Site icon Vistara News

Election Results 2024: ರಾಮ ಮಂದಿರ ಭದ್ರ, ಯುಪಿ ಅಭದ್ರ: ಉತ್ತರ ಪ್ರದೇಶದಲ್ಲಿ ಬಿಜೆಪಿ 64ರಿಂದ 36ಕ್ಕೆ ಕುಸಿಯಲು ಕಾರಣ ಇಲ್ಲಿದೆ

election results 2024 Modi and Yogi

ಹೊಸದಿಲ್ಲಿ: ರಾಜಕೀಯವಾಗಿ ನಿರ್ಣಾಯಕವಾಗಿರುವ ಉತ್ತರ ಪ್ರದೇಶದ (Uttar Pradesh) ಚುನಾವಣಾ ಫಲಿತಾಂಶ (Election Results 2024) ಬಿಜೆಪಿಗೆ (BJP) ಅಚ್ಚರಿ ಆಘಾತಗಳೆರಡನ್ನೂ ಏಕಕಾಲದಲ್ಲಿ ಮೂಡಿಸಿದೆ. ಇಲ್ಲಿ ಪಕ್ಷವು ಕೇವಲ 36 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 2019ರ ಚುನಾವಣೆಯಲ್ಲಿ ಪಕ್ಷ ಗೆದ್ದಿದ್ದ 64 ಸ್ಥಾನಗಳಿಗೆ ಹೋಲಿಸಿದರೆ ಇದು ಅರ್ಧಕ್ಕೆ ಇಳಿದಿದೆ. ಸಮಾಜವಾದಿ ಪಕ್ಷ (Samajvadi party) ಮತ್ತು ಕಾಂಗ್ರೆಸ್‌ನ (Congress) ಇಂಡಿಯಾ ಮೈತ್ರಿಯು (INDIA bloc) ಬಲಿಷ್ಠವಾಗಿ ಹೊರಹೊಮ್ಮಿದೆ. ಎರಡೂ ಪಕ್ಷಗಳು 43 ಸ್ಥಾನಗಳಲ್ಲಿ ಮುಂದಿವೆ. ಯೋಗಿ ಆದಿತ್ಯನಾಥ್‌ (Yogi Adityanath) ಅವರಂಥ ಬಲಿಷ್ಠ ಮುಖ್ಯಮಂತ್ರಿಯಿದ್ದೂ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಹತ್ತಾರು ರ್ಯಾಲಿ ಮಾಡಿದರೂ ಯಾಕೆ ಹೀಗಾಯಿತು?

ಕೇಂದ್ರ ಸಚಿವೆ ಸ್ಮೃತಿ ಇರುವ ಅಮೇಥಿಯಲ್ಲೂ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಈ ಹಿಂದೆ ಕಾಂಗ್ರೆಸ್‌ ಕುಟುಂಬದ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸಿ ಕಳಿಸಿದ್ದ ಇರಾನಿ ಈ ಸಲ ಕಾಂಗ್ರೆಸ್ ಪ್ರತಿಸ್ಪರ್ಧಿ ಎದುರೇ 77,000 ಮತಗಳಿಂದ ಸೋತಿದ್ದಾರೆ. ರಾಯ್‌ಬರೇಲಿಯಲ್ಲಿ ರಾಹುಲ್‌ ಗೆದ್ದಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯ ದೊಡ್ಡ ಹಿನ್ನಡೆಯ ಹಿಂದಿನ ಪ್ರಮುಖ ಅಂಶಗಳ ನೋಟ ಇಲ್ಲಿದೆ:

ಬಿಜೆಪಿಗೆ ಮತ ಪಡೆಯುವಲ್ಲಿ ರಾಮಮಂದಿರ ವೈಫಲ್ಯ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ (Ayodhya Ram Mandir) ನಿರ್ಮಾಣ, 1980ರ ದಶಕದಿಂದಲೂ ಬಿಜೆಪಿ ಚುನಾವಣಾ ಭರವಸೆಗಳಲ್ಲಿ ಒಂದಾಗಿತ್ತು. ಬಿಜೆಪಿಯು ಪ್ರಚಾರ ಮಾಡಿದ ಪ್ರಮುಖ ಸಾಧನೆಗಳಲ್ಲಿ ಇದು ಒಂದಾಗಿತ್ತು. ಆದರೆ ಅಯೋಧ್ಯೆಯಲ್ಲಿಯೂ ಕೇಸರಿ ಪಕ್ಷಕ್ಕೆ ಈ ಸಾಧನೆ ಮತಗಳನ್ನಾಗಿ ಪರಿವರ್ತಿಸಲು ವಿಫಲವಾಗಿದೆ. ಅಯೋಧ್ಯೆ ಭಾಗವಾಗಿರುವ ಫೈಜಾಬಾದ್‌ನಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಅವಧೇಶ್ ಪ್ರಸಾದ್ ಪ್ರಸ್ತುತ ಬಿಜೆಪಿಯ ಲಲ್ಲು ಸಿಂಗ್ ವಿರುದ್ಧ 6000 ಮತಗಳ ಮುನ್ನಡೆ ಗಳಿಸಿ ಗೆದ್ದಿದ್ದಾರೆ. ರಾಮ ಮಂದಿರ ಸಾಂಪ್ರದಾಯಿಕ ಬಿಜೆಪಿ ಮತಗಳನ್ನು ಉಳಿಸಿಕೊಂಡಿತೇ ಹೊರತು, ಹೊಸ ಮತಗಳನ್ನು ತಂದುಕೊಡಲಿಲ್ಲ.

ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಮೈತ್ರಿ

2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಬೇರೆ ಬೇರೆಯಾಗಿ ಸ್ಪರ್ಧಿಸಿದ್ದರು. ಇದು ಬಿಜೆಪಿ ವಿರೋಧಿ ಮತಗಳು ಒಡೆದುಹೋಗುವಂತೆ ಮಾಡಿ, ಬಿಜೆಪಿ ಮತಪ್ರಮಾಣ ಹೆಚ್ಚಿಸಿ ಗೆಲ್ಲಲು ಸಹಾಯ ಮಾಡಿತು. ಏಳು ವರ್ಷಗಳ ನಂತರ, ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೈ ಜೋಡಿಸಿದರು. ಲೋಕಸಭೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮಾಡಿಕೊಂಡ ಇಂಡಿಯಾ ಒಕ್ಕೂಟ ಯುಪಿಯಲ್ಲಿಯೂ ಕೆಲಸ ಮಾಡಿದೆ.

ಮಾಯಾವತಿ ಫ್ಯಾಕ್ಟರ್ ಇಲ್ಲ

ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಕಳೆದರೂ ರಾಜ್ಯದಲ್ಲಿ ಈ ಬಾರಿ ಖಾತೆ ತೆರೆದಿಲ್ಲ.‌ ಮಾಯಾವತಿ ಕೂಡ ಈ ಬಾರಿ ಕಣದಲ್ಲಿ ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳಲಿಲ್ಲ. ಸಹಜವಾಗಿಯೇ ಆಕೆಯ ಪಕ್ಷಕ್ಕೆ ಹೋಗಬೇಕಾದ ಮತಗಳು ಎಸ್‌ಪಿಗೆ ಹೋದವು. 2019ರ ಚುನಾವಣೆಯಲ್ಲಿ ಮಾಯಾವತಿ 10 ಸ್ಥಾನಗಳನ್ನು ಗೆದ್ದಿದ್ದರು. ದಲಿತ ನಾಯಕ ಚಂದ್ರಶೇಖರ ಆಜಾದ್ ಈ ಬಾರಿ ರಾಜ್ಯದಲ್ಲಿ ಹೆಚ್ಚು ಶೈನಿಂಗ್‌ ಆಗಿದ್ದಾರೆ. ಹೊಸ ದಲಿತ ನಾಯಕನಾಗಿ ಹೊಮ್ಮಿದ್ದಾರೆ. ಎಸ್‌ಸಿ- ಮೀಸಲಾತಿಯ ನಗೀನಾ ಕ್ಷೇತ್ರದಲ್ಲಿ ಈ ಹಿಂದೆ ಬಿಎಸ್‌ಪಿ ಅಗ್ರಸ್ಥಾನದಲ್ಲಿದ್ದರೆ, ಇಂದು ನಾಲ್ಕನೇ ಸ್ಥಾನದಲ್ಲಿದೆ.

ರೈತರ ಕೋಪ, ಸ್ಥಳೀಯ ಸಮಸ್ಯೆಗಳು

ಉತ್ತರ ಪ್ರದೇಶದ ರೈತರು ಮೋದಿ ಸರ್ಕಾರ ಜಾರಿಗೆ ತಂದ, ನಂತರ ರದ್ದುಪಡಿಸಿದ ಕೃಷಿ ಕಾನೂನುಗಳ ಬಗ್ಗೆ ಬಿಜೆಪಿ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂದು ವರದಿಯಾಗಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಮ್ಮ ಚುನಾವಣಾ ರ್ಯಾಲಿಗಳಲ್ಲಿ, ಬಿಜೆಪಿ ರದ್ದುಪಡಿಸಿದ ಕಾನೂನುಗಳಿಗೆ ಪರ್ಯಾಯವಾದ ಕಾನೂನುಗಳನ್ನು ಪರಿಚಯಿಸಿ ರೈತರ ಭೂಮಿಯನ್ನು ಕಿತ್ತುಕೊಳ್ಳಲಿದೆ ಎಂದು ಹೇಳುತ್ತಿದ್ದರು. ರೈತರ ಸಂಕಷ್ಟ, ಆರ್ಥಿಕತೆಯ ಆತಂಕ, ನಿರುದ್ಯೋಗ ಮತ್ತು ಅಗ್ನಿವೀರ್ ಯೋಜನೆಯ ವಿರುದ್ಧ ಪ್ರತಿಪಕ್ಷಗಳ ನಿರೂಪಣೆಯು ಬಿಜೆಪಿ ವಿರುದ್ಧ ಯುವ ಮತದಾರರಲ್ಲಿ ಕೋಪವನ್ನು ಹೆಚ್ಚಿಸಿತು.

ʼಮೀಸಲು ರದ್ದುʼ ಆರೋಪ ಎದುರಿಸಲು ವಿಫಲ

ಎನ್‌ಡಿಎ ಗೆದ್ದರೆ ಸಂವಿಧಾನಕ್ಕೆ ಬೆದರಿಕೆಯಿದೆ ಎಂದು ವಿರೋಧ ಪಕ್ಷಗಳು ಹೆಣೆದ ಆರೋಪವನ್ನು ಎದುರಿಸಲು ಆಡಳಿತ ಮೈತ್ರಿಕೂಟ ವಿಫಲವಾಯಿತು. ಎನ್‌ಡಿಎ 400ರ ಗಡಿಯನ್ನು ಮುಟ್ಟಿದರೆ ಒಬಿಸಿ ಮತ್ತು ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿ ಸೌಲಭ್ಯಗಳನ್ನು ರದ್ದುಪಡಿಸುತ್ತದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ‘ಕಾಂಗ್ರೆಸ್‌ನಿಂದ ಸಂಪತ್ತಿನ ಹಂಚಿಕೆ ಯೋಜನೆ, ಅಲ್ಪಸಂಖ್ಯಾತರಿಗೆ ಮೀಸಲಾತಿ’ ಎಂದು ಬಿಜೆಪಿ ನಾಯಕತ್ವವು ಅದನ್ನು ಎದುರಿಸಲು ಪ್ರಯತ್ನಿಸಿದರೂ ವಿಫಲವಾಯಿತು.

ಆಡಳಿತ ವಿರೋಧಿ ಅಲೆ

ಅನೇಕ ಹಾಲಿ ಸಂಸದರ ವಿರುದ್ಧ ಪ್ರಬಲ ಆಡಳಿತ ವಿರೋಧಿ ಭಾವನೆ ಇತ್ತು. ಬಿಜೆಪಿ ತಂತ್ರಜ್ಞರು ಅದೇ ಅಭ್ಯರ್ಥಿಗಳನ್ನು ಪುನರಾವರ್ತಿಸಿದರು. ಪಕ್ಷದ ಸಮೀಕ್ಷೆಗಳು ಅವರ ವಿರುದ್ಧ ಸಾರ್ವಜನಿಕ ಕೋಪವಿದೆ ಎಂದು ಸೂಚಿಸಿದ್ದರೂ ಅದನ್ನು ಪ್ರತಿಕ್ರಿಯೆಯನ್ನು ನಿರ್ಲಕ್ಷಿಸಲಾಯಿತು. ಹಿಂದಿನ ಚುನಾವಣೆಯಲ್ಲಿ 181ಕ್ಕೂ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದ ಅಭ್ಯರ್ಥಿಗಳು ಈ ಬಾರಿ ಹೀನಾಯ ಸೋಲು ಕಂಡರು. ಆಡಳಿತ ವಿರೋಧಿ ಅಲೆ ಕಾರಣ ನೀಡಿ ಕನಿಷ್ಠ 30-35 ಪ್ರತಿಶತ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲು ಬಿಜೆಪಿ ಆರಂಭದಲ್ಲಿ ನಿರ್ಧರಿಸಿತ್ತು ಆದರೆ ಅವರಲ್ಲಿ 14 ಮಂದಿಯನ್ನು ಮಾತ್ರ ಬದಲಾಯಿಸಿತು.

ಇದನ್ನೂ ಓದಿ: Election Results 2024: 543ರಲ್ಲಿ 542 ಕ್ಷೇತ್ರಗಳ ಫಲಿತಾಂಶ ಘೋಷಣೆ; ಪಕ್ಷಗಳ ಅಂತಿಮ ಬಲಾಬಲ ಹೀಗಿದೆ

Exit mobile version