ಇಸ್ಲಾಮಾಬಾದ್: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ, ಮತ್ತೆ ಪ್ರಧಾನಿಯಾಗುವ ಕನಸು ಕಾಣುತ್ತಿದ್ದ ಮಾಜಿ ಪ್ರಧಾನಿ, ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (PTI) ಮುಖ್ಯಸ್ಥ ಇಮ್ರಾನ್ ಖಾನ್ (Imran Khan) ಹಾಗೂ ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇಸ್ಲಾಂ ನಿಯಮಗಳನ್ನು ಪಾಲಿಸದೆ ಮದುವೆಯಾದ ಹಿನ್ನೆಲೆಯಲ್ಲಿ ನ್ಯಾಯಾಲಯವೊಂದು ಇಮ್ರಾನ್ ಖಾನ್ ಹಾಗೂ ಬುಶ್ರಾ ಬೀಬಿ (Bushra Bibi) ಅವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ, ಕಳೆದ ಐದು ದಿನಗಳಲ್ಲಿ ಇಮ್ರಾನ್ ಖಾನ್ ಅವರು ಮೂರು ನ್ಯಾಯಾಲಯಗಳಿಂದ ಒಟ್ಟು 31 ವರ್ಷ ಜೈಲು ಶಿಕ್ಷೆಗೆ ಗುರಿಯಾದಂತಾಗಿದೆ.
ಇಮ್ರಾನ್ ಖಾನ್ ಹಾಗೂ ಬುಶ್ರಾ ಬೀಬಿ ಅವರು ಇಸ್ಲಾಮಿಕ್ ನಿಯಮಗಳನ್ನು ಪಾಲಿಸದೆಯೇ ಮದುವೆಯಾಗಿದ್ದಾರೆ ಎಂದು ಬುಶ್ರಾ ಬೀಬಿ ಮೊದಲ ಪತಿ ಖಾವರ್ ಮನೇಕಾ ಎಂಬುವರು ಅರ್ಜಿ ಸಲ್ಲಿಸಿದ್ದರು. ಅದರಂತೆ, ರಾವಲ್ಪಿಂಡಿಯಲ್ಲಿರುವ ಅಡಿಯಾಲ ಜೈಲಿನ ಆವರಣದಲ್ಲಿ ವಿಚಾರಣೆ ನಡೆಸಿದ ಇಸ್ಲಾಮಾಬಾದ್ ಹಿರಿಯ ಸಿವಿಲ್ ನ್ಯಾಯಾಧೀಶ ಖುದ್ರತುಲ್ಲಾ ಅವರು ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿಗೆ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಿದರು. ಹಾಗೆಯೇ, ಇಬ್ಬರೂ ತಲಾ 5 ಲಕ್ಷ ರೂ. ದಂಡ ಪಾವತಿಸಬೇಕು ಎಂದು ಆದೇಶಿಸಿದರು.
Former Prime Minister of Pakistan Imran Khan and his wife Bishar Bibi were sentenced to seven years by the court in the Nikah case.#BushraBibi #ImranKhan pic.twitter.com/rxjp7u53Te
— ALI WRITES ✍️ (@aliwritespk) February 3, 2024
5 ದಿನದಲ್ಲಿ ಮೂರು ಶಿಕ್ಷೆ
ಇಮ್ರಾನ್ ಖಾನ್ ಅವರಿಗೆ ಕಳೆದ ಐದು ದಿನಗಳಲ್ಲಿ ಮೂರು ನ್ಯಾಯಾಲಯಗಳು ಜೈಲು ಶಿಕ್ಷೆ ವಿಧಿಸಿದಂತಾಗಿದೆ. ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಯೊಂದನ್ನು ಅಮೆರಿಕಕ್ಕೆ ನೀಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರಾವಲ್ಪಿಂಡಿ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದಾದ ಬಳಿಕವೇ ಮತ್ತೊಂದು ನ್ಯಾಯಾಲಯವು 14 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ತೋಷಖಾನಾ (ಖಜಾನೆಗೆ ಸೇರಬೇಕಾದ ಉಡುಗೊರೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ ಪ್ರಕರಣ) ಪ್ರಕರಣದಲ್ಲಿ ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿಗೆ 14 ವರ್ಷಗಳ ಜೈಲು ಶಿಕ್ಷೆಯಾಗಿದೆ. ಈಗ ಮತ್ತೊಂದು ನ್ಯಾಯಾಲಯವು ದಂಪತಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರಿಂದಾಗಿ, ಮುಂಬರುವ ಫೆಬ್ರವರಿ 8ರ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರಿ ಸ್ಪರ್ಧೆ ಒಡ್ಡಲು ಮುಂದಾಗಿದ್ದ ಇಮ್ರಾನ್ ಅವರ ಚುನಾವಣಾ ಮಹತ್ವಾಕಾಂಕ್ಷೆಗಳಿಗೆ ಇದರಿಂದ ಮತ್ತೊಂದು ಹಿನ್ನಡೆಯಾಗಿದೆ.
ಇದನ್ನೂ ಓದಿ: Imran Khan: ಇಮ್ರಾನ್ ಖಾನ್‌ಗೆ 10 ವರ್ಷ ಜೈಲು; ಪಾಕ್ ಚುನಾವಣೆ ಮೊದಲೇ ಶಾಕ್
ಚುನಾವಣೆ ಆಯೋಗವು ಈಗಾಗಲೇ ಇಮ್ರಾನ್ ಖಾನ್ ಅವರಿಗೆ ಭಾರಿ ಶಾಕ್ ನೀಡಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಇಮ್ರಾನ್ ಖಾನ್ ಅವರು 2024ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸವಂತಿಲ್ಲ ಎಂದು ಪಾಕಿಸ್ತಾನ ಚುನಾವಣೆ ಆಯೋಗ (Election Commission of Pakistan) ಹೇಳಿದೆ. ಇಮ್ರಾನ್ ಖಾನ್ ಅವರು ಸಲ್ಲಿಸಿದ ನಾಮನಿರ್ದೇಶನಗಳನ್ನು ಪಾಕ್ ಚುನಾವಣೆ ಆಯೋಗವು ನಿರಾಕರಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ