್ಲಿಸಲು ಕೇಂದ್ರ ಸರ್ಕಾರ ಹುಡುಕುತ್ತಿರುವ ನೆಪ ಎಂದು ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಕೊರೊನಾ ನೆಪದಲ್ಲಿ ಕರ್ನಾಟಕದಲ್ಲಿ ಅವಧಿಪೂರ್ವ ಚುನಾವಣೆ ನಡೆಸಲು ಬಿಜೆಪಿ ಹವಣಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಆಪಾದಿಸಿದ್ದಾರೆ. ಜೆಡಿಎಸ್‌ ಮುಖಂಡ ಎಚ್.ಡಿ ಕುಮಾರಸ್ವಾಮಿ ಕೂಡ ಇದೇ ರೀತಿಯ ಆರೋಪ ಮಾಡಿದ್ದು, ಪಕ್ಷದಿಂದ ನಡೆಯುತ್ತಿರುವ ಪಂಚರತ್ನ ಯಾತ್ರೆ ನಿಲ್ಲಿಸುವ ಹುನ್ನಾರವಿದು ಎಂದಿದ್ದಾರೆ. ಪ್ರತಿಪಕ್ಷಗಳ ಈ ಮಾತುಗಳು ಬರಿಯ ಆರೋಪವೇ ಅಥವಾ ಇದರಲ್ಲಿ ಹುರುಳಿದೆಯೇ ಎಂಬುದನ್ನು ನೋಡಬೇಕು.

ಇದನ್ನೂ ಓದಿ | Coronavirus | ಕೊರೊನಾ ಭೀತಿ ಹಿನ್ನೆಲೆ ಮೋದಿ ಉನ್ನತ ಮಟ್ಟದ ಸಭೆ, ಕಠಿಣ ನಿರ್ಬಂಧ ಚರ್ಚೆಯಾಯಿತೇ?

2021ರಲ್ಲಿ ಪಂಚರಾಜ್ಯ (ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ) ವಿಧಾನಸಭೆ ಚುನಾವಣೆಗಳು ನಡೆದವು. ಆ ಸಂದರ್ಭದಲ್ಲೂ ಕೋವಿಡ್‌ ಪ್ರೋಟೋಕಾಲ್‌ ಜಾರಿಯಲ್ಲಿತ್ತು. ಕೋವಿಡ್‌ ಹರಡುವ ಆತಂಕ ದೂರಮಾಡಲು ಚುನಾವಣಾ ಆಯೋಗ ಬಹು ಹಂತಗಳಲ್ಲಿ, ಬಹಳಷ್ಟು ಎಚ್ಚರಿಕೆಯಿಂದ ಮತದಾನ ಆಯೋಜಿಸಿತು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರ್ಯಾಲಿಗಳು ಪಶ್ಚಿಮ ಬಂಗಾಳದಲ್ಲಿ ಬಹು ಸಂಖ್ಯೆಯಲ್ಲಿ, ಬೃಹತ್‌ ಜನಸ್ತೋಮಗಳನ್ನು ಸೇರಿಸಿ ನಡೆದವು. ಮೋದಿಯವರ ರ್ಯಾಲಿಗೆ ಮುಕ್ತ ಪರವಾನಗಿ ನೀಡಲಾಗುತ್ತದೆ, ಪ್ರತಿಪಕ್ಷಗಳ ಪ್ರಚಾರಕ್ಕೆ ಮಾತ್ರ ಕಡಿವಾಣ ಹಾಕಲಾಗುತ್ತದೆ ಎಂಬ ಆರೋಪ ಮೊದಲಿನಿಂದಲೂ ಇದೆ. ಕರ್ನಾಟಕಲ್ಲಿ ಇದೇ ಸಂದರ್ಭದಲ್ಲಿ ನಡೆದ ಬೈಎಲೆಕ್ಷನ್‌ಗಳಲ್ಲಿ ಕೋವಿಡ್‌ ಪ್ರೊಟೋಕಾಲ್‌ ಉಲ್ಲಂಘಿಸಿ ಎಲ್ಲ ಪಕ್ಷಗಳೂ ಜನ ಸೇರಿಸಿದವು. ಆಡಳಿತ ಯಂತ್ರಗಳು ಯಾವಾಗಲೂ ನಿಯಮಾವಳಿಗಳನ್ನು ತಮ್ಮ ಪರವಾಗಿ ಬಳಸಿಕೊಳ್ಳಲು ಹವಣಿಸುತ್ತವೆ.

ಹೀಗಾಗಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಪಾರದರ್ಶಕವಾಗಿ ವರ್ತಿಸಬೇಕು. ಅಪಾಯಕಾರಿ ಕೊರೊನಾ ಮತ್ತೆ ಬಂದಿದೆ; ಇಂಥ ಸನ್ನಿವೇಶದಲ್ಲಿ ʼಕೊರೊನಾ ಪಾಲಿಟಿಕ್ಸ್ʼ ಸಲ್ಲದು. ಸಹಜ ಬದುಕು ಬೇಕು, ಆದರೆ ಕೋವಿಡ್‌ ಕುರಿತ ಎಚ್ಚರವೂ ಬೇಕು. ರೋಗ ಹರಡುವುದನ್ನು ತಡೆಯಲು ಅನಿವಾರ್ಯವಾದರೆ ಮಾಸ್ಕ್, ಸಾಮಾಜಿಕ ಅಂತರ ಇತ್ಯಾದಿ ಸೀಮಿತ ಮತ್ತು ಸರಳ ನಿರ್ಬಂಧ ವಿಧಿಸುವುದು ತಪ್ಪಲ್ಲ. ಆದರೆ ಆಡಳಿತ ಪಕ್ಷ ಇದನ್ನು ಪ್ರತಿಪಕ್ಷಗಳನ್ನು ಹಣಿಯುವ ಅಸ್ತ್ರವನ್ನಾಗಿ ಮಾಡಿಕೊಳ್ಳಬಾರದು. ನಿಯಮಾವಳಿ ವಿಧಿಸುವುದೇ ಆದರೆ ಅದು ಆಡಳಿತ ಪಕ್ಷಕ್ಕೊಂದು, ಪ್ರತಿಪಕ್ಷಗಳಿಗೊಂದು ಎಂಬಂತೆ ಇರಬಾರದು. ಕಾಂಗ್ರೆಸ್‌ ಯಾತ್ರೆ ನಡೆಸಬಾರದು ಎನ್ನುವ ಬಿಜೆಪಿ ಅದಕ್ಕೆ ಬದ್ಧವಾಗಿ ತಾನೂ ನಡೆದುಕೊಳ್ಳಬೇಕು. ಪ್ರತಿಪಕ್ಷಗಳು ಕೂಡ ಕೊರೊನಾ ವಿಚಾರದಲ್ಲಿ ಆರೋಪಕ್ಕಾಗಿಯೇ ಆರೋಪ ಮಾಡುವುದನ್ನು ಬಿಟ್ಟು ಸಕಾರಾತ್ಮಕ ಸಲಹೆ ಸೂಚನೆ ನೀಡುವಂತಾಗಬೇಕು. ಆಡಳಿತ ಪಕ್ಷದ ನೈಜ ಲೋಪ ದೋಷಗಳನ್ನು ಎತ್ತಿ ತೋರಿಸಬೇಕು. ಕೊರೊನಾ ಎದುರಿಸುವ ವಿಚಾರದಲ್ಲಿ ಆಡಳಿತ ಪ್ರತಿಪಕ್ಷಗಳ ನಡುವೆ ಸಹಮತ ಇರಬೇಕು. ಹೀಗಾದರೆ ಮಾತ್ರ ಕೋವಿಡ್ ಅನ್ನು ಪರಿಣಾಮವಾಗಿ ಎದುರಿಸಲು ಸಾಧ್ಯ.

ಇದನ್ನೂ ಓದಿ | coronavirus | ಕ್ರೋನಾಲಜಿ ತಿಳಿದುಕೊಳ್ಳಿ! ಯಾತ್ರೆ ತಡೆಯಲು ಕೋವಿಡ್ ಬಳಕೆ: ಕಾಂಗ್ರೆಸ್ ಆರೋಪ

Exit mobile version