ಬ್ರುಸ್ಸೆಲ್ಸ್: ಆಧುನಿಕ ಕಾಲಘಟ್ಟದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಈಗ ಚೆಲ್ಲು ಚೆಲ್ಲು ಆಗಿ ವರ್ತಿಸುವವರು ಮುಂದೊಂದು ದಿನ ಮಹತ್ವದ ಸಾಧನೆ ಮಾಡಬಹುದು. ಲಾಸ್ಟ್ ಬೆಂಚ್ ವಿದ್ಯಾರ್ಥಿಯಾಗಿದ್ದವ ಯುಟ್ಯೂಬರ್ ಆಗಿ ಖ್ಯಾತಿ, ಹಣ ಗಳಿಸಬಹುದು. ಫೇಲ್ ಆದವನು ಯಶಸ್ವಿ ಉದ್ಯಮಿಯಾಗಬಹುದು. ಇದಕ್ಕೆ ನಿದರ್ಶನ ಎಂಬಂತೆ, 2023ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದೊಳಗೆ (Namma Metro) ಅಕ್ರಮವಾಗಿ ನುಸುಳಿ ಕಪಿಚೇಷ್ಟೆ ಮಾಡಿದ್ದ ಯುಟ್ಯೂಬರ್ ಫೀಡಿಯಸ್ ಪನಾಯಿಯೋಟೊ (Fidias Panayiotou) ಅವರೀಗ ಯುರೋಪ್ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದಾರೆ.
ಹೌದು, ಕೇವಲ 24 ವರ್ಷದವರಾದ, ಜಗತ್ತನ್ನು ಸುತ್ತುತ್ತ, ಆ ದೇಶವನ್ನು ಪರಿಚಯ ಮಾಡುತ್ತ, ಯುಟ್ಯೂಬ್ ಸೇರಿ ಸಾಮಾಜಿಕ ಜಾಲತಾಣಗಳ ವಿಡಿಯೊಗಳ ಮೂಲಕವೇ ಖ್ಯಾತಿ ಗಳಿಸಿರುವ ಫೀಡಿಯಸ್ ಪನಾಯಿಯೋಟೊ ಅವರು ಯುರೋಪ್‌ನ ಸಿಪ್ರಸ್ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಯುರೋಪ್ ಸಂಸತ್ ಪ್ರವೇಶಿಸಿದ್ದಾರೆ. ಇವರೀಗ ಸಿಪ್ರಸ್ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದಾರೆ.
ನಮ್ಮ ಮೆಟ್ರೋದಲ್ಲಿ ಮಾಡಿದ್ದ ಕಪಿಚೇಷ್ಟೆ
2023ರಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಫೀಡಿಯಸ್ ಪನಾಯಿಯೋಟೊ, ನಮ್ಮ ಮೆಟ್ರೋವನ್ನು ಅಕ್ರಮವಾಗಿ ಪ್ರವೇಶಿಸಿ, ಟಿಕೆಟ್ ಇಲ್ಲದೆ ಪ್ರಯಾಣಿಸಿ, ಆ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಮೆಟ್ರೋ ರೈಲು ನಿಲ್ದಾಣದ ಪ್ರವೇಶಿಸಿದ್ದ ಫೀಡಿಯಸ್ ಪನಾಯಿಯೋಟೊ , ಗೇಟ್‌ಗಳಿಂದ ಜಿಗಿದು, ಮೆಟ್ರೋ ರೈಲಿನಲ್ಲಿ ಅಕ್ರಮವಾಗಿ ಪ್ರಯಾಣ ಮಾಡಿದ್ದರು. ಅಲ್ಲದೆ, “ಭಾರತದಲ್ಲಿ ಹೇಗೆ ಉಚಿತವಾಗಿ ಮೆಟ್ರೋದಲ್ಲಿ ಪ್ರಯಾಣಿಸಬಹುದನ್ನು ನಿಮಗೆ ತೋರಿಸುತ್ತೇನೆ” ಎಂದು ವಿಡಿಯೊದಲ್ಲಿ ಹೇಳಿದ್ದರು. ಇದಕ್ಕೆ ಬಿಎಂಆರ್‌ಸಿಎಲ್ ಅಸಮಾಧಾನ ವ್ಯಕ್ತಪಡಿಸಿತ್ತು.
ಇಂತಹ ಕುಚೇಷ್ಟೆ ಬುದ್ಧಿಯ ಫೀಡಿಯಸ್ ಪನಾಯಿಯೋಟೊ ಈಗ ಸಂಸತ್ ಸದಸ್ಯರಾಗಿದ್ದಾರೆ. “ನಾನು ಬೇಕಂತಲೇ ತಪ್ಪು ಮಾಡುತ್ತೇನೆ, ತಪ್ಪು ಮಾಡುವುದೇ ನನ್ನ ಗುರಿ (ಪ್ರೊಫೇಷನಲ್ ಮಿಸ್ಟೇಕ್ ಮೇಕರ್)” ಎಂದೆಲ್ಲ ಕರೆದುಕೊಳ್ಳುವ ಫೀಡಿಯಸ್ ಪನಾಯಿಯೋಟೊ ತುಂಬ ದೇಶಗಳನ್ನು ಸುತ್ತಿದ್ದಾರೆ. ಯುಟ್ಯೂಬ್‌ನಲ್ಲಿ ಇವರಿಗೆ ಸುಮಾರು 26 ಲಕ್ಷ ಸಬ್‌ಸ್ಕ್ರೈಬರ್‌ಗಳಿದ್ದಾರೆ. ಇವರು ಕುಚೇಷ್ಟೆ ಮಾಡುತ್ತ ಸೆರೆ ಹಿಡಿದ ವಿಡಿಯೊಗಳು ಲಕ್ಷಾಂತರ ಜನರನ್ನು ಸೆಳೆದಿವೆ.
ಇದನ್ನೂ ಓದಿ: John Cena: ಅನಂತ್ ಅಂಬಾನಿ-ರಾಧಿಕಾ ಮದುವೆಗೆ ಆಗಮಿಸಿದ ಖ್ಯಾತ ರಸ್ಲರ್ ಜಾನ್ ಸೀನ; ವಿಡಿಯೊ ವೈರಲ್