Site icon Vistara News

Congress Convention: ಇಂದು ಮಂಗಳೂರಿನಲ್ಲಿ ಕಾಂಗ್ರೆಸ್‌ ರಾಜ್ಯ ಸಮಾವೇಶ, ಲೋಕಸಭೆ ಚುನಾವಣೆ ಪ್ರಚಾರಕ್ಕೆ ನಾಂದಿ

congress flags

ಮಂಗಳೂರು: ಲೋಕಸಭಾ ಚುನಾವಣೆಗೆ (Lok sabha Election 2024) ಕಾಂಗ್ರೆಸ್ (Congress) ಭಾರಿ ತಯಾರಿ ಮಾಡಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಆರಂಭಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೊದಲ ಸಮಾವೇಶ (Congress convention) ಮಂಗಳೂರಿನಲ್ಲಿ ಇಂದು ನಡೆಯಲಿದೆ.

ಮಂಗಳೂರಿನಲ್ಲಿ ಕಾಂಗ್ರೆಸ್ ರಾಜ್ಯ ಮಟ್ಟದ ಸಮಾವೇಶವನ್ನು ಇಂದು ಆಯೋಜಿಸಲಾಗಿದ್ದು, ಕರಾವಳಿಯಿಂದ ಲೋಕಸಭಾ ಚುನಾವಣೆಗೆ ರಣಕಹಳೆಯನ್ನು ಕಾಂಗ್ರೆಸ್ ಮೊಳಗಿಸಲಿದೆ. ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಪಕ್ಕದ ಚಿಕ್ಕಮಗಳೂರಿನಿಂದ ಹೆಚ್ಚಿನ ಮತಗಳನ್ನು ಸೆಲೆಯಲು ಪ್ಲಾನ್‌ ರೂಪಿಸಲಾಗಿದೆ. ಮಂಗಳೂರು ಹೊರವಲಯದ ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಕಾಲೇಜ್ ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿದೆ.

ಈ ಸಮಾವೇಶದ ಮೂಲಕ ಕರಾವಳಿಯಲ್ಲಿ ನೆಲಕಚ್ಚಿರುವ ಕಾಂಗ್ರೆಸ್‌ಗೆ ಶಕ್ತಿ ತುಂಬುವ ಪ್ರಯತ್ನ ನಡೆಸಲಾಗುತ್ತಿದೆ. ಸಮಾವೇಶದಲ್ಲಿ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ (CM Siddaramaiah), ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಡಿಸಿಎಂ ಡಿಕೆ ಶಿವಕುಮಾರ್, ಗೃಹಸಚಿವ ಪರಮೇಶ್ವರ್, ವೇಣುಗೋಪಾಲ್ ಸೇರಿದಂತೆ ರಾಜ್ಯ‌ದ ಇತರ ಸಚಿವರುಗಳು ಭಾಗಿಗಳಾಗಲಿದ್ದಾರೆ.

ಸಮಾವೇಶಕ್ಕೆ‌ ಸಕಲ ಸಿದ್ಧತೆ ಪೂರ್ಣವಾಗಿದ್ದು, ಇದರಲ್ಲಿ ಸುಮಾರು 50 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಹೆಚ್ಚಾಗಿ ಉಭಯ ಜಿಲ್ಲೆಗಳಿಂದ ಹಾಗೂ ಅಕ್ಕಪಕ್ಕದ ಚಿಕ್ಕಮಗಳೂರು, ಕಾಸರಗೋಡು, ಕೊಡಗುಗಳಿಂದ ಮತ್ತು ರಾಜ್ಯದ ನಾನಾ ಭಾಗಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ. 30 ಸಾವಿರ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮೂರು ಬಾರಿ ಆರಿಸಿ ಬಂದಿದ್ದರೂ, ಈ ಬಾರಿ ಪಕ್ಷದೊಳಗೆ ಹಾಗೂ ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡಿದ್ದಾರೆ. ಬಿಜೆಪಿ ಹೊಸ ಅಭ್ಯರ್ಥಿಯ ತಲಾಶೆಯಲ್ಲಿದೆ. ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ 2ನ್ನು ಮಾತ್ರ ಕಾಂಗ್ರೆಸ್‌ ಗೆಲ್ಲಲು ಸಮರ್ಥವಾಗಿತ್ತು. ಈ ಹಿನ್ನೆಲೆಯಲ್ಲಿ ಪಕ್ಷವನ್ನು ಜಿಲ್ಲೆಯಲ್ಲಿ ಇನ್ನಷ್ಟು ಬಲಿಷ್ಠಗೊಳಿಸಲು ಚಿಂತಿಸಲಾಗಿದ್ದು, ಸೂತ್ರ ಹೆಣೆಯಲಾಗುತ್ತಿದೆ.

ಇದನ್ನೂ ಓದಿ: Rajya Sabha Election: ಕಾಂಗ್ರೆಸ್‌ಗೆ ಮೈತ್ರಿ ಅಭ್ಯರ್ಥಿ ಗುನ್ನ; ಕುಪೇಂದ್ರೆ ರೆಡ್ಡಿ ಸ್ಪರ್ಧೆ ಹಿಂದಿದೆ ಮಾಸ್ಟರ್‌ ಪ್ಲ್ಯಾನ್!

Exit mobile version