Site icon Vistara News

Electric Shock: ಒಣ ಹಾಕಿದ್ದ ಟವೆಲ್‌ನಲ್ಲಿ ವಿದ್ಯುತ್; ತಂದೆ, ತಾಯಿ, ಮಗ ಸಾವು

Electric Shock

ಪುಣೆ : ಕಟ್ಟಡ ಕಾರ್ಮಿಕನೊಬ್ಬ ವಿದ್ಯುತ್ (Electric Shock) ಹರಿಯುತ್ತಿದ್ದ ತಂತಿಯ ಮೇಲೆ ಟವೆಲ್ ನೇತು ಹಾಕಿದ ಪರಿಣಾಮ, ಆ ವ್ಯಕ್ತಿ, ಆತನ ಹೆಂಡತಿ ಹಾಗೂ ಮಗ ಸಾವನಪ್ಪಿದ ದುರ್ಘಟನೆ ಪುಣೆಯಿಂದ ಸುಮಾರು 85 ಕಿ.ಮೀ ದೂರದಲ್ಲಿರುವ ದೌಂಡ್ ತಾಲೂಕಿನ ದಪೋಡಿಯಲ್ಲಿ ನಡೆದಿದೆ.

ಸುರೇಂದ್ರ ಭಲೇಕರ್ (47) , ಆದಿಕಾ(40) ಮತ್ತು ಪ್ರಸಾದ್ ಕರೆಂಟ್ ಶಾಕ್‌ನಿಂದ ಸಾವನಪ್ಪಿದವರು. ಭಲೇಕರ್ ವಿದ್ಯುತ್ ಹರಿಯುತ್ತಿದ್ದ ತಂತಿಯ ಮೇಲೆ ತಮ್ಮ ಟವೆಲ್ ಅನ್ನು ಒಗೆದು ಒಣಗಿಸಲು ಹೋಗಿದ್ದಾರೆ. ಆ ತಂತಿಯಲ್ಲಿ ವಿದ್ಯುತ್ ಹರಿಯುತ್ತಿದ್ದ ಕಾರಣ ಅವರಿಗೆ ಶಾಕ್ ಹೊಡೆದಿದೆ. ಆಗ ಅವನ ಮಗ ಪ್ರಸಾದ್ ಹಾಗೂ ಪತ್ನಿ ಆತನನ್ನು ಕಾಪಾಡಲು ಹೋಗಿ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಯವತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಘಟನೆಯನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಡಿದ್ದಾರೆ. ಭಲೇಕರ್ ಕುಟುಂಬ ಕಳೆದ ಐದು ವರ್ಷಗಳಿಂದ ದಪೋಡಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಭಲೇಕರ್ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರೆ ಆತನ ಪತ್ನಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಳು. ಅವರ ಮಗ ಹಾಗೂ ಮಗಳು ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.

ಭಾನುವಾರ ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಅವರ ಹಿತ್ತಲಿನಲ್ಲಿ ವಿದ್ಯುತ್ ತಂತಿ ಬಾಗಿ ಮನೆಯ ಗೋಡೆಗೆ ತಗುಲಿತ್ತು. ಭಲೇಕರ್ ಮನೆಯ ಸ್ನಾನದ ಕೋಣೆಯಲ್ಲಿ ಬಟ್ಟೆಗಳನ್ನು ಒಣಗಿಸಲು ತಗಡಿನ ಗೋಡೆಗೆ ಕಬ್ಬಿಣದ ತಂತಿ ಕಟ್ಟಿದ್ದರು. ವಿದ್ಯುತ್ ತಂತಿಯಲ್ಲಿರುವ ವಿದ್ಯುತ್ ಈ ಕಬ್ಬಿಣದ ತಂತಿಯ ಮೂಲಕ ಹಾದುಹೋಗಿದೆ. ಹಾಗಾಗಿ ಭಲೇಕರ್ ಬೆಳಿಗ್ಗೆ ಸ್ನಾನ ಮಾಡಲು ಹೋದಾಗ ಅದರ ಮೇಲೆ ಟವೆಲ್ ಒಣಗಿಸಲು ಹೋಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಘಟನೆಯ ವೇಳೆ ಅವರ ಪತ್ನಿ ನೆರೆಹೊರೆಯವರ ಸಹಾಯಕ್ಕಾಗಿ ಕೂಗಿದ್ದರು. ಆದರೆ ಅವರೆಲ್ಲರೂ ಬರುವ ಮುನ್ನವೇ ಮೂವರು ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ಮಗಳು ಕೋಚಿಂಗ್ ತರಗತಿಗೆ ಹೋಗಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: Viral News: ಆನ್‌ಲೈನ್‌ನಲ್ಲಿ ಬಂದ ಐಸ್ ಕ್ರೀಂನಲ್ಲಿ ಸಿಕ್ಕಿದ ಬೆರಳು ಕಾರ್ಮಿಕನದು!

ಘಟನೆಯ ಬಳಿಕ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನೆಯ ವಿದ್ಯುತ್ ಮೀಟರ್ ಅನ್ನು ತೆಗೆದುಕೊಂಡಿದ್ದಾರೆ. ಘರ್ಷಣೆಯಿಂದ ಇದು ಹಾನಿಯಾಗಿರಬಹುದು. ಮತ್ತೆ ಇದರಿಂದ ಸಮಸ್ಯೆ ಸಂಭವಿಸಬಹುದು ಎಂದು ಅವರು ಹೇಳಿದ್ದಾರೆ. ಹಾಗೇ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಗಳ ಪರಿಹಾರ ನೀಡುವುದಾಗಿ ವಿದ್ಯುತ್ ಮಂಡಳಿ ಘೋಷಿಸಿದೆ.

Exit mobile version