ಹೊಸದಿಲ್ಲಿ: ಐಐಟಿ ಮದ್ರಾಸಿನ (IIT Madras) ಹಳೆಯ ವಿದ್ಯಾರ್ಥಿಯಾಗಿರುವ ಪವನ್ ದಾವುಲೂರಿ (Pavan Davuluri) ಅವರು ʼಮೈಕ್ರೋಸಾಫ್ಟ್ ವಿಂಡೋಸ್ ಆ್ಯಂಡ್ ಸರ್ಫೇಸ್ʼ ಸಂಸ್ಥೆಯ (Microsoft Windows and Surface) ಹೊಸ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಪವನ್ ಅವರು ಗೂಗಲ್‌ನ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ ಅವರಂತೆ ಬಿಗ್ ಟೆಕ್ ಕಂಪನಿಗಳ ನಾಯಕತ್ವವನ್ನು ವಹಿಸಿದ ಇತ್ತೀಚಿನ ಭಾರತೀಯರಾಗಿದ್ದಾರೆ. ಮೈಕ್ರೋಸಾಫ್ಟ್ ವಿಂಡೋಸ್ ತೊರೆದು ಅಮೆಜಾನ್‌ಗೆ ಸೇರಿಕೊಂಡಿರುವ ದೀರ್ಘಕಾಲದ ಮುಖ್ಯಸ್ಥ ಪನೋಸ್ ಪನಾಯ್ ಅವರಿಂದ ದಾವುಲುರಿ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಹಿಂದೆ ದಾವುಲುರಿ ಅವರು ಸರ್ಫೇಸ್ ಗುಂಪನ್ನು ಮುನ್ನಡೆಸಿದ್ದರು. ಮಿಖಾಯಿಲ್ ಪರಖಿನ್ ವಿಂಡೋಸ್ ವಿಭಾಗದ ಮುಖ್ಯಸ್ಥರಾಗಿದ್ದರು. ಪರಖಿನ್ ಮತ್ತು ಪನಾಯ್ ಅವರು ತೊರೆದ ನಂತರ, ಪವನ್ ಅವರು ವಿಂಡೋಸ್ ಮತ್ತು ಸರ್ಫೇಸ್ ವಿಭಾಗಗಳನ್ನು ವಹಿಸಿಕೊಂಡಿದ್ದಾರೆ.
ಮೈಕ್ರೋಸಾಫ್ಟ್‌ನ ಎಕ್ಸ್‌ಪೀರಿಯೆನ್ಸಸ್ ಆ್ಯಂಡ್ ಡಿವೈಸಸ್ ವಿಭಾಗ ಮುಖ್ಯಸ್ಥ ರಾಜೇಶ್ ಝಾ ಅವರು ಈ ಕುರಿತು ಆಂತರಿಕ ನೋಟೀಸ್ ನೀಡಿದ್ದಾರೆ. ಸಂಸ್ಥೆಯಲ್ಲಿನ ಹೊಸ ನಾಯಕತ್ವ ಶ್ರೇಣಿಯನ್ನು ವಿವರಿಸಿದ್ದಾರೆ. ಈ ನಿರ್ಧಾರವು ಸಂಸ್ಥೆಯು ಎಐ ಯುಗದಲ್ಲಿ ತನ್ನ ನೂತನ ಗ್ಯಾಜೆಟ್‌ಗಳನ್ನು, ವರ್ಚುವಲ್ ಅನುಭವದ ಸಾಧನಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
“ಈ ಬದಲಾವಣೆಯ ಭಾಗವಾಗಿ, ನಾವು ಎಕ್ಸ್‌ಪೀರಿಯೆನ್ಸಸ್ ಆ್ಯಂಡ್ ಡಿವೈಸಸ್ (E+D) ವಿಭಾಗದ ಪ್ರಮುಖ ಭಾಗವಾಗಿ ತಂಡಗಳನ್ನು ಒಟ್ಟುಗೂಡಿಸುತ್ತಿದ್ದೇವೆ. ಪವನ್ ದಾವುಲೂರಿ ಅವರು ಈ ತಂಡವನ್ನು ಮುನ್ನಡೆಸುತ್ತಾರೆ. ವಿಂಡೋಸ್ ತಂಡವು ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ” ಎಂದು ಅವರು ಹೇಳಿದರು.
ದಾವುಲುರಿ ಮೈಕ್ರೋಸಾಫ್ಟ್‌ನಲ್ಲಿ 23 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಸರ್ಫೇಸ್‌ಗಾಗಿ ಪ್ರೊಸೆಸರ್‌ಗಳನ್ನು ರಚಿಸಲು ಕ್ವಾಲ್ಕಾಮ್ ಮತ್ತು ಎಎಮ್‌ಡಿಯೊಂದಿಗೆ ಅದರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. “ವಿಶ್ವ ದರ್ಜೆಯ ಗ್ರಾಹಕ AI ಉತ್ಪನ್ನಗಳನ್ನು ನಿರ್ಮಿಸಲು ಮೈಕ್ರೋಸಾಫ್ಟ್ AI ದಿಟ್ಟ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಈ ತಂಡಕ್ಕೆ ಸಹಾಯ ಮಾಡಲು ನಾವು ಉತ್ಸುಕರಾಗಿದ್ದೇವೆ” ಎಂದು ಮೆಮೊ ಹೇಳಿದೆ.
ಗೂಗಲ್ ಡೀಪ್‌ಮೈಂಡ್ ಸಹ-ಸಂಸ್ಥಾಪಕ ಮತ್ತು ಇನ್‌ಫ್ಲೆಕ್ಷನ್ ಎಐ ಸಂಸ್ಥೆಯ ಮಾಜಿ ಸಿಇಒ ಮುಸ್ತಫಾ ಸುಲೇಮಾನ್ ಅವರು ಮೈಕ್ರೋಸಾಫ್ಟ್ ಹೊಸ ಎಐ ತಂಡದ ಸಿಇಒ ಆಗಿ ಸೇರಿದ ಕೆಲವು ದಿನಗಳ ನಂತರ ಈ ಪ್ರಕಟಣೆ ಬಂದಿದೆ.
ಇದನ್ನೂ ಓದಿ: Google Bard: ಜಾಟ್‌ಜಿಪಿಟಿಗೆ ಪ್ರತಿಯಾಗಿ ಗೂಗಲ್‌ನಿಂದ ಬಾರ್ಡ್, ಮೈಕ್ರೋಸಾಫ್ಟ್‌ಗೆ ಠಕ್ಕರ್