Site icon Vistara News

ವಿಸ್ತಾರ ಸಂಪಾದಕೀಯ: ಭ್ರಷ್ಟಾಚಾರದ ಕ್ಯಾನ್ಸರ್‌ಗೆ ದುರಾಸೆಯೇ ಮೂಲ

Greed is the root of the cancer of corruption

#image_title

”ಅಧಿಕ ಆಸ್ತಿ ಗಳಿಸುವ ದುರಾಸೆಯೇ ಭ್ರಷ್ಟಾಚಾರಕ್ಕೆ (corruption) ಕಾರಣ. ಕ್ಯಾನ್ಸರ್ ದೇಹದ ಎಲ್ಲ ಭಾಗಗಳಿಗೆ ತೀವ್ರವಾಗಿ ವ್ಯಾಪಿಸುವಂತೆ ಭ್ರಷ್ಟಾಚಾರ ಇಂದು ಸಮಾಜದ ಎಲ್ಲ ಸ್ತರಗಳಲ್ಲೂ ಹರಡಿಕೊಂಡಿದೆ. ಹಾಗಾಗಿ, ಕೋರ್ಟುಗಳ ಭ್ರಷ್ಟಾಚಾರ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಪ್ರದರ್ಶಿಸಬೇಕು ಮತ್ತು ಭ್ರಷ್ಟಾಚಾರಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು,” ಎಂದು ದೇಶದ ಅತ್ಯುನ್ನತ ನ್ಯಾಯಾಲಯವಾಗಿರುವ ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ. ಭ್ರಷ್ಟಾಚಾರದ ವಿರುದ್ಧ ನ್ಯಾಯಾಲಯವು ಉಗ್ರವಾಗಿ ಪ್ರತಿಕ್ರಿಯಿಸುವ ಹೊತ್ತಿನಲ್ಲೇ ಕರ್ನಾಟಕದಲ್ಲಿ ಬೃಹತ್ ಭ್ರಷ್ಟಾಚಾರ ಪ್ರಕರಣವನ್ನು ಲೋಕಾಯಕ್ತವು ಭೇದಿಸಿರುವುದು ಭ್ರಷ್ಟಾಚಾರ ಎಂಬ ಕಾನ್ಸರ್‌ಗೆ ಸಾಕ್ಷ್ಯವನ್ನು ಒದಗಿಸಿದೆ!

ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಛತ್ತೀಸ್‌ಗಢದ ಮಾಜಿ ಪ್ರಧಾನ ಕಾರ್ಯದರ್ಶಿ ಅಮನ್ ಸಿಂಗ್ ಮತ್ತು ಅವರ ಪತ್ನಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಛತ್ತೀಸ್‌ಗಢ ಹೈಕೋರ್ಟ್ ರದ್ದುಗೊಳಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠವು, ಹೈಕೋರ್ಟ್‌ನ ಆದೇಶವನ್ನು ರದ್ದುಪಡಿಸಿ, ಸಮಾನ ಆಸ್ತಿ ಹಂಚಿಕೆಯ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸುವ ಸಂವಿಧಾನದ ಆಶಯಕ್ಕೆ ಭ್ರಷ್ಟಾಚಾರವು ಅಡ್ಡಿಯಾಗಿದೆ ಎಂದು ಅಭಿಪ್ರಾಯಟ್ಟಿದೆ.

ಭ್ರಷ್ಟಾಚಾರದ ಅಪಾಯ ಹಾಗೂ ಅದನ್ನು ನಿರ್ಮೂಲನೆ ಮಾಡುವ ಸಂಬಂಧ ಈ ಹಿಂದೆಯೂ ಸುಪ್ರೀಂ ಕೋರ್ಟ್‌, ಹಲವು ಹೈಕೋರ್ಟ್‌ಗಳು ಕಠಿಣ ಅಭಿಪ್ರಾಯಗಳನ್ನು ವ್ಯಕ್ತಪಡಿಸಿವೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಕ್ತ ಸಲಹೆಗಳನ್ನು ನೀಡಿವೆ. ಆದರೂ, ದೇಶದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿಲ್ಲ. ಸಂವಿಧಾನ ಬದ್ಧ ಸೃಷ್ಟಿಯಾಗಿರುವ ಲೋಕಾಯಕ್ತ, ಸಿವಿಸಿ, ಎಸಿಬಿ ಸೇರಿ ಹಲವು ಸಂಸ್ಥೆಗಳು ಈ ನಿಟ್ಟಿನಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿವೆ. ಆದರೂ ಭ್ರಷ್ಟಾಚಾರಕ್ಕೆ ಮುಕ್ತಿ ಹಾಡಲು ಸಾಧ್ಯವಾಗಿಲ್ಲ. ಇದು ನಮ್ಮ ವ್ಯವಸ್ಥೆಯ ವೈಫಲ್ಯ. ಜತೆಗೆ, ಭ್ರಷ್ಟಾಚಾರವು ಸಾಂಸ್ಥಿಕ ರೂಪವನ್ನು ಪಡೆದುಕೊಂಡಿರುವುದೂ ಈ ವೈಫಲ್ಯಕ್ಕೆ ಕಾರಣವಾಗಿರಬಹುದು.

ಭ್ರಷ್ಟಾಚಾರ ಸಹಿಸದ ಮನಸ್ಥಿತಿಯನ್ನು ಜನರಲ್ಲಿ ರೂಪಿಸುವ ಜವಾಬ್ದಾರಿಯನ್ನು ಕೋರ್ಟುಗಳು ಹೊಂದಬೇಕು ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್, ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ನ್ಯಾಯಾಲಯಗಳನ್ನು ಸಕ್ರಿಯ ಪಾಲುದಾರರನ್ನಾಗಿ ಮಾಡುವ ಆಶಯವನ್ನು ವ್ಯಕ್ತಪಡಿಸಿದ್ದು ಸೂಕ್ತವಾಗಿದೆ. ನ್ಯಾಯಾಲಯ, ಲೋಕಾಯುಕ್ತ, ಲೋಕಪಾಲ್‌ನಂಥ ಸಂಸ್ಥೆಗಳು ಬಲಗೊಂಡರೆ ಮತ್ತು ಇವು ತಮ್ಮ ಸಂಪೂರ್ಣ ಶಕ್ತಿ ಬಳಸಿದರೆ ಮಾತ್ರ ಭ್ರಷ್ಟಾಚಾರಕ್ಕೆ ಅಂಕುಶ ಹಾಕಲು ಸಾಧ್ಯ.

ಎರಡು ದಿನಗಳ ಹಿಂದೆಯಷ್ಟೇ ಶಾಸಕ ಮಾಡಾಳು ವಿರೂಪಾಕ್ಷ ಮತ್ತು ಅವರ ಮಗನ ಲಂಚಾವತಾರವನ್ನು ಲೋಕಾಯುಕ್ತ ಬಯಲಿಗೆಳೆದಿದೆ. ಈ ಹಿಂದೆಯೂ ಇಂಥ ಅನೇಕ ‘ಮಹತ್ವದ ಪ್ರಕರಣ’ಗಳನ್ನು ಲೋಕಾಯುಕ್ತ ಬಯಲು ಮಾಡಿತ್ತು. ಆದರೆ, ಆ ಪ್ರಕರಣಗಳಲ್ಲಿ ಎಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದು ನೋಡಿದರೆ, ನಿರಾಸೆ ಎದ್ದು ಕಾಣುತ್ತದೆ. ದಾಳಿಗೊಳಗಾದ ಅಧಿಕಾರಿಗಳು ಒಂದಿಷ್ಟು ದಿನ ಬಿಟ್ಟು ಮತ್ತೆ ಅದೇ ಸ್ಥಾನಗಳಿಗೆ ಬಂದು ಕೂರುತ್ತಾರೆ. ಇಂಥ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾದರೆ ಮಾತ್ರ ಲಂಚದ ಹಾದಿ ತುಳಿಯಲು ಹಿಂಜರಿಯುತ್ತಾರೆ. ಇಲ್ಲದೇ ಹೋದರೆ ಹತ್ತರಲ್ಲಿ ಹನ್ನೊಂದನೇ ಪ್ರಕರಣ ಆಗುತ್ತದೆ ಅಷ್ಟೆ. ಈ ಕಾರಣಕ್ಕಾಗಿಯೇ ಭ್ರಷ್ಟಾಚಾರವು ಯಾರ ಅಂಕೆಗೂ ಸಿಗದೇ ದಾಂಗುಡಿ ಇಡುತ್ತಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಚುನಾವಣೆ ಆಯುಕ್ತರ ನೇಮಕ: ಸುಪ್ರೀಂ ಕೋರ್ಟ್ ಆದೇಶ ಸ್ವಾಗತಾರ್ಹ

ಭ್ರಷ್ಟಾಚಾರ ಸಮಸ್ಯೆಯನ್ನು ಹೋಗಲಾಡಿಸಬೇಕಾದ ಶಾಸಕಾಂಗ ಮತ್ತು ಕಾರ್ಯಾಂಗಗಳೆರಡರಲ್ಲೂ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಈ ವಿಷಯದಲ್ಲಿ ಅವುಗಳಿಂದ ಹೆಚ್ಚಿನದ್ದನ್ನು ಏನೂ ನಿರೀಕ್ಷಿಸಲು ಸಾಧ್ಯವಿಲ್ಲ. ಲಂಚವೆಂಬ ಈ ಕ್ಯಾನ್ಸರ್‌ಗೆ ಕಿಮೊಥೆರಪಿ ಕೊಡುವ ಕಾರ್ಯ ಈಗ ನ್ಯಾಯಾಂಗದಿಂದ ಮಾತ್ರ ಸಾಧ್ಯ. ತಡವಾದರೂ ಕೆಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ನ್ಯಾಯಾಲಯಗಳು ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸಿ, ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸುವಲ್ಲಿ ಯಶಸ್ವಿಯಾಗಿವೆ. ಆ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಿವೆ. ಹಾಗಾಗಿ, ಈಗ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಆಶಯ ಸಾಕಾರಗೊಳ್ಳಲಿ. ಮತ್ತಷ್ಟು ಲಂಚಕೋರರು ಬಲೆಗೆ ಬಿದ್ದು, ಕಠಿಣ ಶಿಕ್ಷೆ ಅನುಭವಿಸುವಂತಾಗಲಿ.

Exit mobile version