Site icon Vistara News

Human Development Index: ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಗಮನಾರ್ಹ ಪ್ರಗತಿ ದಾಖಲಿಸಿದ ಭಾರತ; ದೇಶಕ್ಕೆ ಎಷ್ಟನೇ ಸ್ಥಾನ?

school students

school students

ನವದೆಹಲಿ: ಮಾನವ ಅಭಿವೃದ್ಧಿ ಸೂಚ್ಯಂಕ (Human Development Index)ದಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದ್ದು, 2022ರಲ್ಲಿ ದೇಶದ ಮೌಲ್ಯವು 0.644ಕ್ಕೆ ಏರಿದೆ. ಮಾನವ ಅಭಿವೃದ್ಧಿ ವರದಿ (Human Development Report)ಯ ಪ್ರಕಾರ 193 ದೇಶಗಳ ಪೈಕಿ ಭಾರತವು 134ನೇ ಸ್ಥಾನದಲ್ಲಿದೆ ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.

ಎಚ್‌ಡಿಆರ್‌ನ ʼಬ್ರೇಕಿಂಗ್‌ ದಿ ಗ್ರಿಡ್‌ಲಾಕ್‌: ರಿಇಮ್ಯಾಜಿನಿಂಗ್‌ ಕಾರ್ಪೋರೇಷನ್‌ ಇನ್‌ ಪೊಲರೈಸಡ್‌ ವರ್ಡ್‌ʼ (Breaking the Gridlock: Reimagining Cooperation in a Polarized World) ಎಂಬ ಶೀರ್ಷಿಕೆಯ ವರದಿಯಲ್ಲಿ ಭಾರತದ ಈ ಗಮನಾರ್ಹ ಬೆಳವಣಿಗೆಯನ್ನು ಉಲ್ಲೇಖಿಸಲಾಗಿದೆ. ಈ ವರದಿಯು 2021-2022ರ ಎಚ್‌ಡಿಆರ್‌ ಸಂಶೋಧನೆಗಳನ್ನು ಆಧರಿಸಿದೆ.

ಎಲ್ಲ ರಂಗಗಳಲ್ಲಿಯೂ ಅಭಿವೃದ್ಧಿ

2022ರಲ್ಲಿ ಭಾರತವು ಎಲ್ಲ ಎಚ್‌ಡಿಐ ಸೂಚಕಗಳಲ್ಲಿ ಸುಧಾರಣೆಗಳನ್ನು ಕಂಡಿದೆ. ಜೀವಿತಾವಧಿ, ಶಿಕ್ಷಣ ಮತ್ತು ತಲಾ ಆದಾಯದಲ್ಲಿ (Gross National Income) ಏರಿಕೆಯಾಗಿದೆ. ಜೀವಿತಾವಧಿಯು 67.2ರಿಂದ 67.7 ವರ್ಷಗಳಿಗೆ ಹೆಚ್ಚಾಗಿದೆ. ಶಾಲಾ ಶಿಕ್ಷಣದ ನಿರೀಕ್ಷಿತ ವರ್ಷಗಳಲ್ಲಿ ಹೆಚ್ಚಳ ಕಂಡುಬಂದಿದೆ (ಪ್ರತಿ ವ್ಯಕ್ತಿಗೆ 12.6). ಜಿಎನ್ಐ ತಲಾ 6,542 ಡಾಲರ್‌ (5,41,847.69 ರೂ.)ರಿಂದ 6,951 ಡಾಲರ್‌ (5,75,737.43 ರೂ.)ಗೆ ಏರಿಕೆಯಾಗಿದೆ. ಇದಲ್ಲದೆ ಲಿಂಗ ಅಸಮಾನತೆಯನ್ನು ಕಡಿಮೆ ಮಾಡುವಲ್ಲಿ ಭಾರತವು ಗಮನಾರ್ಹ ಪ್ರಗತಿಯನ್ನು ದಾಖಲಿಸಿದೆ. ಭಾರತದ ಜಿಐಐ (Gender Inequality Index) ಮೌಲ್ಯ 0.437 ಆಗಿದ್ದು, ಜಾಗತಿಕ ಮತ್ತು ದಕ್ಷಿಣ ಏಷ್ಯಾದ ಸರಾಸರಿಗಿಂತ ಉತ್ತಮವಾಗಿದೆ.

“ಭಾರತವು ಮಾನವ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಯನ್ನು ದಾಖಲಿಸಿದೆ. 1990ರಿಂದೀಚೆಗೆ ಜೀವಿತಾವಧಿಯು 9.1 ವರ್ಷಗಳಷ್ಟು ಹೆಚ್ಚಾಗಿದೆ. ಶಾಲಾ ಶಿಕ್ಷಣದ ನಿರೀಕ್ಷಿತ ವರ್ಷಗಳು 4.6 ವರ್ಷಗಳಷ್ಟು ಹೆಚ್ಚಾಗಿದೆ. ಶಾಲಾ ಶಿಕ್ಷಣದ ಸರಾಸರಿ ವರ್ಷಗಳು 3.8 ವರ್ಷಗಳಷ್ಟು ಬೆಳೆದಿವೆ. ಭಾರತದ ತಲಾ ಜಿಎನ್ಐ ಸುಮಾರು ಶೇ. 287ರಷ್ಟು ಏರಿಕೆಯಾಗಿದೆʼʼ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ದೇಶದ ಪ್ರತಿನಿಧಿ ಕೈಟ್ಲಿನ್ ವೈಸೆನ್ ಹೇಳಿದ್ದಾರೆ. ”ಭಾರತ ಆರ್ಥಿಕವಾಗಿ ಪ್ರಗತಿಯಾಗಿರುವುದಷ್ಟೇ ಅಲ್ಲದೆ ದೇಶದ ಜನರ ಜೀವನ ಮೌಲ್ಯವೂ ಸುಧಾರಿಸಿದೆʼʼ ಎಂದು ಅವರು ತಿಳಿಸಿದ್ದಾರೆ.

ಲಿಂಗ ಸಮಾನತೆ

ಲಿಂಗ ಅಸಮಾನತೆ ಸೂಚ್ಯಂಕ ಅಥವಾ ಜಿಐಐ ಅನ್ನು 0.437ಕ್ಕೆ ಏರಿಸುವ ಮೂಲಕ ಭಾರತವು ʼಲಿಂಗ ಅಸಮಾನತೆಯನ್ನು ಕಡಿಮೆ ಮಾಡುವ ಪ್ರಕ್ರಿಯೆʼಯಲ್ಲಿ ಪ್ರಗತಿಯನ್ನು ದಾಖಲಿಸಿದೆ. ಇದು ಜಾಗತಿಕ ಸರಾಸರಿಗಿಂತ ಉತ್ತಮವಾಗಿದೆ. ಜಿಐಐ ಪಟ್ಟಿಯಲ್ಲಿ ಭಾರತವು 166 ರಾಷ್ಟ್ರಗಳ ಪೈಕಿ 108ನೇ ಸ್ಥಾನದಲ್ಲಿದೆ. ಆದಾಗ್ಯೂ ಕಾರ್ಮಿಕ ಶಕ್ತಿಯ ಭಾಗವಹಿಸುವಿಕೆಯ ದರದಲ್ಲಿ ಭಾರತವು ಅತಿದೊಡ್ಡ ಲಿಂಗ ಅಸಮಾನತೆ ಎದುರಿಸುತ್ತಿದೆ. ಮಹಿಳೆಯರು (28.3%) ಮತ್ತು ಪುರುಷರ (76.1%) ನಡುವೆ 47.8% ಪಾಯಿಂಟ್‌ಗಳ ವ್ಯತ್ಯಾಸವಿದೆ.

ಇದನ್ನೂ ಓದಿ: Inflation : ಆರ್ಥಿಕ ಸುಧಾರಣಾ ಹಾದಿಯಲ್ಲಿ ಭಾರತ; ಚಿಲ್ಲರೆ ಹಣದುಬ್ಬರ ನಿಯಂತ್ರಣ

ಈ ಮಧ್ಯೆ ಜಾಗತಿಕ ಎಚ್‌ಡಿಐ ಮೌಲ್ಯಗಳು ಸತತ ಎರಡನೇ ವರ್ಷ ಕುಸಿದಿವೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಿರಂತರ ಪರಿಣಾಮದಿಂದ ಶ್ರೀಮಂತ ಮತ್ತು ಬಡ ದೇಶಗಳ ನಡುವಿನ ಅಂತರ ಹೆಚ್ಚುತ್ತಿದೆ ಎಂದು ವರದಿ ತಿಳಿಸಿದೆ. “ಕೋವಿಡ್‌ನ ಮೊದಲು ಸುಸ್ಥಿರ ಅಭಿವೃದ್ಧಿ ಗುರಿಗಳ (Sustainable Development Goals) ಗಡುವಿನೊಂದಿಗೆ 2030ರ ವೇಳೆಗೆ ಜಗತ್ತು ಸರಾಸರಿ ‘ಅತಿ ಹೆಚ್ಚಿನ’ ಎಚ್‌ಡಿಐ ತಲುಪುವ ಹಾದಿಯಲ್ಲಿತ್ತು. ಆದರೆ ಇದೀಗ ಲೆಕ್ಕಾಚಾರ ತಲೆ ಕೆಳಗಾಗಿದೆ. ಪ್ರತಿಯೊಂದು ಪ್ರದೇಶವು 2019ರ ಹಿಂದಿನ ಅಂದಾಜಿಗಿಂತ ಕೆಳಗಿದೆ” ಎಂದು ವರದಿ ಹೇಳಿದೆ. ʼʼಕೋವಿಡ್ ಕಾರಣದಿಂದಾಗಿ ಜಗತ್ತು ಈ ವೇಳೆಗೆ ನಿರೀಕ್ಷಿಸಿದ ಮಾನವ ಅಭಿವೃದ್ಧಿ ಮಟ್ಟವನ್ನು ತಲುಪಿಲ್ಲ. ಮಾತ್ರವಲ್ಲ ಅಸಮಾನತೆ ಹೆಚ್ಚುತ್ತಿದೆ ಹಾಗೂ ಜಾಗತಿಕ ಮಟ್ಟದಲ್ಲಿ ರಾಜಕೀಯ ಧ್ರುವೀಕರಣವನ್ನೂ ಪ್ರಚೋದಿಸುತ್ತಿದೆʼʼ ಎಂದು ಕಳವಳ ವ್ಯಕ್ತಪಡಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version