ಬೆಂಗಳೂರು: ಒಂದು ಕಡೆ ಪ್ರತಿಪಕ್ಷಗಳಿಂದ ʼಮೈಸೂರು ಚಲೋʼ (Mysore Chalo) ಪಾದಯಾತ್ರೆ (BJP-JDS Padayatra) ಮೂರನೇ ದಿನ ಪ್ರವೇಶಿಸುತ್ತಿದೆ. ಇನ್ನೊಂದೆಡೆ, ಒಂದು ವಾರದಿಂದ ದೆಹಲಿಯಲ್ಲಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Givernor Thavar Chand Gehlot) ಇಂದು ಬೆಂಗಳೂರಿಗೆ ಮರಳಿದ್ದು, ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಶನ್‌ಗೆ (Procecution) ನೀಡಲಾದ ಮನವಿಯ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಈಗಾಗಲೇ ಅನುಮತಿ ಕೇಳಿದ್ದಾರೆ. ಆದರೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಒಂದು ವಾರದಿಂದ ದೆಹಲಿಯಲ್ಲಿದ್ದು, ರಾಜ್ಯಪಾಲರುಗಳ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು. ಹೀಗಾಗಿ ಯಾವುದೇ ತೀರ್ಮಾನ ತೆಗೆದುಕೊಂಡಿರಲಿಲ್ಲ.
ಇಂದು ರಾಜ್ಯಪಾಲರು ರಾಜ್ಯಕ್ಕೆ ವಾಪಸು ಆಗಿದ್ದಾರೆ. ರಾಜ್ಯ ಸರ್ಕಾರ ಕಳುಹಿಸಿರುವ ಕ್ಯಾಬಿನೆಟ್ ನಿರ್ಧಾರವನ್ನು ರಾಜ್ಯಪಾಲರು ಪರಿಶೀಲನೆ ಮಾಡಲಿದ್ದಾರೆ. ಸಿಎಂಗೆ ಕಳಿಸಿರುವ ನೋಟೀಸ್ ಅನ್ನು ವಾಪಸ್ ಪಡೆಯುವಂತೆ ರಾಜ್ಯಪಾಲರಿಗೆ ಕ್ಯಾಬಿನೆಟ್ ಮನವಿ ಮಾಡಿದೆ. ಇದು ಪ್ರಾಸಿಕ್ಯೂಷನ್‌ಗೆ ಅರ್ಹ ಪ್ರಕರಣವೇ ಅಲ್ಲವೇ ಎಂದು ತೀರ್ಮಾನ ತೆಗೆದುಕೊಳ್ಳುವ ಹಾಗೂ ಕಾನೂನು ಸಲಹೆ ಬೇಕಿದ್ದರೆ ಮತ್ತೊಮ್ಮೆ ವಕೀಲರ ಜತೆ ರಾಜ್ಯಪಾಲರು ಚರ್ಚೆ ನಡೆಸುವ ಸಂಭವ ಇದೆ.
ತನಿಖೆಗೆ ಅನುಮತಿ ಕೊಟ್ಟರೆ ಸಿಎಂ ಸಿದ್ದರಾಮಯ್ಯನವರಿಗೆ ಕಾನೂನು ಕಂಟಕ ಶುರುವಾಗಲಿದೆ. ಪ್ರಾಸಿಕ್ಯೂಶನ್‌ಗೆ ಅನುಮತಿ ಸಿಕ್ಕ ಬೆನ್ನಲ್ಲೇ ಅಬ್ರಾಹಂ ಖಾಸಗಿ ದೂರು ದಾಖಲಿಸಲಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯ ಇಲ್ಲವೇ ಲೋಕಾಯುಕ್ತದಲ್ಲಿ ಖಾಸಗಿ ದೂರು ದಾಖಲಿಸಬಹುದು. ಬಳಿಕ ಪ್ರಕರಣ ಸ್ವೀಕರಿಸುವ ಇಲ್ಲವೇ ತಿರಸ್ಕರಿಸುವ ಬಗ್ಗೆ ನ್ಯಾಯಾಲಯದಲ್ಲಿ ವಾದ ಹಾಗೂ ಪ್ರತಿವಾದ ನಡೆಯಲಿದೆ.
ಕೋರ್ಟ್ ಖಾಸಗಿ ದೂರನ್ನು ಸ್ವೀಕರಿಸಿದರೆ ಸಿಎಂಗೆ ಬಂಧನದ ಭೀತಿಯೂ ಶುರುವಾಗಬಹುದು. ತನಿಖೆಗೆ ಆದೇಶ ನೀಡಿದರೆ ರಾಜೀನಾಮೆಗೆ ಒತ್ತಡ ಇನ್ನಷ್ಟು ಹೆಚ್ಚಲಿದೆ. ಪ್ರತಿಪಕ್ಷಗಳ ಜೊತೆಗೆ, ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಸ್ವಪಕ್ಷೀಯರು ಕೂಡ ಒಳ ಏಟು ಶುರು ಮಾಡಬಹುದು. ಸ್ವಪಕ್ಷದಲ್ಲೂ ಸಿಎಂ ರಾಜೀನಾಮೆಗೆ ಬೇಡಿಕೆ ಕೇಳಿಬರಬಹುದು. ಹೀಗಾಗಿ ರಾಜ್ಯ ರಾಜಕೀಯ ಇನ್ನಷ್ಟು ತಲ್ಲಣ ಸೃಷ್ಟಿಸಲಿದೆ.
ಸಿಎಂ ಮುಂದೆ ಇರೋ ಆಯ್ಕೆಗಳೇನು?
ಪ್ರಾಸಿಕ್ಯೂಶನ್‌ಗೆ ಅನುಮತಿ ಸಿಕ್ಕರೆ ಸಿಎಂ ಕಾನೂನು ಹೋರಾಟ ಮಾಡುವುದು ಅನಿವಾರ್ಯ. ತನಿಖೆಗೆ ಅನುಮತಿ ಕೊಟ್ಟಿರುವುದನ್ನು ಹೈಕೋರ್ಟ್‌ನಲ್ಲಿ ರಿಟ್ ಮೂಲಕ ಪ್ರಶ್ನಿಸಬಹುದು. ಜತೆಗೆ ಅಬ್ರಹಾಂ ಸಲ್ಲಿಸಿರುವ ದೂರು ರದ್ದು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ರಾಜ್ಯಪಾಲರ ನಡೆ ಪ್ರಶ್ನೆ ಮಾಡಿ ಸಂವಿಧಾನ ಪೀಠಕ್ಕೂ ಹೋಗಬಹುದು. ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಇರುವುದರಿಂದ ಸುಪ್ರೀಂ ಕೋರ್ಟ್‌ಗೆ ನೇರವಾಗಿ ಹೋಗುವುದು ಅನುಮಾನ.
ಕಾಂಗ್ರೆಸ್ ಒಗ್ಗಟ್ಟಿನಿಂದ ಹೋರಾಡಲಿದೆ: ಕೆಸಿ ವೇಣುಗೋಪಾಲ್
ಬೆಂಗಳೂರು: ಬಿಜೆಪಿ–ಜೆಡಿಎಸ್ ಪಕ್ಷಗಳ (BJP-JDS Padayatra) ಪಿತೂರಿಗೆ ನಾವು ಜಗ್ಗುವುದಿಲ್ಲ. ನಾವು ಜನರ ಬಳಿಗೆ ಹೋಗುತ್ತೇವೆ. ಅವರಿಗೆ ವಾಸ್ತವಾಂಶ ವಿವರಿಸುತ್ತೇವೆ. ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಚಿವರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಗಂಭೀರ ಬೆಳವಣಿಗೆಗಳ ಕುರಿತು ರಾಜ್ಯದ ಸಚಿವರೊಂದಿಗೆ ಚರ್ಚಿಸಲಾಯಿತು. ಕರ್ನಾಟಕ ರಾಜ್ಯ ಬಿಜೆಪಿಯು ಸರ್ಕಾರಗಳನ್ನು ಉರುಳಿಸುವ ಇತಿಹಾಸವನ್ನು ಹೊಂದಿದೆ ಎಂದು ತಿಳಿಸಿದರು.
2018ರಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿದ್ದೇ ಬಿಜೆಪಿ ಕೇಂದ್ರ ನಾಯಕತ್ವದ ಪಿತೂರಿಯಿಂದ. ಅದೇ ರೀತಿಯ ಸ್ಪಷ್ಟ ಉದ್ದೇಶದಿಂದ ಈಗಲೂ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ.
ತಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಈ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ | MB Patil: ಕುಮಾರಸ್ವಾಮಿಯದು ಅವಕಾಶವಾದಿ ಮೈತ್ರಿ ಎಂದ ಎಂ.ಬಿ. ಪಾಟೀಲ್