Site icon Vistara News

GT World Mall: ರೈತರಿಗೆ ಅವಮಾನ ಮಾಡಿದ ಜಿಟಿ ಮಾಲ್‌ಗೆ ಬೀಗ ಹಾಕಲು ಸಾಧ್ಯವಿಲ್ಲ! ಸಚಿವರ ಮಾತಿಗೆ ಬೆಲೆ ಇಲ್ವಾ?

gt world mall assembly live

ಬೆಂಗಳೂರು: ಪಂಚೆ ಧರಿಸಿ ಬಂದ ರೈತರಿಗೆ ಒಳಗೆ ಬಿಡದೆ ಅವಮಾನ ಮಾಡಿದ ಜಿಟಿ ವರ್ಲ್ಡ್‌ ಮಾಲ್‌ (GT World Mall) ಅನ್ನು ಒಂದು ವಾರ ಕಾಲ ಮುಚ್ಚಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ (Byrathi Suresh) ಅವರು ಸದನದಲ್ಲಿ ಗುಡುಗಿದ್ದರು. ಆದರೆ ಮಾಲ್‌ ಅನ್ನು ಮುಚ್ಚಿಸಲು ಯಾವುದೇ ಕಾರಣ ಸಿಗದೆ ಬಿಬಿಎಂಪಿ ಅಧಿಕಾರಿಗಳು (BBMP Officers) ಕಂಗಾಲಾಗಿದ್ದಾರೆ. ಹೀಗಾಗಿ, ಸುಮ್ಮನೇ ಬಾಯಿಮಾತಿಗಾಗಿ ಸಚಿವರು ಹೀಗೆ ಹೇಳಿದ್ರಾ ಎಂಬ ಪ್ರಶ್ನೆ ಉದ್ಭವವಾಗಿದೆ.

ಇಂದು ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಅಧಿಕಾರಿಗಳು ಮಾಲ್‌ ಅನ್ನು ಸಮಗ್ರವಾಗಿ ಪರಿಶೀಲಿಸಿದರು. ಆದರೆ ಯಾವುದೇ ಅವ್ಯವಸ್ಥೆ ಅವರಿಗೆ ಕಂಡುಬಂದಿಲ್ಲ. ಆದರೆ, ಮಾಲೀಕರು ಒಂದೂವರೆ ಕೋಟಿ ರೂ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಮಾಲ್‌ಗೆ ನೋಟೀಸ್‌ ನೀಡಬಹುದು ಅಷ್ಟೆ. ಆದರೆ ಮುಚ್ಚುವಂತಿಲ್ಲ.

ಜಿಟಿ ಮಾಲ್‌ಗೆ ಬೀಗ ಹಾಕುವುದಾದರೆ ಯಾವ ಅಂಶದ ಆಧಾರದಲ್ಲಿ ಬೀಗ ಹಾಕಬೇಕೆನ್ನುವ ಗೊಂದಲಕ್ಕೆ ಬಿಬಿಎಂಪಿ ಅಧಿಕಾರಿಗಳು ಸಿಲುಕಿದ್ದಾರೆ. ನೋಟೀಸ್ ನೀಡದೆ ಏಕಾಏಕಿ ಮಾಲ್‌ಗೆ ಬೀಗ ಹಾಕುವಂತಿಲ್ಲ. ಕೆಎಂಸಿ ಆಕ್ಟ್‌ನಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಮೂರು ಬಾರಿ ನೋಟೀಸ್ ನೀಡಿದ ಮೇಲೆಯೇ ಬೀಗ ಹಾಕುವ ಅವಕಾಶ ಬಿಬಿಎಂಪಿಗೆ ಇದೆ. ಮೂರು ನೋಟೀಸ್‌ಗಳಿಗೆ ವಿವರಣೆ ನೀಡಲು ಅವಕಾಶ ಕೂಡ ನೀಡಬೇಕು‌.
.
ಈ ಪ್ರಕರಣದಲ್ಲಿ ನೊಟೀಸ್ ನೀಡುವ ಪ್ರಕ್ರಿಯೆಯೇ ನಡೆದಿಲ್ಲ. ಹೀಗಿರುವಾಗ ಏಕಾಏಕಿ ಮಾಲ್ ಮುಚ್ಚಲು ಸಾಧ್ಯವಿಲ್ಲ. ನಿಯಮ ಮೀರಿ ನೋಟೀಸ್ ನೀಡಿದರೆ ಮಾಲ್ ಆಡಳಿತದಿಂದ ಮಾನನಷ್ಟ ಮೊಕದ್ದಮೆ ಹೂಡುವ ಸಾಧ್ಯತೆಯೂ ಇದೆ. ಇದರಿಂದ ಬಿಬಿಎಂಪಿ ಅಧಿಕಾರಿಗಳೇ ನಾಳೆ ಕೋರ್ಟ್ ಕಟಕಟೆಯಲ್ಲಿ ನಿಲ್ಲುವ ಆತಂಕ‌ ಇದೆ. ಹೀಗಾಗಿ ರಿಸ್ಕ್ ತೆಗೆದುಕೊಳ್ಳಲು ಬಿಬಿಎಂಪಿ ಅಧಿಕಾರಿಗಳು‌ ಮುಂದಾಗಿಲ್ಲ.

ಆದರೆ ಸಚಿವರ ಆದೇಶ ಪಾಲಿಸಬೇಕಿದ್ದು, ಕಾನೂನಾತ್ಮಕ ಕುಣಿಕೆಯಿಂದ ಹೇಗೆ ಪಾರಾಗಬೇಕು ಎಂಬ ಗೊಂದಲದಲ್ಲಿ ಅಧಿಕಾರಿಗಳಿದ್ದಾರೆ. ಇದುವರೆಗೆ ಸರ್ಕಾರದಿಂದ ಮಾಲ್‌ ಮುಚ್ಚಲು ಯಾವುದೇ ಲಿಖಿತ ಆದೇಶ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ಅಧಿಕಾರಿಗಳು ಕೇವಲ ಅಂಗಡಿಗಳಿಗೆ ನೋಟೀಸ್ ನೀಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಸ್ವಚ್ಛತೆ, ಬೆಂಕಿ ಸುರಕ್ಷತೆ ಮೊದಲಾದ ಕೆಲವು ಅನುಬಂಧಗಳ ಅಡಿಯಲ್ಲಿ ನೋಟೀಸ್‌ ನೀಡಬಹುದು.

7 ದಿನ ಮುಚ್ಚಲು ಸೂಚನೆ

ಇಂದು ಆರಂಭವಾದ ಮೂರನೇ ದಿನದ ವಿಧಾನಸಭೆ ಕಲಾಪ ಆರಂಭದಲ್ಲೇ ಈ ವಿಷಯ ಪ್ರಸ್ತಾಪವಾಯಿತು. ಹಲವರು ಸದಸ್ಯರು ರೈತರಿಗೆ ಅವಮಾನ ಆದ ವಿಷಯವನ್ನು ಪ್ರಸ್ತಾಪಿಸಿದರು. ವಿಸ್ತಾರ ನ್ಯೂಸ್‌ ನಿನ್ನೆ ಇಡೀ ದಿನ ಈ ಘಟನೆಯನ್ನು ಪ್ರಸಾರ ಮಾಡಿದ್ದಲ್ಲದೆ, ರೈತರನ್ನು ಮರಳಿ ಜಿಟಿ ಮಾಲ್‌ಗೆ ಕರೆದೊಯ್ದು ಪ್ರವೇಶ ಕೊಡಿಸಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಕನ್ನಡ ಹಾಗೂ ರೈತಪರ ಸಂಘಟನೆಗಳು ಈ ವಿಚಾರದಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಕೈಜೋಡಿಸಿದ್ದವು. ನಂತರ ಸಚಿವ ಸಂತೋಷ್‌ ಲಾಡ್‌ (Santosh Lad) ಕೂಡ ಕೂಡ ಈ ವಿಚಾರದಲ್ಲಿ ಮಾಲ್‌ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ವಿಧಾನಸಭೆ ಕಲಾಪದ ಆರಂಭದ ಹೊತ್ತಿಗೆ ಸ್ವತಃ ಸ್ಪೀಕರ್‌ ಯು.ಟಿ ಖಾದರ್‌ (Speaker UT Khader) ಅವರು ಈ ವಿಚಾರ ಎತ್ತಿದರು. ಈ ಬಗ್ಗೆ ಸರ್ಕಾರದ ನಿಲುವನ್ನು ತಿಳಿಸುವಂತೆ ಸೂಚಿಸಿದರು. ಸದಸ್ಯರು ಪಕ್ಷಾತೀತವಾಗಿ ಮಾಲ್‌ ನಡೆಯನ್ನು ತೀವ್ರವಾಗಿ ಖಂಡಿಸಿದರು. ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ. 7 ದಿನಗಳ ವರೆಗೆ ಬಂದ್‌ ಮಾಡಿಸಬಹುದು. ಆದರೆ ಎಚ್ಚರಿಕೆ ನೀಡಿ ಮೂರು ದಿನಗಳ ಕಾಲ ಮಾಲ್ ಬಂದ್ ಮಾಡಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: GT World Mall: ರೈತರಿಗೆ ಅವಮಾನ ಮಾಡಿದ ಜಿಟಿ ಮಾಲ್‌ ವಿರುದ್ಧ ಸಚಿವರು ಗರಂ; ʼಪಂಚೆ ಧರಿಸಿಯೇ ಸಿದ್ದರಾಮಯ್ಯ 7 ವರ್ಷ ರಾಜ್ಯ ಆಳ್ಲಿಲ್ವಾ?ʼ

Exit mobile version