ಹುಬ್ಬಳ್ಳಿ: ಇಲ್ಲಿನ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ (Hubli murder case) ಆರೋಪಿ ಫಯಾಜ್ನ ಪೋಷಕರಿಬ್ಬರೂ ಶಾಲಾ ಶಿಕ್ಷಕರು ಎಂಬ ಮಾಹಿತಿ ಗೊತ್ತಾಗಿದೆ. ಆದರೆ, ವಿದ್ಯೆ ತಲೆಗೆ ಹತ್ತಿಸಿಕೊಳ್ಳದ ಆತ ಕಾಲೇಜಿನಿಂದ ಫೇಲ್ ಆಗಿ ಹೊರಕ್ಕೆ ಬಿದಿದ್ದ. ಇದೀಗ ಹಳೇ ಸಹಪಾಠಿಯನ್ನೇ ಕೊಲೆ ಮಾಡಿದ್ದಾನೆ. ಆಕೆಯನ್ನು ಕೊಲ್ಲಲೆಂದೇ ಚಾಕು ಹಿಡಿದುಕೊಂಡು ಕಾಲೇಜ್ ಕ್ಯಾಂಪ್ಸ್ಗೆ ಬಂದಿದ್ದ ಎಂಬ ಮಾಹಿತಿ ಗೊತ್ತಾಗಿದೆ.
ಆರೋಪಿ ಫಯಾಜ್ ಮೂಲತಃ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿಯಾಗಿದ್ದಾನೆ. ತಂದೆ ಬಾಬಾಸಾಬ್, ತಾಯಿ ಮುಮ್ತಾಜ್ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ಫಯಾಜ್ ಫೇಲ್ ಆಗಿದ್ದರಿಂದ ಕಾಲೇಜ್ ಬಿಟ್ಟಿದ್ದ. ಆತ ಅದೇ ಕಾಲೇಜಿನಲ್ಲಿ ಬಿಸಿಎ ಕೋರ್ಸ್ನಲ್ಲಿ ಫೇಲ್ ಆಗಿದ್ದ. ಬಿಸಿಎ ಕಲಿಯುವಾಗ ವೇಳೆ ನೇಹಾ ಆತನ ಕ್ಲಾಸ್ಮೇಟ್ ಆಗಿದ್ದರು.
ಹಲವು ಸಮಯದಿಂದ ಆಕೆಯ ಹಿಂದೆ ಬಿದ್ದಿದ್ದ ಫಯಾಜ್ ಪ್ರೀತಿ ಮಾಡುವಂತೆ ಸತಾಯಿಸಿದ್ದ. ಆದರೆ ಅದಕ್ಕೆ ನಿರಾಕರಿಸಿದ್ದಳು. ಅಂತೆಯೇ ಗುರುವಾರ ಕಾಲೇಜಿಗೆ ಚಾಕು ಸಮೇತ ಬಂದಿದ್ದ ಆತ ಕೊಲೆ ಮಾಡಿದ್ದಾನೆ.
ಏನಿದು ಪ್ರಕರಣ?
ಫಯಾಜ್ ಪಾಗಲ್ ಪ್ರೇಮಿಯಾಗಿದ್ದು, ನೇಹಾ ಅವರನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದಾನೆ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದಿದ್ದಾನೆ. ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲಿ ಕೊಲೆ ನಡೆದಿದೆ. ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ನೇಹಾ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳಾಗಿದ್ದಾಳೆ.
ಪ್ರೀತಿಸಲು ನಿರಾಕರಿಸಿದ್ದಕ್ಕೆ ಕೊಲೆ
ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈ ವೇಳೆ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆತ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದಾನೆ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ, ನೇಹಾ ಪ್ರೀತಿಸಲು ನಿರಾಕರಿಸಿದ್ದಾಳೆ. ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿಯು ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದಾನೆ.
ಇದನ್ನೂ ಓದಿ: Wild Animals Attack: ನಿಟ್ಟೂರು ಗ್ರಾಮದಲ್ಲಿ ಹುಲಿ ದಾಳಿಗೆ ವ್ಯಕ್ತಿ ಬಲಿ; ಕನಕಗಿರಿಯಲ್ಲಿ ಕರಡಿ ದಾಳಿಗೆ ವೃದ್ಧ ಸಾವು
ನೇಹಾಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದು, ನೇಹಾಳಿಗೆ ತೀವ್ರ ರಕ್ತಸ್ರಾವವಾಗಿದೆ. ಸ್ಥಳೀಯರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಆರೋಪಿ ಫಯಾಜ್ ಕೊಂಡಿಕೊಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಠಾಣೆ ಪೊಲೀಸರಿಂದ ಆರೋಪಿಯ ವಿಚಾರಣೆ ನಡೆಸಲಾಗಿದೆ.
ಪೊಲೀಸ್ ಠಾಣೆ ಎದುರು ಹಿಂದೂ ಸಂಘಟನೆಗಳ ಪ್ರತಿಭಟನೆ
ನೇಹಾಳನ್ನು ಕೊಂದ ಆರೋಪಿಯನ್ನು ಎನ್ಕೌಂಟರ್ ಮಾಡಬೇಕು ಎಂದು ಒತ್ತಾಯಿಸಿ ಹಿಂದೂ ಕಾರ್ಯಕರ್ತರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆದಿದೆ. ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆರೋಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನು ಎನ್ಕೌಂಟರ್ ಮಾಡುವಂತೆ ಒತ್ತಾಯಿಸಿದ್ದಾರೆ. ಪಯಾಜ್‌ನನ್ನು ತಮ್ಮ ವಶಕ್ಕೆ ನೀಡುವಂತೆ ಒತ್ತಾಯ ಮಾಡಿದ್ದಾರೆ. ಈ ವೇಳೆ ಡಿಸಿಪಿ ರಾಜೀವ್ ಮತ್ತು ಸಂಘಟನೆಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.