Site icon Vistara News

HD Deve Gowda: ನಾಲ್ಕು ಕ್ಷೇತ್ರ ಗೆಲ್ಲಲು ಪಣ ತೊಟ್ಟಿರುವ ದೇವೇಗೌಡರು; ಮಾಸ್ಟರ್‌ ಪ್ಲಾನ್‌ ಏನು?

Lok Sabha Election 2024 JDS finalised candidates for 3 constituency

ಬೆಂಗಳೂರು: ದೇಶದಲ್ಲಿಯೇ ಅತ್ಯಂತ ಹಿರಿಯ ಸಕ್ರಿಯ ರಾಜಕಾರಣಿಯಾಗಿರುವ ಜೆಡಿಎಸ್‌ ನಾಯಕ ಎಚ್.ಡಿ ದೇವೇಗೌಡ (HD Deve Gowda), ತಮ್ಮ 91ರ ಹರೆಯದಲ್ಲೂ ಎದುರಾಳಿಗಳನ್ನು ತೊಡೆ ತಟ್ಟಿ ಆಹ್ವಾನಿಸಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಜೆಡಿಎಸ್‌ (JDS) ಪಡೆದುಕೊಂಡಿರುವ ಮೂರು ಕ್ಷೇತ್ರಗಳು ಹಾಗೂ ಅಳಿಯ ಸ್ಪರ್ಧಿಸಿರುವ ಇನ್ನೊಂದು ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರಲು ಸಜ್ಜಾಗಿದ್ದಾರೆ.

ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಮೂರೇ ಕ್ಷೇತ್ರ ಉಳಿಸಿಕೊಂಡಿದ್ದರೂ ಈ ಬಾರಿಯ ಲೋಕಸಭಾ ಚುನಾವಣೆ ʼದಳಪತಿʼಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹಾಸನ, ಮಂಡ್ಯ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಗೆಲ್ಲಲು ದೊಡ್ಡಗೌಡರು ಕಸರತ್ತು ನಡೆಸಿದ್ದಾರೆ.

ಸದ್ಯ ಹಾಸನ ಲೋಕಸಭಾ ಕ್ಷೇತ್ರದಲ್ಲಿಯೇ ನಿರಂತರವಾಗಿ ಠಿಕಾಣಿ ಹಾಕಿರುವ ದೇವೇಗೌಡರು, ನಿರಂತರವಾಗಿ ಸಭೆ ನಡೆಸುತ್ತ ಮೊಮ್ಮಗ ಪ್ರಜ್ವಲ್‌ ರೇವಣ್ಣ ಅವರನ್ನು ಅಲ್ಲಿ ಗೆಲ್ಲಿಸಿಕೊಂಡು ಬರಲು ಮಾಸ್ಟರ್‌ ಪ್ಲಾನ್‌ ಹೆಣೆಯುತ್ತಿದ್ದಾರೆ. ಮೊಮ್ಮಗನ ರಾಜಕೀಯ ಭವಿಷ್ಯಕ್ಕಾಗಿ ನಿರಂತರ ಶ್ರಮಿಸುತ್ತಿರುವ ದೇವೇಗೌಡರು, ಹಾಸನ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಲು ಪ್ರಯತ್ನ ನಡೆಸಿದ್ದಾರೆ.

ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಜೆಡಿಎಸ್‌ ಕಾರ್ಯಕರ್ತರನ್ನೂ ಕರೆಸಿಕೊಂಡು ಸಭೆಗಳನ್ನು ನಡೆಸಿ ಕ್ಷೇತ್ರದ ಹೆಚ್ಚಿನ ಮಾಹಿತಿ ಪಡೆಯುತ್ತ, ಮಾರ್ಗದರ್ಶನ ನೀಡುತ್ತಿದ್ದಾರೆ.

ಹಾಸನ ಕ್ಷೇತ್ರದ ಬಳಿಕ ಗೌಡರ ಮುಂದಿನ ಟಾರ್ಗೆಟ್‌ ಬೆಂಗಳೂರು ಗ್ರಾಮಾಂತರ ಕ್ಷೇತ್ರವಾಗಿದೆ. ಮೊದಲ ಬಾರಿಗೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಅಳಿಯ ಮಂಜುನಾಥ್‌ ಅವರ ಗೆಲುವಿಗೆ ಶ್ರಮಿಸಲು ಗೌಡರು ಪಣ ತೊಟ್ಟಿದ್ದಾರೆ. ಮಂಜುನಾಥ್ ಅವರನ್ನು ಗೆಲ್ಲಿಸಲು ಬಿಜೆಪಿ ನಾಯಕರ ಜತೆ ಸೇರಿ ತಂತ್ರ ಹೆಣೆದಿದ್ದಾರೆ.

ಮಂಡ್ಯದಲ್ಲಿ ಪುತ್ರ ಎಚ್.ಡಿ. ಕುಮಾರಸ್ವಾಮಿ ನಿಲ್ಲುವುದು ಖಚಿತವಾಗಿದೆ. ಮಗನನ್ನು ಗೆಲ್ಲಿಸಿ ಮತ್ತೆ ಮಂಡ್ಯ ವಶಕ್ಕೆ ಪಡೆಯಲು ಗೌಡರು ನಿರ್ಧರಿಸಿದ್ದಾರೆ. ಕಳೆದ ಬಾರಿ ಸುಮಲತಾ ಸ್ಪರ್ಧೆ ಹಾಗೂ ಕಾಂಗ್ರೆಸ್‌ನ ಪೈಪೋಟಿಯಿಂದ ಮಂಡ್ಯ ಕೈತಪ್ಪಿತ್ತು. ಈ ಬಾರಿ ಮಂಡ್ಯವನ್ನು ಶತಾಯಗತಾಯ ಗೆಲ್ಲಲು ಸ್ವತಃ ಸಿಎಂ ಸಿದ್ದರಾಮಯ್ಯ ಟೊಂಕ ಕಟ್ಟಿದ್ದಾರೆ. ಇದರ ಜೊತೆಗೆ ಸುಮಲತಾಗೆ ಟಿಕೆಟ್‌ ಕೈತಪ್ಪಿದ ಅಸಮಾಧಾನವೂ ಇದೆ. ಇವೆರಡನ್ನೂ ಎದುರಿಸಲು ಗೌಡರು ಯೋಜನೆ ರೂಪಿಸುತ್ತಿದ್ದಾರೆ.

ಮಂಡ್ಯ, ಕೋಲಾರ ಕ್ಷೇತ್ರಗಳ ಗೆಲುವಿಗಾಗಿ ಸ್ವತಃ ಕುಮಾರಸ್ವಾಮಿ ಫೀಲ್ಡಿಗೆ ಇಳಿದಿದ್ದು, ಈ ನಾಲ್ಕು ಕಡೆಯಲ್ಲೂ ಮಾಜಿ ಪ್ರಧಾನಿ ದೇವೇಗೌಡರಿಂದ ಪ್ರಚಾರ ಮಾಡಿಸಲು ಒತ್ತು ನೀಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಾಲಿ ಕುರ್ಚಿಯಲ್ಲೇ ದೇವೇಗೌಡರನ್ನು ವೇದಿಕೆಯ ಮೇಲೆ ಕರೆತಂದು ಮಾತನಾಡಿಸಲಾಗಿತ್ತು. ಈ ಬಾರಿ, ಆರೋಗ್ಯ ಸಮಸ್ಯೆಗಳಿಂದ ಗೌಡರು ಹಣ್ಣಾಗಿದ್ದರೂ ಚುನಾವಣೆ ರಾಜಕೀಯದ ಹುಮ್ಮಸ್ಸನ್ನು ಅವರು ಕಳೆದುಕೊಂಡಿಲ್ಲ.

ಇತ್ತೀಚೆಗೆ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಗೌಡರು, “ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಲೇವಡಿ ಮಾಡಿದ್ದಾರೆ. ಜೆಡಿಎಸ್ ಎಲ್ಲಿದೆ ಎಂಬುದನ್ನು ತೋರಿಸುವ ಶಕ್ತಿ ಜೆಡಿಎಸ್- ಬಿಜೆಪಿಗಿದೆ. 28 ಲೋಕಸಭಾ ಕ್ಷೇತ್ರಗಳಲ್ಲಿ ಶಕ್ತಿ ಪ್ರದರ್ಶಿಸಿ ಇವರ ಮಾತಿಗೆ ತಕ್ಕ ಉತ್ತರ ನೀಡುವುದಾಗಿ” ಗುಡುಗಿದ್ದರು.

ಇದನ್ನೂ ಓದಿ: HD Deve Gowda: ಮೇಕೆದಾಟು ಯೋಜನೆಗೆ ವಿರೋಧ; ಡಿಎಂಕೆ ನಡೆಗೆ ಎಚ್.ಡಿ.ದೇವೇಗೌಡ ತೀವ್ರ ಖಂಡನೆ

Exit mobile version