ಮಂಗಳೂರಿನಲ್ಲಿ ಶನಿವಾರ ಸಂಭವಿಸಿದ ಆಟೋರಿಕ್ಷಾ ಸ್ಫೋಟವು ಆಕಸ್ಮಿಕವಲ್ಲ, ಅದೊಂದು ಭಯೋತ್ಪಾದನಾ ಕೃತ್ಯ ಎಂಬುದು ಗೊತ್ತಾಗುತ್ತಿದ್ದಂತೆ ರಾಜ್ಯದಲ್ಲಿ ಆತಂಕ ಸೃಷ್ಟಿಯಾಗಿದೆ. ಇತ್ತೀಚಿಗೆ ಕರ್ನಾಟಕದಲ್ಲಿ ಉಗ್ರ ಕೃತ್ಯಗಳು ನಡೆದ ಬಗ್ಗೆ ಉದಾಹರಣೆಗಳಿರಲಿಲ್ಲ. ಹಾಗಾಗಿ, ಮಂಗಳೂರಿನ ಸ್ಫೋಟ ಘಟನೆಯು ಹೆಚ್ಚು ಚರ್ಚಿತವಾಗುತ್ತಿದೆ. ಒಂದು ವೇಳೆ, ಈ ಸ್ಫೋಟದಲ್ಲಿ ಗಾಯಗೊಂಡಿರುವ ಆರೋಪಿ ಏನಾದರೂ ತನ್ನ ಗುರಿಯನ್ನು ತಲುಪಿದ್ದರೆ, ಬಹುಶಃ ರಾಜ್ಯ ಬಹುದೊಡ್ಡ ಅನಾಹುತವನ್ನು ಕಾಣುತ್ತಿತ್ತು. ಹಾಗಾಗಿ, ಇದೊಂದು ವಿಫಲ ಯತ್ನ ಎಂದು ಭಾವಿಸಿದರೂ, ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವನ್ನು ಎತ್ತಿ ತೋರಿಸಿದೆ.
ಹಾಗೆ ನೋಡಿದರೆ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಳಿಕ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಭಾರತವನ್ನು ಹೊರತುಪಡಿಸಿ ದೇಶದ ಉಳಿದ ಭಾಗಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಭಯೋತ್ಪಾದನೆ ಕೃತ್ಯಗಳು ನಡೆದಿಲ್ಲ. ಇದು ನಿಜವಾದರೂ, ಈಗ ನಡೆಯುತ್ತಿರುವ ಕೆಲವು ಉಗ್ರ ಪ್ರೇರಿತ ಘಟನೆಗಳು ಸೂಚ್ಯವಾಗಿ ಬೇರೆ ಸಂದೇಶವನ್ನು ನೀಡುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ತನಿಖಾ ಸಂಸ್ಥೆಗಳು ಈ ಸಂದೇಶಗಳನ್ನು ಅರ್ಥೈಸಿಕೊಳ್ಳಬೇಕು. ಇಲ್ಲದಿದ್ದರೆ, ದೊಡ್ಡ ದೊಡ್ಡ ಭಯೋತ್ಪಾದನಾ ಕೃತ್ಯಕ್ಕೆ ದೇಶ ಸಾಕ್ಷಿಯಾಗಬಹುದು.
ಕಳೆದ ತಿಂಗಳವಷ್ಟೇ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಾರ್ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿತ್ತು. ಇದೊಂದು ಆಕಸ್ಮಿಕ ಸ್ಫೋಟ ಎಂದು ಭಾವಿಸಲಾಯಿತು. ಆದರೆ, ತನಿಖೆ ಮುಂದುವರಿದಂತೆ ಅದೊಂದು ಭಯೋತ್ಪಾದನಾ ಕೃತ್ಯ ಎಂಬುದು ಸಾಬೀತಾಗಿತ್ತು. ಈ ಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿ ಮಜೀಶಾ ಮುಬಿನ್ 2019ರಲ್ಲಿ ತನಿಖಾ ಸಂಸ್ಥೆಗಳು ಐಸಿಸ್ ಲಿಂಕ್ ಹೊಂದಿರುವ ಕುರಿತು ವಿಚಾರಣೆಗೊಳಪಡಿಸಿದ್ದವು. ಅಲ್ಲದೇ, ಕಾರಿನಲ್ಲಿ ಸ್ಫೋಟವಾಗಿದ್ದು ಗ್ಯಾಸ್ ಸಿಲಿಂಡರ್ ಅಲ್ಲ, ಬದಲಿಗೆ ಬಾಂಬ್ ಆಗಿತ್ತು. ಆತ ನಿರ್ದಿಷ್ಟ ಪ್ರದೇಶದಲ್ಲಿ ಅದನ್ನು ಪ್ಲಾಂಟ್ ಮಾಡಲು ಹೊರಟ್ಟಿದ್ದ ಎಂಬುದು ನಂತರ ತನಿಖೆಯ ವೇಳೆ ತಿಳಿದು ಬಂತು. ಅದೇ ರೀತಿ, ಈಗ ಮಂಗಳೂರಲ್ಲಾಗಿರುವ ಸ್ಫೋಟ ಇಂಥದ್ದೇ ಯೋಜನಾ ಇತಿಹಾಸವನ್ನು ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಬಹುಶಃ ತನಿಖೆ ಮುಂದುವರಿದಂತೆ ಇನ್ನಷ್ಟು ಮಾಹಿತಿಗಳು ಹೊರ ಬೀಳಬಹುದು. ಈ ಘಟನೆಯ ಹಿಂದೆ ಸ್ಥಳೀಯರಿದ್ದಾರೋ, ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳ ಸಂಪರ್ಕ ಏನಾದರೂ ಇದೆಯೇ ಎಂಬುದು ಸ್ಪಷ್ಟವಾಗಲಿದೆ.
ಆದರೆ, ನಮ್ಮ ಗುಪ್ತಚರ ವ್ಯವಸ್ಥೆ, ಪೊಲೀಸ್ ವ್ಯವಸ್ಥೆಗೆ ಇಂಥದೊಂದು ಕೃತ್ಯದ ಸುಳಿವು ಏಕೆ ಸಿಗಲಿಲ್ಲ? ವಿಶೇಷವಾಗಿ ಭಯೋತ್ಪಾದನೆಗೆ ಸಂಬಂಧಿಸಿದಂತೆ ಸರ್ಕಾರಿ ಸಂಸ್ಥೆಗಳು ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಮಂಗಳೂರು ಆಟೋ ರಿಕ್ಷಾ ಸ್ಫೋಟದ ವಿಷಯದಲ್ಲಿ ಗುಪ್ತಚರ ಮತ್ತು ಪೊಲೀಸ್ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತನ್ನು ಕೇವಲ ರಾಜಕೀಯ ಹೇಳಿಕೆ ಎಂದು ತಳ್ಳಿ ಹಾಕುವಂತಿಲ್ಲ. ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ. ಇಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ಯಶಸ್ವಿ ಉಗ್ರಕೃತ್ಯಗಳು ನಡೆಯುವುದಿಲ್ಲ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ.
ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ನೋ ಮನಿ ಫಾರ್ ಟೆರರ್ ಸಮ್ಮೇಳನದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿ, ಭಯೋತ್ಪಾದನೆಗೆ ಧರ್ಮವನ್ನು ತಳುಕು ಹಾಕುವುದು ಸರಿಯಲ್ಲ ಎಂದಿದ್ದಾರೆ. ಆದರೆ ಇತ್ತೀಚೆಗೆ ನಡೆದ ಉಗ್ರ ಕೃತ್ಯಗಳೆಲ್ಲ ನಿರ್ದಿಷ್ಟ ಧರ್ಮಕ್ಕೇ ಸೇರಿದವರು ಎನ್ನುವುದು ಸತ್ಯ. ಇಂಥ ಮತೀಯ ಶಕ್ತಿಗಳಿಗೆ ನಮ್ಮ ಶತ್ರು ರಾಷ್ಟ್ರಗಳ ನೇರ ಬೆಂಬಲ ಇರುವುದು ಹಗಲಿನಷ್ಟೆ ಸ್ಪಷ್ಟ. ಇಂಥ ದೇಶದ್ರೋಹಿ ದುಷ್ಟಶಕ್ತಿಗಳನ್ನು ದಮನ ಮಾಡುವತ್ತ ಸರ್ಕಾರಗಳು ಮತ್ತಷ್ಟು ಪವರ್ ಬಳಸಬೇಕಿದೆ.
ಬಿಹಾರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಪಂಜಾಬ್, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ನಾವು ಇತ್ತೀಚಿನ ಎರಡ್ಮೂರು ವರ್ಷಗಳಲ್ಲಿ ಹೆಚ್ಚಿನ ಉಗ್ರ ಕೃತ್ಯಗಳು ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಇನ್ನೂ ಹೆಚ್ಚಿನ ಅನಾಹುತ ಸೃಷ್ಟಿಸುವ ಉಗ್ರ ಘಟನೆಗಳು ನಡೆಯುವುದಕ್ಕಿಂತ ಮುಂಚೆಯೇ ನಾವು ಎಚ್ಚೆತ್ತುಕೊಳ್ಳಬೇಕು ಎಂಬ ಸಂದೇಶಗಳನ್ನು ಮಂಗಳೂರು ಆಟೋರಿಕ್ಷಾದಂಥ ಸ್ಫೋಟಗಳು ರವಾನಿಸುತ್ತಿವೆ. ಈ ಸಂಗತಿಯನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು ಮತ್ತು ಅದಕ್ಕೆ ಬೇಕಾಗಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಅದು ಬಿಟ್ಟು, ಎಲ್ಲವೂ ಚೆನ್ನಾಗಿದೆ. ಸುಭದ್ರವಾಗಿದೆ. ಸ್ಥಿರವಾಗಿದೆ. ಗಂಭೀರ ಭಯೋತ್ಪಾದನಾ ಕೃತ್ಯಗಳು ಇಲ್ಲವೇ ಎಲ್ಲ ಎಂಬ ಸರ್ಕಾರದ ಹುಸಿ ವಿಶ್ವಾಸವು ನಮ್ಮನ್ನು ಘೋರ ಅಪಾಯಕ್ಕೆ ಸಿಲುಕಿಸಬಹುದು. ಹಾಗಾಗಿ, ನಿಧಾನವಾಗಿ ಚಿಗಿತುಕೊಳ್ಳುತ್ತಿರುವ ಭಯೋತ್ಪಾದನಾ ಕೃತ್ಯಗಳ ಹಿಂದಿರುವ ಶಕ್ತಿಗಳನ್ನು ಮಟ್ಟ ಹಾಕುವ ಕೆಲಸವನ್ನು ಸರ್ಕಾರಗಳು ನಿರ್ದಾಕ್ಷಿಣ್ಯವಾಗಿ ಮಾಡಬೇಕು.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಭಯೋತ್ಪಾದನೆಗೆ ಅಸಹಕಾರ ಅಂತಾರಾಷ್ಟ್ರೀಯ ನೀತಿಯಾಗಲಿ