ಮುಂಬೈ: ಒಂದು ವಾರದ ಹಿಂದೆ ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿ (Nagpur) ನಡೆದ ಹಿಂಟ್ ಆ್ಯಂಡ್ ರನ್ ಕೇಸ್‌ಗೆ (Hit And Run Case) ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಹಿಂಟ್ ಆ್ಯಂಡ್ ರನ್‌ಗೆ 82 ವರ್ಷದ ವ್ಯಕ್ತಿಯು ಕಳೆದ ವಾರ ಬಲಿಯಾಗಿದ್ದರು. ಆದರೆ, ಪೊಲೀಸ್ ತನಿಖೆಯ ಬಳಿಕ ಭೀಕರ ಮಾಹಿತಿಯೊಂದು ಬಯಲಾಗಿದೆ. ಮಾವನ 300 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಡೆಯಲು ಸೊಸೆಯೇ 1 ಕೋಟಿ ರೂ. ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ ಎಂಬ ಸಂಗತಿಯು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಹೌದು, ನಾಗ್ಪುರ ಪ್ಲಾನಿಂಗ್ ಡಿಪಾರ್ಟ್‌ನಲ್ಲಿ ಸಹಾಯಕ ನಿರ್ದೇಶಕಿಯಾಗಿರುವ ಅರ್ಚನಾ ಮನೀಶ್ ಪುಟ್ಟೇವಾರ್ ಎಂಬ ಮಹಿಳೆಯು ಸುಪಾರಿ ಕೊಟ್ಟು ತಮ್ಮ ಮಾವ, 82 ವರ್ಷದ ಪುರುಷೋತ್ತಮ್ ಪುಟ್ಟೇವಾರ್ ಅವರನ್ನು ಕೊಲೆ ಮಾಡಿಸಿದ್ದಾರೆ ಎಂಬ ಸಂಗತಿಯು ಪೊಲೀಸರ ತನಿಖೆಯಿಂದ ಬಯಲಾಗಿದೆ. “ಮಾವನ ಹತ್ಯೆಗಾಗಿ ಮಹಿಳೆಯು ಸುಪಾರಿ ಕೊಟ್ಟಿದ್ದಾರೆ. ಹಲವು ದುಷ್ಕರ್ಮಿಗಳಿಗೆ 1 ಕೋಟಿ ರೂ. ಕೊಟ್ಟ ಅವರು, ಹಳೆಯ ಕಾರು ಖರೀದಿಸಿ, ಮಾವನಿಗೆ ಡಿಕ್ಕಿ ಹೊಡೆಸಿ ಕೊಂದು ಬಿಡಿ. ಆದರೆ, ಅದು ಅಪಘಾತದ ರೀತಿ ಆಗಿರಬೇಕು ಎಂಬುದಾಗಿ ಸೂಚಿಸಿದ್ದರು” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂಬುದಾಗಿ ಪಿಟಿಐ ವರದಿ ಮಾಡಿದೆ.
ಅರ್ಚನಾ ಮನೀಶ್ ಪಟ್ಟೇವಾರ್ ಅವರು ಪತಿಯ ಕಾರಿನ ಚಾಲಕನಾಗಿರುವ ಬಾಗ್ಡೆ, ಇತರ ಆರೋಪಿಗಳಾದ ನೀರಜ್ ನಿಮ್ಜೆ ಹಾಗೂ ಸಚಿನ್ ಧಾರ್ಮಿಕ್ ಎಂಬುವರಿಗೆ ಹಣ ಕೊಟ್ಟು ಸಂಚು ರೂಪಿಸಿದ್ದಾರೆ. ಇವರ ಸಂಚು ಬಯಲಾದ ಬಳಿಕ ಮೂವರನ್ನು ಬಂಧಿಸಿದ ಪೊಲೀಸರು, ಭಾರತೀಯ ದಂಡ ಸಂಹಿತೆ (IPC), ಮೋಟಾರು ವಾಹನಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಇವರಿಂದ ಎರಡು ಕಾರು, ಮೊಬೈಲ್‌ಗಳು ಹಾಗೂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಪುರುಷೋತ್ತಮ್ ಪುಟ್ಟೇವಾರ್ ಅವರ ಪತ್ನಿ ಶಕುಂತಲಾ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿದ್ದರು. ಇವರನ್ನು ಭೇಟಿಯಾದ ಪುರುಷೋತ್ತಮ್ ಪುಟ್ಟೇವಾರ್ ಅವರು ಮನೆಗೆ ವಾಪಸಾಗುವಾಗ ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದರು. ಕಾರು ಹಿಂದಿನಿಂದ ಗುದ್ದಿತ್ತು. ಇದೊಂದು ಹಿಂಟ್ ಆ್ಯಂಡ್ ರನ್ ಕೇಸ್ ಎಂದೇ ಭಾವಿಸಲಾಗಿತ್ತು. ಆದರೆ, ಪೊಲೀಸರು ತನಿಖೆ ನಡೆಸಿದಾಗ ಸೊಸೆಯೇ ಕೊಲೆಗೆ ಸಂಚು ರೂಪಿಸಿದ್ದು ಬಯಲಾಗಿದೆ. ಅರ್ಚನಾ ಅವರ ಪತಿಯು ವೃತ್ತಿಯಲ್ಲಿ ವೈದ್ಯರಾಗಿದ್ದು, ಪತ್ನಿಯ ಸಂಚು ತಿಳಿದು ಅವರಿಗೆ ಶಾಕ್ ಆಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Murder case : ಹಿರಿಯ ಸ್ವಾಮೀಜಿ ಕೊಂದ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ