Site icon Vistara News

Vinesh Phogat:‌ ರಾತ್ರಿಯಿಡೀ ಪ್ರಯತ್ನಪಟ್ಟರೂ ಇಳಿಯದೆ ವಿನೇಶ್‌ ಕನಸು ನುಚ್ಚುನೂರು ಮಾಡಿದ ಆ 100 ಗ್ರಾಂ!

Vinesh Phogat disqaulify

ಹೊಸದಿಲ್ಲಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (paris olympics) ಫೈನಲ್​ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸುವ ತವಕದಲ್ಲಿದ್ದ ಭಾರತದ ತಾರಾ ಮಹಿಳಾ ಕುಸ್ತಿಪಟು (Wrestler) ವಿನೇಶ್​ ಫೋಗಟ್ (Vinesh Phogat)​ ಹೆಚ್ಚಿದ 100 ಗ್ರಾಂ ತೂಕದಿಂದಾಗಿ ಅವಕಾಶ (Vinesh Phogat Disqualify) ಕಳೆದುಕೊಂಡಿದ್ದಾಳೆ. ಮಂಗಳವಾರ ರಾತ್ರಿಯಿಡೀ ಆಕೆ ತನ್ನ ಹೆಚ್ಚಿನ ತೂಕವನ್ನು ಇಳಿಸಿ 50 ಕೆಜಿ ತೂಕದ ವ್ಯಾಪ್ತಿಯೊಳಗೆ ಬರಲು ಹರಸಾಹಸಪಟ್ಟಿದ್ದಳು ಎಂಬುದು ವರದಿಯಾಗಿದೆ.

ತೂಕ ವಿಭಾಗದಲ್ಲಿ 50 ಕೆಜಿಗಿಂತ 100 ಗ್ರಾಂ ಹೆಚ್ಚು ಇದ್ದ ಕಾರಣಕ್ಕೆ ಅವರನ್ನು ಫೈನಲ್​ನಿಂದ ಅನರ್ಹ ಮಾಡಲಾಗಿದೆ. ಆಕೆ ಬುಧವಾರ ರಾತ್ರಿ ನಡೆಯುವ ಫೈನಲ್​ ಪಂದ್ಯದಲ್ಲಿ ಅಮೆರಿಕದ ಸೆರಾ ಹಿಲ್ದಿಬ್ರೇಟ್‌ ಅವರ ಸವಾಲು ಎದುರಿಸಬೇಕಿತ್ತು. ವಿನೇಶ್​ ಫೋಗಟ್​ ಅವರನ್ನು ಅನರ್ಹ ಮಾಡಿದ ಕುರಿತು ಭಾರತದ ನಿಯೋಗದಿಂದ ದೂರ ದಾಖಲಿಸಲಾಗಿದೆ.

“ಮಹಿಳಾ ಕುಸ್ತಿ 50 ಕೆಜಿ ವಿಭಾಗದಿಂದ ವಿನೇಶ್ ಫೋಗಟ್ ಅನರ್ಹತೆಯ ಸುದ್ದಿಯನ್ನು ಭಾರತೀಯ ತಂಡವು ವಿಷಾದದಿಂದ ಹಂಚಿಕೊಳ್ಳುತ್ತದೆ. ರಾತ್ರಿಯುದ್ದಕ್ಕೂ ವಿನೇಶ್‌ ಸೇರಿದಂತೆ ಇಡೀ ತಂಡ ಮಾಡಿದ ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ಅವರು ಇಂದು ಬೆಳಿಗ್ಗೆ 50 ಕೆಜಿಗಿಂತ ಕೆಲವು ಗ್ರಾಂಗಳಷ್ಟು ತೂಕವನ್ನು ಹೆಚ್ಚಿಗೆ ಹೊಂದಿದ್ದರು” ಎಂದು ಭಾರತೀಯ ಒಲಿಂಪಿಕ್ಸ್‌ ಸಮಿತಿ ಹೇಳಿದೆ. “ಈ ಸಮಯದಲ್ಲಿ ಈ ಬಗ್ಗೆ ನಾವು ಹೆಚ್ಚಿನ ಕಾಮೆಂಟ್‌ ಮಾಡುವುದಿಲ್ಲ. ಭಾರತ ತಂಡವು ವಿನೇಶ್ ಅವರ ಖಾಸಗಿತನವನ್ನು ಗೌರವಿಸುವಂತೆ ವಿನಂತಿಸುತ್ತದೆ. ಮುಂದಿನ ಸ್ಪರ್ಧೆಗಳ ಮೇಲೆ ಅವರ ಗಮನ ಕೇಂದ್ರೀಕರಿಸಲು ಉದ್ದೇಶಿಸಲಾಗಿದೆʼʼ ಎಂದಿದೆ.

ಇಂದು ಮುಂಜಾನೆ ನಡೆದ ತೂಕ ಪರಿಶೀಲನೆಯ ವೇಳೆ ವಿನೇಶ್‌ 50 ಕಿಲೋಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದರು. ಸ್ಪರ್ಧೆಯ ನಿಯಮಗಳ ಪ್ರಕಾರ ಫೋಗಟ್ ಇಂದು ಫೈನಲ್‌ನಲ್ಲಿ ಸ್ಪರ್ಧೀಸುವಂತಿಲ್ಲ. 50 ಕೆಜಿ ವಿಭಾಗದಲ್ಲಿ ಕೇವಲ ಚಿನ್ನ ಮತ್ತು ಕಂಚಿನ ಪದಕ ವಿಜೇತರಿರುತ್ತಾರೆ. ಮಂಗಳವಾರವೂ ಪಂದ್ಯಕ್ಕೆ ಮೊದಲು ವಿನೇಶ್‌ ತೂಕ ಅಳೆಯಲಾಗಿತ್ತು. ಆದರೆ ನಿಯಮದ ಪ್ರಕಾರ ಕುಸ್ತಿಪಟುಗಳು ಸ್ಪರ್ಧೆಯ ಎರಡೂ ದಿನಗಳಲ್ಲಿ ತಮ್ಮ ತೂಕದ ವಿಭಾಗದಲ್ಲಿ ಉಳಿಯಬೇಕು.

ಎಲ್ಲಾ ಅಡೆತಡೆಗಳನ್ನು ಧಿಕ್ಕರಿಸಿ ಫೈನಲ್ ತಲುಪಿದ ಕುಸ್ತಿಪಟು ವಿನೇಶ್‌, ಮಂಗಳವಾರ ರಾತ್ರಿ ಸರಿಸುಮಾರು 2 ಕಿಲೋಗಳಷ್ಟು ಅಧಿಕ ತೂಕ ಹೊಂದಿದ್ದರು ಎನ್ನಲಾಗಿದೆ. ಇದನ್ನು ಕರಗಿಸಲು ಆಕೆ ಇಡೀ ರಾತ್ರಿ ನಿದ್ರೆ ಮಾಡದೆ ವ್ಯಾಯಾಮದಲ್ಲಿ ನಿರತರಾಗಿದ್ದರು. ಜಾಗಿಂಗ್‌ನಿಂದ ಹಿಡಿದು ಸ್ಕಿಪ್ಪಿಂಗ್ ಮತ್ತು ಸೈಕ್ಲಿಂಗ್‌ವರೆಗೆ. ಆದರೆ ಇದು ಸಾಕಾಗಲಿಲ್ಲ. ಕೊನೆಯ 100 ಗ್ರಾಂಗಳನ್ನು ಕರಗಿಸಲು ಇನ್ನು ಸ್ವಲ್ಪ ಕಾಲಾವಕಾಶವನ್ನು ನೀಡುವಂತೆ ಭಾರತೀಯ ನಿಯೋಗ ಮನವಿ ಮಾಡಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ರಾತ್ರಿ ಪೂರ್ತಿ ವ್ಯಾಮಾಯ ಹಾಗೂ ತೂಕವಿಳಿಸುವ ಕಸರತ್ತು ಮಾಡಿದ ವಿನೇಶ್‌ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ಫೋಗಟ್ 50 ಕೆಜಿ ವಿಭಾಗದಲ್ಲಿ ಭಾಗವಹಿಸಲು ಕಷ್ಟವಾಗಿರುವುದು ಇದೇ ಮೊದಲಲ್ಲ. ಅವಳು ಸಾಮಾನ್ಯವಾಗಿ ಸ್ಪರ್ಧಿಸುವ ವಿಭಾಗ 53 ಕೆಜಿ. ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿಯೂ ಸಹ ಅವರು ಇದೇ ರೀತಿಯ ಅಗ್ನಿಪರೀಕ್ಷೆಯನ್ನು ಎದುರಿಸಿದ್ದರು.

ಮಂಗಳವಾರ ಫೋಗಟ್ ಒಲಿಂಪಿಕ್ಸ್‌ನ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಚಿನ್ನದ ಪದಕದ ಪಂದ್ಯದ ಹಾದಿಯಲ್ಲಿ ಅವರು ವಿಶ್ವದ ನಂಬರ್ 1 ಆಗಿದ್ದ ಜಪಾನ್‌ನ ಕುಸ್ತಿಪಟು ಯುಯಿ ಸುಸಾಕಿಯನ್ನು ಸೋಲಿಸಿದರು. ಉಕ್ರೇನ್ ಮತ್ತು ಕ್ಯೂಬಾದ ಕುಸ್ತಿಪಟುಗಳ ವಿರುದ್ಧ ಇನ್ನೂ ಎರಡು ಅದ್ಭುತ ಗೆಲುವುಗಳನ್ನು ಸಾಧಿಸಿದ್ದರು. ಸಾರಾ ಹಿಲ್ಡೆಬ್ರಾಂಡ್ ವಿರುದ್ಧ ಫೈನಲ್‌ನಲ್ಲಿ ಸ್ಪರ್ಧಿಸಬೇಕಿತ್ತು. ಅವರ ವಿರುದ್ಧ ಫೋಗಟ್ ಈ ಹಿಂದೆ ಸೆಣಸಿ ಗೆದ್ದ ಉತ್ತಮ ದಾಖಲೆ ಇತ್ತು. ಆದರೆ ಅಮೆರಿಕದ ಆಟಗಾರ್ತಿ ಈಗ ಚಿನ್ನದ ಪದಕ ಗೆಲ್ಲುತ್ತಾಳೆ. ಫೋಗಟ್ ಬರಿಗೈಯಲ್ಲಿ ಹಿಂತಿರುಗಬೇಕಿದೆ.

ಇದನ್ನೂ ಓದಿ: Vinesh Phogat: ಅನರ್ಹ ವಿನೇಶ್​ ಫೋಗತ್‌ಗೆ ಪ್ರಧಾನಿ ಮೋದಿ ಸಾಂತ್ವನ; ಮತ್ತಷ್ಟು ಬಲಿಷ್ಠರಾಗಿ ಮರಳಿ ಬನ್ನಿ ಎಂಬ ಹಾರೈಕೆ

Exit mobile version