ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಮತ ಎಣಿಕೆ (Election Results 2024) ಪ್ರಾರಂಭವಾಗುತ್ತಿದ್ದಂತೆ, ಬಿಹಾರದ (Bihar election results 2024) ರಾಜಕೀಯ ವಾತಾವರಣದ ಕಾವು ಜ್ವರದಂತೆ ಏರಿತು. ಒಟ್ಟು 40 ಕ್ಷೇತ್ರಗಳಲ್ಲಿ 28 ಸ್ಥಾನಗಳಲ್ಲಿ ಬಿಜೆಪಿ- ಜೆಡಿಯು ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್-ಆರ್‌ಜೆಡಿ ರೇಸ್‌ನಲ್ಲಿ ಹಿಂದುಳಿದಿವೆ.
ಬಿಹಾರ ಲೋಕಸಭಾ ಚುನಾವಣೆಯ ಮತದಾನ ಏಳು ಹಂತಗಳಲ್ಲಿ ನಡೆದಿತ್ತು. ಸಂಸತ್ತಿನ ಕೆಳಮನೆಯಾದ ಲೋಕಸಭೆಗೆ ಬಿಹಾರವು 40 ಸದಸ್ಯರನ್ನು ಕೊಡುಗೆಯಾಗಿ ನೀಡಿರುವುದರಿಂದ ಈ ಚುನಾವಣೆಯು ವಿಶೇಷವಾಗಿ ನಿರ್ಣಾಯಕವಾಗಿದೆ. ಸಂಸತ್ತಿನ 543 ಸ್ಥಾನಗಳಲ್ಲಿ ಯಾವ ಪಕ್ಷ ಅಥವಾ ಒಕ್ಕೂಟ ಬಹುಮತದ 272 ಸೀಟುಗಳನ್ನು ಸಾಧಿಸುತ್ತದೆ ಎಂಬುದನ್ನು ನಿರ್ಧರಿಸುವಲ್ಲಿ ಬಿಹಾರದ ಸ್ಥಾನಗಳಿಕೆ ನಿರ್ಣಾಯಕ ಪಾತ್ರವನ್ನು ವಹಿಸಲಿದೆ.
ಪ್ರಮುಖ ಅಭ್ಯರ್ಥಿಗಳು
ಬಿಹಾರ ರಾಜ್ಯ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಒಳಗೊಂಡಿದೆ. ಇಂಡಿಯಾ ಮತ್ತು ಎನ್‌ಡಿಎ ಮೈತ್ರಿಕೂಟಗಳ ಇತರ ಪ್ರಭಾವಿ ಅಭ್ಯರ್ಥಿಗಳ ಜೊತೆಗೆ ನಿತೀಶ್ ಕುಮಾರ್ (ಜೆಡಿಯು), ಚಿರಾಗ್ ಪಾಸ್ವಾನ್ (ಜನಶಕ್ತಿ ಪಕ್ಷ), ತೇಜಸ್ವಿ ಯಾದವ್ (ಆರ್‌ಜೆಡಿ), ಸಾಮ್ರಾಟ್ ಚೌಧರಿ (ಬಿಜೆಪಿ) ಪ್ರಾಬಲ್ಯಕ್ಕಾಗಿ ಸ್ಪರ್ಧಿಸುತ್ತಿದ್ದಾರೆ. ಸರನ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ ಮತ್ತು ರೋಹಿಣಿ ಆಚಾರ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕಳೆದ ಬಾರಿ ಫಲಿತಾಂಶ ಹೇಗಿತ್ತು?
2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಎನ್‌ಡಿಎ 40 ಸ್ಥಾನಗಳಲ್ಲಿ 39 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ 17 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಜೆಡಿಯು 16 ಸ್ಥಾನಗಳನ್ನು ಗಳಿಸಿತು ಮತ್ತು ಎಲ್‌ಜೆಪಿ 6 ಸ್ಥಾನಗಳನ್ನು ಪಡೆದುಕೊಂಡಿತು. ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಒಂದನ್ನು ಗೆಲ್ಲಲು ವಿಫಲವಾಗಿದೆ.
2014ರ ಸಾರ್ವತ್ರಿಕ ಚುನಾವಣೆಗಳು ವಿಭಿನ್ನ ಸನ್ನಿವೇಶದಲ್ಲಿದ್ದವು. ಆ ಸಮಯದಲ್ಲಿ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿರದಿದ್ದ ಬಿಜೆಪಿ ಬಿಹಾರದಲ್ಲಿ 23 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅದರ ಮಿತ್ರ ಪಕ್ಷ ಎಲ್‌ಜೆಪಿ 6 ಸ್ಥಾನಗಳನ್ನು ಗೆದ್ದಿತ್ತು. ಏಕಾಂಗಿಯಾಗಿ ಸ್ಪರ್ಧಿಸಿದ್ದ ಜೆಡಿಯು ಕೇವಲ 2 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಮಹಾಘಟಬಂಧನ ಭಾಗವಾದ ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದಿದೆ. ಇದು 2019ಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿತ್ತು.
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾದ ಎಕ್ಸಿಟ್ ಪೋಲ್ ಫಲಿತಾಂಶಗಳ ಪ್ರಕಾರ, ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಅಭ್ಯರ್ಥಿ ರವಿಶಂಕರ್ ಪ್ರಸಾದ್ ಅವರು ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆಯಿದೆ.
ಇದನ್ನೂ ಓದಿ: Election results 2024: ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಭರ್ಜರಿ ಮುನ್ನಡೆ