ಮುಂಬೈ: ಇಂದಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್ (Digital) ನಿಂದ ಆಗುತ್ತಿದೆ. ಒಂದು ಪ್ಯಾಕೆಟ್ ಬಿಸ್ಕೇಟ್ ನಿಂದ ಹಿಡಿದು ಹಾಕುವ ಬಟ್ಟೆವರೆಗೂ ಫೋನ್ ಮೂಲಕ ವ್ಯವಹಾರ ನಡೆಸುತ್ತೇವೆ. ಪರ್ಸ್ ಮರೆತರೂ ಪರ್ವಾಗಿಲ್ಲ, ಮೊಬೈಲ್ ಹಾಗೂ ಆನ್‌ಲೈನ್ ಬ್ಯಾಂಕಿಂಗ್‌ನ ಪಾಸವರ್ಡ್ ನೆನಪಿದ್ದರೆ ಸಾಕು ಎನ್ನುವವರೇ ಹೆಚ್ಚು. ಜನರು ಎಲ್ಲಾ ವ್ಯವಹಾರಗಳನ್ನು ಆನ್‌ಲೈನ್ ನಲ್ಲಿಯೇ ಮಾಡುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ (Cyber Crime) ಘಟನೆಗಳು ಹೆಚ್ಚಾಗಿ ನಡೆಯುತ್ತಿರುತ್ತದೆ. ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ, ಮೆಸೇಜ್ ಗಳನ್ನು ಕಳುಹಿಸುವ ಮೂಲಕ ಅವರ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಲೂಟಿ ಮಾಡುತ್ತಿದ್ದಾರೆ. ಇದೀಗ ಅಂತಹದೊಂದು ಘಟನೆ ದಾಖಲಾಗಿದೆ. ದಾದರ್‌ನಲ್ಲಿ ನಟನೊಬ್ಬ ಫೋನ್ ನಲ್ಲಿ ವೈದ್ಯರ ಅಪಾಯಿಂಟ್ ಮೆಂಟ್ ತೆಗೆದುಕೊಳ್ಳಲು ಹೋಗಿ ವಂಚಕನಿಂದ (Fraud case) ತನ್ನ ಬ್ಯಾಂಕ್ ಖಾತೆಯಿಂದ 77,000 ರೂ ಕಳೆದುಕೊಂಡಿದ್ದಾನೆ.
ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಬಾಲ್ ಆಜಾದ್ (59) ವಂಚನೆಗೆ ಒಳಗಾದ ಸಂತ್ರಸ್ತ. ಈತ ಗೂಗಲ್ ನಲ್ಲಿ ಮೂಳೆ ವೈದ್ಯರ ಫೋನ್ ನಂಬರ್ ಅನ್ನು ಹುಡುಕಿ ಜೂನ್ 6ರಂದು ಅವರಿಗೆ ಕರೆ ಮಾಡಿದ್ದಾನೆ. ಆ ಕಡೆ ಕರೆ ಸ್ವೀಕರಿಸಿದ ವ್ಯಕ್ತಿ ವೈದ್ಯರೊಂದಿಗೆ ಮಾತನಾಡುವ ಮೊದಲು 10 ರೂ ಪಾವತಿಸಿ ನೊಂದಾಯಿಸಿಕೊಳ್ಳಲು ಹೇಳಿದ್ದಾನೆ. ಹಾಗೇ ಆತ ಆಜಾದ್ ಗೆ ಎರಡು ಬಾರಿ ಲಿಂಕ್ ಕಳುಹಿಸಿದನು. ಆದರೆ ಆಜಾದ್ ಆ ಲಿಂಕ್ ಗೆ ಮೊತ್ತವನ್ನು ಕಳುಹಿಸಲು ವಿಫಲನಾದನು. ಆದರೂ ಅವರ ಖಾತೆಯಿಂದ 77,000 ರೂ. ಲೂಟಿಯಾಗಿದೆ.
ಆಜಾದ್‌ಗೆ ಅನುಮಾನ ಬಂದು ತಕ್ಷಣ ತಮ್ಮ ಬ್ಯಾಂಕ್ ಮ್ಯಾನೇಜರ್‌ಗೆ ಎಚ್ಚರಿಕೆ ನೀಡಿದರೂ ಕೂಡ ವಂಚಿತನ ಲಿಂಕ್ ಟ್ಯಾಪ್ ಮಾಡಿದ ನಾಲ್ಕು ದಿನಗಳ ನಂತರ ಅವನ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆ. ಬ್ಯಾಂಕ್ ಹಣ ಕಡಿತಗೊಂಡ ಬಗ್ಗೆ ಸೋಮವಾರ ಆಜಾದ್ ಮೊಬೈಲ್‌ಗೆ ನಾಲ್ಕು ಮಸೇಜ್ ಬಂದಿದೆ. ಹಾಗಾಗಿ ಆತ ತಕ್ಷಣ ಸೈಬರ್ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿದರೂ ಕೂಡ ಅವನಿಗೆ ಅವನ ಹಣ ಮರಳಿ ಸಿಗಲಿಲ್ಲ ಎಂಬುದಾಗಿ ತಿಳಿದುಬಂದಿದೆ.
ಈ ಬಗ್ಗೆ ಆಜಾದ್ ಪ್ರಕರಣ ದಾಖಲಿಸಿದ್ದು, 420(ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: Free Bus Problem: ನಮಗೆ ಫ್ರೀ ಬಸ್ ಬೇಡ, ವಿದ್ಯೆ ಬೇಕು! ಈ ವಿದ್ಯಾರ್ಥಿನಿ ಮಾತಿನ ವಿಡಿಯೊ ನೋಡಿ
ಹಾಗಾಗಿ ಜನರು ಆನ್‌ಲೈನ್ ನಲ್ಲಿ ವ್ಯವಹಾರ ಮಾಡುವ ಮುನ್ನ ಎಚ್ಚರಿಕೆಯಿಂದಿರಿ. ನಿಮಗೆ ತಿಳಿಯದ ಯಾವುದೇ ಲಿಂಕ್‌ಗಳನ್ನು ಓಪನ್ ಮಾಡಲು ಹೋಗಬೇಡಿ. ಇದರಿಂದ ನೀವು ಸೈಬರ್ ಅಟ್ಯಾಕ್‌ಗಳಿಂದ ತಪ್ಪಿಸಿಕೊಳ್ಳಬಹುದು.