Site icon Vistara News

Hathras Stampede: ಹತ್ರಾಸ್‌ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 116ಕ್ಕೆ ಏರಿಕೆ; ಸತ್ಸಂಗ ನಡೆಸಿದ ಭೋಲೆ ಬಾಬಾ ನಾಪತ್ತೆ

Hathras Stampede

6 arrested for Hathras stampede, hunt on for Bhole Baba, says UP Police

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಮಂಗಳವಾರ ನಡೆದ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿದ್ದು, ಮೃತರ ಸಂಖ್ಯೆ 116ಕ್ಕೆ ತಲುಪಿದೆ. ಈ ಮಧ್ಯೆ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ದ ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಉತ್ತರ ಪ್ರದೇಶ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ʼʼಭೋಲೆ ಬಾಬಾ ಅವರಿಗಾಗಿ ಮೈನ್ಪುರಿ ಜಿಲ್ಲೆಯ ರಾಮ್ ಕುಟೀರ್ ಚಾರಿಟಬಲ್ ಟ್ರಸ್ಟ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತಾದರೂ ಅವರು ಕ್ಯಾಂಪಸ್ ಒಳಗೆ ಕಂಡುಬಂದಿಲ್ಲʼʼ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ತಿಳಿಸಿದರು.

ಸತ್ಸಂಗ ಮುಗಿಸಿ ಭೋಲೆ ಬಾಬಾ ಅವರು ಅಪರಾಹ್ನ 3.30ರ ಸುಮಾರಿಗೆ ಸ್ಥಳದಿಂದ ಹೊರಡುವಾಗ ಕಾಲ್ತುಳಿತ ಸಂಭವಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಈಗಾಗಲೇ ಆದೇಶಿಸಿದ್ದಾರೆ. ಹತ್ರಾಸ್ ಘಟನೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

“ಒಟ್ಟು 23 ಶವಗಳನ್ನು ಅಲಿಗಢಕ್ಕೆ ತರಲಾಗಿದೆ. ಹತ್ರಾಸ್ ಘಟನೆಯಲ್ಲಿ ಗಾಯಗೊಂಡ ಮೂವರು ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಸ್ಥಿರವಾಗಿದ್ದರೆ, ಒಬ್ಬರ ಸ್ಥಿತಿ ಗಂಭೀರವಾಗಿದೆ. ನಾವು ಆಸ್ಪತ್ರೆಯ ಆಡಳಿತದೊಂದಿಗೆ ಮಾತನಾಡಿದ್ದೇವೆʼʼ ಎಂದು ಅಲಿಗಢ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ವಿಶಾಕ್ ಜಿ. ಅಯ್ಯರ್ ಮಾಹಿತಿ ನೀಡಿದರು.

ಈವರೆಗೆ ಒಟ್ಟು 116 ಮಂದಿ ಮೃತಪಟ್ಟಿದ್ದಾರೆ. 19 ಶವಗಳನ್ನು ಗುರುತಿಸಲಾಗಿದೆ. ಉಳಿದವರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆʼʼ ಎಂದು ಹತ್ರಾಸ್ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಮಂಜೀತ್ ಸಿಂಗ್ ಹೇಳಿದರು.

ಹೆಣಗಳ ರಾಶಿ ನೋಡಿ ಪೊಲೀಸ್‌ಗೆ ಹೃದಯಾಘಾತ; ಸಾವು

ಆಸ್ಪತ್ರೆಯಲ್ಲಿ ಭದ್ರತಾ ಡ್ಯೂಟಿಗೆ ನಿಯೋಜನೆಯಾಗಿದ್ದ ರಜನೀಶ್ ಎಂಬ ಪೊಲೀಸ್‌ ಕಾನ್ಸ್‌ಟೇಬಲ್‌ ಇಟಾಹ್ ಜಿಲ್ಲಾ ಆಸ್ಪತ್ರೆಯಲ್ಲಿ ಬಿದ್ದಿದ್ದ ಹೆಣಗಳ ರಾಶಿಯನ್ನು ನೋಡಿದ ನಂತರ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಟಾಹ್ ಮೆಡಿಕಲ್ ಕಾಲೇಜಿನಲ್ಲಿ ತುರ್ತು ಕರ್ತವ್ಯದಲ್ಲಿದ್ದ ರಜನೀಶ್ ಮೃತದೇಹಗಳ ರಾಶಿಯನ್ನು ನೋಡಿ ಆಘಾತಗೊಂಡು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದು ಘಟನೆ?

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಮಂಗಳವಾರ ಭೋಲೆ ಬಾಬಾ ನೇತೃತ್ವದಲ್ಲಿ ಸತ್ಸಂಗ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ವಿಶೇಷವಾಗಿ ಹಾಕಲಾಗಿದ್ದ ಪೆಂಡಾಲ್​ನಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಆಯೋಜನೆಗೆ ಮುನ್ನ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಅಲ್ಲದೆ ಕಾರ್ಯಕ್ರಮ ನಡೆದ ಜಾಗ ಇಕ್ಕಟ್ಟಿನಿಂದ ಕೂಡಿತ್ತು ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ ಹೇಗಾಯ್ತು? ಸತ್ಸಂಗ ನಡೆಸಿದ ಭೋಲೆ ಬಾಬಾ ಯಾರು? ಇಲ್ಲಿದೆ ಮಾಹಿತಿ

Exit mobile version