ಬೆಂಗಳೂರು: ಹನುಮಾನ್ ಚಾಲೀಸಾ (Hanuman Chalisa) ಹಾಕಿದ್ದಕ್ಕೆ ಮೊಬೈಲ್ ಅಂಗಡಿಯಾತನ ಮೇಲೆ ಹಲ್ಲೆ (assault case) ನಡೆಸಿದ ಪ್ರಕರಣದಲ್ಲಿ ಇದುವರೆಗೂ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ ಹಲ್ಲೆ ಪ್ರಕರಣದಲ್ಲಿ (crime news) ಒಟ್ಟು ಐವರನ್ನು ಬಂಧಿಸಿದಂತಾಗಿದೆ.
ಮೊಬೈಲ್ ಅಂಗಡಿ ಮಾಲೀಕ ಮುಖೇಶ್ ಎಂಬವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸುಲೈಮಾನ್, ರೋಹಿತ್ ಮತ್ತು ಶಹನವಾಜ್ ಎಂಬ ಮೂರು ಆರೋಪಿಗಳನ್ನು ಬಂಧಿಸಿದ್ದರು. ತರುಣ್ ಮತ್ತು ಇನ್ನೊಬ್ಬ ಯುವಕನನ್ನು ನಿನ್ನೆ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಒಟ್ಟು ಐದು ಜನ ಆರೋಪಿಗಳು ಪೊಲೀಸರ ವಶಕ್ಕೆ ಸಿಕ್ಕಿದಂತಾಗಿದೆ.
ಇವರು ಹಲ್ಲೆ ನಡೆಸಿ, ಪ್ರಕರಣ ಬಿಗಡಾಯಿಸುತ್ತಲೂ ಕೆಜಿ ಹಳ್ಳಿ ಭಾಗದಲ್ಲಿ ತಲೆ ಮರೆಸಿಕೊಂಡಿದ್ದರು ಎಂದು ಗೊತ್ತಾಗಿದೆ. ವಶಕ್ಕೆ ಪಡೆದಿರುವ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನೂ ಒಬ್ಬನನ್ನು ಬಂಧಿಸಬೇಕಾಗಿದೆ.
“ಭಾನುವಾರ ಸಾಯಂಕಾಲ 6:15ರ ಸುಮಾರಿಗೆ ಐದು ಮಂದಿ ಮೊಬೈಲ್ ಅಂಗಡಿಯ ಮುಖೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಅಂಗಡಿಯಿಂದ ಹೊರಗೆಳೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಈ ದಿನ ಮೂವರನ್ನು ಆರೆಸ್ಟ್ ಮಾಡಿದ್ದೇವೆ. ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿಗಳಲ್ಲಿ ಎರಡೂ ಕೋಮಿನವರು ಇದ್ದಾರೆ. ಓರ್ವ ಆರೋಪಿ ಮೇಲೆ ಎರಡು ಪ್ರಕರಣಗಳಿವೆ, ಹಲ್ಲೆ ಹಾಗೂ ಸುಲಿಗೆ ಕೇಸ್ ಇದೆ” ಎಂದು ನಿನ್ನೆ ಕೇಂದ್ರ ವಿಭಾಗ ಡಿಸಿಪಿ ಶೇಖರ್ ಹೆಚ್.ಟಿ ಹೇಳಿಕೆ ನೀಡಿದ್ದರು.
ಇಂದು ನಗರ್ತಪೇಟೆಯಲ್ಲಿ ಕೇಸರಿ ಹವಾ
ಮುಖೇಶ್ ಮೇಲಿನ ಹಲ್ಲೆ ಪ್ರಕರಣ ಹಿನ್ನೆಲೆಯಲ್ಲಿ ನಗರ್ತಪೇಟೆಯಲ್ಲಿ ಇಂದು ಹನುಮಾನ್ ಚಾಲೀಸಾದೊಂದಿಗೆ ಕೇಸರಿ ಸಂಚಾರ ನಡೆಯಲಿದೆ. ಹಿಂದೂ ಕಾರ್ಯಕರ್ತರಿಗೆ ಕೇಸರಿ ಶಾಲು, ಕೇಸರಿ ಧ್ವಜ ಧರಿಸಿ ಬರಲು ಸಂಸದ ತೇಜಸ್ವಿ ಸೂರ್ಯ (Tejaswi Surya) ಸೂಚನೆ ನೀಡಿದ್ದು, ಅಂಗಡಿ ಮುಂಗಟ್ಟುಗಳಲ್ಲಿ ಹನುಮಾನ್ ಚಾಲೀಸ್ ಮೊಳಗಿಸುವಂತೆ ಕರೆ ನೀಡಿದ್ದಾರೆ.
ಮಧ್ಯಾಹ್ನ 12:30ಕ್ಕೆ ಮುಖೇಶ್ ಅಂಗಡಿ ಬಳಿ ಹಾಜರಾಗಲಿರುವ ಹಿಂದೂ- ಬಿಜೆಪಿ ಕಾರ್ಯಕರ್ತರು, ಸಿದ್ದಣ್ಣನ ಗಲ್ಲಿಯ ಮುಖೇಶ್ ಅಂಗಡಿಯಿಂದ ಸಂಚಾರ ಪ್ರಾರಂಭಿಸಲಿದ್ದಾರೆ. ಈ ವಿಚಾರವಾಗಿ ಕರೆಕೊಟ್ಟಿರುವ ತೇಜಸ್ವಿ ಸೂರ್ಯ ಜೊತೆಗೆ ಸಂಸದ ಪಿ.ಸಿ ಮೋಹನ್, ಸಪ್ತಗಿರಿಗೌಡ ಇನ್ನಿತರರು ಭಾಗಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಕೇಸ್; ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಆಗ್ರಹ