Site icon Vistara News

HSRP Number Plate : ಎಚ್​ಎಸ್​ಆರ್​ಪಿ ನಂಬರ್​ ಪ್ಲೇಟ್​ ಅಳವಡಿಕೆ ಗಡುವು ಜುಲೈ 4 ರವರೆಗೆ ವಿಸ್ತರಣೆ; ವಾಹನ ಮಾಲೀಕರಿಗೆ ನೆಮ್ಮದಿ

HSRP Number plate

ಬೆಂಗಳೂರು: 2019ಕ್ಕಿಂತ ಹಿಂದೆ ಮಾರುಕಟ್ಟೆಗೆ ಇಳಿದ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಸಂಖ್ಯೆ ಫಲಕ (HSRP Number Plate) ಕಡ್ಡಾಯವಾಗಿ ಅಳವಡಿಸಬೇಕೆಂಬ ಗಡುವು ಜುಲೈ 4ರವರೆಗೆ ವಿಸ್ತರಣೆಯಾಗಿದೆ. ಹೀಗಾಗಿ ನಾನಾ ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ನಂಬರ್​ಪ್ಲೇಟ್​ ಅಳವಡಿಸದ ವಾಹನಗಳ ಮಾಲೀಕರಿಗೆ ನೆಮ್ಮದಿ ಸಿಕ್ಕಿದೆ. ಹೊಸ ನಂಬರ್​ ಪ್ಲೇಟ್ ಅಳವಡಿಸದ ವಾಹನ ಮಾಲೀಕರ ವಿರುದ್ಧ ಯಾವುದೇ ಕಠಿಣ ಕೈಗೊಳ್ಳಬಾರದು ಎಂದು ಹೈಕೋರ್ಟ್‌ ಮೇ 21ರಂದು ಹೊರಡಿಸಿದ್ದ ಆದೇಶ ಜುಲೈ 4ರವರೆಗೆ ವಿಸ್ತರಣೆಯಾಗಿರುವುದರಿಂದ ವಾಹನ ಮಾಲೀಕರಿಗೆ ತೊಂದರೆ ತಪ್ಪಿದೆ.

ಹೊಸ ಮಾದರಿಯ ಸುರಕ್ಷಿತ ನಂಬರ್ ಪ್ಲೇಟ್​ ಅಳವಡಿಕೆಗೆ ನೀಡಲಾಗಿರುವ ಗಡುವು ವಿಸ್ತರಿರಣೆಗೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಎಚ್‌ಎಸ್‌ಆರ್‌ಪಿ ತಯಾರಿಕಾ ಕಂಪನಿ ಬಿಎನ್‌ಡಿ ಎನರ್ಜಿ ಲಿಮಿಟೆಡ್‌ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು .ಅದನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್‌ ಅವರಿದ್ದ ವಿಭಾಗೀಯ ಪೀಠ ಜುಲೈ 4ರ ವರೆಗೆ ವಿಸ್ತರಣೆ ಮಾಡುವಂತೆ ಹೇಳಿದೆ.

ಪ್ರಕರಣದಲ್ಲಿ ಸರಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಮ್‌ ಹುಯಿಲಗೋಳ, ಅವರೂ ಸರ್ಕಾರದ ನಿಲುವನ್ನು ಇದೇ ವೇಳೆ ವ್ಯಕ್ತಪಡಿಸಿದ್ದಾರೆ. “ಎಚ್‌ಎಸ್‌ಆರ್‌ಪಿ ಫಲಕಗಳ ಅಳವಡಿಕೆ ಅವಧಿಯನ್ನು ರಾಜ್ಯ ಸರಕಾರ 2024ರ ಆಗಸ್ಟ್‌ ಇಲ್ಲವೇ ಸೆಪ್ಟೆಂಬರ್‌ವರೆಗೂ ವಿಸ್ತರಿಸುವ ಚಿಂತನೆ ನಡೆಸಿದೆ. ಹೈಕೋರ್ಟ್‌ ಅನುಮತಿ ನೀಡಿದಲ್ಲಿ ಸರಕಾರ ಈ ಸಂಬಂಧ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಲಿದೆ,” ಎಂದು ಮನವರಿಕೆ ಮಾಡಿದರು. ಈ ವೇಳೆ ನ್ಯಾಯಪೀಠ, ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಅವಧಿಯನ್ನು ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲು ಸರಕಾರ ಸ್ವತಂತ್ರ,” ಎಂದು ಹೇಳಿತು.

ರಾಜ್ಯದಲ್ಲಿ 2019ರ ಏಪ್ರಿಲ್‌ 1ಕ್ಕಿಂತ ಮುನ್ನ ನೋಂದಣಿಯಾದ ಎಲ್ಲ ಮಾದರಿಯ ವಾಹನಗಳಿಗೆ ಮೂಲ ಉಪಕರಣ ತಯಾರಕ (ಓಇಎಂ) ಅಧಿಕೃತ ಡೀಲರ್‌ಗಳ ಮೂಲಕ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಲು ರಾಜ್ಯ ಸರಕಾರ 2023ರ ಆಗಸ್ಟ್‌ 17ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ, ವಿತರಣೆ, ಅಳವಡಿಕೆ ಸೇರಿದಂತೆ ನಾನಾ ಸಮಸ್ಯೆಗಳಿಂದ ಈ ಯೋಜನೆಗೆ ಸಮಸ್ಯೆಯಾಗುತ್ತಿದೆ. ಸುರಕ್ಷಿತ ನಂಬರ್​ ಪ್ಲೇಟ್ ಅಳವಡಿಸಲು ಸುಮಾರು ಅರ್ಧದಷ್ಟು ವಾಹನ ಮಾಲೀಕರಿಗೆ ಇನ್ನೂ ಆಗಿಲ್ಲ. ಹೀಗಾಗಿ ಗಡುವು ವಿಸ್ತರಣೆ ಆಗುತ್ತಲೇ ಇದೆ. ಇದೀಗ ಕೋರ್ಟ್​ ಆದೇಶದ ಮೂಲಕ ಮತ್ತಷ್ಟು ವಿಸ್ತರಣೆಯಾಗಿದೆ. ಸರ್ಕಾರವೂ ಇದನ್ನು ಇನ್ನಷ್ಟು ಮುಂದುವರಿಸುವ ಯೋಜನೆ ಹೊಂದಿದೆ.

ಕೇಂದ್ರ ಮೋಟಾರು ವಾಹನಗಳ ನಿಯಮಗಳನ್ನು ಮೀರಿ ಕೆಲವು ಸಂಸ್ಥೆಗಳನ್ನು ಅಧಿಸೂಚನೆಯಿಂದ ಹೊರಗಿಡಲಾಗಿದೆ. ಪ್ರಭಾವಿ ಸಂಸ್ಥೆಗಳಿಗಷ್ಟೇ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಆಕ್ಷೇಪಿಸಿ ಹೈ ಸೆಕ್ಯುರಿಟಿ ರೆಜಿಸ್ಪ್ರೇಷನ್‌ ಪ್ಲೇಟ್‌ ಮ್ಯಾನುಫ್ಯಾಕ್ಚರರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಸೇರಿ ಅವಕಾಶ ವಂಚಿತ ಕೆಲ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿವೆ. ಆ ಅರ್ಜಿ ಜತೆಗೆ ಮಧ್ಯಂತರ ಅರ್ಜಿ ಹೂಡಿರುವ ಬಿಎನ್‌ಡಿ ಎನರ್ಜಿ ಲಿಮಿಟೆಡ್‌ ಎಚ್‌ಎಸ್‌ಆರ್‌ಪಿ ಅಳವಡಿಕೆ ವಿಧಿಸಿರುವ ಗಡುವು ವಿಸ್ತರಿಸಲು ಕೋರಿದೆ.

Exit mobile version