ಬೆಂಗಳೂರು: ಬೆಂಗಳೂರಿನ ನಗರ್ತ ಪೇಟೆಯ ಅಂಗಡಿಯಲ್ಲಿ ಹನುಮಾನ್ ಚಾಲೀಸಾ (Hanuman Chalisa) ಶ್ಲೋಕ ಹಾಕಿದ ಎಂಬ ಕಾರಣಕ್ಕಾಗಿ ಹಿಂದು ವ್ಯಾಪಾರಿಯೊಬ್ಬನ (Attack on Hindu Trader) ಮೇಲೆ ಐವರು ಯುವಕರು ಹಲ್ಲೆ ನಡೆಸಿದ ಘಟನೆ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಇದು ರಾಜಕೀಯ ತಿರುವುಗಳನ್ನು ಪಡೆದುಕೊಂಡು ಪ್ರತಿಭಟನೆಗಳು ಭುಗಿಲೆದ್ದಿವೆ. ಆದರೆ, ಅಮಾಯಕ ಯುವಕನ ಮೇಲೆ ಅಮಾನುಷ ಹಲ್ಲೆ ನಡೆಸಿದ ಈ ಕಿರಾತಕರ ಗ್ಯಾಂಗ್‌ಗೆ (Gang of Miscreants) ಇನ್ನೂ ಬುದ್ಧಿ ಬಂದಿಲ್ಲ. ಅವರ ದುಷ್ಟತನ ಮತ್ತು ಕ್ರೌರ್ಯ ಯಾವ ಮಟ್ಟಕ್ಕಿದೆ ಎಂದರೆ ಬಂಧಿತರಲ್ಲಿ ಒಬ್ಬನ ಸಹೋದರ ಸ್ಟೇಟಸ್ ಪೋಸ್ಟ್ (Whats app Status) ಹಾಕಿಕೊಂಡು ಎಚ್ಚರಿಕೆಯನ್ನು ನೀಡಿದ್ದಾನೆ. ಆರೋಪಿಗಳ ಬಂಧನವಾದ ಬೆನ್ನಿಗೇ ಒಬ್ಬ ದುಷ್ಟನ ಸೋದರ ಹಾಕಿರುವ ಪೋಸ್ಟ್ ಎಂಥವರನ್ನಾದರೂ ಕೆರಳಿಸುವಂತಿದೆ. ಅದರ ಭಾವಾರ್ಥ ಹೀಗಿದೆ: ಇವತ್ತು ಜೈಲ್, ನಾಳೆ ಬೇಲ್, ಮತ್ತೆ ಅದೇ ಖೇಲ್. ಅಂದರೆ ಇವತ್ತು ಜೈಲಾಗುತ್ತೆ, ನಾಳೆ ಬೇಲಾಗುತ್ತದೆ. ನಂತರ ಮತ್ತದೇ ಆಟ ಶುರು ಮಾಡ್ತೀವಿ!
ಮಾರ್ಚ್ 17ರ ಭಾನುವಾರ ಸಾಯಂಕಾಲ 6.15ರ ಹೊತ್ತು. ನಗರ್ತ ಪೇಟೆಯ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಸಿದ್ಧಣ್ಣ ಗಲ್ಲಿಯಲ್ಲಿ ಕಾರ್ಯಾಚರಿಸುತ್ತಿರುವ ಕೃಷ್ಣ ಟೆಲಿಕಾಂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಕೇಶ್ ಅವರು ಹನುಮಾನ್ ಚಾಲೀಸಾ ಹಾಕಿದ್ದರು.
ಆಗ ಅಲ್ಲಿಗೆ ಆಗಮಿಸಿದ ಸುಲೇಮಾನ್, ಷಹನವಾಜ್, ರೋಹಿತ್, ಡ್ಯಾನಿಷ್, ತರುಣ್ ಅಲಿಯಾಸ್ ದಡಿಯಾ ಮತ್ತು ಇನ್ನೊಬ್ಬ ವ್ಯಕ್ತಿ ಹಿಂದು ದೇವರ ಭಜನೆಯನ್ನು ಬಂದ್ ಮಾಡಲು ಹೇಳಿದ್ದಾರೆ. ಅಂಗಡಿಯಲ್ಲಿದ್ದ ಮುಖೇಶ್, ನನ್ನ ಅಂಗಡಿ ನನ್ನ ಇಷ್ಟ ಎಂದು ವಿರೋಧ ಮಾಡಿದ್ದಾರೆ. ಈಗ ಆಜಾನ್ ಟೈಮ್, ದೇವರ ಭಜನೆ ಹಾಕುವಂತಿಲ್ಲ ಎಂದು ಎಚ್ಚರಿಕೆ ನೀಡಿದರು. ಆದರೆ, ಮುಕೇಶ್ ಅವರ ಮಾತು ಕೇಳಿಲ್ಲ. ನಾನು ನಮ್ಮ ದೇವರ ಹಾಡು ಹಾಕಿದರೆ ನಿಮಗೇನು ತೊಂದರೆ ಎಂದು ಕೇಳಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಯುವಕರ ಗುಂಪು ಮುಖೇಶ್ ಮೇಲೆ ದಾಳಿ ಮಾಡಿದ್ದಾರೆ. ಮುಖೇಶ್ ಸಹ ಆವೇಶದಿಂದ ಪ್ರತಿದಾಳಿ ಮಾಡಿದ್ದಾರೆ. ಆದರೆ, ಆರೋಪಿಗಳು ನಾಲ್ಕೈದು ಮಂದಿ ಇದ್ದಿದ್ದರಿಂದ ಮುಖೇಶ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಿಸಿಕೊಂಡಿರುವ ಸುಲೇಮಾನ್, ಷಹನವಾಜ್, ರೋಹಿತ್, ಡ್ಯಾನಿಷ್, ತರುಣ್ ಅಲಿಯಾಸ್ ದಡಿಯಾ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : Hanuman Chalisa: ನಗರ್ತಪೇಟೆಯಲ್ಲಿ ಗುಡುಗಿದ ‘ಕೇಸರಿ’; ಕಠಿಣ ಕ್ರಮದ ಭರವಸೆ, ಪ್ರತಿಭಟನೆಗೆ ವಿರಾಮ
ಎಚ್ಚರಿಕೆ ಸ್ಟೇಟಸ್ ಹಾಕಿದ ಸುಲೇಮಾನ್ ಸೋದರ
ಈ ನಡುವೆ ಹಲ್ಲೆಕೋರರಲ್ಲಿ ಒಬ್ಬನಾದ ಸುಲೇಮಾನ್‌ನ ಸಹೋದರ ಸೈಯದ್ ಎಂಬಾತ ಪೊಲೀಸರು ಮತ್ತು ಜನರಿಗೆ ಎಚ್ಚರಿಕೆ ಕೊಡುವ ರೀತಿಯಲ್ಲಿ ಸ್ಟೇಟಸ್ ಹಾಕಿಕೊಂಡಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಹಲ್ಲೆ ಮಾಡಿ ಬಂಧನಕ್ಕೊಳಗಾದರೂ ಆರೋಪಿಗಳ ಕ್ರೌರ್ಯ ಇನ್ನೂ ಕಡಿಮೆಯಾಗಿಲ್ಲ. ಅವರಿಗೆ ಸಮಾಜದ ಹೆದರಿಕೆ ಸ್ವಲ್ಪವೂ ಇಲ್ಲ ಎನ್ನುವುದಕ್ಕೆ ಈ ಪೋಸ್ಟ್ ಸಾಕ್ಷ್ಯ ಒದಗಿಸಿದೆ.
ಬಂಧಿತ ಆರೋಪಿ ಸುಲೇಮಾನ್ ಸಹೋದರ ಸೈಯದ್ ಹಾಕಿದ ಪೋಸ್ಟ್ ಹೀಗಿದೆ.: ಆಜ್ ಜೈಲ್, ಕಲ್ ಬೇಲ್, ಫಿರ್ ವೊಹಿ ಪುರಾನಾ ಖೇಲ್! ಅಂದರೆ ಇವತ್ತು ಜೈಲ್ ನಾಳೆ ಬೇಲ್ ಮತ್ತೆ ಅದೇ ಹಿಂದಿನ ಆಟ ಶುರು ಅಂತ ಆತ ಬರೆದುಕೊಂಡಿದ್ದಾನೆ. ಈ ಹುಡುಗ ಅಪ್ರಾಪ್ತ ವಯಸ್ಕನಂತೆ ಕಾಣುತ್ತಿದ್ದಾನೆ. ಆದರೆ, ಇಷ್ಟು ಸಣ್ಣ ವಯಸ್ಸಿಗೇ ಇಷ್ಟೊಂದು ನಿರ್ಭಯವಾಗಿ ಎಚ್ಚರಿಕೆ ನೀಡಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಯೂ ಎದ್ದು ನಿಂತಿದೆ.
ಸಿಡಿದೆದ್ದ ಬಿಜೆಪಿ ನಾಯಕರು, ಕಾರ್ಯಕರ್ತರು
ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಈ ರೀತಿ ಹಲ್ಲೆ ಮಾಡಿದ ದುಷ್ಟರ ವಿರುದ್ಧ ಮತ್ತು ಪದೇಪದೆ ನಡೆಯುತ್ತಿರುವ ಇಂಥ ಘಟನೆಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ನಗರ್ತ ಪೇಟೆಯಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು. ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಸೇರಿದಂತೆ ಸಂಸದರು, ಶಾಸಕರು, ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾದರು. ಅಲ್ಲಿ ಜೈಶ್ರೀರಾಮ್ ಘೋಷಣೆ ಮೊಳಗಿತು.