Site icon Vistara News

Hassan pen drive case: “ಇದನ್ನು ಸಹಿಸಲು ಸಾಧ್ಯವಿಲ್ಲ…” ಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಖಡಕ್‌ ಎಚ್ಚರಿಕೆ

Amith Shah lok sabha election 2024

ಬೆಂಗಳೂರು: ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (JDS MP Prajwal Revanna) ಅವರ ಅಶ್ಲೀಲ ಟೇಪ್ ವಿವಾದಕ್ಕೆ (Hassan pen drive case) ಕೇಂದ್ರ ಗೃಹ ಸಚಿವ ಅಮಿತ್ ಶಾ (Home minister Amit Shah) ಅವರು ಮಂಗಳವಾರ ಪ್ರತಿಕ್ರಿಯಿಸಿದ್ದು, “ಇದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಹಾಗೆಯೇ ಈ ಪ್ರಕರಣದಲ್ಲಿ ರಾಜಕೀಯ ಕೈವಾಡದ ಬಗೆಗೂ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

“ಇದನ್ನು ಸಹಿಸಲು ಸಾಧ್ಯವಿಲ್ಲ. ಬಿಜೆಪಿಯ ನಿಲುವು ಈ ವಿಚಾರದಲ್ಲಿ ಸ್ಪಷ್ಟವಾಗಿದೆ- ನಾವು ನಾರಿ ಶಕ್ತಿಯೊಂದಿಗೆ ನಿಲ್ಲುತ್ತೇವೆ” ಎಂದು ಅವರು ಹೇಳಿದರು. ಈ ಪ್ರಕರಣದಲ್ಲಿ ಇದುವರೆಗೆ ಕ್ರಮ ಕೈಗೊಳ್ಳದಿರುವ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಕೂಡ ಗೃಹ ಸಚಿವರು ಮತ್ತಷ್ಟು ತರಾಟೆಗೆ ತೆಗೆದುಕೊಂಡರು. “ಚುನಾವಣೆಯ ಸಂದರ್ಭದಲ್ಲಿಯೇ ಈ ವಿಡಿಯೋ ಯಾಕೆ ಹರಿದಾಡಬೇಕು? ಈ ಸಮಯಸಾಧಕತನ ಸಂಶಯ ಮೂಡಿಸುತ್ತಿದೆ” ಎಂದವರು ಹೇಳಿದ್ದಾರೆ.

ಹಾಸನ ಸಂಸದರು ಭಾಗಿಯಾಗಿದ್ದಾರೆ ಎಂದು ಹೇಳಲಾದ ಸ್ಪಷ್ಟ ವೀಡಿಯೊಗಳು ಸೋರಿಕೆಯಾದ ಸಮಯದ ಬಗ್ಗೆಯೂ ಷಾ ಪ್ರಶ್ನೆಗಳನ್ನು ಎತ್ತಿದ್ದಾರೆ. ಜೆಡಿಎಸ್ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಕೆಲವು ಸರ್ಕಾರಿ ನೌಕರರು ಸೇರಿದಂತೆ ಹಲವು ಮಹಿಳೆಯರೊಂದಿಗೆ ಬಲವಂತದ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎನ್ನಲಾದ ವೀಡಿಯೋ ತುಣುಕುಗಳು ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿತ್ತು. ಅದನ್ನನುಸರಿಸಿ ಸಿಎಂ ಸಿದ್ದರಾಮಯ್ಯ ಅವರು ವಿಶೇಷ ತನಿಖಾ ತಂಡ ರಚಿಸಿದ್ದಾರೆ.

ಏಪ್ರಿಲ್ 26ರಂದು ಹಾಸನ ಕ್ಷೇತ್ರದಲ್ಲಿ ಮತದಾನ ನಡೆದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಪ್ರಜ್ವಲ್ ರೇವಣ್ಣ ಜೆಡಿಎಸ್ ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ. ರಾಜ್ಯದಲ್ಲಿ ಜೆಡಿಎಸ್‌, ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ. 33 ವರ್ಷದ ಪ್ರಜ್ವಲ್ ಅವರು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿದ್ದಾರೆ. ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿರುದ್ಧವೂ ದೂರು ದಾಖಲಾಗಿದೆ.

ಸಿದ್ದರಾಮಯ್ಯ ಅವರು ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನೀಡಿ ಆದೇಶಿಸಿದ್ದಾರೆ. ಲೈಂಗಿಕ ಅಪರಾಧ ಎಸಗಿದವರನ್ನು, ಅದನ್ನು ಚಿತ್ರೀಕರಿಸಿ ಸಾರ್ವಜನಿಕಗೊಳಿಸಿದವರನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಎಸ್‌ಐಟಿಯ ಸರ್ಕಾರಿ ಆದೇಶ ತಿಳಿಸಿದೆ. ಈಗಾಗಲೇ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಎ) (ಲೈಂಗಿಕ ಕಿರುಕುಳ), 354 (ಡಿ) (ಹಿಂಬಾಲಿಸುವಿಕೆ) ಮತ್ತು 506 (ಅಪರಾಧ ಬೆದರಿಕೆ) ಮತ್ತು 509 (ಪದ, ಸನ್ನೆ ಅಥವಾ ಚಿತ್ರದ ಮೂಲಕ ಮಹಿಳೆಯ ಅವಮಾ) ಅಡಿ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಜ್ವಲ್‌ ರೇವಣ್ಣ ಅವರ ಅಡುಗೆಯವರು ನೀಡಿದ ದೂರಿನ ಮೇರೆಗೆ ಜಿಲ್ಲೆಯ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಮಹಿಳೆಯು ರೇವಣ್ಣ ಅವರ ಪತ್ನಿ ಭವಾನಿ ಅವರ ಸಂಬಂಧಿ ಎಂದು ದೂರುದಾರರು ತಿಳಿಸಿದ್ದಾರೆ. ತಾನು ಕೆಲಸ ಮಾಡಲು ಪ್ರಾರಂಭಿಸಿದ ನಾಲ್ಕು ತಿಂಗಳ ನಂತರ ರೇವಣ್ಣ ತನಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದರು. ಅವರ ಮಗ ಪ್ರಜ್ವಲ್ ತಮ್ಮ ಮಗಳಿಗೆ ವೀಡಿಯೊ ಕರೆಗಳನ್ನು ಮಾಡುತ್ತಿದ್ದರು ಮತ್ತು ಅವಳೊಂದಿಗೆ ಅಸಭ್ಯವಾಗಿ ಮಾತನಾಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: Hassan Pen Drive Case: ಎಸ್‌ಐಟಿಗೆ 18 ಸಿಬ್ಬಂದಿ ನೇಮಕ; ಅಶ್ಲೀಲ ವಿಡಿಯೋದಲ್ಲಿ ಇರುವವರು ಯಾರು?

Exit mobile version