Site icon Vistara News

Karnataka High Court: ʼಚಿಲ್ಲರೆ ಅಂಗಡಿಯವರಲ್ಲೂ ಯುಪಿಐ ಇದೆ, ನಿಮ್ಮಲ್ಲೇಕಿಲ್ಲ?ʼ ಬೆಸ್ಕಾಂಗೆ ಹೈಕೋರ್ಟ್‌ ತರಾಟೆ

karnataka high court

ಬೆಂಗಳೂರು: ʼಇಡೀ ಜಗತ್ತು ಯುಪಿಐ (UPI) ಮೂಲಕ ಪಾವತಿಗಳನ್ನು ಸ್ವೀಕರಿಸುತ್ತಿದೆ. ದಿನಸಿ ಅಂಗಡಿಯವರಲ್ಲೂ ಅದು ಇದೆ. ಆದರೆ ನಿಮ್ಮಲ್ಲಿ ಇಲ್ಲ ಎಂಬುದು ವಿಚಿತ್ರವಾದ ಸಂಗತಿʼ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ- BESCOM) ಅನ್ನು ಕರ್ನಾಟಕ ಹೈಕೋರ್ಟ್ (Karnataka High Court) ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಅಥವಾ ಆನ್‌ಲೈನ್ ಪಾವತಿಯ (online payment) ಸೌಲಭ್ಯವನ್ನು ಗ್ರಾಹಕರಿಗೆ ಏಕೆ ಒದಗಿಸಿಲ್ಲ ಎಂಬ ಬಗ್ಗೆ ಆಗಸ್ಟ್ 9ರೊಳಗೆ ಅಫಿಡವಿಟ್ ಸಲ್ಲಿಸುವಂತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಎನ್.ಎಸ್ ಸಂಜಯ್ ಗೌಡ ಅವರಿದ್ದ ಏಕಸದಸ್ಯ ಪೀಠ ಈ ನಿರ್ದೇಶನ ಜಾರಿ ಮಾಡಿದೆ.

2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 47(5)ರ ಪ್ರಕಾರ ಪೂರ್ವಪಾವತಿ ಮೀಟರ್ ಒದಗಿಸುವಂತೆ ಮತ್ತು ಯುಪಿಐ ಮೋಡ್‌ನಲ್ಲಿ ಪಾವತಿಯನ್ನು ಸ್ವೀಕರಿಸಲು ಬೆಸ್ಕಾಂಗೆ ನಿರ್ದೇಶನ ನೀಡಬೇಕೆಂದು ಕೋರಿ ಹಿರಿಯ ನಾಗರಿಕರಾದ ಸೀತಾಲಕ್ಷ್ಮಿ ಎಂಬವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ಈ ನಿರ್ದೇಶನ ನೀಡಲಾಗಿದೆ.

ಇಡೀ ಜಗತ್ತು ಯುಪಿಐ ಮೂಲಕ ಪಾವತಿಗಳನ್ನು ಸ್ವೀಕರಿಸುತ್ತಿರುವ ಈ ಯುಗದಲ್ಲಿ ಬೆಸ್ಕಾಂ ಯುಪಿಐ ಮೂಲಕ ಹಣವನ್ನು ಸ್ವೀಕರಿಸಲು ನಿರಾಕರಿಸುತ್ತಿರುವುದು ವಿಚಿತ್ರವಾಗಿದೆ. ಯಾರಾದರೂ ನಿಮಗೆ ಹಣವನ್ನು ಪಾವತಿಸಲು ಬಯಸಿದರೆ, ಅದು ಈಗ ಸ್ವೀಕರಿಸಲ್ಪಟ್ಟ ವಿಧಾನವಾಗಿದ್ದರೂ, ನೀವು ಅದನ್ನು ಅಳವಡಿಸಿಕೊಳ್ಳಬೇಕಿದ್ದರೆ ಯಾರಾದರೂ ನ್ಯಾಯಾಲಯಕ್ಕೆ ಬಂದು ರಿಟ್ ಅರ್ಜಿ ಸಲ್ಲಿಸಬೇಕಾಗುತ್ತದೆ. ಯಾರೋ ನಿಮಗೆ ಹಣವನ್ನು ನೀಡಲು ಬಯಸುತ್ತಾರೆ. ಎಲ್ಲರೂ ಡಿಜಿಟಲ್‌ (Digital) ಆಗಿರಿ ಎಂದು ಸರಕಾರ ಘೋಷಿಸುತ್ತದೆ. ಆದರೆ ನೀವು ಕರೆನ್ಸಿ ನೋಟುಗಳನ್ನು ಸಂಗ್ರಹಿಸುವ ಕಾಲಕ್ಕೆ ಹಿಂತಿರುಗಲು ಬಯಸುತ್ತಿದ್ದೀರಿ ಎಂದು ಹೈಕೋರ್ಟ್‌ ಪೀಠ ಬೆಸ್ಕಾಂನ ಕಿವಿ ಹಿಂಡಿತು.

ಪ್ರತಿಯೊಬ್ಬ ದಿನಸಿ ವ್ಯಾಪಾರಿಯೂ ಈಗ ಅವನ ಮುಂದೆ ಯುಪಿಐ ಸ್ಕ್ಯಾನರ್ ಅನ್ನು ಹೊಂದಿದ್ದಾನೆ. ಆದರೆ ನೀವು ಇನ್ನೂ ಅರ್ಜಿದಾರರಿಗೆ ಕ್ಯುಆರ್ ಕೋಡ್ (‌QR Code) ನೀಡಲು ಮೀನಮೇಷ ಎಣಿಸುತ್ತಿದ್ದೀರಿ. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ನ್ಯಾಯಾಲಯವೇ ಅತ್ಯಂತ ನಿಧಾನವಾಗಿತ್ತು; ನೀವು ನಮಗಿಂತಲೂ ಹಿಂದುಳಿದಿದ್ದೀರಿ ಎಂದು ಕೂಡ ಪೀಠ ಹೇಳಿದೆ.

ವಿಚಾರಣೆಯ ವೇಳೆ ಬೆಸ್ಕಾಂ ಪರ ವಕೀಲರು, ಬೆಸ್ಕಾಂ ಕೌಂಟರ್‌ಗಳಲ್ಲಿ ಯುಪಿಐ ಪಾವತಿ ಮಾಡಲು ಅವಕಾಶವಿಲ್ಲ. ನಗದು ಪಾವತಿಯನ್ನು ಮಾತ್ರ ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದರು. ಆದರೆ ಗ್ರಾಹಕರು ಬೆಸ್ಕಾಂ ಅಪ್ಲಿಕೇಶನ್ ಮೂಲಕ ಆನ್‌ಲೈನ್/ಯುಪಿಐ ಪಾವತಿಗಳನ್ನು ಮಾಡಬಹುದು. ಹಿರಿಯ ನಾಗರಿಕರು ಮತ್ತು ವಯಸ್ಸಾದವರು ಕೌಂಟರ್‌ಗೆ ಬರುವ ಅಗತ್ಯವಿಲ್ಲದೆ ಮನೆಯಲ್ಲಿ ಕುಳಿತು ಅಪ್ಲಿಕೇಶನ್‌ನಲ್ಲಿ ಇದನ್ನು ಮಾಡಬಹುದು ಎಂದು ಹೇಳಿದರು.

ಅಕ್ಟೋಬರ್ 25, 2023ರಂದು, ಅರ್ಜಿದಾರರು ಮನೆಬಾಡಿಗೆ ಉದ್ದೇಶಗಳಿಂದ ಉಂಟಾಗುವ ಭಾರೀ ಶುಲ್ಕವನ್ನು ಕಟ್ಟಲು ಬೆಸ್ಕಾಂ ಹೊಸಕೋಟೆ ಶಾಖೆಯ ಕ್ಯಾಶ್ ಕೌಂಟರ್‌ಗೆ ಭೇಟಿ ನೀಡಿದ್ದರು. ಯುಪಿಐ ಮೂಲಕ ಪಾವತಿ ಲಭ್ಯವಿಲ್ಲದ ಕಾರಣ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಅರ್ಜಿದಾರರಿಗೆ ಡಿಡಿ ಮೂಲಕ ಪಾವತಿಸಲು ಸೂಚಿಸಿದ್ದರು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಶ್ರೀಧರ್ ಪ್ರಭು ಅವರು, ವಯಸ್ಸಾದ ಮಹಿಳೆ ದೈನಂದಿನ ಕೆಲಸಗಳನ್ನು ನಿರ್ವಹಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಪಡೆಯಲು ಸರದಿಯಲ್ಲಿ ನಿಂತು ಕಷ್ಟಪಟ್ಟಿದ್ದಾರೆ. ನಂತರ ಪಾವತಿ ಮಾಡಿದ್ದಾರೆ. ಹೀಗಾಗಿ ಅವರು ತಮ್ಮ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ಐಡೆಂಟಿಟಿ (ಯುಪಿಐಡಿ) ಅನ್ನು ಒದಗಿಸುವ ಮೂಲಕ ಪ್ರಕ್ರಿಯೆಯನ್ನು ಸುಲಭಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ವಿದ್ಯುತ್ ಬಿಲ್‌ನಲ್ಲಿರುವ ಹೆಚ್ಚುವರಿ ಭದ್ರತಾ ಠೇವಣಿ ಕುರಿತು ಗೊಂದಲ; ಗ್ರಾಹಕರ ಪ್ರಶ್ನೆಗಳಿಗೆ ಇಲ್ಲಿದೆ ಬೆಸ್ಕಾಂ ಉತ್ತರ

Exit mobile version