ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Former PM Imran Khan) ಅವರ ತೆಹ್ರೀಕ್-ಇ-ಇನ್ಸಾಫ್(Tehreek-E-Insaf) ಪಕ್ಷವು ತನ್ನ ಬ್ಯಾಟ್ ಚಿಹ್ನೆಯನ್ನು ಕಳೆದುಕೊಂಡಿದೆ(Bat Symbol). ಪಕ್ಷದ ಚಿಹ್ನೆ ಕುರಿತು ಪಾಕಿಸ್ತಾನ ಚುನಾವಣಾ ಆಯೋಗವು (Election commission of Pakistan) ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ (Supreme Court of Pakistan) ಎತ್ತಿ ಹಿಡಿದೆ. ಆಕ್ರೋಶ ವ್ಯಕ್ತಪಡಿಸಿರುವ ಪಿಟಿಐ, ಇದು ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ನೀಡಿದ ಗಲ್ಲು ಶಿಕ್ಷೆಯಾಗಿದೆ ಎಂದು ಹೇಳಿದೆ. ಫೆಬ್ರವರಿ 9ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ (Pakistan Election) ನಡೆಯಲಿದೆ. ಪಿಟಿಐ ನಾಯಕ ಹಾಗೂ ಕ್ರಿಕೆಟಿಗ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಜೈಲಿನಲ್ಲಿದ್ದಾರೆ.
ಪಿಟಿಐ ಪಕ್ಷದ ಚುನಾವಣಾ ಚಿಹ್ನೆಯಾಗಿ ಕ್ರಿಕೆಟ್ ಬ್ಯಾಟ್ ಅನ್ನು ದಯಾಪಾಲಿಸಲು ಒಪ್ಪಿಗೆ ನೀಡಿದ್ದ ಪೇಶಾವರ ಹೈಕೋರ್ಟ್‌ನ ದ್ವಿಸದಸ್ಯ ಪೀಠದ ತೀರ್ಪನ್ನು ಪಾಕಿಸ್ತಾನದ ಚುನಾವಣಾ ಆಯೋಗ (ECP) ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ಪ್ರಶ್ನಿಸಿತ್ತು. ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ ನೇತೃತ್ವದ ತ್ರಿಸದಸ್ಯ ಪೀಠವು ಇಸಿಪಿಯ ಅರ್ಜಿಯನ್ನು ಆಲಿಸಿತು ಮತ್ತು ವಿಚಾರಣೆಯ ನಂತರ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಶನಿವಾರ ತಡರಾತ್ರಿ ತೀರ್ಪು ಪ್ರಕಟಿಸಲಾಗಿದೆ.
ಪಿಟಿಐ ಪಕ್ಷದ ಚಿಹ್ನೆ ಸಂಬಂಧಿಸಿದ ಪೇಶಾವರ ಹೈಕೋರ್ಟ್ ನೀಡಿದ್ದ ತೀರ್ಪನ್ನು ಅನೂರ್ಜಿತಗೊಳಿಸಿದ ಪಾಕಿಸ್ತಾನದ ಸುಪ್ರೀಂ ಕೋರ್ಟ್, ಈ ಸಂಬಂಧ ಪಾಕಿಸ್ತಾನ ಚುನಾವಣಾ ಆಯೋಗ ನಿರ್ಧಾರವನ್ನು ಎತ್ತಿ ಹಿಡಿಯಿತು. ಪಿಟಿಐ ಪಕ್ಷದ ಆಂತರಿಕ ಚುನಾವಣೆಯನ್ನು ಅಮಾನ್ಯಗೊಳಿಸಿದ್ದ ಚುನಾವಣಾ ಆಯೋಗವು ಪಕ್ಷದ ಸಾಮಾನ್ಯ ಸಿಂಬಲ್ ಆಗಿದ್ದ ಬ್ಯಾಟ್ ಅನ್ನು ರದ್ದುಗೊಳಿಸಿತ್ತು.
ಪಕ್ಷದ ಚಿಹ್ನೆಯನ್ನು ರದ್ದುಗೊಳಿಸಿದ ಚುನಾವಣಾ ಆಯೋಗದ ನಿರ್ಧಾರವನ್ನು ಪಿಟಿಐ ಪೇಶಾವರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಕುರಿತು ವಿಚಾರಣೆ ನಡೆಸಿದಿ ಹೈಕೋರ್ಟ್, ಆಯೋಗದ ಆದೇಶವನ್ನು ರದ್ದುಗೊಳಿಸಿ ಪಿಟಿಐ ಬ್ಯಾಂಟ್ ಚಿಹ್ನೆ ಬಳಸಲು ಒಪ್ಪಿಗೆ ನೀಡಿತ್ತು. ಆದರೆ, ಆಯೋಗವು ಪೇಶಾವರ ಹೈಕೋರ್ಟ್ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಅಂತಿಮ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗದ ನಿರ್ಧಾರವನ್ನು ಎತ್ತಿ ಹಿಡಿದಿದೆ.
ಸುಪ್ರೀಂ ಕೋರ್ಟ್‌ನ ಈ ಆದೇಶವನ್ನು ಪಿಟಿಐ ಟೀಕಿಸಿದೆ. ಸುಪ್ರೀಂ ಕೋರ್ಟ್‌ನ ಈ ಆದೇಶವನ್ನು ಇತಿಹಾಸವು ಪರಾಮರ್ಶಿಸಲಿದೆ ಎಂದು ಪಿಟಿಐ ಅಲಿ ಝಪರ್ ಹೇಳಿದ್ದಾರೆ. ಪಕ್ಷದ ಸಾಮಾನ್ಯ ಚಿಹ್ನೆಯನ್ನು ರದ್ದು ಮಾಡಿದ್ದರಿಂದ ಪಕ್ಷದ ಬೆಂಬಲಿಗರು ಮತ್ತು ಮತದಾರಲ್ಲಿ ಗೊಂದಲ ಉಂಟು ಮಾಡಿದೆ. ಕೋರ್ಟ್, ಅಭ್ಯರ್ಥಿಗಳು ಪ್ರತ್ಯೇಕ ಚಿಹ್ನೆಗಳ ಮೂಲಕ ಸ್ಪರ್ಧಿಸಬಹುದು ಎಂದು ಹೇಳಿದೆ. ಇದು ಖಂಡಿತವಾಗಿಯೂ ಮುಂಬರುವ ಚುನಾವಣೆಯಲ್ಲಿ ಪಿಟಿಐ ಪಕ್ಷಕ್ಕೆ ಹಿನ್ನಡೆಯುಂಟು ಮಾಡಲಿದೆ ಎಂದು ಅವರ ಹೇಳಿದ್ದಾರೆ.
ಪಿಟಿಐ ಈಗಲೂ ನೋಂದಣಿಯಾಗಿರುವ ಪಕ್ಷವಾಗಿದೆ. ಚುನಾವಣಾ ಆಯೋಗವು ಬ್ಯಾಟ್ ಚಿಹ್ನೆಯನ್ನು ರದ್ದು ಮಾಡಿರುವುದು ತಪ್ಪು. ಬ್ಯಾಟ್ ಚಿಹ್ನೆ ಇಲ್ಲದಿದ್ದರೆ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಮತದಾರರಿಗೆ ಗೊಂದಲ ಉಂಟಾಗಲಿದೆ ಎಂದು ಪಿಟಿಐ ಹೇಳಿದೆ. ಫೆಬ್ರವರಿ 9ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ಈ ಸುದ್ದಿಯನ್ನೂ ಓದಿ: Imran Khan: ಇಮ್ರಾನ್ ಖಾನ್ ವಿರುದ್ಧ 121 ಕೇಸ್ !; ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಜಾಮೀನು