Site icon Vistara News

ವಿಸ್ತಾರ ಸಂಪಾದಕೀಯ: ಜಗತ್ತಿನ ಅರ್ಧದಷ್ಟು ಭಾಷೆಗಳು ಅಪಾಯದ ಅಂಚಿನಲ್ಲಿ, ಮಾತೃ ಭಾಷೆಯನ್ನು ಉಳಿಸಿಕೊಳ್ಳೋಣ

Half of the mother languages of the world are in danger, we have to nurture our mother tongue

Half of the mother languages of the world are in danger, we have to nurture our mother tongue

ವಿಶ್ವದಲ್ಲಿ 7000ಕ್ಕೂ ಅಧಿಕ ಭಾಷೆಗಳಿದ್ದು, ಅವುಗಳಲ್ಲಿ ಅರ್ಧದಷ್ಟು ಭಾಷೆಗಳು ಅಳಿವಿನ ಅಂಚಿಗೆ ತಲುಪಿವೆ ಎಂಬ ಆಘಾತಕಾರಿ ಸಂಶೋಧನಾ ವರದಿಯೊಂದು ʼದಿ ಕಾನ್ವರ್ಸೇಷನ್‌ʼ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪೆಸಿಫಿಕ್, ಆಗ್ನೇಯ ಏಷ್ಯಾ ಮತ್ತು ಯುರೋಪ್‌ನಲ್ಲಿರುವ ಸ್ಥಳೀಯ ಭಾಷೆಗಳು ಪ್ರಪಂಚದ ಇತರ ಭಾಷೆಗಳಿಗಿಂತ ಹೆಚ್ಚು ಸುರಕ್ಷಿತವಾಗಿವೆ. ಆದರೂ ಇಲ್ಲಿನ ಭಾಷೆಗಳ ಬಳಕೆಯಲ್ಲಿ ಶೇ.25ರಷ್ಟು ಇಳಿಕೆ ಕಂಡು ಬಂದಿದೆ ಎಂದು ವರದಿ ತಿಳಿಸಿದೆ. ಇದು ಆತಂಕಕಾರಿ ಸಂಗತಿಯೇ ಆಗಿದೆ. ಏಕೆಂದರೆ ಒಂದು ಭಾಷೆ ಅಳಿಯುವುದೆಂದರೆ ಶತಶತಮಾನಗಳಿಂದ ರೂಪಿತವಾಗಿ ಬಂದಿದ್ದ ಒಂದು ಸಂಸ್ಕೃತಿ, ಪರಂಪರೆಯೇ ನಾಶವಾದಂತೆ. ಭಾರತೀಯ ಭಾಷೆಗಳೂ ಅಪಾಯದ ಅಂಚಿನಲ್ಲಿವೆ. ಈ ಅಧ್ಯಯನ ವರದಿ ಕನ್ನಡಕ್ಕೂ ಎಚ್ಚರಿಕೆಯ ಗಂಟೆಯಾಗಿದೆ.

UNESCO ಪ್ರಕಾರ, 10,000ಕ್ಕಿಂತ ಕಡಿಮೆ ಜನರು ಮಾತನಾಡುವ ಯಾವುದೇ ಭಾಷೆ ಅಳಿವಿನಂಚಿನಲ್ಲಿದೆ ಎಂದು ಲೆಕ್ಕ. 1971ರ ಜನಗಣತಿಯ ನಂತರ, 10,000ಕ್ಕಿಂತ ಕಡಿಮೆ ಜನರು ಮಾತನಾಡುವ ಸ್ಥಳೀಯ ಭಾಷೆಯನ್ನು ಇನ್ನು ಮುಂದೆ ಭಾರತದ ಅಧಿಕೃತ ಭಾಷೆಗಳ ಪಟ್ಟಿಯಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಭಾರತ ಸರ್ಕಾರ ಹೇಳಿತು. ಇದಾದ ಬಳಿಕ ಪಟ್ಟಿಯಿಂದ 108 ಭಾಷೆಗಳು ಹೊರಗಿಡಲ್ಪಟ್ಟವು. 2018ರಲ್ಲಿ ಯುನೆಸ್ಕೋದ ವರದಿಯು ಭಾರತದಲ್ಲಿ 42 ಭಾಷೆಗಳು ಅಳಿವಿನಂಚಿನಲ್ಲಿವೆ ಎಂದು ಹೇಳಿತ್ತು. ಇವುಗಳನ್ನು ಮಾತಾಡುವವರ ಸಂಖ್ಯೆ 10,000ಕ್ಕಿಂತ ಕಡಿಮೆ ಇತ್ತು. ಭಾಷಾಶಾಸ್ತ್ರಜ್ಞ ಜಿ.ಎನ್.‌ ದೇವಿ ಅವರು ತಿಳಿಸುವಂತೆ, ದೇಶದಲ್ಲಿ 1961ರ ಬಳಿಕ 220 ಭಾಷೆಗಳನ್ನು ಕಳೆದುಕೊಂಡಿರಬಹುದು. ಮುಂದಿನ 50 ವರ್ಷಗಳಲ್ಲಿ ಇನ್ನೂ 150 ಭಾಷೆಗಳು ಕಣ್ಮರೆಯಾಗಬಹುದು. ಬಹುತೇಕ ಸಾಯುತ್ತಿರುವ ಭಾಷೆಗಳು ದೇಶಾದ್ಯಂತ ಹರಡಿರುವ ಸ್ಥಳೀಯ ಬುಡಕಟ್ಟು ಗುಂಪುಗಳದ್ದು. ಇದರಲ್ಲಿ ಕರ್ನಾಟಕದ ಕೊರಗ ಮತ್ತು ಕುರುಬ ಭಾಷೆಗಳೂ ಸೇರಲಿವೆ.

ಸದ್ಯ 10,000 ಮಂದಿಗಿಂತ ಕಡಿಮೆ ಜನ ಮಾತಾಡುವ ಭಾಷೆಗೆ ಅಳಿವಿನಂಚಿನ ಭಾಷೆ ಎಂಬ ಮಾನದಂಡವಿದೆ; ಕನ್ನಡವನ್ನು ಕೋಟ್ಯಂತರ ಜನ ಮಾತನಾಡುವುದರಿಂದ ಸದ್ಯಕ್ಕೇನೂ ಅಪಾಯವಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಬೇಡ. ಆತಂಕಪಡಲು ಹಲವು ಕಾರಣಗಳಿವೆ. ವರ್ಷದಿಂದ ವರ್ಷಕ್ಕೆ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳು ಗಣನೀಯ ಸಂಖ್ಯೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣದತ್ತ ವಾಲುತ್ತಿದ್ದಾರೆ. ಕನ್ನಡ ಅನ್ನ ಕೊಡುವ ಭಾಷೆಯಲ್ಲ ಎಂಬ ಅಪನಂಬಿಕೆ ಪೋಷಕರನ್ನು ಬಾಧಿಸುತ್ತಿರುವಂತಿದೆ. ರಾಜ್ಯ ಸರ್ಕಾರವೇ ಆಂಗ್ಲ ಭಾಷಾ ಶಾಲೆಗಳನ್ನು ಆರಂಭಿಸುತ್ತಿದೆ. ಪೋಷಕರೂ ಈ ಶಾಲೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಕನ್ನಡದ ಪುಸ್ತಕಗಳಿಗೂ ಪತ್ರಿಕೆಗಳಿಗೂ ಹೊಸ ತಲೆಮಾರಿನ ಓದುಗರು ಸೃಷ್ಟಿಯಾಗುತ್ತಿಲ್ಲ. ರಾಜಧಾನಿಯಲ್ಲಿ ಕನ್ನಡ ಬಲಗುಂದುತ್ತಿದೆ. ಇದು ಒಂದು ಭಾಷೆ ನಿಧಾನವಾಗಿ ಅಪಾಯದ ಅಂಚಿಗೆ ಸಾಗುತ್ತಿರುವುದರ ಸೂಚಕ.

ಇದನ್ನೂ ಓದಿ: ತುಳುನಾಡಿನವರಿಗೆ ಕನ್ನಡ ರಾಜ್ಯ ಭಾಷೆ, ತುಳು ಮಾತೃಭಾಷೆ, ಎರಡರ ರಕ್ಷಣೆ ಅಗತ್ಯ: ಗುರುದೇವಾನಂದ ಸ್ವಾಮೀಜಿ

ಇಂಗ್ಲಿಷ್ ಭಾಷೆ ಭಾರತೀಯ ಭಾಷೆಗಳನ್ನು ಈಗಾಗಲೇ ಆವರಿಸಿಬಿಟ್ಟಿದೆ. ಇಂಗ್ಲಿಷನ್ನು ಈಗ ದೂರ ಇಡಲಾಗದು. ಇಂಗ್ಲಿಷ್ ಓಡಿಸಿ, ಕನ್ನಡ ಮಾಧ್ಯಮದಲ್ಲಿ ಓದಿಸಿ ಎಂಬ ಘೋಷಣೆಯೂ ಈಗ ಅರ್ಥಹೀನ. ಈಗ ನಾವು ತುರ್ತಾಗಿ ಮಾಡಬೇಕಿರುವುದು ಕನ್ನಡವನ್ನು ನಮ್ಮ ಮಕ್ಕಳು ಮಾತನಾಡುವುದನ್ನು ಖಾತರಿಪಡಿಸುವುದು. ಆಡಿಯೊ ಇತ್ಯಾದಿ ಮಾಧ್ಯಮಗಳ ಮೂಲಕ ಯುವ ಪೀಳಿಗೆಯಲ್ಲಿ ಕನ್ನಡತನವನ್ನು ತುಂಬಬೇಕಿದೆ. ಮಾರುಕಟ್ಟೆಗಳು, ಬಹುರಾಷ್ಟ್ರೀಯ ಕಂಪನಿಗಳು ತಮಗೆ ಲಾಭವಾಗುವುದಾದರೆ ಸ್ಥಳೀಯ ಭಾಷೆಗಳನ್ನು ಪ್ರೋತ್ಸಾಹಿಸುವ ಪ್ರವೃತ್ತಿಯನ್ನು ನಮ್ಮ ಭಾಷೆಯ ಬೆಳವಣಿಗೆಗೆ ಬಳಸಿಕೊಳ್ಳಬೇಕಿದೆ. ಕನ್ನಡದ ಪುಸ್ತಕಗಳು, ಮಾಧ್ಯಮಗಳು ಹೆಚ್ಚಿನ ಮಕ್ಕಳನ್ನು ತಲುಪುವಂತೆ ಮಾಡಬೇಕು. ಕನ್ನಡ ಶಾಲೆಗಳನ್ನು ಗಟ್ಟಿಗೊಳಿಸಬೇಕು. ಮಕ್ಕಳು ಯಾವುದೇ ಮಾಧ್ಯಮದಲ್ಲಿ ಓದಲಿ, ಆದರೆ ಮಾತೃಭಾಷೆಯನ್ನು ಅವರು ಮರೆಯದಂತೆ ನೋಡಿಕೊಳ್ಳಬೇಕಿದೆ. ಇಲ್ಲದೇ ಹೋದರೆ ಇನ್ನು ನೂರು ವರ್ಷಗಳ ಬಳಿಕವಾದರೂ ಅಳಿವಿನಂಚಿನಲ್ಲಿರುವ ಭಾಷೆಗಳ ಪಟ್ಟಿಗೆ ಕನ್ನಡವೂ ಸೇರಬಹುದು!

Exit mobile version