ಸೂರತ್: ಗುಜರಾತ್‌ನ ಶ್ರೀಮಂತ ಜೈನ ದಂಪತಿಗಳು (Jain couple) ತಮ್ಮ ಸುಮಾರು ₹200 ಕೋಟಿ ಮೌಲ್ಯದ ಆಸ್ತಿಪಾಸ್ತಿಗಳನ್ನು ದೇಣಿಗೆ (Donation) ನೀಡಿ ಸನ್ಯಾಸ (monkhood) ಸ್ವೀಕರಿಸಿದ್ದು, ಮೋಕ್ಷಕ್ಕಾಗಿ ಮುಂದಿನ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ. ಫೆಬ್ರವರಿಯಲ್ಲಿ ನಡೆದ ಸಮಾರಂಭದಲ್ಲಿ ಉದ್ಯಮಿ ಭಾವೇಶ್ ಭಂಡಾರಿ (Bhavesh Bhandari) ಮತ್ತು ಅವರ ಪತ್ನಿ ತಮ್ಮ ಎಲ್ಲಾ ಸಂಪತ್ತನ್ನು ದಾನ ಮಾಡಿದರು. ಈ ತಿಂಗಳ ಕೊನೆಯಲ್ಲಿ ನಡೆಯುವ ದೀಕ್ಷಾ (Deeksha) ಸಮಾರಂಭದಲ್ಲಿ ಅವರು ಅಧಿಕೃತವಾಗಿ ಜೈನ (Jain Monks) ಸನ್ಯಾಸಿಗಳಾಗಲಿದ್ದಾರೆ.
ವಿಶೇಷ ಎಂದರೆ, ಭಾವೇಶ್ ಅವರ ಇಬ್ಬರು ಮಕ್ಕಳೂ ಈಗಾಗಲೇ ಸನ್ಯಾಸ ಸ್ವೀಕರಿಸಿದ್ದಾರೆ! ಇವರ 19 ವರ್ಷದ ಮಗಳು ಮತ್ತು 16 ವರ್ಷದ ಮಗ 2022ರಲ್ಲಿ ಸನ್ಯಾಸ ಸ್ವೀಕರಿಸಿದ್ದರು. ಈಗ ತಂದೆ- ತಾಯಿ ಇವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ. ಭಾವೇಶ್ ಕಟ್ಟಡ ನಿರ್ಮಾಣ ಉದ್ಯಮದಲ್ಲಿದ್ದರು. ತಮ್ಮ ಭೌತಿಕ ಸ್ವತ್ತುಗಳನ್ನು ತ್ಯಜಿಸಿ ತಪಸ್ವಿ ಮಾರ್ಗವನ್ನು ಸೇರುತ್ತಿರುವ ಭಾವೇಶ್ ಕುಟುಂಬವನ್ನು ಅವರ ಸಮುದಾಯದ ಮಂದಿ ಕೊಂಡಾಡಿದ್ದಾರೆ.
ಏಪ್ರಿಲ್ 22ರಂದು ಸನ್ಯಾಸ ಪ್ರತಿಜ್ಞೆಯನ್ನು ತೆಗೆದುಕೊಂಡ ನಂತರ ದಂಪತಿ ಎಲ್ಲಾ ಕುಟುಂಬ ಸಂಬಂಧಗಳನ್ನು ಕಡಿದುಕೊಳ್ಳಬೇಕಾಗುತ್ತದೆ. ಯಾವುದೇ ಭೌತಿಕ ವಸ್ತುಗಳನ್ನು ಇಟ್ಟುಕೊಳ್ಳಲು ಅವಕಾಶವಿಲ್ಲ. ನಂತರ ಅವರು ಭಾರತದಾದ್ಯಂತ ಬರಿಗಾಲಿನಲ್ಲಿ ನಡೆಯುತ್ತಾರೆ ಹಾಗೂ ಭಿಕ್ಷೆಯಿಂದ ಮಾತ್ರ ಬದುಕುತ್ತಾರೆ.
ಮುಂದೆ ಈ ಜೈನ ಸನ್ಯಾಸಿಗಳು ಕೇವಲ ಎರಡು ಬಿಳಿ ವಸ್ತ್ರಗಳನ್ನು ಮಾತ್ರ ಹೊಂದಿರುತ್ತಾರೆ. ಭಿಕ್ಷೆಗಾಗಿ ಒಂದು ಬಟ್ಟಲು ಮತ್ತು “ರಾಜೋಹರಣ” ಎಂದು ಕರೆಯಲಾಗುವ ಬಿಳಿ ಪೊರಕೆಯನ್ನು ಬಳಸುತ್ತಾರೆ. ಇದನ್ನು ಜೈನ ಸನ್ಯಾಸಿಗಳು ಕುಳಿತುಕೊಳ್ಳುವ ಜಾಗವನ್ನು ಕ್ರಿಮಿಕೀಟಗಳಿಲ್ಲದಂತೆ ಸ್ವಚ್ಛಗೊಳಿಸುವುದಕ್ಕಾಗಿ ಬಳಸಲಾಗುತ್ತದೆ. ಕೀಟಗಳಿಗೆ ಹಿಂಸೆಯಾಗಬಾರದು ಎಂಬ ಅಹಿಂಸೆಯ ಮಾರ್ಗದ ಆಚರಣೆ ಇದು.
ಅಪಾರ ಸಂಪತ್ತಿಗೆ ಹೆಸರಾದ ಭಂಡಾರಿ ಕುಟುಂಬದ ಈ ನಿರ್ಧಾರ ದೇಶದ ಗಮನ ಸೆಳೆದಿದೆ. ಈ ಹಿಂದೆಯೂ ಜೈನ ಸಮುದಾಯದ ಭವರಲಾಲ್ ಜೈನ್ ಮುಂತಾದ ಕೆಲವು ಉದ್ಯಮಿಗಳು ಸನ್ಯಾಸ ಸಂಯಮದ ಜೀವನ ನಡೆಸಲು ಕೋಟ್ಯಂತರ ಹಣವನ್ನು ದಾನ ಮಾಡಿದ್ದರು. ಭವರಲಾಲ್ ಜೈನ್ ಭಾರತದಲ್ಲಿ ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ಪ್ರಾರಂಭಿಸಿದವರು. ಜೈನ ಧರ್ಮದಲ್ಲಿ ʼದೀಕ್ಷೆʼ ತೆಗೆದುಕೊಳ್ಳುವುದು ಗಮನಾರ್ಹವಾದ ಬದ್ಧತೆ. ಅಲ್ಲಿ ವ್ಯಕ್ತಿಯು ಭೌತಿಕ ಸೌಕರ್ಯಗಳಿಲ್ಲದೆ ಭಿಕ್ಷೆಯಿಂದ ಬದುಕುತ್ತಾನೆ ಮತ್ತು ದೇಶದಾದ್ಯಂತ ಬರಿಗಾಲಿನಲ್ಲಿ ಅಲೆದಾಡುತ್ತಾನೆ.
ಆಸ್ತಿ ತ್ಯಾಗದ ದಿನ ಭಂಡಾರಿ ದಂಪತಿಗಳು ಇನ್ನಿತರ 35 ಮಂದಿಯೊಂದಿಗೆ ನಾಲ್ಕು ಕಿಲೋಮೀಟರ್‌ಗಳವರೆಗೆ ಮೆರವಣಿಗೆಯಲ್ಲಿ ಸಾಗಿದರು. ಅಲ್ಲಿ ಅವರು ತಮ್ಮ ಮೊಬೈಲ್ ಫೋನ್‌ಗಳು, ಕೂಲರ್‌ಗಳು ಸೇರಿದಂತೆ ಎಲ್ಲಾ ಆಸ್ತಿಯನ್ನು ದಾನ ಮಾಡಿದರು. ಮೆರವಣಿಗೆಯ ವೀಡಿಯೊಗಳಲ್ಲಿ ರಾಜಮನೆತನದವರಂತೆ ಪೋಷಾಕು ಧರಿಸಿರುವ ರಥದ ಮೇಲೆ ದಂಪತಿಗಳು ಕಂಡುಬಂದಿದ್ದಾರೆ.
ಕಳೆದ ವರ್ಷ ಗುಜರಾತ್‌ನಲ್ಲಿ ಬಹು-ಮಿಲಿಯನೇರ್ ವಜ್ರ ವ್ಯಾಪಾರಿ ಮತ್ತು ಅವರ ಪತ್ನಿ ಇದೇ ರೀತಿ ಮಾಡಿದ್ದರು. ಅವರ 12 ವರ್ಷದ ಮಗ ಸನ್ಯಾಸತ್ವ ಅಳವಡಿಸಿಕೊಂಡ ಐದು ವರ್ಷಗಳ ನಂತರ ಅವರು ದೀಕ್ಷೆ ತೆಗೆದುಕೊಂಡರು. ಪ್ರಾಸಂಗಿಕವಾಗಿ, ಅವರ ದೀಕ್ಷಾ ಸಮಾರಂಭಕ್ಕೆ ದಂಪತಿಗಳು ಜಾಗ್ವಾರ್ ಕಾರಿನಲ್ಲಿ ಬಂದಿದ್ದರು. ಅವರ ಪುತ್ರ ಫೆರಾರಿ ಸವಾರಿ ಮಾಡಿದ್ದರು.
2017ರಲ್ಲಿ ಮಧ್ಯಪ್ರದೇಶದ ಶ್ರೀಮಂತ ದಂಪತಿಗಳು ₹100 ಕೋಟಿ ದೇಣಿಗೆ ನೀಡಿ ಸನ್ಯಾಸಿಗಳಾಗಿದ್ದು, ಅದಕ್ಕೆ ಮುನ್ನ ತಮ್ಮ ಮೂರು ವರ್ಷದ ಮಗಳನ್ನು ಆಕೆಯ ಅಜ್ಜಿಯ ಬಳಿ ಬಿಟ್ಟ ಸುದ್ದಿ ಮಾಡಿದ್ದರು. ಸುಮಿತ್ ರಾಥೋರ್ (35) ಮತ್ತು ಅವರ ಪತ್ನಿ ಅನಾಮಿಕಾ (34) ಈ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದರು. ಸುಮಿತ್ ಸನ್ಯಾಸಿಯಾಗುವ ಒಂದು ದಿನದ ಮೊದಲು, ಗುಜರಾತ್ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ (GSCPCR) ಮಗುವಿನ ಭವಿಷ್ಯ ಹಾಗೂ ಸುರಕ್ಷತೆಗಾಗಿ ಹೆತ್ತವರು ತೆಗೆದುಕೊಂಡ ಕ್ರಮಗಳ ಬಗ್ಗೆ ನಾಗರಿಕ ಮತ್ತು ಪೊಲೀಸ್ ಆಡಳಿತದಿಂದ ವರದಿಯನ್ನು ಕೇಳಿತ್ತು.
ಇದನ್ನೂ ಓದಿ: Akshay Kumar: ಜೈನ ಸನ್ಯಾಸಿಯ 180 ದಿನಗಳ ಉಪವಾಸ ಬ್ರೇಕ್ ಮಾಡಿದ ಅಕ್ಷಯ್ ಕುಮಾರ್!