ಬೆಂಗಳೂರು: ಮುಡಾ ಹಗರಣದ (MUDA Scam) ವಿಚಾರದಲ್ಲಿ ಬಂದಿರುವ ದೂರಿನ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರಕ್ಕೆ ರಾಜ್ಯಪಾಲರು (Governor) ನೋಟೀಸ್ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿ ನೀಡಬೇಕು ಎಂದು ಬಂದಿರುವ ಮನವಿ ಹಿನ್ನೆಲೆಯಲ್ಲಿ ನೋಟೀಸ್ (Notice) ನೀಡಲಾಗಿದೆ.
ಮುಡಾ ಪ್ರಕರಣದ ಮಾಹಿತಿ ದಾಖಲೆ ಸಹಿತ ನೀಡುವಂತೆ ಸರ್ಕಾರಕ್ಕೆ ರಾಜ್ಯಪಾಲರು ನೋಟೀಸ್ ಕಳಿಸಿದ್ದಾರೆ. ಟಿ.ಜೆ ಅಬ್ರಹಾಂ ಎಂಬ ಸಾಮಾಜಿಕ ಕಾರ್ಯಕರ್ತರು ಈ ಕುರಿತು ಖಾಸಗಿ ದೂರು ಸಲ್ಲಿಸಿದ್ದರು. ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿಯಲ್ಲಿ ಕೇಳಲಾಗಿತ್ತು. ಮೂರು ದಿನಗಳ ಹಿಂದೆ ದೂರುದಾರ ಟಿ.ಜೆ ಅಬ್ರಹಾಂ ಅವರನ್ನು ಕರೆದು ರಾಜ್ಯಪಾಲರು ಮಾಹಿತಿ ಪಡೆದಿದ್ದರು. ಬಿಜೆಪಿ ನಿಯೋಗ ಕೂಡ ರಾಜ್ಯಪಾಲರನ್ನು ಭೇಟಿಯಾಗಿ, ಸಿಎಂ ವಿರುದ್ಧ ತನಿಖೆ ಜರುಗಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.
ಬಳಿಕ ಇದೀಗ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟೀಸ್ ಕಳುಹಿಸಲಾಗಿದೆ. ಅಬ್ರಹಾಂ ದೂರಿಗೆ ಸಂಬಂಧಿಸಿ ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಕೊಡುವಂತೆ ನೋಟೀಸ್ ಜಾರಿ ಮಾಡಿದ್ದಾರೆ. ಈಗಾಗಲೇ ರಾಜ್ಯಪಾಲರು ನೋಟೀಸ್ ಕಳುಹಿಸಬಹುದು ಎಂಬ ವದಂತಿಯ ಆಧಾರದಲ್ಲಿ ಕಾಂಗ್ರೆಸ್ ಮುಖಂಡರು ಸಿಡಿದೆದ್ದಿದ್ದಾರೆ. ನಿನ್ನೆ ಕಂದಾಯ ಸಚಿವ ಕೃಷ್ಣಭೈರೇಗೌಡರು, ʼರಾಜ್ಯಪಾಲರ ಮೂಲಕ ಸರಕಾರ ಅಸ್ಥಿರಗೊಳಿಸುವ ದಾರಿ ಹಿಡಿದರೆ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದೇವೆʼ ಎಂದು ಎಚ್ಚರಿಸಿದ್ದರು.
ಇಡಿ ಜೊತೆಗೆ ರಾಜಭವನದ ದುರುಪಯೋಗ ಆಗುತ್ತಿದೆ ಎಂದು ಕಾಂಗ್ರೆಸ್ ಸಚಿವರು ಆರೋಪಿಸಿದ್ದರು. ಈ ನಡುವೆ ಮುಡಾ ವಿಚಾರದಲ್ಲಿ ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಡುವುದರ ವಿರುದ್ಧ ಇಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ವಿರೋಧಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ವಾಲ್ಮೀಕಿ ನಿಗಮ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಇಡಿ, ಸಿಎಂ ವಿರುದ್ಧ ಪ್ರಾಸಿಕ್ಯೂಶನ್‌ಗೆ ಈವರೆಗೂ ಅನುಮತಿ ಕೇಳಿಲ್ಲ.
ಇದರ ಮಧ್ಯೆಯೇ, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿ ಸಂಬಂಧ ಪ್ರಧಾನಿಗಳ ಜೊತೆ ಡಿಸಿಎಂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಕೇಂದ್ರ ಸರಕಾರವನ್ನು ಪ್ರಶ್ನಿಸಿ: ಸಿದ್ದರಾಮಯ್ಯ
ರಾಷ್ಟ್ರಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಹಂಚಿಕೆ (ಎಸ್ ಸಿಎಸ್ ಪಿ/ಟಿಎಸ್ ಪಿ) ಯೋಜನೆಯನ್ನು ಜಾರಿಗೊಳಿಸದೆ, ದಲಿತರ ಅಭಿವೃದ್ದಿಗೆ ನ್ಯಾಯಬದ್ಧವಾಗಿ ಸಲ್ಲಬೇಕಾಗಿರುವ ಬಜೆಟ್ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿ ಅನ್ಯಾಯ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ನಮ್ಮ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕ ಅಧಿಕಾರ ಇದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಸ್ ಸಿ/ಎಸ್ ಟಿ ಕಲ್ಯಾಣದ ಬಗ್ಗೆ ಕರ್ನಾಟಕ ಸರ್ಕಾರವನ್ನು ಪ್ರಶ್ನಿಸಬೇಕೆಂದು ಕರೆ ಕೊಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ಅವರೇ, ನಿಮಗೆ ದಲಿತರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯನ್ನು ಜಾರಿಗೆ ತಂದು ಕೇಂದ್ರ ಬಜೆಟ್ ನಲ್ಲಿ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಶೇಕಡಾ 25ರಷ್ಟು ಅನುದಾನವನ್ನು ಮೀಸಲಿಡಿ, ಆ ಮೇಲೆ ನಮ್ಮನ್ನು ಪ್ರಶ್ನೆ ಮಾಡಲು ಬನ್ನಿ. ಅಲ್ಲಿಯ ವರೆಗೆ ಮೌನವಾಗಿರುವುದು ನಿಮಗೆ ಕ್ಷೇಮ ಎಂದಿದ್ದಾರೆ ಅವರು.
ಇದನ್ನೂ ಓದಿ: Muda Scam: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ; ಲೋಕಾಯುಕ್ತಕ್ಕೆ ಪ್ರಮುಖ ದಾಖಲೆ ಸಲ್ಲಿಕೆ