ಪ್ರಧಾನಿಯಾಗಿದ್ದಾಗ ತಮಗೆ ಉಡುಗೊರೆಯಾಗಿ ಬಂದ ವಸ್ತುಗಳನ್ನೇ ಕಾನೂನುಬಾಹಿರವಾಗಿ ಮಾರಾಟ ಮಾಡಿದ ಪ್ರಕರಣದಲ್ಲಿ, ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ಬಂಧನವಾಗಿದೆ. ಭ್ರಷ್ಟಾಚಾರ, ದಂಗೆಗೆ ಕುಮ್ಮಕ್ಕು, ಕೊಲೆ ಯತ್ನ ಸೇರಿದಂತೆ ಹಲವು ಕೇಸುಗಳು ಇಮ್ರಾನ್ ಮೇಲಿವೆ. 2018ರಿಂದ 22ರವರೆಗೆ ಪಾಕ್ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅವರನ್ನು ಅವಿಶ್ವಾಸ ಗೊತ್ತುವಳಿ ಮಂಡಿಸಿ ಪದಚ್ಯುತಗೊಳಿಸಲಾಗಿತ್ತು. ಹಿಂದಿನ ಸಾಲಿನಲ್ಲಿ ದೇಶದ ಪ್ರಧಾನಿಯಾಗಿದ್ದವರನ್ನು ಮುಂದಿನ ಅವಧಿಗಾಗಲೇ ಕಳ್ಳಖದೀಮನೆಂಬಂತೆ ಚಿತ್ರಿಸಿ, ಅವರನ್ನು ಜೈಲಿಗೆ ತಳ್ಳುವುದೋ, ಗಲ್ಲಿಗೆ ಹಾಕುವುದೋ ಆ ದೇಶದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಈ ಪರಂಪರೆಯನ್ನು ಶ್ರದ್ಧೆಯಿಂದ ಮುಂದುವರಿಸಿಕೊಂಡು ಹೋಗುತ್ತಿರುವುದನ್ನು ಈ ಸಂದರ್ಭದಲ್ಲೂ ನಾವು ಕಾಣಬಹುದು. ಒಂದು ಪ್ರಜಾಪ್ರಭುತ್ವವನ್ನು ಹೇಗೆ ನಾಶ ಮಾಡಬಹುದು ಎಂಬ ಪಾಠವನ್ನು ಇದರ ಮೂಲಕ ಕಲಿಯಬಹುದು.
1962ರಲ್ಲಿ ಶಹೀದ್ ಸುಹ್ರವರ್ದಿ, ಆಸಿಫ್ ಅಲಿ ಜರ್ದಾರಿ, 1977ರಲ್ಲಿ ಜುಲ್ಫಿಕರ್ ಅಲಿ ಭುಟ್ಟೊ, 1986ರಲ್ಲಿ ಬೆನಜೀರ್ ಭುಟ್ಟೊ, ನಂತರ ನವಾಜ್ ಶರೀಫ್, ಶಹೀದ್ ಅಬ್ಬಾಸಿ ದೇಶದ್ರೋಹ, ಭ್ರಷ್ಟಾಚಾರ ಇತ್ಯಾದಿ ಆರೋಪಗಳ ಮೇಲೆ ಜೈಲಿಗೆ ಹೋಗಿದ್ದರು. 1979ರಲ್ಲಿ ಜುಲ್ಫಿಕರ್ ಅಲಿ ಭುಟ್ಟೊ ಅವರನ್ನು ನೇಣಿಗೆ ಹಾಕಲಾಗಿತ್ತು. ಇಲ್ಲಿನ ನ್ಯಾಯಾಂಗ ವ್ಯವಸ್ಥೆಯೂ ಭ್ರಷ್ಟವಾಗಿದ್ದು, ಅಧಿಕಾರದಲ್ಲಿ ಇರುವವರು ಹೇಳಿದಂತೆ ಕುಣಿಯುತ್ತಿರುವುದರಿಂದ ಇದು ಸಾಧ್ಯವಾಗಿದೆ. ಒಂದು ಪರಿಪೂರ್ಣ ಅರಾಜಕತೆಯ ಸ್ಥಿತಿಯಿದು. ಪ್ರಜಾಪ್ರಭುತ್ವದಲ್ಲಿ ಮೂರು ಅಂಗಗಳು- ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸುತ್ತವೆ. ಆದರೆ ಪಾಕ್‌ನಲ್ಲಿ ಇವೆಲ್ಲವೂ ಒಂದೊಂದು ದಿಕ್ಕಿಗಿದೆ. ಈ ಮೂರನ್ನೂ ನಿಯಂತ್ರಿಸುವ ಮಿಲಿಟರಿ ಇಲ್ಲಿನ ಇನ್ನೊಂದು ಆಂಗವಾಗಿದೆ. ಇವೆಲ್ಲದರ ಹಿನ್ನೆಲೆಯಲ್ಲಿರುವ ಭಯೋತ್ಪಾದಕರು ಹಾಗೂ ಬೇಹುಗಾರಿಕೆ ವ್ಯವಸ್ಥೆಯು ಇವುಗಳೆಲ್ಲದಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ. ಇವೆಲ್ಲವನ್ನೂ ನಿಯಂತ್ರಣದಲ್ಲಿಟ್ಟಿರುವ ವ್ಯವಸ್ಥೆಯೆಂದರೆ ಮತಾಂಧತೆ. ಪಾಕ್ ಯಾವಾಗ ತನ್ನನ್ನು ʼಇಸ್ಲಾಮಿಕ್ ಪ್ರಜಾಪ್ರಭುತ್ವʼ ಎಂದು ಘೋಷಿಸಿಕೊಂಡಿತೋ ಅಲ್ಲಿಂದಲೇ ಅದರ ಪತನ ಆರಂಭವಾಯಿತು.
ಇಂದು ಒಂದೆಡೆ ಭಯೋತ್ಪಾದನೆ, ಮತ್ತೊಂದೆಡೆ ಭ್ರಷ್ಟಾಚಾರ, ಇನ್ನೊಂದು ಕಡೆ ಮಿಲಿಟರಿಯ ಅಧಿಕಾರದಾಹಗಳಿಂದಾಗಿ ಪಾಕಿಸ್ತಾನದ ಜನರ ಪರಿಸ್ಥಿತಿ ನಾಯಿಪಾಡಾದಂತಾಗಿದೆ. ಪ್ರತ್ಯೇಕ ರಾಷ್ಟ್ರ ಆದಾಗಿನಿಂದಲೂ ಪಾಕಿಸ್ತಾನ ರಾಜಕೀಯ ಅಸ್ಥಿರತೆಯ ಗಿರಣಿಯೊಳಗೆ ಸಿಲುಕಿ ಒದ್ದಾಡುತ್ತಿದೆ. ಪ್ರಧಾನಿ ಹುದ್ದೆಗೇರಿದವರು ದೇಶಭ್ರಷ್ಟರಾಗಿ ವಿದೇಶಗಳಲ್ಲಿ ಅಡಗಿ ಕುಳಿತಿದ್ದಾರೆ. ಇನ್ನೊಂದೆಡೆ ಸೇನಾಧಿಕಾರಿಗಳು ಸರಕಾರದ ಬುಡ ಅಲ್ಲಾಡಿಸುತ್ತಲೇ ಇರುತ್ತಾರೆ. ಈಗಂತೂ ಆರ್ಥಿಕವಾಗಿ ಆ ದೇಶ ದಿವಾಳಿ ಎದ್ದು ಹೋಗಿದೆ. ಕುತಂತ್ರಿ ಚೀನಾ ಬಿಟ್ಟರೆ ಯಾವ ದೇಶವೂ ಅದನ್ನು ನಂಬುತ್ತಿಲ್ಲ. ಸಹಾಯ ಮಾಡುತ್ತಿಲ್ಲ. ದಿವಾಳಿ ಎಂದು ಅಧಿಕೃತವಾಗಿ ಘೋಷಿಸಲು ಈಗಿನ ಪ್ರಧಾನಿ ತುದಿಗಾಲ ಮೇಲೆ ನಿಂತಿದ್ದಾರೆ. ಸಾಲವನ್ನು ತೀರಿಸಲಾಗದ ಸ್ಥಿತಿಗೆ ಅದು ಮುಟ್ಟಿದ್ದು, ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಬೂದು ಪಟ್ಟಿಯಲ್ಲಿ ಪಾಕ್ ಈಗ ಇದೆ. ಭಾರತದ ಪ್ರಧಾನಿ ತಮಗೆ ಉಡುಗೊರೆಯಾಗಿ ಬಂದ ವಸ್ತುಗಳನ್ನು ಹರಾಜಿಗಿಟ್ಟು ಆ ಹಣವನ್ನು ಕಲ್ಯಾಣ ಕಾರ್ಯಕ್ಕಾಗಿ ವಿನಿಯೋಗಿಸುತ್ತಿದ್ದರೆ, ಪಾಕ್ ಪ್ರಧಾನಿ ಆಗಿದ್ದವರು ಆ ಉಡುಗೊರೆಗಳನ್ನು ಮಾರಿಕೊಂಡು ತಿಂದಿರುವುದು ವಿಚಿತ್ರ ಸಂಗತಿಯಾಗಿದೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಿದ್ದರೆ ಮುತ್ಸದ್ದಿತನ ಬೇಕು. ಆದರೆ ಪಾಕ್ ಸಮ್ಮಾನಿಸುವುದು ಧರ್ಮಾಂಧತೆ ಮತ್ತು ಭಾರತದ್ವೇಷವನ್ನು. ಇದೇ ಅದರ ಇಂದಿನ ಪಾಡಿಗೆ ಕಾರಣವಾಗಿದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಅಭ್ಯರ್ಥಿಗಳ ಆಮಿಷ ತಿರಸ್ಕರಿಸೋಣ, ಪ್ರಜಾಪ್ರಭುತ್ವ ಉಳಿಸೋಣ
ಪಾಕಿಸ್ತಾನ ನಮ್ಮ ಪಕ್ಕದಲ್ಲಿಯೇ ಇರುವುದರಿಂದ ಅಲ್ಲಿ ಆಗುವ ಬೆಳವಣಿಗೆಗಳು ನಮ್ಮನ್ನೂ ಬಾಧಿಸುತ್ತವೆ. ಇಮ್ರಾನ್ ಖಾನ್ ಪ್ರಧಾನಿ ಪಟ್ಟಕ್ಕೆ ಏರಿದಾಗ, ಭಾರತದೊಂದಿಗೆ ಸೌಹಾರ್ದ ಸಂಬಂಧ ಬೆಳೆಸಬೇಕು ಎಂಬ ಭಾವ ಅವರಲ್ಲಿ ಇದ್ದಂತಿತ್ತು. ಈ ನಿಟ್ಟಿನಲ್ಲಿ ಒಂದೆರಡು ಹೆಜ್ಜೆಗಳನ್ನೂ ಮುಂದಿಟ್ಟಂತಿತ್ತು. ಆದರೆ ಪಾಕಿಸ್ತಾನದ ಭ್ರಷ್ಟ ವ್ಯವಸ್ಥೆ ಹಾಗೂ ವಿಲಕ್ಷಣ ರಾಜಕಾರಣಗಳು ಅವರನ್ನು ಮುಳುಗಿಸುತ್ತ ಹೋದವು. ನವಾಜ್ ಶರೀಫ್ ಅವರಿಗೂ ಹೀಗೇ ಆಗಿತ್ತು. ಅಂದರೆ ಭಾರತದ ಜೊತೆ ಸ್ನೇಹ ಬೆಳೆಸಲು ಮುಂದಾಗುವ ಪ್ರಧಾನಿಗಳನ್ನು ಅಲ್ಲಿ ರಾಜಕೀಯವಾಗಿ ಮುಗಿಸದೇ ಬಿಡುವುದಿಲ್ಲ. ಒಂದು ಕಾಲದಲ್ಲಿ ನಮ್ಮ ಕ್ರಿಕೆಟ್‌ನ ಕಪಿಲ್ ದೇವ್, ಗವಾಸ್ಕರ್ ಮುಂತಾದ ದೊಡ್ಡ ಆಟಗಾರರ ಸಮಕಾಲೀನರಾಗಿ, ಅತ್ಯುತ್ತಮ ಆಟದ ಸಂತೋಷವನ್ನು ನಮಗೆ ನೀಡಿದ ಇಮ್ರಾನ್ ಖಾನ್ ಇಂದು ತಲುಪಿರುವ ಸ್ಥಿತಿ ವಿಚಿತ್ರ. ಅದೇನೇ ಇರಲಿ, ಅಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗೆಗೆ ನಮಗೆ ಒಂದು ಎಚ್ಚರದ ಕಣ್ಣಿರುವುದು ಅಗತ್ಯ.