ಚಿಕ್ಕಬಳ್ಳಾಪುರ: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ (Lok Sabha Election 2024) ಭರಾಟೆಯು ದಿನೇದಿನೆ ಜೋರಾಗುತ್ತಿದೆ. ರಾಜಕೀಯ ನಾಯಕರು, ಅಭ್ಯರ್ಥಿಗಳ ಅಬ್ಬರದ ಪ್ರಚಾರದ ಮಧ್ಯೆಯೇ ಅವರ ಮೊನಚು ಹೇಳಿಕೆಗಳು, ಮಾಡುವ ಆರೋಪಗಳು ತೀವ್ರ ಗಮನ ಸೆಳೆಯುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಮಾಜಿ ಸಚಿವ, ಚಿಕ್ಕಬಳ್ಳಾಪುರ ಬಿಜೆಪಿ ಅಭರ್ಥಿ ಡಾ.ಕೆ.ಸುಧಾಕರ್ (Dr K Sudhakar) ಅವರಿಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರು ಹೊಸ ಸವಾಲು ಹಾಕಿದ್ದಾರೆ. “ಚಿಕ್ಕಬಳ್ಳಾಪುರ ನಗರದಲ್ಲಿ ಸುಧಾಕರ್ ಅವರಿಗೆ ಒಂದೇ ಒಂದು ಮತದ ಲೀಡ್ ಸಿಕ್ಕರೂ ರಾಜಕೀಯ ನಿವೃತ್ತಿ ಪಡೆಯುವೆ” ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಅಹಿಂದ ಸಭೆಯಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ಸುಧಾಕರ್ ಅವರಿಗೆ ಸವಾಲು ಎಸೆದರು. “ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಅವರಿಗೆ ಒಂದೇ ಒಂದು ಮತದ ಲೀಡ್ ಕೂಡ ಸಿಗುವುದಿಲ್ಲ. ಹಾಗೊಂದು ವೇಳೆ ಅವರು ಒಂದೇ ಒಂದು ಮತದ ಲೀಡ್ ಪಡೆದರೆ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಆದರೆ, ನಾನು ಸುಧಾಕರ್ ಅವರನ್ನು ಸೋಲಿಸಿದರೆ, ಅವರು ಈ ಕಡೆ ತಲೆ ಹಾಕುವುದನ್ನೇ ನಿಲ್ಲಿಸುತ್ತಾರಾ” ಎಂದು ಚಾಲೆಂಜ್ ಮಾಡಿದರು.
ನಾನು ಅಯೋಗ್ಯರ ಬಗ್ಗೆಯೇ ಮಾತನಾಡೋದು
“ನಾನು ಯೋಗ್ಯರ ಬಗ್ಗೆ ಮಾತ್ರ ಮಾತನಾಡುವುದು” ಎಂಬುದಾಗಿ ಸುಧಾಕರ್ ನೀಡಿದ ಹೇಳಿಕೆಗೆ ಪ್ರದೀಪ್ ಈಶ್ವರ್ ಟಾಂಗ್ ಕೊಟ್ಟರು. “ಸುಧಾಕರ್ ಅವರು ಯೋಗ್ಯರ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದು ಹೇಳುತ್ತಾರೆ. ಆದರೆ, ನಾನು ಯಾವಾಗಲೂ ಅಯೋಗ್ಯರ ಬಗ್ಗೆಯೇ ಮಾತನಾಡುತ್ತೇನೆ. ಇದಕ್ಕೂ ಮೊದಲು, ಸುಧಾಕರ್ ಅವರು ನನ್ನ ಸವಾಲನ್ನು ಒಪ್ಪಿಕೊಳ್ಳಲಿ” ಎಂದರು.
“ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ಗೆ 1.3 ಲಕ್ಷ ಮತಗಳು ಲಭಿಸುತ್ತವೆ. ಬಿಜೆಪಿಗೆ 50-52 ಸಾವಿರ ಮತಗಳು ಮಾತ್ರ ಸಿಗುತ್ತವೆ. ನಾನು ಪ್ರಾಮಾಣಿಕತೆಯ ವಿಚಾರದಲ್ಲೂ ಸುಧಾಕರ್ ಅವರಿಗೆ ಸವಾಲು ಹಾಕಿದ್ದೇನೆ. ನಾನು ಯಾರ ಬಳಿಯಾದರೂ ಒಂದು ರೂಪಾಯಿ ಲಂಚ ಪಡೆದಿದ್ದರೆ, ಅದನ್ನು ಸುಧಾಕರ್ ಅವರು ಸಾಬೀತುಪಡಿಸಬೇಕು. ಕಾಂಟ್ರ್ಯಾಕ್ಟ್ ಪರವಾನಗಿ ನೀಡುವ ವಿಚಾರದಲ್ಲಿ ಸುಧಾಕರ್ ಅವರು ಎಷ್ಟು ಜನರ ಬಳಿ ಲಂಚ ತೆಗೆದುಕೊಂಡರು? ಚಿಕ್ಕಬಳ್ಳಾಪುರದಲ್ಲಿ ಒಬ್ಬನೇ ಒಬ್ಬ ಕಾಂಟ್ರ್ಯಾಕ್ಟರ್ ನನಗೆ ಲಂಚ ನೀಡಿದ್ದು ಸಾಬೀತು ಮಾಡಿದರೆ, ಈಗಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ” ಎಂಬುದಾಗಿ ಮತ್ತೊಂದು ಸವಾಲು ಹಾಕಿದರು.
ಕಳೆದ ವಿಧಾನಸಭೆ ಚುನಾವಣೆಯಿಂದಲೂ ಸುಧಾಕರ್ ಹಾಗೂ ಪ್ರದೀಪ್ ಈಶ್ವರ್ ನಡುವಿನ ವಾಗ್ಯುದ್ಧ, ಟೀಕೆ, ವ್ಯಂಗ್ಯಗಳು ಹೆಚ್ಚು ಸುದ್ದಿಯಾಗಿವೆ. ಪ್ರದೀಪ್ ಈಶ್ವರ್ ಮಾತಿಗೆ ಸುಧಾಕರ್, ಸುಧಾಕರ್ ಅವರ ಟೀಕೆಗೆ ಪ್ರದೀಪ್ ಈಶ್ವರ ತಿರುಗೇಟು ನೀಡುವುದು ಸಾಮಾನ್ಯ ಎಂಬಂತಾಗಿದೆ. ಆದರೆ, ಪ್ರದೀಪ್ ಈಶ್ವರ್ ಅವರ ಹೊಸ ಸವಾಲುಗಳ ಕುರಿತು ಸುಧಾಕರ್ ಇದುವರೆಗೆ ಯಾವುದೇ ಪತ್ರಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: Veerappa Moily: ಮೋದಿಯನ್ನು ಹಿಟ್ಲರ್, ಸದ್ದಾಂ ಹುಸೇನ್‌ಗೆ ಹೋಲಿಸಿದ ವೀರಪ್ಪ ಮೊಯ್ಲಿ!