ಬೆಂಗಳೂರು: ಮತ್ತೊಮ್ಮೆ ಬಿಬಿಎಂಪಿ (BBMP) ಕಳಪೆ ಕಾಮಗಾರಿ ಬಟಾ ಬಯಲಾಗಿದ್ದು, ಶಿವಾನಂದ ಸರ್ಕಲ್‌ನಲ್ಲಿ (Shivananda Circle) ನಿರ್ಮಿಸಲಾಗಿರುವ ಬೆಂಗಳೂರಿನ (Bangalore) ಚೊಚ್ಚಲ ಸ್ಟೀಲ್ ಫ್ಲೈ ಓವರ್ ಬ್ರಿಡ್ಜ್‌ನ (Steel Flyover Bridge) ಜಾಯಿಂಟ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ.
ಲೋಕಾರ್ಪಣೆಗೊಂಡ ಎರಡೇ ವರ್ಷದಲ್ಲಿ ಸ್ಟೀಲ್ ಬ್ರಿಡ್ಜ್ ಬಿರುಕು ಬಿಟ್ಟಿದ್ದು, ಮೇಲೆ ನಿಂತರೆ ನೆಲ ಕಾಣುವಷ್ಟರ ಮಟ್ಟಿಗೆ ಕಂದಕ ಮೇಲ್ಸೇತುವೆಯಲ್ಲಿ ಕಾಣಿಸಿಕೊಂಡಿದೆ. ಶಿವಾನಂದ ಸರ್ಕಲ್‌ನ ಬೆಂಗಳೂರು ಕೆಫೆ ಬಳಿ ಇರುವ ಪಿಲ್ಲರ್ ಮೇಲಿನ ಜಾಯಿಂಟ್ ಕ್ರ್ಯಾಕ್ ಆಗಿದ್ದು, ಇದೀಗ ಈ ಸೇತುವೆಯ ಮೇಲಿನ ಪ್ರಯಾಣ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಉದ್ಘಾಟನೆಯಾದ ಎರಡನೇ ವರ್ಷದ ಒಳಗೆ ಮೇಲ್ಸೇತುವೆ ಜಾಯಿಂಟ್ ಬಿರುಕು ಬಿಟ್ಟಿದೆ. ಬಿಹಾರದಲ್ಲಿ ಕಂಡುಬರುತ್ತಿರುವ ಸಾಲು ಸಾಲು ಸೇತುವೆಗಳ ಕುಸಿತದ ನಡುವೆ ಈ ಸೇತುವೆಯ ಬಿರುಕು ಆತಂಕ ಮೂಡಿಸಿದೆ. ಪಾಲಿಕೆ ಅಧಿಕಾರಿಗಳ ಕಳಪೆ ಕಾಮಗಾರಿ ಹಾಗೂ ಕಳಪೆ ನಿರ್ವಹಣೆಗೆ ವಾಹನ ಸವಾರರು ಕೆರಳಿ ಕೆಂಡವಾಗಿದ್ದಾರೆ.
500 ಮೀಟರ್ ಉದ್ದದ ಮೇಲ್ಸೇತುವೆ 40 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿದೆ. 2022ರಲ್ಲಿ ಇದು ಲೋಕಾರ್ಪಣೆಗೊಂಡಿತ್ತು. ಅರ್ಧ ಕಿಲೋಮೀಟರ್ ಉದ್ದದ ಮೇಲ್ಸೇತುವೆಯನ್ನು, ಶಿವಾನಂದ ಸರ್ಕಲ್‌ನ ವಾಹನಗಳ ದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಸಿಎಂ ಅಧಿಕೃತ ನಿವಾಸ, ಸಚಿವರ ಮನೆಗಳು ಸೇರಿದಂತೆ ವಿವಿಐಪಿಗಳ ಸಂಚಾರವೂ ಸಾಕಷ್ಟಿದೆ.
ಸೇತುವೆಯು ಪ್ರಯಾಣದ ಸಮಯವನ್ನು ಕಡಿತಗೊಳಿಸುತ್ತದೆ. ಜನನಿಬಿಡ ರೇಸ್ ಕೋರ್ಸ್ ರಸ್ತೆಯಿಂದ ಶೇಷಾದ್ರಿಪುರಂ ರೈಲ್ವೆ ಕೆಳಸೇತುವೆಯನ್ನು ತಲುಪಲು ಮೊದಲಿನ ಇಪ್ಪತ್ತು ನಿಮಿಷಗಳಿಗೆ ಹೋಲಿಸಿದರೆ ಈಗ ಐದು ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಈ ಯೋಜನೆಗೆ 2017ರಲ್ಲಿ ಅಡಿಪಾಯ ಹಾಕಲಾಗಿತ್ತು. ಈ ಉಕ್ಕಿನ ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸಲು ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಐದು ವರ್ಷಗಳನ್ನು ತೆಗೆದುಕೊಂಡಿತು.
ಇಂದಿನಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ಮಾರ್ಟ್ ಟ್ರಾಫಿಕ್ ಸಿಸ್ಟಂ
ಬೆಂಗಳೂರು: ವಾಹನ ಸಂಚಾರ ನಿಯಮ ಉಲ್ಲಂಘನೆ ಹಾಗೂ ರಸ್ತೆ ಅಪಘಾತಗಳ ತಡೆಗಾಗಿ ಸಂಚಾರ ಪೊಲೀಸ್ ವಿಭಾಗ, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ. ಇದರ ಭಾಗವಾಗಿ ಇಂದಿನಿಂದ (ಜುಲೈ 1) ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ (Bangalore–Mysore Expressway) ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS) ಜಾರಿಯಾಗಲಿದೆ. ಈ ಹೈವೇಯಲ್ಲಿ ಇನ್ನುಮುಂದೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರಿಗೆ ನೆರವಾಗಲಿದೆ.
ಜುಲೈ 1ರಿಂದ ಹೆದ್ದಾರಿಯಲ್ಲಿ ಈ ಸ್ಮಾರ್ಟ್ ಟ್ರಾಫಿಕ್ ಸಿಸ್ಟಂ ಜಾರಿ ಆಗಲಿದೆ. ಈ ಮಾರ್ಗದಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡವನ್ನು ನೇರವಾಗಿ ಫಾಸ್ಟ್ಯಾಗ್ ಖಾತೆಯಿಂದಲೇ ಕಡಿತಗೊಳಿಸಲು ಪೊಲೀಸರು ಮುಂದಾಗಿದ್ದಾರೆ. ಕ್ಯಾಮೆರಾಗಳು, ಸ್ಪೀಡ್ ಗನ್‌ಗಳು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಲು ನೆರವಾಗಲಿವೆ. ಜುಲೈ 1ರಿಂದ ಮೈಸೂರು-ಬೆಂಗಳೂರು ಹೆದ್ದಾರಿಯು ಸಂಪೂರ್ಣವಾಗಿ ಕ್ರಿಯಾತ್ಮಕ ಐಟಿಎಂಎಸ್ ಕಾರಿಡಾರ್ (ITMS Corridor) ಆಗಲಿದೆ ಎಂದು ಕರ್ನಾಟಕ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಎಡಿಜಿಪಿ ಅಲೋಕ್ ಕುಮಾರ್ ಇತ್ತೀಚೆಗೆ ತಿಳಿಸಿದ್ದರು.
ಐಟಿಎಂಎಸ್ ಅಥವಾ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಡಿಸೆಂಬರ್ 2022ರಲ್ಲಿ ಬೆಂಗಳೂರಿನಲ್ಲಿ ಚಾಲನೆಗೆ ತರಲಾಯಿತು. ಅದಕ್ಕಾಗಿ 250 ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್‌ಪಿಆರ್) ಕ್ಯಾಮೆರಾಗಳು ಮತ್ತು 80 ರೆಡ್ ಲೈಟ್ ಉಲ್ಲಂಘನೆ ಪತ್ತೆ (ಆರ್‌ಎರ್‌ವಿಡಿ) ಕ್ಯಾಮೆರಾಗಳನ್ನು ನಗರದ 50 ಜಂಕ್ಷನ್ ಗಳಲ್ಲಿ ಅಳವಡಿಸಲಾಗಿದೆ. ಈಗ ಐಟಿಎಂಎಸ್ ಅಡಿಯಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಮೈಸೂರಿನ ಪ್ರಮುಖ ರಸ್ತೆಗಳಲ್ಲಿ 8.5 ಕೋಟಿ ರೂ. ಅಂದರೆ ಮೈಸೂರು ನಗರಕ್ಕೆ ರೂಪಾಯಿ 4 ಕೋಟಿ ಮತ್ತು ಮೈಸೂರು ಜಿಲ್ಲೆಗೆ ರೂ.4.5 ಕೋಟಿ ಅಂದಾಜು ವೆಚ್ಚದಲ್ಲಿ ಅಳವಡಿಸಲಾಗಿದೆ. ಅಲ್ಲದೇ ಜುಲೈ 1ರಿಂದ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವಾಹನ ಚಾಲಕರಿಗೆ ಚಲನ್ ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದರು.
ಅಲ್ಲದೇ ಕ್ಯಾಮೆರಾಗಳನ್ನು ಮೈಸೂರು ಜಿಲ್ಲೆಯ ಹುಣಸೂರು, ಎಚ್ ಡಿ ಕೋಟೆ, ನಂಜನಗೂಡು ಮತ್ತು ಟಿ ನರಸೀಪುರದಂತಹ ಹಲವಾರು ಪ್ರದೇಶಗಳಲ್ಲಿ ಅಳವಡಿಸಲಾಗುವುದು. ಹಾಗಾಗಿ ರೂಲ್ಸ್ ಬ್ರೇಕ್ ಮಾಡಿದ ವಾಹನ ಚಾಲಕರಿಗೆ ಸರಿಯಾದ ಸಮಯಕ್ಕೆ ಎಸ್ ಎಂಎಸ್ ಕಳುಹಿಸಲಾಗುವುದು ಎಂದು ಅವರು ಹೇಳಿದ್ದರು.
ಹೆಚ್ಚುವರಿಯಾಗಿ ಈ ವರ್ಷ ಬೆಂಗಳೂರಿನಿಂದ ಹತ್ತಿರದ ತಾಲೂಕುಗಳು ಮತ್ತು ಜಿಲ್ಲೆಗಳಿಗೆ ಸಂಪರ್ಕಿಸುವ ನಾಲ್ಕು ಪ್ರಮುಖ ಹೆದ್ದಾರಿಗಳಲ್ಲಿ (ತುಮಕೂರು ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ ಮತ್ತು ಹೊಸಕೋಟೆ) ಐಟಿಎಂಎಸ್ ಕ್ಯಾಮೆರಾಗಳನ್ನು ಅಳವಡಿಸಲು ಎಡಿಜಿಪಿ ಪ್ರಸ್ತಾಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಐಟಿಎಂಎಸ್ ಕ್ಯಾಮೆರಾಗಳ ಜೊತೆಗೆ ಅವರು ಈ ರಸ್ತೆಗಳಲ್ಲಿ ವೇರಿಯಬಲ್ ಮೆಸೇಜಿಂಗ್ ಚಿಹ್ನೆಗಳನ್ನು ಸೇರಿಸಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಈ ಸೈನ್ ಬೋರ್ಡ್ ಗಳು ಸರಿಯಾದ ಸಮಯಕ್ಕೆ ಟ್ರಾಫಿಕ್ ಪರಿಸ್ಥಿತಿಯ ಕುರಿತು ಡಿಜಿಟಲ್ ಸಂದೇಶವನ್ನು ಪ್ರದರ್ಶಿಸುತ್ತದೆ. ಈ ಪ್ರಸ್ತಾವನೆಯನ್ನು ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರವು ಅನುಮೋದಿಸಿದ್ದು, ಜುಲೈನಲ್ಲಿ ಟೆಂಡರ್ ಶುರುವಾಗಲಿದೆ. ಗದಗ ಪಟ್ಟಣದಲ್ಲಿಯೂ ಐಟಿಎಂಎಸ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಬಗ್ಗೆ ಜೂನ್ 1ರಂದು ರಾಜ್ಯ ಪೊಲೀಸ್ ನ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗವು ಪ್ರಾದೇಶಿಕ ಎನ್ ಹೆಚ್ಎಐ ಅಧಿಕಾರಿಯೊಂದಿಗೆ ಸಭೆ ನಡೆಸಿತ್ತು. ಹಾಗೇ ಎಡಿಜಿಪಿ ಅವರು ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆಯುವ ಚಿಂತನೆ ಕೂಡ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Bangalore–Mysore Expressway: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಾಳೆಯಿಂದ ಸ್ಮಾರ್ಟ್ ಟ್ರಾಫಿಕ್ ಸಿಸ್ಟಂ