ಬೆಂಗಳೂರು: ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಸಂಕಷ್ಟ ಬಿಗಡಾಯಿಸಿದೆ. ಪ್ರಾಸಿಕ್ಯೂಶನ್‌ಗೆ (Prosecution) ರಾಜ್ಯಪಾಲರು (Governor) ಇಂದು ಅನುಮತಿ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ (TJ Abraham) ಪ್ರಾಸಿಕ್ಯೂಶನ್‌ಗೆ ಅನುಮತಿ ಕೇಳಿದ್ದರು.
ದೂರುದಾರ ಅಬ್ರಹಾಂ ಅವರನ್ನು ಇಂದು ರಾಜಭವನಕ್ಕೆ ಕರೆಸಿಕೊಂಡ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot), ಪ್ರಾಸಿಕ್ಯೂಶನ್‌ಗೆ ದೂರು ದಾಖಲಿಸಲು ಅನುಮತಿ ನೀಡಿದರು.
ಕಳೆದ ಒಂದು ವಾರದಿಂದ ರಾಜಭವನದ ನಡೆ ನಿಗೂಢವಾಗಿತ್ತು. ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಯಾವ ಕ್ರಮ ಜರುಗಿಸಲಿದ್ದಾರೆ ಎಂಬ ಕುತೂಹಲ ಇತ್ತು. ದಿಲ್ಲಿ ಪ್ರವಾಸದಲ್ಲಿದ್ದ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಕಳೆದ ವಾರ ಬೆಂಗಳೂರಿಗೆ ಮರಳಿದ ಬಳಿಕ, ತಾವು ಕೊಟ್ಟಿದ್ದ ನೋಟೀಸ್‌ಗೆ ರಾಜ್ಯ ಸಚಿವ ಸಂಪುಟದ ಉತ್ತರ ಹಾಗೂ ಸಿಎಂ ಸಿದ್ದರಾಮಯ್ಯ ನೀಡಿದ್ದ ಉತ್ತರಗಳನ್ನು ಪರಿಶೀಲಿಸಿದ್ದರು. ದೂರುದಾರ ಟಿ.ಜೆ ಅಬ್ರಾಹಂ ಮೇಲೆಯೇ ದೂರುಗಳಿವೆ ಎಂದು ಸಚಿವ ಸಂಪುಟ ಆರೋಪಿಸಿತ್ತು. ಮುಡಾ ಹಗರಣದ ವಿಚಾರಣೆಗಾಗಿ ರಾಜ್ಯ ಸರಕಾರ ನ್ಯಾ| ದೇಸಾಯಿ ಅವರ ಆಯೋಗವನ್ನು ರಚಿಸಿದೆ.
ಜೊತೆಗೆ ಮೈಸೂರಿನ ಸ್ನೇಹಮಯಿ ಕೃಷ್ಣ ಎಂಬವರು ಸಿಎಂ ವಿರುದ್ಧ ಮತ್ತೂಂದು ದೂರು ಸಲ್ಲಿಸಿದ್ದರು. ಅಕ್ರಮ ಭೂ ಡಿನೋಟಿಫಿಕೇಶನ್‌ಗೆ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆಂದು ಆರೋಪಿಸಿದ್ದರು. ಜಿಲ್ಲಾಧಿಕಾರಿಯಿಂದ 15 ದಿನದಲ್ಲಿ ವರದಿ ಪಡೆದು ಸೂಕ್ತ ಕ್ರಮ ಜರಗಿಸುವಂತೆ ಕೋರಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ರಾಜ್ಯಪಾರು ಗಮನಿಸಿದ್ದರು.
ರಾಜ್ಯಪಾಲರ ಮುಂದಿನ ನಡೆಗಾಗಿ ದೂರುದಾರ ಅಬ್ರಹಾಂ ಕಾದಿದ್ದರು. ರಾಜ್ಯಪಾಲರು ಅನುಮತಿ ನೀಡದಿದ್ದರೆ ಸಿಬಿಐ ಅಥವಾ ಲೋಕಾಯುಕ್ತ ತನಿಖೆಗೆ ಕೋರುವ ಬಗ್ಗೆ ಕಾನೂನು ಸಲಹೆ ಪಡೆದುಕೊಂಡಿದ್ದರು. ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡದಿದ್ದರೂ ನೇರವಾಗಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಲು ಕೇಂದ್ರದ ಕಾಯಿದೆಗಳಲ್ಲಿ ಅವಕಾಶಗಳಿವೆಯೇ ಎಂಬುದನ್ನೂ ಪರಿಶೀಲಿಸಿದ್ದರು.
ರಾಜ್ಯಪಾಲರ ನೋಟೀಸ್‌ಗೆ ಒಂದು ಸಾಲಿನ ನಿರ್ಣಯ ಕಳಿಸಿದ ರಾಜ್ಯ ಸರ್ಕಾರ, ಅದಕ್ಕೆ ಸಂಬಂಧಿಸಿದಂತೆ 70 ದಾಖಲೆಗಳನ್ನು ರಾಜ್ಯಪಾಲರಿಗೆ ರವಾನಿಸಿತ್ತು. 1990ರ ದಶಕದಿಂದಲೂ ಇಲ್ಲಿಯವರೆಗೂ ದಾಖಲೆ ನೀಡಿರುವ ಸರ್ಕಾರ, ಸಿದ್ದರಾಮಯ್ಯ ಪತ್ನಿಗೆ ಆಸ್ತಿ ವರ್ಗಾವಣೆ ಹಾಗೂ ಗಿಫ್ಟ್ ಡೀಡ್ ಬಗ್ಗೆ ದಾಖಲೆ ಹಾಗೂ ಸಾಕ್ಷಿ ಸಮೇತ ವಿವರಣೆ ನೀಡಿದೆ. ಹಾಗೂ ದೂರುದಾರ ಅಬ್ರಹಾಂ ಬಗ್ಗೆಯೂ ಮಾಹಿತಿ ನೀಡಿದೆ. ಈ ದಾಖಲೆಗಳನ್ನು ರಾಜ್ಯಪಾಲರು ಪರಿಶೀಲನೆ ಮಾಡುತ್ತಿದ್ದಾರೆ.
ಇತ್ತ ಸಿಎಂ ಸಿದ್ದರಾಮಯ್ಯ ಅವರ 10 ಜನರ ಕಾನೂನು ಟೀಮ್ ಫುಲ್ ಆಕ್ಟೀವ್ ಆಗಿದೆ. ರಾಜ್ಯಪಾಲರ ನಡೆ ಪ್ರಶ್ನೆ ಮಾಡಿ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜನಪ್ರತಿನಿಧಿಗಳ ಹಾಗೂ ಲೋಕಾಯುಕ್ತ ಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ವರೆಗೂ ಹೋಗಲು ವಕೀಲರ ಟೀಮ್ ರೆಡಿಯಾಗಿದೆ. ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಅವರಿಂದಲೇ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಯುತ್ತಿದೆ.
ಮತ್ತೊಂದೆಡೆ ಈ ಪ್ರಕರಣವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದ್ದ ಬಿಜೆಪಿ- ಜೆಡಿಎಸ್, ಬೆಂಗಳೂರಿನಿಂದ ಮೈಸೂರಿನ ವರೆಗೆ ಪಾದಯಾತ್ರೆ ನಡೆಸಿದ್ದವು. ದಾರಿಯುದ್ದಕ್ಕೂ ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದವು. ಸಿದ್ದರಾಮಯ್ಯ ರಾಜೀನಾಮೇ ನೀಡಬೇಕು ಎಂದು ಆಗ್ರಹಿಸಿದ್ದವು.
ಇದನ್ನೂ ಓದಿ: CM Siddaramaiah: ಸಿಎಂ ಸಿದ್ದರಾಮಯ್ಯಗೆ ರಾಜಭವನದಿಂದ ಮೂರನೇ ನೋಟೀಸ್ ಜಾರಿ! ಯಾಕೆ ಪದೇ ಪದೆ ನೋಟೀಸ್?