ಹೊಸದಿಲ್ಲಿ: ವಿಶ್ವಸಂಸ್ಥೆಯ (United nations) 193 ಸದಸ್ಯರ ಜನರಲ್ ಅಸೆಂಬ್ಲಿಯಲ್ಲಿ ಶುಕ್ರವಾರ ಅಂಗೀಕರಿಸಲಾದ ʼಇಸ್ಲಾಮೋಫೋಬಿಯಾವನ್ನು (Islamophobia) ಎದುರಿಸಲು ಕ್ರಮಗಳು’ ನಿರ್ಣಯಕ್ಕೆ ಮತ ಹಾಕಲು ಭಾರತ ನಿರಾಕರಿಸಿದೆ. ಇಸ್ಲಾಂ (Islam) ಮಾತ್ರವಲ್ಲ, ಹಿಂಸಾಚಾರ ಮತ್ತು ತಾರತಮ್ಯವನ್ನು ಎದುರಿಸುತ್ತಿರುವ ಹಿಂದೂ (Hinduism), ಬೌದ್ಧ (Buddhism) , ಸಿಖ್ (Sikhism) ಮತ್ತು ಇತರ ಧರ್ಮಗಳ ವಿರುದ್ಧದ “ಧರ್ಮದ್ವೇಷ”ವನ್ನೂ ವಿರೋಧಿಸಬೇಕು ಎಂದು ಭಾರತ ಪ್ರತಿಪಾದಿಸಿದೆ.
ಇಸ್ಲಾಮೋಫೋಬಿಯಾ ಕುರಿತು ಚೀನಾದ ಸಹ ಪ್ರಾಯೋಜಕತ್ವದಲ್ಲಿ ಪಾಕಿಸ್ತಾನವು ಪರಿಚಯಿಸಿದ ಕರಡು ನಿರ್ಣಯದ ಮೇಲೆ ಮತ ಹಾಕುವುದರಿಂದ ಭಾರತ ದೂರ ಉಳಿಯಿತು. 115 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿವೆ. ಯಾವುದೂ ವಿರುದ್ಧ ಮತ ಹಾಕಿಲ್ಲ. ಭಾರತ, ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಇಟಲಿ, ಉಕ್ರೇನ್ ಮತ್ತು ಬ್ರಿಟನ್ ತಟಸ್ಥವಾಗಿ ಉಳಿದಿವೆ.
ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ರುಚಿರಾ ಕಾಂಬೋಜ್ (Ruchira Kamboj) ಅವರು ಈ ಕುರಿತು ಭಾರತದ ನಿಲುವನ್ನು ಸ್ಪಷ್ಟಪಡಿಸಿದರು. ಯೆಹೂದ್ಯ-ವಿರೋಧಿ, ಕ್ರಿಶ್ಚಿಯನ್ ಫೋಬಿಯಾ ಮತ್ತು ಇಸ್ಲಾಮೋಫೋಬಿಯಾದಿಂದ ಪ್ರೇರೇಪಿಸಲ್ಪಟ್ಟ ಎಲ್ಲಾ ಕೃತ್ಯಗಳನ್ನು ಅವರು ಖಂಡಿಸಿದರು. ಆದರೆ ಅಂತಹ ಫೋಬಿಯಾಗಳು ಅಬ್ರಹಾಮಿಕ್ (Abrahamic) ಧರ್ಮಗಳನ್ನು ಮೀರಿ ವಿಸ್ತರಿಸುತ್ತವೆ ಎಂಬುದನ್ನು ಒಪ್ಪಿಕೊಳ್ಳುವುದು ಬಹಳ ಮುಖ್ಯ ಎಂದು ಪ್ರತಿಪಾದಿಸಿದರು.
“ದಶಕಗಳ ಕಾಲ, ಅಬ್ರಹಾಮಿಕ್ ಅಲ್ಲದ ಧರ್ಮಗಳ ಅನುಯಾಯಿಗಳು ಸಹ ಧಾರ್ಮಿಕ ಭಯದ ಕೃತ್ಯಗಳಿಂದ ಪೀಡಿತರಾಗಿದ್ದಾರೆ ಎಂಬುದಕ್ಕೆ ಸ್ಪಷ್ಟ ಪುರಾವೆಗಳಿವೆ. ವಿಶೇಷವಾಗಿ ಹಿಂದೂ ವಿರೋಧಿ, ಬೌದ್ಧ ವಿರೋಧಿ ಮತ್ತು ಸಿಖ್ ವಿರೋಧಿ ಭಾವನೆಗಳು ಕ್ರಿಯಾಶೀಲವಾಗಿವೆ. ಇದು ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿದ ಫೋಬಿಯಾ ಮೇಲೆ ಕೇಂದ್ರೀಕೃತವಾಗಿರುವ ಹಲವಾರು ನಿರ್ಣಯಗಳಿಗೆ ಕಾರಣವಾಗಬಹುದು. ಇದು ವಿಶ್ವಸಂಸ್ಥೆಯನ್ನು ಧಾರ್ಮಿಕ ಕ್ಯಾಂಪ್‌ಗಳಾಗಿ ವಿಭಜಿಸುವ ಸಾಧ್ಯತೆಯಿದೆ. ವಿಶ್ವವನ್ನು ಒಂದು ಜಾಗತಿಕ ಕುಟುಂಬವಾಗಿ ಸ್ವೀಕರಿಸುವ, ಶಾಂತಿ ಮತ್ತು ಸೌಹಾರ್ದತೆಯ ಬ್ಯಾನರ್ ಅಡಿಯಲ್ಲಿ ನಮ್ಮನ್ನು ಒಗ್ಗೂಡಿಸುವ ಬದಲು ನಮ್ಮನ್ನು ಛಿದ್ರಗೊಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಇಂತಹ ಧಾರ್ಮಿಕ ಕಾಳಜಿಗಳ ಕುರಿತು ವಿಶ್ವಸಂಸ್ಥೆ ತನ್ನ ನಿಲುವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ” ಎಂದು ಕಾಂಬೋಜ್ ಹೇಳಿದರು.
ಜಾಗತಿಕವಾಗಿ ನಡೆಯುತ್ತಿರುವ ಧಾರ್ಮಿಕ ತಾರತಮ್ಯದ ವಿಶಾಲ ವ್ಯಾಪ್ತಿಯನ್ನು ಪರಿಗಣಿಸಲು ಭಾರತ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ. “ಇಸ್ಲಾಮೋಫೋಬಿಯಾದ ವಿಷಯವು ನಿಸ್ಸಂದೇಹವಾಗಿ ಮಹತ್ವದ್ದು. ಆದರೆ ಇತರ ಧರ್ಮಗಳು ಸಹ ತಾರತಮ್ಯ ಮತ್ತು ಹಿಂಸೆಯನ್ನು ಎದುರಿಸುತ್ತಿವೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಇಸ್ಲಾಮೋಫೋಬಿಯಾವನ್ನು ಎದುರಿಸಲು ಸಂಪನ್ಮೂಲಗಳನ್ನು ನಿಯೋಜಿಸುವುದು, ಇತರ ನಂಬಿಕೆಗಳು ಎದುರಿಸುತ್ತಿರುವ ಇದೇ ರೀತಿಯ ಸವಾಲುಗಳನ್ನು ನಿರ್ಲಕ್ಷಿಸುವುದರಿಂದ ಅಸಮಾನತೆಯ ಭಾವನೆ ಹೆಚ್ಚಬಹುದು” ಎಂದು ಅವರು ಹೇಳಿದರು.
“120 ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಹಿಂದೂ ಧರ್ಮ, 53.5 ಕೋಟಿಗಿಂತಲೂ ಹೆಚ್ಚು ಹೊಂದಿರುವ ಬೌದ್ಧಧರ್ಮ ಮತ್ತು ವಿಶ್ವದಾದ್ಯಂತ 3 ಕೋಟಿಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಸಿಖ್ ಧರ್ಮಗಳು ಧರ್ಮಭೀತಿಗೆ ಒಳಪಟ್ಟಿವೆ. ಕೇವಲ ಒಂದನ್ನು ಪ್ರತ್ಯೇಕಿಸುವ ಬದಲು ನಾವು ಧರ್ಮಭೀತಿಯ ಹರಡುವಿಕೆಯನ್ನು ಒಪ್ಪಿಕೊಳ್ಳುವ ಸಮಯವಿದು” ಎಂದರು.
ಗುರುದ್ವಾರಗಳು, ಮಠಗಳು ಮತ್ತು ದೇವಾಲಯಗಳಂತಹ ಧಾರ್ಮಿಕ ಪೂಜಾ ಸ್ಥಳಗಳ ಮೇಲೆ ಹೆಚ್ಚುತ್ತಿರುವ ದಾಳಿಗಳನ್ನು ಅವರು ಉಲ್ಲೇಖಿಸಿದರು. “ಬಾಮಿಯಾನ್ ಬುದ್ಧ ಮೂರ್ತಿಗಳ ವಿನಾಶ, ಗುರುದ್ವಾರಗಳ ಆವರಣಗಳ ಉಲ್ಲಂಘನೆ, ಗುರುದ್ವಾರಗಳಲ್ಲಿ ಸಿಖ್ ಯಾತ್ರಿಕರ ಹತ್ಯಾಕಾಂಡಗಳು, ದೇವಾಲಯಗಳ ಮೇಲಿನ ದಾಳಿಗಳು, ದೇವಾಲಯಗಳಲ್ಲಿ ವಿಗ್ರಹಗಳನ್ನು ಒಡೆಯುವಿಕೆಯ ವೈಭವೀಕರಣ ಇತ್ಯಾದಿಗಳು ಅಬ್ರಹಾಮಿಕ್ ಅಲ್ಲದ ಧರ್ಮಗಳ ವಿರುದ್ಧದ ಫೋಬಿಯಾದ ನಿದರ್ಶನಗಳು” ಎಂದು ಅವರು ಹೇಳಿದರು.
“ನಾವು ಎಲ್ಲಾ ಹಿಂದೂ ವಿರೋಧಿ, ಬೌದ್ಧ ವಿರೋಧಿ ಮತ್ತು ಸಿಖ್ ವಿರೋಧಿ ಭಾವನೆಗಳ ವಿರುದ್ಧ ನಿಂತಿದ್ದೇವೆ” ಎಂದು ಕಾಂಬೋಜ್ ಪ್ರತಿಪಾದಿಸಿದರು. “ಭಾರತದ ಶ್ರೀಮಂತ ಇತಿಹಾಸವು ಬಹುತ್ವ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿ, ವೈವಿಧ್ಯಮಯ ಧರ್ಮಗಳನ್ನು ಅಳವಡಿಸಿಕೊಂಡಿದೆ. ಕಿರುಕುಳಕ್ಕೊಳಗಾದವರಿಗೆ ಆಶ್ರಯವಾಗಿ ಭಾರತ ದೀರ್ಘಕಾಲ ಸೇವೆ ಸಲ್ಲಿಸಿದೆ. ಝೋರಾಸ್ಟ್ರಿಯನ್ನರು, ಬೌದ್ಧರು, ಯಹೂದಿಗಳು ಅಥವಾ ಯಾವುದೇ ಇತರ ನಂಬಿಕೆಯ ಅನುಯಾಯಿಗಳು ಭಾರತದಲ್ಲಿ ಶೋಷಣೆ ಅಥವಾ ತಾರತಮ್ಯದಿಂದ ಮುಕ್ತವಾದ ಆಶ್ರಯವನ್ನು ಕಂಡುಕೊಂಡಿದ್ದಾರೆ” ಎಂದು ಅವರು ಹೇಳಿದರು.
ಮುಸ್ಲಿಮರ ವಿರುದ್ಧ ತಾರತಮ್ಯ, ಹಗೆತನ ಅಥವಾ ಹಿಂಸಾಚಾರಕ್ಕೆ ಪ್ರಚೋದನೆಯನ್ನು ನಿರ್ಣಯವು ಖಂಡಿಸುತ್ತದೆ. ಅವರ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸುವ ಘಟನೆಗಳು, ಮಸೀದಿಗಳ ಮೇಲಿನ ದಾಳಿಗಳು ಧಾರ್ಮಿಕ ಅಸಹಿಷ್ಣುತೆ, ದ್ವೇಷ ಮತ್ತು ಹಿಂಸಾಚಾರದ ಘಟನೆಗಳಲ್ಲಿ ವ್ಯಕ್ತವಾಗಿದೆ. ನಿರ್ಣಯಕ್ಕೆ ಬೆಲ್ಜಿಯಂ ಪರಿಚಯಿಸಿದ ಎರಡು ತಿದ್ದುಪಡಿಗಳನ್ನು ಅಸೆಂಬ್ಲಿ ತಿರಸ್ಕರಿಸಿತು. ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ 2019ರಲ್ಲಿ ಎರಡು ಮಸೀದಿಗಳಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 50 ಮಂದಿ ಹತರಾದ ಮಾರ್ಚ್ 15 ದಿನಾಂಕವನ್ನು ʼಇಸ್ಲಾಮೋಫೋಬಿಯಾವನ್ನು ಎದುರಿಸುವ ಅಂತರರಾಷ್ಟ್ರೀಯ ದಿನʼವೆಂದು ಈಗಾಗಲೇ ವಿಶ್ವಸಂಸ್ಥೆ ಘೋಷಿಸಿದೆ.
ಇದನ್ನೂ ಓದಿ: S.Jaishankar: ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ವಿಚಾರ; ಇದನ್ನು ಬಿಸಿಸಿಐಗೆ ಬಿಡಿ ಎಂದ ವಿದೇಶಾಂಗ ಸಚಿವರು