Site icon Vistara News

Manohar Joshi: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಮನೋಹರ ಜೋಶಿ ಇನ್ನಿಲ್ಲ

manohar joshi

ಹೊಸದಿಲ್ಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ (Ex Maharashtra Chief Minister), ಶಿವಸೇನೆ ನಾಯಕ (Shiv Sena) ಮನೋಹರ್ ಜೋಶಿ (Manohar Joshi) ಅವರು ಹೃದಯಾಘಾತದಿಂದ (Heart Attack) ಮುಂಬೈ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಎರಡು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಬುಧವಾರ ಮುಂಬೈನ ಪಿಡಿ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೋಶಿ ಅವರ ಅಂತ್ಯಕ್ರಿಯೆ ಇಂದು ಮುಂಬೈನ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ನಡೆಯಲಿದೆ.

ಮನೋಹರ ಜೋಶಿ ಅವರು 1995ರಿಂದ 1999ರವರೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು ಮತ್ತು ಅವಿಭಜಿತ ಶಿವಸೇನೆಯಿಂದ ರಾಜ್ಯದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ನಾಯಕರಾಗಿದ್ದರು. ಜೋಶಿ ಅವರು ಸಂಸತ್ ಸದಸ್ಯರಾಗಿಯೂ ಚುನಾಯಿತರಾಗಿದ್ದರು. 2002ರಿಂದ 2004ರವರೆಗೆ ಲೋಕಸಭಾ ಸ್ಪೀಕರ್ ಆಗಿದ್ದರು.

ಡಿಸೆಂಬರ್ 2, 1937ರಂದು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ನಂದಿವಿಯಲ್ಲಿ ಜನಿಸಿದ ಜೋಶಿಯವರು ಮುಂಬೈನಲ್ಲಿ ಶಿಕ್ಷಣ ಪಡೆದರು. ಅನಘಾ ಮನೋಹರ್ ಜೋಶಿ ಅವರ ಪತ್ನಿ. ಇವರು 2020ರಲ್ಲಿ ಮೃತಪಟ್ಟಿದ್ದಾರೆ. ಜೋಶಿ ಅವರಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿ ಇದ್ದಾರೆ.

ಮನೋಹರ್ ಜೋಶಿ ಅವರು ಶಿಕ್ಷಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 1967ರಲ್ಲಿ ರಾಜಕೀಯ ಪ್ರವೇಶಿಸಿದರು. 40 ವರ್ಷಗಳ ಕಾಲ ಶಿವಸೇನೆಯಲ್ಲಿದ್ದರು. 1968-70ರ ಅವಧಿಯಲ್ಲಿ ಮುಂಬೈನಲ್ಲಿ ಮುನ್ಸಿಪಲ್ ಕೌನ್ಸಿಲರ್ ಆಗಿದ್ದರು. 1970ರಲ್ಲಿ ಸ್ಥಾಯಿ ಸಮಿತಿ (ಮುನ್ಸಿಪಲ್ ಕಾರ್ಪೊರೇಷನ್) ಅಧ್ಯಕ್ಷರಾಗಿದ್ದರು. 1976ರಿಂದ 1977ರವರೆಗೆ ಒಂದು ವರ್ಷ ಮುಂಬೈ ಮೇಯರ್ ಆಗಿ ಸೇವೆ ಸಲ್ಲಿಸಿದರು.

1972ರಲ್ಲಿ ಮಹಾರಾಷ್ಟ್ರ ಲೆಜಿಸ್ಲೇಟಿವ್ ಕೌನ್ಸಿಲ್‌ಗೆ ಚುನಾಯಿತರಾದರು. ವಿಧಾನ ಪರಿಷತ್ತಿನಲ್ಲಿ ಮೂರು ಅವಧಿಗೆ ಸೇವೆ ಸಲ್ಲಿಸಿದ ನಂತರ, 1990ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾಯಿತರಾದರು. 1990-91ರ ಅವಧಿಯಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು. 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಮುಂಬೈ ಉತ್ತರ-ಮಧ್ಯ ಲೋಕಸಭಾ ಕ್ಷೇತ್ರದಿಂದ ಶಿವಸೇನೆ ಟಿಕೆಟ್‌ನಲ್ಲಿ ಗೆದ್ದರು. ಈ ಅವಧಿಯಲ್ಲಿ ಲೋಕಸಭೆ ಸ್ಪೀಕರ್‌ ಆಗಿದ್ದರು.

ಇದನ್ನೂ ಓದಿ: ಫೇಸ್‌ಬುಕ್‌ ಲೈವ್‌ನಲ್ಲೇ ಶಿವಸೇನೆ ನಾಯಕ ಅಭಿಷೇಕ್‌ ಹತ್ಯೆ; ಯಾರಿವರು? ಕೊಲೆ Video ಇದೆ

Exit mobile version