Site icon Vistara News

Elephant Attack: ʼಕರ್ನಾಟಕದ ಪರಿಹಾರ ಬೇಕಿಲ್ಲ…ʼ ಕಾಡಾನೆ ಬಲಿ ಪಡೆದ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ರೂ. ಕೊಟ್ಟ ಕೇರಳ ಸರ್ಕಾರ

elephant attack

ಇಡುಕ್ಕಿ (ಕೇರಳ): ಕರ್ನಾಟಕದಲ್ಲಿ ವಿವಾದಕ್ಕೆ ಕಾರಣವಾಗಿದ್ದ, ಕೇರಳದಲ್ಲಿ ವ್ಯಕ್ತಿಯೊಬ್ಬ ಆನೆಯಿಂದ ಕಾಲ್ತುಳಿತಕ್ಕೀಡಾಗಿ (Elephant Attack) ಸತ್ತ ಪ್ರಕರಣದಲ್ಲಿ ಸತ್ತ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ತಕ್ಷಣದ ಆರ್ಥಿಕ ನೆರವನ್ನು (Compensation) ಕೇರಳ ಸರ್ಕಾರ (Kerala Government) ಹಸ್ತಾಂತರಿಸಿದೆ. “ಕರ್ನಾಟಕದ ನೆರವು ನಮಗೆ ಬೇಕಿಲ್ಲʼʼ ಎಂದು ಕೇರಳ ಸರ್ಕಾರ ಹೇಳಿರುವುದಾಗಿ ಕೆಲವು ಮೂಲಗಳು ತಿಳಿಸಿವೆ.

ಗುಡ್ಡಗಾಡು ಪ್ರದೇಶದಲ್ಲಿರುವ ಪ್ರವಾಸಿ ಪಟ್ಟಣ ಮುನ್ನಾರ್ (Munnar) ಬಳಿ ಕಾಡಾನೆ ದಾಳಿಗೆ ಆಟೋರಿಕ್ಷಾ ಚಾಲಕ ಬಲಿಯಾಗಿದ್ದ. ಇದು ಕರ್ನಾಟಕ ಮೂಲದ ಆನೆಯಾದ್ದರಿಂದ ಈತನ ಕುಟುಂಬಕ್ಕೆ ಪರಿಹಾರ ನೀಡಲು ವಯನಾಡ್‌ನ ಸಂಸದ (Wayanad MP) ರಾಹುಲ್‌ ಗಾಂಧಿ (Rahul Gandhi) ಕರ್ನಾಟಕ ಸರ್ಕಾರಕ್ಕೆ ಸೂಚಿಸಿದ್ದರು ಎನ್ನಲಾಗಿದೆ. ಹೀಗಾಗಿ 15 ಲಕ್ಷ ರೂಪಾಯಿಗಳ ಪರಿಹಾರವನ್ನು ಕರ್ನಾಟಕ ಸರ್ಕಾರ ನೀಡಿತ್ತು. ಇದು ಕರ್ನಾಟಕ ಬಿಜೆಪಿಯಿಂದ ತೀವ್ರ ಟೀಕೆಗೆ ಒಳಗಾಗಿತ್ತು.

“ರಾಹುಲ್‌ ಗಾಂಧಿಯವರನ್ನು ಸಂತುಷ್ಟಿಪಡಿಸಲು ಹೀಗೆ ಮಾಡಲಾಗಿದೆ. ಕರ್ನಾಟಕದ ಜನರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ” ಎಂದು ಬಿಜೆಪಿ ದೂರಿತ್ತು. “ಕಾಡುಪ್ರಾಣಿಗಳಿಗೆ ಗಡಿಗಳಿರುವುದಿಲ್ಲ. ಹೀಗಾಗಿ ಅದನ್ನು ಕರ್ನಾಟಕದ ಆನೆ ಎಂದು ಹೇಗೆ ಹೇಳಲು ಸಾಧ್ಯ?” ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ದೂರಿದ್ದರು.

ಮುನ್ನಾರ್‌ ಬಳಿಕ ಕನ್ನಿಮಲ ಟಾಪ್ ಡಿವಿಷನ್‌ನ ಸುರೇಶ್ ಕುಮಾರ್ (44) ಅವರು ಸೋಮವಾರ ರಾತ್ರಿ ಪ್ರಯಾಣಿಕರ ಕರೆತರಲು ಹೋಗುತ್ತಿದ್ದಾಗ ಕನ್ನಿಮಲ ಎಸ್ಟೇಟ್‌ನಲ್ಲಿ ಆನೆಯ ದಾಳಿಗೀಡಾಗಿ ಸತ್ತಿದ್ದರು. ಕೇರಳದ ಉನ್ನತಾಧಿಕಾರ ಆಸ್ಪತ್ರೆಯಲ್ಲಿ ಬೆಳಗ್ಗೆ ತುರ್ತು ಸಭೆ ನಡೆಸಿದ ಅಧಿಕಾರಿಗಳು, ಕುಮಾರ್ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳನ್ನೊಳಗೊಂಡ ಕುಟುಂಬಕ್ಕೆ ಆರ್ಥಿಕ ನೆರವನ್ನು ಹಸ್ತಾಂತರಿಸಿದರು. ಅರಣ್ಯ ಮತ್ತು ಜಿಲ್ಲಾ ಅಧಿಕಾರಿಗಳಲ್ಲದೆ, ಸ್ಥಳೀಯ ಶಾಸಕರು, ಸಂಸದರು ಮತ್ತು ವಿವಿಧ ರಾಜಕೀಯ ಪಕ್ಷಗಳ ಹಿರಿಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಕುಮಾರ್ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿ ಮುನ್ನಾರ್ ಪಟ್ಟಣದಲ್ಲಿ ಆಡಳಿತ ಪಕ್ಷದ ಮೋರ್ಚಾದಿಂದ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಹರತಾಳ ನಡೆದಿತ್ತು. ಈಗ ಅದನ್ನು ಹಿಂಪಡೆಯಲಾಗಿದೆ ಎಂದು ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಹಿರಿಯ ನಾಯಕರು ತಿಳಿಸಿದ್ದಾರೆ.

ಸಭೆಯಲ್ಲಿ ಕೈಗೊಂಡ ನಿರ್ಣಯದ ಆಧಾರದ ಮೇಲೆ ಕುಮಾರ್ ಅವರ ಪತ್ನಿ ಇಂದಿರಾ ಅವರಿಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಲಾಗಿದೆ ಎಂದು ಸಿಪಿಐ ಇಡುಕ್ಕಿ ಜಿಲ್ಲಾ ಸಹಾಯಕ ಕಾರ್ಯದರ್ಶಿ ಪಿ ಪಳನಿವೇಲ್ ತಿಳಿಸಿದ್ದಾರೆ. ಅವರ ಮಕ್ಕಳ ಶೈಕ್ಷಣಿಕ ವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗಿದ್ದು, ಕುಟುಂಬದ ಒಬ್ಬರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದರು.

ಕಾಡು ಆನೆಗಳು ಆಗಾಗ್ಗೆ ಈ ಪ್ರದೇಶಕ್ಕೆ ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು (ಆರ್‌ಆರ್‌ಟಿ) ನಿಯೋಜಿಸಲು ನಿರ್ಧರಿಸಲಾಗಿದೆ. ಈ ಪ್ರದೇಶದಲ್ಲಿ ಬೀಡಾಡಿ ಆನೆಗಳ ಚಲನವಲನದ ಬಗ್ಗೆ ಅರಣ್ಯ ಅಧಿಕಾರಿಗಳು ಪ್ರತಿದಿನ ಬೆಳಿಗ್ಗೆ ಪ್ರಕಟಣೆಗಳನ್ನು ನೀಡುತ್ತಾರೆ. ಇತ್ತೀಚಿಗೆ ವಯನಾಡಿನಲ್ಲಿ ಕಾಡಾನೆಗಳ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ ನಂತರ ಸೋಮವಾರ ರಾತ್ರಿ ನಡೆದ ಘಟನೆ ಸ್ಥಳೀಯ ಜನರ ಪ್ರತಿಭಟನೆಗೆ ಕಾರಣವಾಯಿತು.

ಇದನ್ನೂ ಓದಿ: Elephant Attack : ಕೇರಳ ಆನೆ ದಾಳಿಗೆ 15 ಲಕ್ಷ, ಹಾಸನದಲ್ಲಿ ಮೃತಪಟ್ಟವರಿಗೆ 7.5 ಲಕ್ಷ ಮಾತ್ರ; ಏನಿದು ಅನ್ಯಾಯ?

Exit mobile version