ಹೊಸದಿಲ್ಲಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ (Varanasi) ವಿವಾದಿತ (Gyanvapi Case) ಜ್ಞಾನವಾಪಿ ಮಸೀದಿ (Gyanvapi Masjid, Gyanvapi mosque) ಸಂಕೀರ್ಣದಲ್ಲಿರುವ ವ್ಯಾಸ್ ತೆಹ್ಖಾನಾದಲ್ಲಿ (Vyas Tehkhana) ಹಿಂದೂಗಳ ಪ್ರಾರ್ಥನೆಯನ್ನು ನಿಲ್ಲಿಸಲು ಸುಪ್ರೀಂ ಕೋರ್ಟ್ (supreme court) ಸೋಮವಾರ ನಿರಾಕರಿಸಿದೆ. ಮಸೀದಿ ಆವರಣದೊಳಗೆ ಹಿಂದೂಗಳ ಧಾರ್ಮಿಕ ಆಚರಣೆಗಳ ಮೇಲೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಆದಾಗ್ಯೂ, ಮುಸ್ಲಿಮರು ನಮಾಜ್ ಮಾಡಲು ಉತ್ತರ ಭಾಗದಿಂದ ಅಡೆತಡೆಯಿಲ್ಲದೆ ಮಸೀದಿಯನ್ನು ಪ್ರವೇಶಿಸಬಹುದು ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್‌ನ ಅರ್ಚಕರು ನೆಲಮಾಳಿಗೆಯಲ್ಲಿ ಪೂಜೆ ಮಾಡಲು ದಕ್ಷಿಣದಿಂದ ಪ್ರವೇಶಿಸುತ್ತಾರೆ ಎಂದು ಪೀಠ ಹೇಳಿದೆ.
ಜ್ಞಾನವಾಪಿ ಮಸೀದಿಯ ದಕ್ಷಿಣದ ನೆಲಮಾಳಿಗೆಯಾದ ʻವ್ಯಾಸ್ ತೆಹ್ಖಾನಾ’ದೊಳಗೆ ಹಿಂದೂಗಳಿಗೆ ದೇವತೆಗಳ ಪ್ರಾರ್ಥನೆಯನ್ನು ಮಾಡಲು ವಾರಣಾಸಿ ಜಿಲ್ಲಾ ನ್ಯಾಯಾಲಯ ಅವಕಾಶ ನೀಡಿತ್ತು. ಈ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿತ್ತು. ಈ ಆದೇಶವನ್ನು ತಡೆಹಿಡಿಯುವಂತೆ ಮುಸ್ಲಿಮರು ಕೋರ್ಟ್ ಮೆಟ್ಟಿಲೇರಿದ್ದರು.
ತೆಹ್ಖಾನಾದ ಒಳಗೆ ಪೂಜೆಗೆ ಅವಕಾಶ ಕಲ್ಪಿಸುವ ಜನವರಿ 17 ಮತ್ತು ಜನವರಿ 31ರ ಆದೇಶಗಳ ನಂತರ, ಹಿಂದೂ ಪುರೋಹಿತರಿಂದ ʼಪೂಜೆ’ಯ ನಂತರ ಮುಸ್ಲಿಂ ಸಮುದಾಯ ಯಾವುದೇ ಅಡೆತಡೆಯಿಲ್ಲದೆ ಜ್ಞಾನವಾಪಿ ಮಸೀದಿಯಲ್ಲಿ ʼನಮಾಜ್’ ಸಲ್ಲಿಸಬಹುದು ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಹೇಳಿದೆ. ʼತೆಹ್ಖಾನಾ’ ಪ್ರದೇಶಕ್ಕೆ ಸೀಮಿತವಾಗಿ, ಮೇಲಿನ ನಿಯಮಗಳಡಿ ಪೂಜೆಗಳನ್ನು ಸಲ್ಲಿಸಲು ಎರಡೂ ಸಮುದಾಯಗಳು ಯಥಾಸ್ಥಿತಿ ಕಾಯ್ದುಕೊಳ್ಳುವುದು ಸೂಕ್ತವಾಗಿದೆ ಎಂದಿದೆ.
ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂ ಪೂಜೆಗೆ ಅನುಮತಿಯನ್ನು ವಿರೋಧಿಸಿ ಜ್ಞಾನವಾಪಿ ಮಸೀದಿ ಸಮಿತಿಯು ಮಾಡಿರುವ ಮನವಿಯನ್ನು ಸುಪ್ರೀಂ ಕೋರ್ಟ್ ಜುಲೈನಲ್ಲಿ ಅಂತಿಮ ವಿಲೇವಾರಿಗೆ ನಿಗದಿಪಡಿಸಿದೆ.
ಪ್ರಮುಖವಾಗಿ, ಜನವರಿ 31ರಂದು ಜಿಲ್ಲಾ ನ್ಯಾಯಾಲಯವು ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿರುವ ವಿಗ್ರಹಗಳ ಮುಂದೆ ಹಿಂದೂ ಅರ್ಚಕರು ಪ್ರಾರ್ಥನೆ ಮಾಡಬಹುದು ಎಂದು ತೀರ್ಪು ನೀಡಿತು. ನ್ಯಾಯಾಲಯದ ಆದೇಶದ ನಂತರ, ಕಾಶಿ ವಿಶ್ವನಾಥ ದೇವಸ್ಥಾನವು ವ್ಯಾಸ್ ತೆಹ್ಖಾನಾದಲ್ಲಿ ಪ್ರಾರ್ಥನೆಯನ್ನು ನಡೆಸಲು ಅರ್ಚಕರನ್ನು ನಾಮನಿರ್ದೇಶನ ಮಾಡಿತು.
ಅರ್ಜಿದಾರರಾದ ಶೈಲೇಂದ್ರ ಕುಮಾರ್ ಪಾಠಕ್ ಅವರು, ತಮ್ಮ ತಾಯಿಯ ಅಜ್ಜ ಸೋಮನಾಥ ವ್ಯಾಸ್ ಅವರು ಅರ್ಚಕರೂ ಆಗಿದ್ದು, ಡಿಸೆಂಬರ್ 1993ರವರೆಗೆ ನೆಲಮಾಳಿಗೆಯಲ್ಲಿ ಪ್ರಾರ್ಥನೆಯನ್ನು ನಡೆಸಿದ್ದರು ಎಂದಿದ್ದರು. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಪೂಜೆಯನ್ನು ಸ್ಥಗಿತಗೊಳಿಸಲಾಯಿತು.
ನೆಲಮಾಳಿಗೆಯು ತನ್ನ ಅಜ್ಜನ ನಿಯಂತ್ರಣದಲ್ಲಿತ್ತು ಎಂದು ಹೇಳುವ ಅರ್ಜಿದಾರರ ಹಕ್ಕನ್ನು ಮುಸ್ಲಿಂ ಕಡೆಯವರು ವಿರೋಧಿಸಿದ್ದರು. ಬ್ರಿಟಿಷರ ಆಳ್ವಿಕೆಯಲ್ಲಿಯೂ ತನ್ನ ಕುಟುಂಬವು ನೆಲಮಾಳಿಗೆಯ ನಿಯಂತ್ರಣವನ್ನು ಹೊಂದಿತ್ತು ಎಂದು ಅರ್ಜಿದಾರರು ಹೇಳಿದ್ದಾರೆ.
ಇದನ್ನೂ ಓದಿ: Gyanvapi Case: ಜ್ಞಾನವಾಪಿ ಮಸೀದಿ ವಿವಾದ: ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ವಿಚಾರಣೆಗೆ ಸುಪ್ರೀಂ ಸಮ್ಮತಿ