ಹೊಸದಿಲ್ಲಿ: ಅಮೆರಿಕದಲ್ಲಿ ಖಲಿಸ್ತಾನಿ ನಾಯಕ (Khalistan Leader) ಗುರುಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun) ಹತ್ಯೆಯ ಸಂಚಿನಲ್ಲಿ (murder plot) ಭಾರತದ ʼರಾʼ (RAW) ಅಧಿಕಾರಿಯ ಕೈವಾಡದ ಕುರಿತು ವಾಷಿಂಗ್ಟನ್ ಪೋಸ್ಟ್ (Washington Post) ಮಾಡಿದ ವರದಿಗೆ ಭಾರತ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ವರದಿಯನ್ನು “ಅನುಚಿತ ಮತ್ತು ಆಧಾರರಹಿತ” ಎಂದು ಟೀಕಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್, “ಅಮೆರಿಕ ಹಂಚಿಕೊಂಡಿರುವ ಭದ್ರತಾ ಕಳವಳಗಳನ್ನು ಪರಿಶೀಲಿಸಲು ಭಾರತ ಸರ್ಕಾರವು ರಚಿಸಿರುವ ಉನ್ನತ ಮಟ್ಟದ ಸಮಿತಿಯ ತನಿಖೆ ನಡೆಯುತ್ತಿದೆ. ಸಂಘಟಿತ ಅಪರಾಧಿಗಳು, ಭಯೋತ್ಪಾದಕರು ಮತ್ತು ಇತರರ ನೆಟ್‌ವರ್ಕ್‌ಗಳ ಬಗ್ಗೆ ಸರ್ಕಾರವು ಊಹಾತ್ಮಕ ಮತ್ತು ಬೇಜವಾಬ್ದಾರಿಯುತ ಕಾಮೆಂಟ್‌ಗಳನ್ನು ಮಾಡುವುದಿಲ್ಲ ಹಾಗೂ ಅಂಥ ವರದಿಗಳು ಸಹಾಯಕವಾಗುವುದಿಲ್ಲ” ಎಂದಿದ್ದಾರೆ.
Our response to media queries on a story in The Washington Post:https://t.co/ifYYng7CT3 pic.twitter.com/LEIso6euN6
— Randhir Jaiswal (@MEAIndia) April 30, 2024
ವಿಕ್ರಮ್ ಯಾದವ್ ಎಂದು ಗುರುತಿಸಲಾದ ರಾ ಅಧಿಕಾರಿಯು ಯುಎಸ್‌ನಲ್ಲಿ ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್‌ನ “ತನಿಖಾ” ವರದಿ ಮಾಡಿತ್ತು. ಈ ಬಳಿಕ MEA ಹೇಳಿಕೆ ಬಂದಿದೆ. ಆ ಸಂದರ್ಭದಲ್ಲಿ ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ಥ ಸಮಂತ್ ಗೋಯೆಲ್ ಆಗಿದ್ದರು ಎಂದು ವರದಿ ತಿಳಿಸಿದೆ.
ಖಲಿಸ್ತಾನ್ ಚಳವಳಿಯ ಪ್ರಮುಖ ಉಗ್ರರಲ್ಲಿ ಒಬ್ಬನಾದ ಗುರುಪತ್ವಂತ್ ಸಿಂಗ್ ಪನ್ನುನ್, ಸಿಖ್ಸ್ ಫಾರ್ ಜಸ್ಟಿಸ್‌ನ ಕಾನೂನು ಸಲಹೆಗಾರ ಮತ್ತು ವಕ್ತಾರನಾಗಿದ್ದಾನೆ. ಇದು ಪ್ರತ್ಯೇಕ ಸಿಖ್ ದೇಶದ ಕಲ್ಪನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಭಾರತ ಸರ್ಕಾರ ಗುರುಪತ್ವಂತ್ ಸಿಂಗ್ ಪನ್ನೂನ್‌ನನ್ನು ಭಯೋತ್ಪಾದಕ ಎಂದು ಘೋಷಿಸಿದೆ.
ಏತನ್ಮಧ್ಯೆ, ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನ ಆರೋಪಗಳನ್ನು ಭಾರತ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಶ್ವೇತಭವನ ಸೋಮವಾರ ಹೇಳಿದೆ. ಆದಾಗ್ಯೂ, ಈ ವಿಷಯದ ಬಗ್ಗೆ ಎಫ್‌ಬಿಐ ತನಿಖೆ ಮತ್ತು ನ್ಯಾಯಾಂಗ ಇಲಾಖೆ ಸಲ್ಲಿಸಿದ ಕ್ರಿಮಿನಲ್ ಮೊಕದ್ದಮೆಯ ಬಗ್ಗೆ ಪ್ರತಿಕ್ರಿಯಿಸಿಲ್ಲ. ವಾಷಿಂಗ್ಟನ್ ಪೋಸ್ಟ್‌ನ ವರದಿಯ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್, ತನಿಖೆ ನಡೆಯುತ್ತಿದೆ ಮತ್ತು ನ್ಯಾಯಾಂಗ ಇಲಾಖೆ (ಡಿಒಜೆ) ಕ್ರಿಮಿನಲ್ ತನಿಖೆ ನಡೆಸುತ್ತಿದೆ ಎಂದು ಹೇಳಿದರು.
“ಭಾರತವು ಯುನೈಟೆಡ್ ಸ್ಟೇಟ್ಸ್‌ನ ಪ್ರಮುಖ ಕಾರ್ಯತಂತ್ರದ ಪಾಲುದಾರ ಮತ್ತು ನಾವು ಹಲವಾರು ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ವಿಸ್ತರಿಸಲು ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ಅನುಸರಿಸುತ್ತಿದ್ದೇವೆ” ಎಂದು ಅವರು ಪ್ರತಿಪಾದಿಸಿದರು
ಸುದ್ದಿ ವರದಿಯ ಬಗ್ಗೆ, “ಇದು ಗಂಭೀರ ವಿಷಯವಾಗಿದೆ ಮತ್ತು ನಾವು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ತಾವು ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಭಾರತ ಸರ್ಕಾರವು ನಮ್ಮೊಂದಿಗೆ ಸ್ಪಷ್ಟವಾಗಿ ಹೇಳಿದೆ” ಎಂದು ಜೀನ್-ಪಿಯರ್ ಹೇಳಿದರು. “ನಾವು ಅದರ ಆಧಾರದ ಮೇಲೆ ಭಾರತ ಸರ್ಕಾರದಿಂದ ಉತ್ತರದಾಯಿತ್ವವನ್ನು ನಿರೀಕ್ಷಿಸುತ್ತೇವೆ. ನಾವು ನಮ್ಮ ಕಳವಳ ವ್ಯಕ್ತಪಡಿಸುವುದನ್ನು ಮುಂದುವರಿಸಲಿದ್ದೇವೆ” ಎಂದಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಮಾರಣಾಂತಿಕ ಗುಂಡಿನ ದಾಳಿಯಲ್ಲಿ ಕೊಲ್ಲಲಾಗಿತ್ತು. ಯುಎಸ್‌ನಲ್ಲಿ ಪನ್ನುನ್‌ನನ್ನು ಕೊಲ್ಲುವ ಸಂಚು ಜೂನ್ 18ರಂದು ಬಯಲಾಗಿತ್ತು.
ಇದನ್ನೂ ಓದಿ: ಖಲಿಸ್ತಾನಿ ಉಗ್ರರಿಂದ ಕೇಜ್ರಿವಾಲ್‌ಗೆ 133 ಕೋಟಿ ರೂ. ಸಂದಾಯ; ಪನ್ನುನ್ ಸ್ಫೋಟಕ ಮಾಹಿತಿ