Site icon Vistara News

HD Kumaraswamy: ಬಿಜೆಪಿ ಪಾದಯಾತ್ರೆಗೆ ನಾವು ಬೆಂಬಲ ಕೊಡಲ್ಲ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ: ಎಚ್‌ಡಿಕೆ ಕಿಡಿ; ಮೈತ್ರಿಕೂಟದಲ್ಲಿ ಅಪಸ್ವರ

hd kumaraswamy in bjp jds meet

ಬೆಂಗಳೂರು: ಬಿಜೆಪಿ- ಜೆಡಿಎಸ್‌ (BJP- JDS) ಮೈತ್ರಿಪಕ್ಷಗಳಲ್ಲಿ ಪಾದಯಾತ್ರೆ (Padayatra) ವಿಚಾರದಲ್ಲಿ ಅಪಸ್ವರ ಕೇಳಿಸಿದೆ. ಬಿಜೆಪಿ ಪಾದಯಾತ್ರೆಗೆ (Bangalore to Mysore) ನಾವು ಬೆಂಬಲ ಕೊಡುವುದಿಲ್ಲ. ನಮ್ಮನ್ನು ಅವರು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಜೆಡಿಎಸ್‌ ನಾಯಕ, ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ಬೆಂಗಳೂರಿನಿಂದ ಮೈಸೂರಿಗೆ ಆಗಸ್ಟ್‌ 3ರಿಂದ ಪಾದಯಾತ್ರೆ ಹಮ್ಮಿಕೊಂಡಿದೆ. ಆದರೆ ಇದರಲ್ಲಿ ಭಾಗವಹಿಸದಿರಲು ಜೆಡಿಎಸ್‌ ನಿರ್ಧರಿಸಿದೆ. ದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜೆ‌.ಟಿ ದೇವಗೌಡರ (GT Devegowda) ನೇತೃತ್ವದಲ್ಲಿ ಕೋರ್ ಕಮಿಟಿ ಸದಸ್ಯರು ಪಾದಯಾತ್ರೆಯಲ್ಲಿ ಭಾಗಿಯಾಗಬಾರದು ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಕೇರಳದಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕದ ಜನರು ಗುಡ್ಡ ಕುಸಿತದಲ್ಲಿ (Wayanad landslide) ಕಣ್ಮರೆಯಾಗಿದ್ದಾರೆ. ವಾಪಸ್ ಬರಲು ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯದಲ್ಲೂ ಹಲವೆಡೆ ರೆಡ್, ಎಲ್ಲೋ ಅಲರ್ಟ್ ಘೋಷಿಸಿದೆ. ಹಲವು ಜಿಲ್ಲೆಗಳಲ್ಲಿ ಜಲಾವೃತಗೊಂಡು ಸಂಕಷ್ಟ ಎದುರಿಸುತ್ತಿದ್ದಾರೆ. ಮಂಡ್ಯ ಭಾಗದಲ್ಲಿ ಭತ್ತದ ಸಸಿ ನೆಡುವ ಕೆಲಸ ಶುರುವಾಗಲಿದೆ. ಈ ಹಿನ್ನಲೆಯಲ್ಲಿ ನಮ್ಮ ನಾಯಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಎಚ್‌ಡಿಕೆ ಹೇಳಿದ್ದಾರೆ.

ಪಾದಯಾತ್ರೆ ಮಾಡಬೇಕು ಎಂದು ಬಿಜೆಪಿ ನಾಯಕರು ಈ ಮುಂಚೆ ನಿರ್ಧಾರ ಮಾಡಿದ್ದರು. ಮಾಹಿತಿಗಾಗಿ ನಮಗೆ ಹೇಳಿದ್ದಾರೆ ಅಷ್ಟೇ. ಬಿಜೆಪಿ ನಿಲುವಿನಲ್ಲಿ ತಿರ್ಮಾನ ತೆಗೆದುಕೊಂಡು ಹೋರಾಟ ಮಾಡುತ್ತಿದ್ದಾರೆ. ಪಾದಯಾತ್ರೆಗೆ ಸೂಕ್ತವಾದ ಸಂದರ್ಭವಲ್ಲ ಅಂತ ನಾವು ಹಿಂದೆ ಸರಿದಿದ್ದೇವೆ. ಈಗ ಪಾದಯಾತ್ರೆ ಮಾಡಿದರೆ ಜನರ ಟೀಕೆ ವ್ಯಕ್ತವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾವು ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇವೆ. ಅಲ್ಲಿನ ಜನರ ಸಮಸ್ಯೆ ಏನು, ಅದು ಮುಖ್ಯ. ಪಾದಯಾತ್ರೆಯಿಂದ ಲಾಭ ಏನು? ಕಾನೂನು ಹೋರಾಟ ಮುಖ್ಯ. ರಾಜಕೀಯವೇ ನಮಗೆ ಪ್ರಾಮುಖ್ಯವಲ್ಲ ಎಂದು ಎಚ್‌ಡಿಕೆ ನುಡಿದರು.

ನಾವು ನೈತಿಕ ಬೆಂಬಲವೂ ಕೊಡಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಯಾಕೆ ಬೆಂಬಲ ಕೊಡಬೇಕು? ಬೆಂಗಳೂರು ಮೈಸೂರು ವರೆಗೂ ನಮ್ಮ ಶಕ್ತಿ ಇದೆ. ನಮ್ಮನ್ನು ಪರಿಗಣಿಸದಿದ್ದರೆ ಹೇಗೆ? ನನ್ನ ಮನಸ್ಸಿಗೆ ನೋವಾಗಿದೆ, ಯಾಕೆ ಬೆಂಬಲ ಕೊಡಬೇಕು? ಪ್ರೀತಂ ಗೌಡ (Preetham Gowda) ಯಾರು? ಪೆನ್ ಡ್ರೈವ್ ಹಂಚಿಕೆಗೆ ಯಾರು ಕಾರಣ? ದೇವೇಗೌಡರ (HD Deve Gowda) ಕುಟುಂಬಕ್ಕೆ ವಿಷ ಇಟ್ಟವನು ಅವನು. ಅಂಥವರ ಜೊತೆಗೆ ವೇದಿಕೆ ಮೇಲೆ ಕೂರಿಸ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಹೆಚ್‌ಡಿಕೆ ಕಿಡಿ ಕಾರಿದ್ದಾರೆ.

ಜೆಡಿಎಸ್‌ ಅಸಮ್ಮತಿ ನಡುವೆಯೂ ತಯಾರಿ

ಬೆಂಗಳೂರು- ಮೈಸೂರು ಪಾದಯಾತ್ರೆಗೆ ಜೆಡಿಎಸ್ ಅಸಮ್ಮತಿ ನಡುವೆಯೂ ಬಿಜೆಪಿ ಪಾದಯಾತ್ರೆಗೆ ತಯಾರಿ ಮಾಡಿಕೊಂಡಿದೆ. ಯುವಮೋರ್ಚಾ ಮೊದಲ ದಿನದ ಪಾದಯಾತ್ರೆ ಉಸ್ತುವಾರಿ ವಹಿಸಿದೆ. ಯುವಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು ಹಾಗೂ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಪಾದಯಾತ್ರೆಗೆ ಸಕಲ ತಯಾರಿ ರೂಪುರೇಷೆ ಮಾಡಲಾಗಿದೆ.

ಈ ನಡುವೆ ರಾಜ್ಯಾಧ್ಯಕ್ಷ ವಿಜಯೇಂದ್ರ ದೆಹಲಿಗೆ ತೆರಳಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ವಿರೋಧದ ಹಿನ್ನೆಲೆಯಲ್ಲಿ, ಹೈಕಮಾಂಡ್ ಒಪ್ಪಿಗೆ ಪಡೆದು ಪಾದಯಾತ್ರೆ ಆರಂಭ ಮಾಡುವ ಸಾಧ್ಯತೆ ಇದೆ.

ಇದನೂ ಓದಿ: HD kumaraswamy : ಆಸ್ಪತ್ರೆಯಿಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಡಿಸ್ಚಾರ್ಜ್

Exit mobile version